ಮಿಶ್ರ ಬ್ಯಾಡ್ಮಿಂಟನ್‌ ಟೂರ್ನಿ: ಹೊರಬಿದ್ದ ಭಾರತ ತಂಡ

ಗುರುವಾರ , ಏಪ್ರಿಲ್ 25, 2019
29 °C

ಮಿಶ್ರ ಬ್ಯಾಡ್ಮಿಂಟನ್‌ ಟೂರ್ನಿ: ಹೊರಬಿದ್ದ ಭಾರತ ತಂಡ

Published:
Updated:
Prajavani

ಹಾಂಕಾಂಗ್‌: ಚೀನಾ ಥೈಪೆಯ ಪ್ರಬಲ ಹೋರಾಟಕ್ಕೆ ಮಣಿದ ಭಾರತ ತಂಡ ಏಷ್ಯನ್ ಮಿಶ್ರ ತಂಡ ವಿಭಾಗದ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಿಂದ ಹೊರಬಿದ್ದಿತು. ಗುರುವಾರ ನಡೆದ ಐದು ಪಂದ್ಯಗಳ ಹಣಾಹಣಿಯಲ್ಲಿ ಅಶ್ಮಿತಾ ಚಾಲಿಹಾ ಮತ್ತು ಅರುಣ್ ಜಾರ್ಜ್‌–ಶ್ಯಾಮ್‌ ಶುಕ್ಲ ಜೋಡಿ ಆಮೋಘ ಆಟವಾಡಿದರು. ಆದರೆ ಭಾರತ 2–3ರಿಂದ ಸೋಲೊಪ್ಪಿಕೊಂಡಿತು.

ಮೊದಲ ಎರಡು ಪಂದ್ಯಗಳಲ್ಲಿ ಅಶ್ಮಿತಾ ಮತ್ತು ಜಾರ್ಜ್‌ –ಶುಕ್ಲಾ ಜೋಡಿ ಗೆಲುವು ಗಳಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು.

ಆದರೆ ಮುಂದಿನ ಮೂರು ಪಂದ್ಯಗಳಲ್ಲಿ ಸೋತು ನಿರಾಸೆ ಅನುಭವಿಸಿತು. ಇದರೊಂದಿಗೆ ‘ಬಿ’ ಗುಂಪಿನಿಂದ ‘ಎ’ ಗುಂಪಿಗೆ ತೇರ್ಗಡೆ ಹೊಂದುವ ಭಾರತದ ಕನಸು ನುಚ್ಚುನೂರಾಯಿತು.

ಮೊದಲ ಹಣಾಹಣಿಯಲ್ಲಿ ಭಾರತವು ಸಿಂಗಪುರ ವಿರುದ್ಧ ಸೋತಿತ್ತು. ಭಾರತ ಟೂರ್ನಿಯಿಂದ ಹೊರ ಬಿದ್ದ ಕಾರಣ ಚೀನಾ ಥೈಪೆಯ ಕ್ವಾರ್ಟರ್ ಫೈನಲ್ ಹಾದಿ ಸುಗಮವಾಯಿತು.

ಜಯ ಸಾಧಿಸಿ ಜಾರ್ಜ್‌–ಶುಕ್ಲಾ: ವಿಶ್ವ ರ‍್ಯಾಂಕಿಂಗ್‌ನಲ್ಲಿ 14ನೇ ಸ್ಥಾನದಲ್ಲಿರುವ ಲಿಯೊ ಮಿನ್ ಚುನ್ ಮತ್ತು ಚಿಂಗ್‌ ಹೆಂಗ್‌ ಜೋಡಿಯನ್ನು 21–17, 17–21, 21–14ರಿಂದ ಮಣಿಸಿದ ಜಾರ್ಜ್‌ ಮತ್ತು ಶುಕ್ಲಾ ಭಾರತದ ಆಸೆಯನ್ನು ಜೀವಂತವಾಗಿರಿಸಿದರು. 

ನಂತರ ಒಂದು ತಾಸು ನಡೆದ ಸೆಣಸಾಟದಲ್ಲಿ ಅಸ್ಸಾಂನ 19 ವರ್ಷದ ಚಾಲಿಹಾ 21–18, 17–21, 21–19ರಿಂದ ಎದುರಾಳಿಯನ್ನು ಮಣಿಸಿದರು. ಮುಂದಿನ ಪಂದ್ಯ ಸೌರಭ್‌ ವರ್ಮಾ ಮತ್ತು ವಾಂಗ್‌ ತ್ಸು ವೀ ನಡುವೆ ನಿಗದಿಯಾಗಿತ್ತು. ಭರವಸೆಯಲ್ಲೇ ಕಣಕ್ಕೆ ಇಳಿದ ಸೌರಭ್‌ 7–21, 21–16, 21–23ರಿಂದ ಸೋತರು.

ಮಹಿಳೆಯರ ಡಬಲ್ಸ್‌ನಲ್ಲಿ ಚಾಂಗ್ ಚಿಂಗ್‌ ಹೀ ಮತ್ತು ಯಾಂಗ್ ಚಿಂಗ್‌ ತೂನ್‌ ಭಾರತದ ಆರತಿ ಸಾರಾ ಮತ್ತು ರುತುಪರ್ಣಾ ಪಂಡಾ ಎದುರು 21–19, 21–17ರಿಂದ ಗೆದ್ದರು. ನಂತರ ಮಿಶ್ರ ಡಬಲ್ಸ್‌ನಲ್ಲಿ ಹ್ಸೀ ಪೀ ಶಾನ್ ಮತ್ತು ಸೆಂಗ್‌ ಮಿನ್ ಹೋ 21–15, 21–14ರಿಂದ ಶಿಖಾ ಗೌತಮ್‌ ಮತ್ತು ಶ್ಲೋಕ್‌ ರಾಮಚಂದ್ರನ್ ಅವರನ್ನು ಮಣಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !