ಬುಧವಾರ, ಡಿಸೆಂಬರ್ 2, 2020
22 °C
ಕ್ರೀಡಾ ಸಾಧನೆಗೆ ಪ್ರಶಸ್ತಿ ಪಡೆದ ಹುಬ್ಬಳ್ಳಿಯ ಅನಿತಾ ಮನದ ಮಾತು

ಅಟ್ಯಾಪಟ್ಯಾ ಬೆಳೆದರಷ್ಟೇ ‘ಕ್ರೀಡಾರತ್ನ’ ಸಾರ್ಥಕ: ಅನಿತಾ ಮನದ ಮಾತು

ಪ್ರಮೋದ‌ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಹವ್ಯಾಸಕ್ಕೆಂದು ಆಡಲು ಶುರುಮಾಡಿದ ಕ್ರೀಡೆಯೇ ರಾಜ್ಯಮಟ್ಟದಲ್ಲಿ ದೊಡ್ಡ ಪ್ರಶಸ್ತಿ ತಂದುಕೊಟ್ಟಿದೆ. ನನ್ನಂತೆ ಇನ್ನುಳಿದವರಿಗೂ ಈ ಕ್ರೀಡೆ ಹೇಳಿಕೊಡಬೇಕು, ಅಟ್ಯಾಪಟ್ಯಾ ಬೆಳೆದರಷ್ಟೇ ನಾನು ಪ್ರಶಸ್ತಿ ಪಡೆದಿದ್ದು ಸಾರ್ಥಕ...’

–ಹೀಗೆ ಹೇಳಿದ್ದು ಭಾರತ ಅಟ್ಯಾ ಪಟ್ಯಾ ತಂಡದ ಆಟಗಾರ್ತಿ ಹುಬ್ಬಳ್ಳಿಯ ಅನಿತಾ ಬಿಚಗತ್ತಿ. ರಾಷ್ಟ್ರೀಯ ಟೂರ್ನಿಗಳಲ್ಲಿ 11 ಸಲ ಆಡಿರುವ ಅನಿತಾ ರಾಜ್ಯ ಸರ್ಕಾರ ನೀಡಿದ 2019ನೇ ಸಾಲಿನ ’ಕರ್ನಾಟಕ ಕ್ರೀಡಾ ರತ್ನ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸೋಮವಾರ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮೂಲತಃ ಕೊಕ್ಕೊ ಆಟಗಾರ್ತಿಯಾದ ಅನಿತಾ, ರೈಲ್ವೆ ಶಾಲೆಯಲ್ಲಿ 7ನೇ ತರಗತಿ ಓದುವಾಗ ಅಟ್ಯಾ ಪಟ್ಯಾ ಕ್ರೀಡೆಯತ್ತ ಆಕರ್ಷಿತರಾದರು. ಆರಂಭದ ದಿನಗಳಲ್ಲಿ ವೇಗವಾಗಿ ಕ್ರೀಡೆಯ ಕೌಶಲಗಳನ್ನು ಕಲಿತು ಜೀವೇಶ್ವರ ಪ್ರೌಢಶಾಲೆಯಲ್ಲಿ ಅವಕಾಶ ಪಡೆದರು. ತರಬೇತುದಾರ ಆನಂದ ಸದ್ಲಾಪುರ ಅವರ ಗರಡಿಯಲ್ಲಿ ಪಳಗಿ ರಾಜ್ಯ ಮತ್ತು ರಾಷ್ಟ್ರೀಯ ಟೂರ್ನಿಗಳಲ್ಲಿ ಸಾಧನೆ ಮಾಡಿದ್ದಾರೆ.

ಅನಿತಾ 2018ರಲ್ಲಿ ನೇಪಾಳ ಮತ್ತು 2019ರಲ್ಲಿ ಭೂತಾನ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಅಟ್ಯಾ ಪಟ್ಯಾ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡಕ್ಕೆ ನಾಯಕಿಯೂ ಆಗಿದ್ದರು. ರಾಷ್ಟ್ರೀಯ ಟೂರ್ನಿಯಲ್ಲಿ ಆಡಿದ 11 ಬಾರಿಯೂ ರಾಜ್ಯ ತಂಡ ಪ್ರಶಸ್ತಿ ಜಯಿಸಿದ್ದು ವಿಶೇಷ. ಮಹಿಳಾ ವಿದ್ಯಾಪೀಠದಲ್ಲಿ ಪದವಿಪೂರ್ವ ಮತ್ತು ಪದವಿ ಶಿಕ್ಷಣ ಪಡೆದಿದ್ದಾರೆ. ಇವರು ರೈಲ್ವೆ ಇಲಾಖೆ ಉದ್ಯೋಗಿ ಸತ್ಯಪ್ಪ ಬಿಚಗತ್ತಿ ಮತ್ತು ಯಲ್ಲೂಬಾಯಿ ಅವರ ಪುತ್ರಿ.

‘ಕ್ರಿಕೆಟ್‌ ಹಾಗೂ ಕಬಡ್ಡಿ ರೀತಿ ಅಟ್ಯಾ ಪಟ್ಯಾ ಕ್ರೀಡೆಯೂ ಬೆಳೆಯಬೇಕು. ಇದೇ ಕ್ರೀಡೆಯನ್ನು ನಂಬಿಕೊಂಡು ಬರುವ ಕ್ರೀಡಾಪಟುಗಳಿಗೆ ಅನ್ನ ಸಿಗುವಂತಾಗಬೇಕು. ಪ್ರತಿ ಶಾಲೆಗಳಿಗೆ ಹೋಗಿ ನಾನು ಕಲಿತ ಆಟವನ್ನು ಮಕ್ಕಳಿಗೆ ಹೇಳಿಕೊಡುವ ಆಸೆಯಿದೆ. ಕ್ರೀಡೆಯನ್ನು ಎತ್ತರಕ್ಕೆ ಬೆಳೆಸುವ ಗುರಿಯಿದೆ. ನಾನು ಇಷ್ಟೊಂದು ಸಾಧನೆ ಮಾಡಲು ಕಾರಣರಾದ ಕೋಚ್‌ ವಿ.ಡಿ. ಪಾಟೀಲ ಮತ್ತು ಆನಂದ ಸದ್ಲಾಪುರ ಸರ್‌ ಅವರಿಗೆ ಚಿರಋಣಿ. ಪ್ರಶಸ್ತಿ ಅನಿರೀಕ್ಷಿತವಾಗಿ ಬಂದ ಉಡುಗೊರೆ’ ಎಂದು ಅನಿತಾ ಖುಷಿ ಹಂಚಿಕೊಂಡರು.

ನನ್ನ ಸಹೋದರಿ ಸಾಧನೆ ಗುರುತಿಸಿ ಸರ್ಕಾರ ಪ್ರಶಸ್ತಿ ನೀಡಿದ್ದು ಹೆಮ್ಮೆಯ ಭಾವ ಮೂಡಿಸಿದೆ. ಈ ಕ್ರೀಡೆಯಲ್ಲಿ ಸ್ಪರ್ಧಿಗಳ ಜೊತೆಗೆ ಅಟ್ಯಾ ಪಟ್ಯಾ ಕ್ರೀಡೆಯೂ ಬೆಳೆಯಬೇಕು.
-ಜಸ್ವಂತ್ ಜಾಧವ್
ಅನಿತಾ ಸಹೋದರ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.