ಚೀನಾದಲ್ಲಿ ಕೋವಿಡ್ ಹೆಚ್ಚಳ: ಏಷ್ಯನ್ ಗೇಮ್ಸ್ 2023ರವರೆಗೂ ಮುಂದೂಡಿಕೆ

ಬೀಜಿಂಗ್: ಚೀನಾದಲ್ಲಿ ನಿಗದಿಯಾಗಿದ್ದ ಏಷ್ಯನ್ ಗೇಮ್ಸ್ ಕ್ರೀಡಾಕೂಟವನ್ನು ಅನಿರ್ದಿಷ್ಟಾವಧಿ ವರೆಗೂ ಮುಂದೂಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಚೀನಾದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿರುವುದರಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ವರದಿಯಾಗಿದೆ.
19ನೇ ಏಷ್ಯನ್ ಗೇಮ್ಸ್ ಸ್ಪರ್ಧೆಗಳನ್ನು ಚೀನಾದ ಹ್ಯಾಂಗ್‌ಜೌನಲ್ಲಿ ಈ ವರ್ಷ ಸೆಪ್ಟೆಂಬರ್ 10ರಿಂದ 25ರವರೆಗೂ ನಡೆಸಲು ನಿರ್ಧರಿಸಲಾಗಿತ್ತು. ಕ್ರೀಡಾಕೂಟ ನಡೆಯುವ ದಿನಾಂಕವನ್ನು ಮುಂದೂಡಲಾಗಿದೆ ಎಂದು ಏಷ್ಯಾದ ಒಲಿಂಪಿಕ್ ಮಂಡಳಿ ಪ್ರಕಟಿಸಿದೆ.
ಕ್ರೀಡಾಕೂಟ ನಡೆಯುವ ದಿನಾಂಕವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸುವುದಾಗಿ ತಿಳಿಸಲಾಗಿದೆ. 2023ರವರೆಗೂ ಕ್ರೀಡಾಕೂಟ ಮುಂದೂಡಿರುವುದಾಗಿ ವರದಿಯಾಗಿದೆ.
ಕೊರೊನಾ ವೈರಸ್ ಸೋಂಕು ಸಾಂಕ್ರಾಮಿಕಗೊಳ್ಳುವ ಹಂತ ತಲುಪಿದ್ದ ಚೀನಾದ ಶಾಂಘೈನಿಂದ ಹ್ಯಾಂಗ್‌ಜೌ ನಗರವು 200 ಕಿ.ಮೀ.ಗಿಂತ ಕಡಿಮೆ ಅಂತರದಲ್ಲಿದೆ. ಈ ವರ್ಷ ಮಾರ್ಚ್‌ನಿಂದ ಶಾಂಘೈನಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಸೇರಿದಂತೆ ಕಠಿಣ ನಿಯಮಗಳನ್ನು ಅನುಸರಿಸಲಾಗುತ್ತಿದೆ.
ಇದನ್ನೂ ಓದಿ–ಕೋವಿಡ್ನಿಂದ ಭಾರತದಲ್ಲಿ 47 ಲಕ್ಷಕ್ಕೂ ಹೆಚ್ಚು ಜನರ ಸಾವು: ವಿಶ್ವ ಆರೋಗ್ಯ ಸಂಸ್ಥೆ
ಸುಮಾರು 1.2 ಕೋಟಿ ಜನಸಂಖ್ಯೆಯ ಹ್ಯಾಂಗ್‌ಜೌನಲ್ಲಿ ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಪಾರಾ ಗೇಮ್ಸ್ ಸ್ಪರ್ಧೆಗಳಿಗಾಗಿ ಈಗಾಗಲೇ 56 ಸ್ಥಳಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
ಈ ಹಿಂದೆ ಚೀನಾದ ಬೀಜಿಂಗ್ (1999) ಮತ್ತು ಗಾಂಗ್‌ಜೌನಲ್ಲಿ (2010) ಏಷ್ಯಾ ಗೇಮ್ಸ್ ಕ್ರೀಡಾಕೂಟ ನಡೆಸಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.