ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷಿ, ವಿನೇಶಾಗೆ ಕಂಚಿನ ಪದಕ

ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌
Last Updated 26 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ಕ್ಸಿಯನ್‌, ಚೀನಾ (ಪಿಟಿಐ): ಸಾಕ್ಷಿ ಮಲಿಕ್‌ ಮತ್ತು ವಿನೇಶಾ ಪೋಗಟ್‌ ಅವರು ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

ಮಹಿಳೆಯರ 62 ಕೆ.ಜಿ. ವಿಭಾಗದ ಕಂಚಿನ ಪದಕದ ‘ಪ್ಲೇ ಆಫ್‌’ನಲ್ಲಿ ಸಾಕ್ಷಿ 9–6 ಪಾಯಿಂಟ್ಸ್‌ನಿಂದ ಉತ್ತರ ಕೊರಿಯಾದ ಹಯೊನ್‌ ಗ್ಯೊಂಗ್‌ ಮನ್‌ ಅವರನ್ನು ಪರಾಭವಗೊಳಿಸಿದರು.

ಇದಕ್ಕೂ ಮೊದಲು ನಡೆದಿದ್ದ ಕ್ವಾರ್ಟರ್‌ ಫೈನಲ್‌ನಲ್ಲಿ ಸಾಕ್ಷಿ ಅವರು ಜಪಾನ್‌ನ ಯುಕಾಕು ಕವಾಯ್‌ ಎದುರು ಸೋತಿದ್ದರು. ಕವಾಯ್‌, ಫೈನಲ್‌ ಪ್ರವೇಶಿಸಿದ್ದರಿಂದ ಭಾರತದ ಕುಸ್ತಿಪಟುಗೆ ರೆಪೆಚೆಜ್‌ ಸುತ್ತಿನಲ್ಲಿ ಸೆಣಸುವ ಅವಕಾಶ ಲಭಿಸಿತ್ತು. ಈ ಸುತ್ತಿನಲ್ಲಿ ಸಾಕ್ಷಿ, ದಕ್ಷಿಣ ಕೊರಿಯಾದ ಜಿಯಾಯೆ ಚೋಯಿ ಅವರನ್ನು ಮಣಿಸಿದ್ದರು.

ಮಹಿಳೆಯರ 53 ಕೆ.ಜಿ. ವಿಭಾಗದ ಕಂಚಿನ ಪದಕದ ‘ಪ್ಲೇ ಆಫ್‌’ನಲ್ಲಿ ವಿನೇಶಾ 8–1 ಪಾಯಿಂಟ್ಸ್‌ನಿಂದ ಚೀನಾದ ಕ್ವಿಯಾನ್ಯು ಪಾಂಗ್‌ ಅವರನ್ನು ಸೋಲಿಸಿದರು.

ಕ್ವಿಯಾನ್ಯು ಅವರು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದರು.

ಇದಕ್ಕೂ ಮೊದಲು ನಡೆದಿದ್ದ ರಿಪೆಚೆಜ್‌ ಸುತ್ತಿನಲ್ಲಿ ವಿನೇಶಾ 6–0 ಪಾಯಿಂಟ್ಸ್‌ನಿಂದ ತೈಪೆಯ ಜೊ ಚಿಹ್‌ ಚಿವು ವಿರುದ್ಧ ಗೆದ್ದಿದ್ದರು.

ಪೂಜಾಗೆ ನಿರಾಸೆ: ಮಹಿಳೆಯರ 57 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಪೂಜಾ ದಂಡಾ, ಪದಕ ಗೆಲ್ಲಲು ವಿಫಲರಾದರು.

ಕಂಚಿನ ಪದಕದ ‘ಪ್ಲೇ ಆಫ್‌’ನಲ್ಲಿ ಪೂಜಾ 3–5 ಪಾಯಿಂಟ್ಸ್‌ನಿಂದ ಮಂಗೋಲಿಯಾದ ಸೆರೆನ್‌ಚಿಮೆಡ್‌ ಸುಖೀ ಎದುರು ಸೋತರು.

ಸೆಮಿಫೈನಲ್‌ನಲ್ಲಿ ಭಾರತದ ಕುಸ್ತಿಪಟು 4–8ರಿಂದ ಚೀನಾದ ನಿಂಗ್‌ನಿಂಗ್‌ ರೊಂಗ್‌ ಎದುರು ಮಣಿದಿದ್ದರು.

ಅರ್ಹತಾ ಸುತ್ತಿನಲ್ಲಿ ಉಜ್‌ಬೆಕಿಸ್ತಾನದ ಸೆವಾರ ಎಶಮುರಾಟೋವಾ ಎದುರು ಗೆದ್ದಿದ್ದ ಪೂಜಾ, ಕ್ವಾರ್ಟರ್‌ ಫೈನಲ್‌ನಲ್ಲಿ ಕಜಕಸ್ತಾನದ ಎಮ್ಮಾ ತಿಸ್ಸಿನಾ ಎದುರು ವಿಜಯಿಯಾಗಿದ್ದರು.

72 ಕೆ.ಜಿ. ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಕಿರಣ್‌ 4–7ರಿಂದ ಕಜಕಸ್ತಾನದ ಜಮೀಲಾ ಬಕಬರ್ಗೆನೋವಾ ಎದುರು ಪರಾಭವಗೊಂಡರು.

65 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ನವಜೋತ್‌, ಕಂಚಿನ ಪದಕದ ‘ಪ್ಲೇ ಆಫ್‌’ನಲ್ಲಿ ಕಜಕಸ್ತಾನದ ಅಯಿನಾ ತೆಮಿರ್ಟಾಸೊವಾ ಎದುರು ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT