ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್‌ ಅಂಗಳದಲ್ಲಿ ಅನಿರೀಕ್ಷಿತ ಅಲೆಗಳು...

Last Updated 2 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಕುಸ್ತಿ ಕಣದಲ್ಲಿ ಅರಳಿದ ಚಿನ್ನ

ಕುಸ್ತಿ ಅಖಾಡದಲ್ಲಿ ಈ ಬಾರಿ ಭಾರತ ಮಿಶ್ರ ಫಲ ಅನುಭವಿಸಿತು. ಅನುಭವಿ ಪೈಲ್ವಾನ ಸುಶೀಲ್‌ ಕುಮಾರ್‌ ಆರಂಭಿಕ ಸುತ್ತಿನಲ್ಲೇ ಆಘಾತ ಕಂಡರೆ, ಸಾಕ್ಷಿ ಮಲಿಕ್‌ (62 ಕೆ.ಜಿ) ಕಂಚಿನ ಪದಕದ ಹಣಾಹಣಿಯಲ್ಲಿ ‘ಚಿತ್‌’ ಆದರು.

ಬಜರಂಗ್ ಪೂನಿಯಾ (65 ಕೆ.ಜಿ), ಮತ್ತು ‘ದಂಗಲ್‌ ಹುಡುಗಿ’ ವಿನೇಶಾ ಪೋಗಟ್‌ (50 ಕೆ.ಜಿ) ಚಿನ್ನ ‌ಗೆದ್ದು ಮಾನ ಕಾಪಾಡಿದರು.

24ರ ಹರೆಯದ ಬಜರಂಗ್‌, ಈ ಬಾರಿಯ ಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟ ಹಿರಿಮೆಗೆ ಪಾತ್ರರಾದರು. ವಿನೇಶಾ, ಏಷ್ಯನ್‌ ಕೂಟದಲ್ಲಿ ಚಿನ್ನ ಜಯಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ದಾಖಲೆ ನಿರ್ಮಿಸಿದರು. 68 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ದಿವ್ಯಾ ಕಕ್ರಾನ್‌ ಅವರಿಂದ ಕಂಚಿನ ಸಾಧನೆ ಮೂಡಿತು.

***

ಶೂಟಿಂಗ್‌ ಕ್ಷಿತಿಜದಲ್ಲಿ ನವತಾರೆಗಳ ಉಗಮ

ಶೂಟಿಂಗ್ ರೇಂಜ್‌ನಲ್ಲಿ ಭಾರತದ ಗುರಿಕಾರರು ಮತ್ತೊಮ್ಮೆ ಪ್ರಾಬಲ್ಯ ಮೆರೆದರು. ಯುವ ಶೂಟರ್‌ಗಳಾದ ಅನೀಶ್‌ ಭಾನವಾಲಾ ಮತ್ತು ಮನು ಭಾಕರ್‌ ಗುರಿ ತಪ್ಪಿದರು. ಅಖಿಲ್‌ ಶೆರಾನ್‌, ಮಾನವ್‌ಜಿತ್‌ ಸಿಂಗ್‌ ಸಂಧು, ಅಂಕುರ್‌ ಮಿತ್ತಲ್‌, ಅಂಜುಮ್‌ ಮೌಡ್ಗಿಲ್‌ ಮತ್ತು ಶ್ರೇಯಸಿ ಸಿಂಗ್‌ ಅವರೂ ಎಡವಿದರು.

ಈ ನಿರಾಸೆ ದೂರ ಮಾಡಿದ್ದು ರಾಹಿ ಸರ್ನೋಬತ್‌ ಮತ್ತು ಸೌರಭ್‌ ಚೌಧರಿ.

10 ಮೀಟರ್ಸ್‌ ಏರ್‌ ಪಿಸ್ತೂಲ್‌ನಲ್ಲಿ ಸೌರಭ್‌, ಕೂಟ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.

25 ಮೀಟರ್ಸ್‌ ಪಿಸ್ತೂಲ್‌ ವಿಭಾಗದಲ್ಲಿ ಕಣದಲ್ಲಿದ್ದ ರಾಹಿ ಚಿನ್ನಕ್ಕೆ ಗುರಿ ಇಟ್ಟು ಹೊಸ ಭಾಷ್ಯ ಬರೆದರು. ಕೂಟದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಶೂಟರ್‌ ಎಂಬ ದಾಖಲೆ ಅವರದ್ದಾಯಿತು.

10 ಮೀ. ಏರ್‌ ರೈಫಲ್‌ನಲ್ಲಿ ದೀಪಕ್‌ ಕುಮಾರ್, 50 ಮೀ. ರೈಫಲ್‌ 3 ಪೊಸಿಷನ್‌ನಲ್ಲಿ ಸಂಜೀವ್‌ ರಜಪೂತ್‌, ಟ್ರ್ಯಾಪ್‌ ವಿಭಾಗದಲ್ಲಿ ಲಕ್ಷ್ಯ ಶೆರಾನ್‌, ಡಬಲ್‌ ಟ್ರ್ಯಾಪ್‌ನಲ್ಲಿ ಶಾರ್ದೂಲ್‌ ವಿಹಾನ್‌ ಅವರು ಬೆಳ್ಳಿಯ ಬೆಡಗು ಮೂಡಿಸಿದರು.

10 ಮೀ. ಏರ್‌ ಪಿಸ್ತೂಲ್‌ನ ವೈಯಕ್ತಿಕ ವಿಭಾಗಗಳಲ್ಲಿ ಅಭಿಷೇಕ್‌ ವರ್ಮಾ ಹಾಗೂ ಹೀನಾ ಸಿಧು, 10 ಮೀ.ಏರ್‌ ರೈಫಲ್‌ ಮಿಶ್ರ ತಂಡ ವಿಭಾಗದಲ್ಲಿ ರವಿಕುಮಾರ್‌ ಮತ್ತು ಅಪೂರ್ವಿ ಚಾಂಡೇಲಾ ಕಂಚಿನ ಪದಕ ಗೆದ್ದರು.

**

ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಬೆಳೆ

ಅಥ್ಲೆಟಿಕ್ಸ್‌ನಲ್ಲಿ ಭಾರತದ ಸ್ಪರ್ಧಿಗಳು ಚಿನ್ನದ ಪಸಲು ತೆಗೆದರು.

ಶಾಟ್‌ಪಟ್‌ ಸ್ಪರ್ಧಿ ತಜಿಂದರ್‌ಪಾಲ್‌ ಸಿಂಗ್‌ ತೂರ್‌, ಜಾವೆಲಿನ್‌ ಥ್ರೋ ಸ್ಪರ್ಧಿ ನೀರಜ್‌ ಚೋಪ್ರಾ ಚಿನ್ನ ಗೆದ್ದು ನಿರೀಕ್ಷೆ ನಿಜ ಮಾಡಿದರು.

800 ಮೀಟರ್ಸ್‌ ಓಟದಲ್ಲಿ ಮಂಜೀತ್‌ ಸಿಂಗ್‌, ಟ್ರಿಪಲ್‌ ಜಂಪ್‌ ಸ್ಪರ್ಧಿ ಅರ್ಪಿಂದರ್‌ ಸಿಂಗ್‌, 1500 ಮೀಟರ್ಸ್‌ ಓಟದಲ್ಲಿ ಜಿನ್ಸನ್‌ ಜಾನ್ಸನ್‌ ಮತ್ತು ಹೆಪ್ಟಾಥ್ಲಾನ್‌ನಲ್ಲಿ ಸ್ವಪ್ನಾ ಬರ್ಮನ್‌ ಅವರು ಚಿನ್ನದ ಹೆಜ್ಜೆ ಗುರುತು ಮೂಡಿಸಿದರು.

ಕರ್ನಾಟಕದ ಎಂ.ಆರ್‌.ಪೂವಮ್ಮ, ಸರಿತಾಬೆನ್‌ ಗಾಯಕವಾಡ, ಹಿಮಾ ದಾಸ್‌ ಮತ್ತು ವಿಸ್ಮಯ ಅವರಿದ್ದ ಮಹಿಳೆಯರ 4X400 ಮೀಟರ್ಸ್‌ ರಿಲೆ ತಂಡ ಕೂಡಾ ಟ್ರ್ಯಾಕ್‌ನಲ್ಲಿ ಚಿನ್ನದ ರಂಗು ತುಂಬಿತು.

ಹಿಮಾ ದಾಸ್‌ (400 ಮೀ. ಓಟ), ಮಹಮ್ಮದ್‌ ಅನಾಸ್‌ (400 ಮೀ.), ದ್ಯುತಿ ಚಾಂದ್‌ (100 ಮತ್ತು 200 ಮೀ.), ಧರುಣ್‌ ಅಯ್ಯಸಾಮಿ (400 ಮೀ. ಹರ್ಡಲ್ಸ್‌), ಸುಧಾ ಸಿಂಗ್‌ (3000 ಮೀ. ಸ್ಟೀಪಲ್‌ಚೇಸ್‌), ನೀನಾ ವರಕಿಲ್‌ (ಲಾಂಗ್‌ ಜಂಪ್‌), ಜಿನ್ಸನ್‌ ಜಾನ್ಸನ್‌ (800 ಮೀ.) ಅವರೂ ಭಾರತದ ಸಾಧನೆಗೆ ಬೆಳ್ಳಿಯ ಹೊಳಪು ನೀಡಿದರು.

ಆರೋಕ್ಯ ರಾಜೀವ್‌, ಮಹಮ್ಮದ್‌ ಅನಾಸ್‌, ಹಿಮಾ ದಾಸ್‌ ಮತ್ತು ಎಂ.ಆರ್‌.ಪೂವಮ್ಮ ಅವರಿದ್ದ 4X400 ಮೀ. ಮಿಶ್ರ ರಿಲೆ ತಂಡ, ಧರುಣ್‌ ಅಯ್ಯಸಾಮಿ, ಕುಂಞ ಮಹಮ್ಮದ್‌, ಆರೋಕ್ಯ ರಾಜೀವ್ ಮತ್ತು ಮಹಮ್ಮದ್‌ ಅನಾಸ್‌ ಅವರನ್ನೊಳಗೊಂಡ 4X400 ಮೀ. ರಿಲೆ ತಂಡದವರೂ ಬೆಳ್ಳಿಯ ಪದಕ ಗೆದ್ದು ಬೀಗಿದರು. ಪಿ.ಯು.ಚಿತ್ರಾ (1500 ಮೀ.) ಮತ್ತು ಸೀಮಾ ಪೂನಿಯಾ (ಡಿಸ್ಕಸ್‌ ಥ್ರೋ) ಕಂಚಿನ ಪದಕ ಜಯಿಸಿ ಗಮನ ಸೆಳೆದರು.

ದೂರ ಮತ್ತು ಮಧ್ಯಮ ಅಂತರದ ಓಟಗಳಲ್ಲಿ ನಮ್ಮವರು ಮತ್ತೆ ಹಿಂದೆ ಬಿದ್ದರು. ನಡಿಗೆ ಸ್ಪರ್ಧಿಗಳಿಗೂ ಪದಕ ಕೈಗೆಟುಕದಾಯಿತು.

***

ಟೆನಿಸ್‌ ಅಂಗಳದಲ್ಲೂ ಚಿನ್ನದ ಹೊಳಪು

ಟೆನಿಸ್‌ ಅಂಗಳದಲ್ಲಿ ಕರ್ನಾಟಕದ ರೋಹನ್‌ ಬೋಪಣ್ಣ ಮತ್ತು ದಿವಿಜ್‌ ಶರಣ್‌ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು. ಪುರುಷರ ಡಬಲ್ಸ್‌ ವಿಭಾಗದಲ್ಲಿ ಈ ಸಾಧನೆ ಅರಳಿತು. ಸಿಂಗಲ್ಸ್‌ನಲ್ಲಿ ಅಂಕಿತಾ ರೈನಾ ಮತ್ತು ಪ್ರಜ್ಞೇಶ್‌ ಗುಣೇಶ್ವರನ್‌ ಅವರಿಗೆ ಕಂಚಿನ ಪದಕ ಒಲಿಯಿತು.

**

ಕಬಡ್ಡಿಯಲ್ಲಿ ಕಳೆದುಹೋದ ಮಾನ

ಕಬಡ್ಡಿಯಲ್ಲಿ ಭಾರತದ ಪ್ರಾಬಲ್ಯಕ್ಕೆ ಇರಾನ್‌ ತಂಡ ಕಡಿವಾಣ ಹಾಕಿತು. ಏಳು ಬಾರಿ ಚಿನ್ನ ಗೆದ್ದು ಮೆರೆದಿದ್ದ ಪುರುಷರ ತಂಡಕ್ಕೆ ಈ ಬಾರಿ ಸಿಕ್ಕಿದ್ದು ಕಂಚಿನ ಪದಕ. ಮಹಿಳಾ ತಂಡದವರ ಚಿನ್ನದ ಕನಸನ್ನೂ ಇರಾನ್‌ ನುಚ್ಚುನೂರು ಮಾಡಿತು. ಫೈನಲ್‌ನಲ್ಲಿ ಸೋತ ಭಾರತದ ವನಿತೆಯರು ಬೆಳ್ಳಿಯ ಪದಕಕ್ಕೆ ತೃಪ್ತಿಪಡಬೇಕಾಯಿತು.

**

ಹಾಕಿಯಲ್ಲೂ ಆಘಾತ

ಹಾಕಿಯಲ್ಲಿ ಹಾಲಿ ಚಾಂಪಿಯನ್‌ ಭಾರತ ತಂಡ ಆಘಾತ ಅನುಭವಿಸಿತು. ಗುಂಪು ಹಂತದಲ್ಲಿ ಬರೋಬ್ಬರಿ 76 ಗೋಲು ಬಾರಿಸಿ ಗಮನ ಸೆಳೆದಿದ್ದ ಪಿ.ಆರ್‌.ಶ್ರೀಜೇಶ್‌ ಬಳಗ ಸೆಮಿಫೈನಲ್‌ನಲ್ಲಿ ಮಲೇಷ್ಯಾ ಎದುರು ತಲೆಬಾಗಿತು. ಹೀಗಾಗಿ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಗಳಿಸುವ ತಂಡದ ಕನಸು ಭಗ್ನಗೊಂಡಿತು.

ಮಹಿಳಾ ತಂಡ 20 ವರ್ಷಗಳ ನಂತರ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದ್ದು, ಹಾಕಿ ಪ್ರಿಯರ ಸಮಾಧಾನಕ್ಕೆ ಕಾರಣವಾಯಿತು.

***

ಸಿಂಧು ಬೆಳ್ಳಿ, ಸೈನಾ ಕಂಚು..

ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್‌, ಬ್ಯಾಡ್ಮಿಂಟನ್‌ನಲ್ಲಿ ಹೆಜ್ಜೆ ಗುರುತು ಮೂಡಿಸಿದರು.

ಸಿಂಧು, ಕೂಟದಲ್ಲಿ ಬೆಳ್ಳಿಯ ಪದಕ ಗೆದ್ದು ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು. ಸೆಮಿಫೈನಲ್‌ನಲ್ಲಿ ಸೋತ ಸೈನಾ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಪುರುಷರ ಸಿಂಗಲ್ಸ್‌ನಲ್ಲಿ ಕಣದಲ್ಲಿದ್ದ ಕಿದಂಬಿ ಶ್ರೀಕಾಂತ್‌ ಮತ್ತು ಎಚ್‌.ಎಸ್‌.ಪ್ರಣಯ್‌ ಅವರ ಹೋರಾಟ 32ರ ಘಟ್ಟದಲ್ಲೇ ಅಂತ್ಯವಾಯಿತು. ಪುರುಷರ ಮತ್ತು ಮಹಿಳೆಯರ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ ವಿಭಾಗಗಳಲ್ಲೂ ಭಾರತದ ಸ್ಪರ್ಧಿಗಳು ಎಡವಿದರು.

***

ಆರ್ಚರಿ, ಟಿ.ಟಿ, ಸ್ಕ್ವಾಷ್‌, ರೋಯಿಂಗ್‌ನಲ್ಲಿ ಅರಳಿದ ಪದಕ

ರೋಯಿಂಗ್‌ನ ಕ್ವಾಡ್ರಪಲ್‌ ಸ್ಕಲ್ಸ್‌ ವಿಭಾಗದಲ್ಲಿ ಸವರ್ಣ್‌ ಸಿಂಗ್‌, ದತ್ತು ಬಾಬನ್‌ ಭೋಕನಾಲ್‌, ಓಂ ಪ್ರಕಾಶ್‌ ಮತ್ತು ಸುಖಮೀತ್‌ ಅವರು ಚಿನ್ನ ಗೆದ್ದು ಇತಿಹಾಸ ರಚಿಸಿದರು.

ಲೈಟ್‌ವೇಟ್‌ ಸಿಂಗಲ್ ಸ್ಕಲ್ಸ್‌ನಲ್ಲಿ ದುಷ್ಯಂತ್‌ ಚೌಹಾಣ್‌, ಡಬಲ್‌ ಸ್ಕಲ್ಸ್‌ನಲ್ಲಿ ರೋಹಿತ್‌ ಕುಮಾರ್‌ ಮತ್ತು ಭಗವಾನ್‌ ಸಿಂಗ್‌ ಕಂಚಿನ ಸಾಧನೆ ಮಾಡಿದರು.

ಆರ್ಚರಿ ವಿಭಾಗದ ಕಾಂಪೌಂಡ್‌ ಸ್ಪರ್ಧೆಗಳಲ್ಲಿ ಪುರುಷರ ಮತ್ತು ಮಹಿಳಾ ತಂಡದವರು ಬೆಳ್ಳಿಯ ಪದಕಗಳಿಗೆ ಕೊರಳೊಡ್ಡಿದರು.

ಟೇಬಲ್‌ ಟೆನಿಸ್‌ನಲ್ಲಿ ಪುರುಷರ ತಂಡ ಕಂಚಿನ ಪದಕ ಗೆದ್ದು ಹೊಸ ಮೈಲುಗಲ್ಲು ಸ್ಥಾಪಿಸಿತು. ಮಿಶ್ರ ಡಬಲ್ಸ್‌ನಲ್ಲಿ ಅಚಂತಾ ಶರತ್‌ ಕಮಲ್‌ ಮತ್ತು ಮಣಿಕಾ ಬಾತ್ರಾ ಕೂಡಾ ಕಂಚು ಜಯಿಸಿದರು.

ಸ್ಕ್ವಾಷ್‌ನ ಸಿಂಗಲ್ಸ್‌ ಸ್ಪರ್ಧೆಗಳಲ್ಲಿ ದೀಪಿಕಾ ಪಳ್ಳಿಕಲ್‌, ಜೋಷ್ನಾ ಚಿಣ್ಣಪ್ಪ ಮತ್ತು ಸೌರವ್‌ ಘೋಷಾಲ್‌ ಅವರು ಕಂಚಿನ ಪದಕಗಳನ್ನು ಗೆದ್ದರು.

***

ಮತ್ತೆ ಹುಸಿಯಾದ ನಿರೀಕ್ಷೆ

ವಾಲಿಬಾಲ್‌, ವೇಟ್‌ಲಿಫ್ಟಿಂಗ್‌, ಟೇಕ್ವಾಂಡೊ, ಸಾಫ್ಟ್‌ ಟೆನಿಸ್‌, ಸ್ಪೋರ್ಟ್‌ ಕ್ಲೈಂಬಿಂಗ್‌, ಸೇಲಿಂಗ್‌, ಪೆಂಕಾಕ್ ಸಿಲಾಟ್‌, ಜೂಡೊ, ಹ್ಯಾಂಡ್‌ಬಾಲ್, ಜಿಮ್ನಾಸ್ಟಿಕ್ಸ್‌, ಗಾಲ್ಫ್‌, ಫೆನ್ಸಿಂಗ್‌, ಬ್ಯಾಸ್ಕೆಟ್‌ಬಾಲ್‌ ಮತ್ತು ಸೈಕ್ಲಿಂಗ್‌ನಲ್ಲಿ ಭಾರತದ ಸ್ಪರ್ಧಿಗಳು ನಿರೀಕ್ಷೆ ಹುಸಿಗೊಳಿಸಿದರು.

**

ಹೊಸ ಕ್ರೀಡೆ.. ಹೊಸ ಅಲೆ

ಈ ಬಾರಿಯ ಕೂಟದಲ್ಲಿ ಪರಿಚಯಿಸಲಾಗಿದ್ದ ಹೊಸ ಕ್ರೀಡೆಗಳಲ್ಲೂ ಭಾರತದ ಸ್ಪರ್ಧಿಗಳು ಮೋಡಿ ಮಾಡಿದರು. ಈಕ್ವೆಸ್ಟ್ರಿಯನ್‌ನ ವೈಯಕ್ತಿಕ ಮತ್ತು ತಂಡ ವಿಭಾಗಗಳಲ್ಲಿ ಬೆಂಗಳೂರಿನ ಫವಾದ್‌ ಮಿರ್ಜಾ ಬೆಳ್ಳಿಯ ಪದಕಗಳನ್ನು ಜಯಿಸಿ ಚಾರಿತ್ರಿಕ ಸಾಧನೆ ಮಾಡಿದರು.

ಕುರಾಶ್‌ ಕ್ರೀಡೆಯ 52 ಕೆ.ಜಿ. ವಿಭಾಗದಲ್ಲಿ ಪಿಂಕಿ ಬಲ್ಹಾರ ಬೆಳ್ಳಿ ಗೆದ್ದರೆ, ಕರ್ನಾಟಕದ ಮಲಪ್ರಭಾ ಜಾಧವ ಕಂಚು ತಮ್ಮದಾಗಿಸಿಕೊಂಡರು.

ಸೆಪಕ್‌ ಟಕ್ರಾದ ಟೀಮ್‌ ರೆಗು ಸ್ಪರ್ಧೆಯಲ್ಲಿ ಪುರುಷರ ತಂಡ ಕಂಚಿನ ಪದಕ ಜಯಿಸಿ ನವ ಮನ್ವಂತರಕ್ಕೆ ನಾಂದಿ ಹಾಡಿತು.

ವುಶು ಕ್ರೀಡೆಯ ವೈಯಕ್ತಿಕ ವಿಭಾಗಗಳಲ್ಲಿ ರೋಷಿಬಿನಾ ನವೊರೆಮ್‌, ಸಂತೋಷ್‌ ಕುಮಾರ್‌, ಸೂರ್ಯ ಭಾನುಪ್ರತಾಪ್ ಸಿಂಗ್‌ ಮತ್ತು ನರೇಂದರ್‌ ಗ್ರೆವಾಲ್‌ ಕಂಚು ಗೆದ್ದು ಹೊಸ ಅಲೆ ಹುಟ್ಟುಹಾಕಿದರು.

ಬ್ರಿಡ್ಜ್‌ ಕ್ರೀಡೆಯ ಪುರುಷ ತಂಡ ಮತ್ತು ಮಿಶ್ರ ತಂಡ ವಿಭಾಗಗಳಲ್ಲೂ ಭಾರತಕ್ಕೆ ಕಂಚಿನ ಪದಕ ಒಲಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT