ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್‌ ಕ್ರೀಡಾಕೂಟ: ಮಹಿಳಾ ಹಾಕಿ ತಂಡಕ್ಕೆ ಬೆಳ್ಳಿ ಪದಕ

Last Updated 31 ಆಗಸ್ಟ್ 2018, 18:43 IST
ಅಕ್ಷರ ಗಾತ್ರ

ಜಕಾರ್ತ: ಗುಂಪು ಹಂತದಲ್ಲಿ ಅಮೋಘ ಸಾಧನೆ ಮಾಡಿದ್ದ ಭಾರತದ ಮಹಿಳೆಯರು ಏಷ್ಯನ್‌ ಕ್ರೀಡಾಕೂಟದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಎಡವಿದರು. ಶುಕ್ರವಾರ ಜಪಾನ್ ಎದುರು ನಡೆದ ಪಂದ್ಯದಲ್ಲಿ 1–2 ಗೋಲುಗಳಿಂದ ಸೋತ ರಾಣಿ ರಾಂಪಾಲ್‌ ಬಳಗ ಬೆಳ್ಳಿ ಪದಕ ಗಳಿಸಿತು.

ಕಳೆದ ಬಾರಿ ಕಂಚು ಗೆದ್ದಿದ್ದ ಭಾರತ ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂದೇ ಬಿಂಬಿತವಾಗಿತ್ತು. ಅಪಾಯ ಅರಿತಿದ್ದ ಜಪಾನ್ ಆರಂಭದಿಂದಲೇ ಆಕ್ರಮಣಕಾರಿ ಆಟದ ತಂತ್ರಕ್ಕೆ ಮೊರೆ ಹೋಯಿತು. ಭಾರತ ಪ್ರತಿ ಹಂತದಲ್ಲೂ ಪ್ರತಿ ಹೋರಾಟ ನಡೆಸಿತು. ಆದರೆ ಲಭಿ ಸಿದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಲಾಗದೆ ಸೋಲಿಗೆ ಶರಣಾಯಿತು.

ಮೊದಲ ನಿಮಿಷದಲ್ಲೇ ಜಪಾನ್ ಆಟಗಾರ್ತಿಯರು ಎಡಭಾಗದಲ್ಲಿ ಪ್ರಬಲ ಆಕ್ರಮಣ ನಡೆಸಿ ಚೆಂಡನ್ನು ಭಾರತದ ಆವರಣಕ್ಕೆ ತಲುಪಿಸಿದರು. ಆದರೆ ಗುರುಜೀತ್ ಕೌರ್ ನೇತೃತ್ವದ ರಕ್ಷಣಾ ವಿಭಾಗದವರು ಜಪಾನ್‌ಗೆ ನಿರಾಸೆ ಮೂಡಿಸಿದರು.

ನಾಲ್ಕನೇ ನಿಮಿಷದಲ್ಲಿ ಭಾರತ ಕೂಡ ಎದುರಾಳಿಗಳ ಆವರಣಕ್ಕೆ ನುಗ್ಗಿ ಆತಂಕ ಮೂಡಿಸಿದರು. ಈ ಸಂದರ್ಭದಲ್ಲಿ ರಾಣಿ ರಾಂಪಾಲ್ ನೀಡಿದ ಪಾಸ್‌ನಲ್ಲಿ ನವನೀತ್ ಕೌರ್‌ಗೆ ಗೋಲು ಗಳಿಸಲು ಉತ್ತಮ ಅವಕಾಶ ಒದಗಿತ್ತು.

ಆದರೆ ಜಪಾನ್‌ ರಕ್ಷಣಾ ವಿಭಾಗದವರು ಮತ್ತು ಗೋಲ್ ಕೀಪರ್‌ ಮೇಗುಮಿ ಕಗೆಯಾಮ ಭಾರತದ ಆಸೆಗೆ ತಣ್ಣೀರು ಸುರಿದರು. ಮೂರನೇ ನಿಮಿಷದಲ್ಲಿ ಭಾರತ ಮತ್ತೊಮ್ಮೆ ಆಕ್ರಮಣಕ್ಕೆ ಮುಂದಾಯಿತು. ಈ ಸಂದರ್ಭದಲ್ಲೂ ತಂಡಕ್ಕೆ ನಿರಾಸೆ ಕಾದಿತ್ತು.

ಮೊದಲ ಕ್ವಾರ್ಟರ್‌ನ ಮುಕ್ತಾಯಕ್ಕೆ ನಾಲ್ಕು ನಿಮಿಷಗಳು ಉಳಿದಿದ್ದಾಗ ಲಭಿ ಸಿದ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಇನಾಮಿ ಶಿಮಿಸು ಗೋಲು ಗಳಿಸಿ ಜಪಾನ್ ಪಾಳಯದಲ್ಲಿ ಸಂಭ್ರಮದ ಅಲೆ ಎಬ್ಬಿಸಿದರು. ಎರಡನೇ ಕ್ವಾರ್ಟರ್‌ನ ಮುಕ್ತಾಯಕ್ಕೆ ಐದು ನಿಮಿಷಗಳು ಇದ್ದಾಗ ನೇಹಾ ಗೋಯಲ್‌ ಫೀಲ್ಡ್ ಗೋಲು ಗಳಿಸಿ ಸಮಬಲ ಸಾಧಿಸಿದರು.

ಮುಳುವಾದ ಪೆನಾಲ್ಟಿ: ದ್ವಿತೀಯಾರ್ಧ ದಲ್ಲಿ ಉಭಯ ತಂಡದವರು ಜಿದ್ದಾಜಿದ್ದಿಯ ಹೋರಾಟ ನಡೆಸಿದರು. ಆದರೆ 44ನೇ ನಿಮಿಷದಲ್ಲಿ ಪೆನಾಲ್ಟಿ ಬಿಟ್ಟುಕೊಟ್ಟ ರಾಂಪಾಲ್ ಬಳಗ ಕೈಸುಟ್ಟುಕೊಂಡಿತು. ಮೊಟೊಮುರಿ ಕವಾಮುರ ಗೋಲು ಗಳಿಸಿ ಮಿಂಚಿದರು.

ಕೊನೆಯ ನಿಮಿಷದಲ್ಲಿ ಸಮಬಲ ಸಾಧಿಸಲು ಭಾರತಕ್ಕೆ ಚಿನ್ನದಂಥ ಅವ ಕಾಶ ಲಭಿಸಿತ್ತು. ಆದರೆ ನಾಯಕಿಯೇ ಸ್ವತಃ ಈ ಅವಕಾಶವನ್ನು ಕೈಚೆಲ್ಲಿ ಸೋಲೊಪ್ಪಿಕೊಂಡರು.
**



**
ಶನಿವಾರದ ಸ್ಪರ್ಧೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT