ಜಕಾರ್ತಗೆ ವಿದಾಯ; ಏಷ್ಯಾದ ತಾಕತ್ತಿಗೆ ಜಯ

7
ಮೊಳಗಿದ ಹಿಂದಿ ಹಾಡುಗಳು; ಗಮನ ಸೆಳೆದ ಇಂಡೊನೇಷ್ಯಾ ಸೇನೆಯ ವಾದ್ಯಮೇಳ

ಜಕಾರ್ತಗೆ ವಿದಾಯ; ಏಷ್ಯಾದ ತಾಕತ್ತಿಗೆ ಜಯ

Published:
Updated:
Deccan Herald

ಜಕಾರ್ತ: ಜಿಟಿ ಜಿಟಿ ಮಳೆಯ ನಡುವೆ ಇಂಡೊನೇಷ್ಯಾದ ರಾಷ್ಟ್ರಗೀತೆ ಮೊಳಗಿದಾಗ ಇಲ್ಲಿನ ಜಿಬಿಕೆ ಕ್ರೀಡಾಂಗಣದಲ್ಲಿ ಸೇರಿದ್ದ ಸಾವಿರಾರು ಮಂದಿ ಭಾವುಕರಾದರು. 16 ದಿನಗಳಿಂದ ಕ್ರೀಡಾಪಟುಗಳ ಛಲ, ಬಲದ ಸ್ಪರ್ಧೆಗಳಿಗೆ ಸಾಕ್ಷಿಯಾಗಿದ್ದ ಕ್ರೀಡಾಂಗಣದಲ್ಲಿ 18ನೇ ಏಷ್ಯನ್ ಕ್ರೀಡಾಕೂಟಕ್ಕೆ ಭಾನುವಾರ ಸಂಜೆ ತೆರೆ ಬಿದ್ದಿತು.

ಇಂಡೊನೇಷ್ಯಾ ಸೇನೆಯ ವಾದ್ಯಮೇಳದ ವೈಭವದೊಂದಿಗೆ ಆರಂಭಗೊಂಡ ಕಲಾ ಕಾರ್ಯಕ್ರಮಗಳು ಹಾಡು, ನೃತ್ಯ ವೈಭವದೊಂದಿಗೆ ಮುಕ್ತಾಯಗೊಂಡವು.

ಕೊರಿಯಾದ ಪಾಪ್ ಗಾಯಕರು ಮತ್ತು ನೃತ್ಯಪಟುಗಳು ರಂಜಿಸಿದ ಕಾರ್ಯಕ್ರಮದಲ್ಲಿ ಭಾರತದ ಸಿದ್ಧಾರ್ಥ್ ಸ್ಲೇಥಿಯಾ ಮತ್ತು ತಂಡದವರು ಹಿಂದಿ ಹಾಡುಗಳ ಮೂಲಕ ಗಮನ ಸೆಳೆದರು. ‘ಕೊಯಿ ಮಿಲ್‌ಗಯಾ...’, ‘ಜಯ ಹೋ...’ ಮುಂತಾದ ಹಾಡುಗಳಿಗೆ ಪ್ರೇಕ್ಷಕರು ಹೆಜ್ಜೆ ಹಾಕಿ, ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಉದ್ಘಾಟನಾ ಸಮಾರಂಭದ ಪಥಸಂಚಲನದಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ್ದ ಉತ್ತರ ಮತ್ತು ದಕ್ಷಿಣ ಕೊರಿಯಾದ ಕ್ರೀಡಾಪಟುಗಳು ಸಮಾರೋಪ ಸಮಾರಂಭದಲ್ಲೂ ಐಕ್ಯವನ್ನು ಮೆರೆದರು. ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್‌ ಭಾರತದ ಧ್ವಜ ಹಿಡಿದು ಮುಂದೆ ಸಾಗಿದರು.

ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ಥಾಮಸ್‌ ಬಾಕ್‌ ಮುಖ್ಯ ಅತಿಥಿಯಾಗಿದ್ದರು. ಏಷ್ಯಾ ಒಲಿಂಪಿಕ್ ಸಮಿತಿಯ ಅಧ್ಯಕ್ಷ ಶೇಕ್‌ ಅಹಮ್ಮದ್‌ ಅಲ್‌ ಫಹಾದ್‌ ಅಲ್‌ ಹಮ್ಮದ್‌ ಅಲ್‌ ಸಾಬಾ ಅವರು ಕ್ರೀಡಾಕೂಟ ಮುಕ್ತಾಯಗೊಂಡಿರುವುದಾಗಿ ಘೋಷಿಸಿದರು.

‘ಜಕಾರ್ತಗೆ ಧನ್ಯವಾದಗಳು. ನಿನ್ನನ್ನು ತೊರೆದು ಹೋಗಲು ಬೇಸರವಾಗುತ್ತದೆ. ಆದರೆ ಏನು ಮಾಡಲಿ ನಾವೆಲ್ಲರೂ ಈ ಸುಂದರ ನಾಡನ್ನು ತೊರೆದು ನಮ್ಮ ನಾಡಿಗೆ ಹೋಗಲೇಬೇಕಾಗಿದೆ’ ಎಂದು ಅವರು ಭಾವುಕರಾಗಿ ನುಡಿದರು.

ಮುಂದಿನ ಕ್ರೀಡಾಕೂಟಕ್ಕೆ ಬರುವಂತೆ ಚೀನಾದ ಜಾಕ್‌ ಮಾ ಕಂಪೆನಿಯ ಸ್ಥಾಪಕ ಅಲಿಬಾಬಾ ಮತ್ತು ಒಲಿಂಪಿಕ್‌ ಚಾಂಪಿಯನ್‌ ಈಜುಪಟು ಸೂನ್ ಯಾಂಗ್‌ ಅವರು ಆಹ್ವಾನ ನೀಡಿದರು.


ಚೀನಾದ ಹ್ಯಾಂಗ್‌ಜು ನಗರದ ಸ್ಟೋರ್ಟ್ಸ್‌ ಪಾರ್ಕ್‌ ಕ್ರೀಡಾಂಗಣ 

ಚೀನಾದಲ್ಲಿ ಮುಂದಿನ ಕೂಟ
ಜಕಾರ್ತ:
ಈ ಬಾರಿ 132 ಚಿನ್ನದೊಂದಿಗೆ 289 ಪದಕಗಳನ್ನು ಬಗಲಿಗೆ ಹಾಕಿಕೊಂಡಿರುವ ಚೀನಾ ಮುಂದಿನ ಏಷ್ಯನ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಲಿದೆ.

ಚೀನಾದ ಹ್ಯಾಂಗ್‌ಜು ನಗರದ ಸ್ಪೋರ್ಟ್ಸ್‌ ಪಾರ್ಕ್‌ ಕ್ರೀಡಾಂಗಣದಲ್ಲಿ 2022ರ ಸೆಪ್ಟೆಂಬರ್‌ 10ರಿಂದ 25ರ ವರೆಗೆ ಸ್ಪರ್ಧೆಗಳು ನಡೆಯಲಿವೆ.

ಚೀನಾ ಈ ಹಿಂದೆ ಎರಡು ಬಾರಿ ಏಷ್ಯನ್‌ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಿದೆ. 1990ರಲ್ಲಿ ಬೀಜಿಂಗ್‌ನಲ್ಲಿ ಮತ್ತು 2010ರಲ್ಲಿ ಗ್ವಾಂಗ್ಜುನಲ್ಲಿ ಕೂಟ ನಡೆದಿತ್ತು.

ಮೊದಲ ಎಂಟು ಕೂಟಗಳಲ್ಲಿ ಜಪಾನ್‌ ಪಾರುಪತ್ಯ ಮೆರೆದಿದ್ದರೆ ನಂತರದ ಹತ್ತೂ ಕೂಟಗಳಲ್ಲಿ ಚೀನಾ ಆಧಿಪತ್ಯ ಸ್ಥಾಪಿಸಿದೆ.

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 0

  Sad
 • 2

  Frustrated
 • 1

  Angry

Comments:

0 comments

Write the first review for this !