ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫಿ: 3 ವರ್ಷಗಳ ಮುನ್ನೋಟ

ಡಿಜಿಟಲ್‌ ತಂತ್ರಜ್ಞಾನ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವ ಗುರಿ
Last Updated 23 ಏಪ್ರಿಲ್ 2018, 19:33 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಎರಡನೆ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸಂಸ್ಥೆಯಾಗಿರುವ ಇನ್ಫೊಸಿಸ್‌, ಡಿಜಿಟಲ್‌ ತಂತ್ರಜ್ಞಾನ ಸೇವೆಯಲ್ಲಿ ಮುಂಚೂಣಿಗೆ ಏರಲು ಮೂರು ವರ್ಷಗಳ ಕಾರ್ಯಕ್ರಮ ಹಾಕಿಕೊಂಡಿದೆ.

‘2019ರಲ್ಲಿ ಸಂಸ್ಥೆಯ ಡಿಜಿಟಲ್‌ ವಹಿವಾಟನ್ನು ಸ್ಥಿರಗೊಳಿಸುವ ಮೂಲಕ ಈ ಮೂರು ವರ್ಷಗಳ ಮುನ್ನೋಟಕ್ಕೆ ಚಾಲನೆ ಸಿಗಲಿದೆ. ಎರಡನೆ ವರ್ಷದಲ್ಲಿ ಈ ವಹಿವಾಟು ಗಣನೀಯ ಚೇತರಿಕೆ ಕಾಣಲಿದೆ. ಮೂರನೆ ವರ್ಷದಲ್ಲಿ ಅದನ್ನು ವೇಗೋತ್ಕರ್ಷಗೊಳಿಸಲು ಉದ್ದೇಶಿಸಲಾಗಿದೆ’ ಎಂದು ಸಂಸ್ಥೆಯ ಸಿಇಒ ಸಲೀಲ್‌ ಪಾರೇಖ್‌ ಹೇಳಿದ್ದಾರೆ.

ಸೋಮವಾರ ಮುಂಬೈನಲ್ಲಿ ನಡೆದ ವಿಶ್ಲೇಷಕರ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ‘ಸಂಸ್ಥೆಯು ಡಿಜಿಟಲ್‌ ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡಲಿದೆ. ನಮ್ಮಂತಹ ಸಾಫ್ಟ್‌ವೇರ್‌ ಸಂಸ್ಥೆಗಳಿಗೆ ಡಿಜಿಟಲ್‌ ತಂತ್ರಜ್ಞಾನ ಕ್ಷೇತ್ರದಲ್ಲಿ  ₹ 10 ಲಕ್ಷ ಕೋಟಿಗಳಷ್ಟು ವಹಿವಾಟು ನಡೆಸಲು ಅವಕಾಶಗಳಿವೆ. ಈ ಮಾರುಕಟ್ಟೆ
ಶೇ 15ರ ಎರಡಂಕಿ ಪ್ರಗತಿ ಸಾಧಿಸುತ್ತಿದೆ. ಅನುಭವ, ಒಳನೋಟ, ಹೊಸತನ, ವೇಗೋತ್ಕರ್ಷ ಮತ್ತು ಭರವಸೆ – ಈ ಐದು ಆಯಾಮಗಳಲ್ಲಿ ಸಂಸ್ಥೆಯು ಡಿಜಿಟಲ್‌ ತಂತ್ರಜ್ಞಾನಕ್ಕೆ ಒತ್ತು ನೀಡಲಾಗುವುದು.

‘ಮೂರು ವರ್ಷಗಳ ಮುನ್ನೋಟ ಕಾರ್ಯಗತಗೊಳಿಸಲು ಸಂಸ್ಥೆಯು ವಿಶ್ವದಾದ್ಯಂತ ಸಾಫ್ಟ್‌ವೇರ್ ಸಂಸ್ಥೆಗಳ ವಿಲೀನ ಮತ್ತು ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಿದೆ. ಮಾರಾಟ, ಮಾನವ ಸಂಪನ್ಮೂಲ ಕ್ಷೇತ್ರಗಳಲ್ಲಿ ಹೂಡಿಕೆ ಅವಕಾಶಗಳನ್ನೂ ಸಂಸ್ಥೆಯು ಎದುರು ನೋಡುತ್ತಿದೆ’ ಎಂದು ಹೇಳಿದ್ದಾರೆ.

‘ಡಿಜಿಟಲ್‌ ತಂತ್ರಜ್ಞಾನಕ್ಕೆ ಆದ್ಯತೆ, ಉದ್ಯೋಗಿಗಳ ಕೌಶಲ ಹೆಚ್ಚಳ, ಸಂಸ್ಥೆಯ ಪ್ರಮುಖ ವಹಿವಾಟು ವಿಸ್ತರಣೆ, ಸಂಸ್ಥೆಯ ಅಸ್ತಿತ್ವ ಇರುವ ಕಡೆಗಳಲ್ಲಿ ಮಾರುಕಟ್ಟೆ ವಿಸ್ತರಣೆಯು ಪಾರೇಖ್‌ ಅವರು ಹಾಕಿಕೊಂಡಿರುವ ಕಾರ್ಯಕ್ರಮಗಳಲ್ಲಿ ಆದ್ಯತೆ ನೀಡಲಾಗಿದೆ.

2017–18ರಲ್ಲಿನ ಸಂಸ್ಥೆಯ ₹18 ಸಾವಿರ ಕೋಟಿ ವರಮಾನದಲ್ಲಿ ಡಿಜಿಟಲ್‌ ಸೇವೆಯ ಪಾಲು ಶೇ 25.5 ಇದೆ. ನಾಲ್ಕನೇ ತ್ರೈಮಾಸಿಕದಲ್ಲಿ ಇದು ಶೇ 3.6ರಷ್ಟು ಏರಿಕೆ ದಾಖಲಿಸಿದೆ.

ಹೊಸ ಪ್ರತಿಭಾನ್ವಿತರ ನೇಮಕ
ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಎದುರಾಗಿರುವ ಸಾಫ್ಟ್‌ವೇರ್‌ ತಜ್ಞರ ಕೊರತೆ ತಗ್ಗಿಸಲು ಸಂಸ್ಥೆಯು ತನ್ನ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯಲ್ಲಿ ವ್ಯಾಪಕ ಬದಲಾವಣೆ ತರಲು ಉದ್ದೇಶಿಸಿದೆ.

‘ನೇಮಕಾತಿ, ತರಬೇತಿ ಮತ್ತು ನಿಯೋಜನೆ ವಿಷಯದಲ್ಲಿ ಸಂಸ್ಥೆ ಹೆಚ್ಚು ಗಮನ ನೀಡಲಿದೆ. ಈ ಕಾರಣಕ್ಕೆ ವಿದೇಶಿ ಕಾಲೇಜ್‌ಗಳು, ಭಾರತೀಯ ತಂತ್ರಜ್ಞಾನ ಸಂಸ್ಥೆಗಳಿಂದಲೂ (ಐಐಟಿ) ಪ್ರತಿಭಾನ್ವಿತರನ್ನು ನೇಮಕ ಮಾಡಿಕೊಳ್ಳಲಾಗುವುದು. ವಿವಿಧ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳ ಪ್ರತಿಭೆ ಅಂದಾಜಿಸಲಾಗುವುದು’ ಎಂದು ಸಂಸ್ಥೆಯ ಸಿಒಒ ಯು. ಬಿ. ಪ್ರವೀಣ್‌ ರಾವ್‌ ಹೇಳಿದ್ದಾರೆ. ಈ ವರ್ಷದ ಮಾರ್ಚ್‌ ಅಂತ್ಯದ ವೇಳೆಗೆ ಸಂಸ್ಥೆಯ ಸಿಬ್ಬಂದಿ ಸಂಖ್ಯೆ 2,04,107 ಇದೆ. ಇದರಲ್ಲಿ 1,92,179 ಮಂದಿ ಸಾಫ್ಟ್‌ವೇರ್‌ ತಂತ್ರಜ್ಞರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT