ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದುಗಿಳಿಗಳ ಪ್ರೀತಿಯ ಜಗಳ!

Last Updated 10 ಜೂನ್ 2018, 19:30 IST
ಅಕ್ಷರ ಗಾತ್ರ

‘ಗಿಳಿರಾಮ’… ಪುಟಾಣಿ ಮಕ್ಕಳಿಂದ ಹಿಡಿದು ಕಿರಿ-ಹಿರಿಯರೆಲ್ಲರಿಗೂ ಆತ್ಮೀಯವಾದ ಬಣ್ಣದ ಹಕ್ಕಿ. ಹಲವು ರೀತಿಯ ಗಿಳಿಗಳಲ್ಲಿ ಮುಕ್ಕಾಲು ಅಡಿ ಅಳತೆಯಿಂದ ಎರಡಡಿ ಒಟ್ಟಾರೆ ಅಳತೆಯವು ಇವೆ. ಅವುಗಳಲ್ಲಿ ಮಧ್ಯಮ ಅಳತೆಯ ಕೆಂಪು ಕೊರಳಿನ ಈ ಗಿಳಿ ಸುಮಾರು ಹದಿನಾರು ಇಂಚು ಉದ್ದನೆಯದು. ಭಾರತ, ಪಾಕಿಸ್ತಾನ, ದಕ್ಷಿಣ ಏಷ್ಯಾ, ಆಫ್ರಿಕಾ, ಯುರೋಪಿನ ಹಲವು ಪ್ರದೇಶಗಳಲ್ಲಿ ಜೀವಿಸುವ ಇದರ ಹೆಸರು ‘ರೋಸ್ ರಿಂಗ್ಡ್ ಪಾರಾಕೀಟ್’.

ಅನುಕರಣೆಯಿಂದ ಜನರಾಡುವ ಮಾತು ಕಲಿತು ಸುಂದರವಾಗಿ ತಾನೂ ಮಾತಾಡಿ ‘ಭೇಷ್’ ಎನ್ನಿಸಿಕೊಳ್ಳಲು ಹಾತೊರೆಯುವ ಈ ಗಿಳಿರಾಮ, ವಲಸೆ ಜಾತಿಗೆ ಸೇರಿಲ್ಲ. ಅಡವಿ ಪ್ರದೇಶದ ಹಣ್ಣು, ಕಾಳು ಕಡಿ, ಜೋಳ ಇವುಗಳ ಪ್ರಿಯವಾದ ಆಹಾರ. ಅಂತೆಯೇ ತುಮಕೂರು ರಸ್ತೆಯ ಜಿಂದಾಲ್ ಸಮೀಪ ಒಂದು ಮೈಲು ದೂರದ ಜೋಳ ಬೆಳೆಯುವ ಹೊಲದ ಬಳಿ, ಗುಂಪು ಗುಂಪಾಗಿ ಈ ಗಿಳಿಗಳು ಬರುತ್ತಿದ್ದುದು ನೋಡಿ, ಜೋಡಿಯೊಂದರ ಸರಸದ ಆತ್ಮೀಯ ಕ್ಷಣವನ್ನು ಆ್ಯಕ್ಷನ್ ಸಮೇತ ಕ್ಯಾಮೆರಾದಲ್ಲಿ ಸೆರೆಹಿಡಿದವರು, ಚನ್ನನಾಯಕನ ಪಾಳ್ಯದ ಭವಾನಿ ನಗರವಾಸಿ ವೃತ್ತಿಪರ ಛಾಯಾಗ್ರಾಹಕ ಟಿ.ಪಿ.ವರದ ನಾಯಕ. ಮೂಲತಃ ಚಿತ್ರಕಲಾಕಾರರಾಗಿರುವ ಅವರು ಹೆಸರಘಟ್ಟದ ಬಳಿ ಕನ್ನಡ ಶಾಲೆಯ ಮಕ್ಕಳಿಗೆ ಉಚಿತವಾಗಿ ಚಿತ್ರಕಲೆಯ ತರಗತಿಯನ್ನು ನಡೆಸುವುದರೊಂದಿಗೆ, ಹಲವು ವರ್ಷಗಳಿಂದಲೂ ವನ್ಯಜೀವಿ ಮತ್ತು ಕಲಾತ್ಮಕ ಛಾಯಾಗ್ರಹಣದಲ್ಲೂ ಹವ್ಯಾಸ ಹೊಂದಿದ್ದಾರೆ.

ಅವರು ಈ ಮುದ್ದಾದ ಗಿಣಿಗಳ ಸುಂದರಮಯ ಕ್ಷಣಗಳನ್ನು ಸೆರೆಹಿಡಿಯಲು ಬಳಸಿದ ಕ್ಯಾಮೆರಾ, ಕೆನಾನ್, 5 ಡಿ. ಮಾರ್ಕ್ 2, ಜೊತೆಗೆ 150– 600 ಎಂ.ಎಂ. ಜೂಮ್‌ ಲೆನ್ಸ್. ಕ್ಯಾಮೆರಾದ ಎಕ್ಸ್‌ಪೋಷರ್ ವಿವರ ಇಂತಿವೆ: ಲೆನ್ಸ್ ಫೋಕಲ್ ಲೆಂಗ್ತ್ 468. ಎಂ.ಎಂ., ಅಪರ್ಚರ್ ಎಫ್ 7.1, ಶಟರ್ ವೇಗ 1/ 1200 ಸೆಕೆಂಡ್, ಐ.ಎಸ್.ಒ. 500, ಟ್ರೈಪಾಡ್‌ ಉಪಯೋಗಿಸಲಾಗಿದೆ. ಫ್ಲಾಶ್ ಬಳಸಿಲ್ಲ.

ಈ ಚಿತ್ರದ ಬಗ್ಗೆ ಕೆಲವು  ತಾಂತ್ರಿಕ ಮತ್ತು ಕಲಾತ್ಮಕ  ಅಂಶಗಳ ತುಲನೆ ಇಂತಿವೆ.
* ಸಾಕಷ್ಟು ದೂರದಿಂದ ಚಲನಶೀಲ ದೃಶ್ಯವನ್ನು ಹಿನ್ನೆಲೆಯನ್ನೂ ಸರಿದೂಗಿಸಿ ಸಮರ್ಪಕವಾಗಿ ಸಂಯೋಜಿಸಿ ಮಧುರ ಕ್ಷಣವನ್ನು ತ್ವರಿತವಾಗಿ ಸೆರೆ ಹಿಡಿಯುವಲ್ಲಿ ಕ್ಯಾಮೆರಾದ ತಾಂತ್ರಿಕ ಹಿಡಿತಗಳು ಬಹು ಮುಖ್ಯ ಎಂಬುದಕ್ಕೆ ಈ ಚಿತ್ರ ಸಾಕ್ಷಿ. ಸಂಜೆಯ ಬೆಳಕಿನ ಸಂದರ್ಭವಾದ್ದರಿಂದ, ನೆರಳಿನ ಭಾಗಗಳು ಕಡುಕಪ್ಪಾಗಿ ಬಿಡುವ ಕಾಂತಿ ಭೇದದ ವೈದೃಶ್ಯವನ್ನು (ಕಾಂಟ್ರಾಸ್ಟ್) ತಗ್ಗಿಸಬಲ್ಲ ಹೆಚ್ಚಿನ ಐ.ಎಸ್.ಒ. ಸೆನ್ಸಿಟಿವಿಟಿಯ ಅಳವಡಿಕೆ ಇಲ್ಲಿ ಸರಿಯಾದದ್ದು.

* ಅಪರ್ಚರ್ ಮಧ್ಯಮ ಅಳತೆಯದಾಗಿದ್ದು, ಸಂಗಮ ವಲಯ (ಡೆಪ್ತ್ ಆಫ್ ಫೀಲ್ಡ್) ಪಕ್ಷಿಗಳ ಎಲ್ಲ ಭಾಗಗಳು ಮಾತ್ರ ಉತ್ತಮವಾಗಿ ‘ಫೋಕಸ್’ ಆಗಲು ಸಹಕಾರಿಯಾಗಿದ್ದು, ಹಿನ್ನೆಲೆಯ ದೃಶ್ಯಗಳು ಸ್ಫುಟವಾಗಿ ಮೂಡದಂತೆ ಆಗಿರುವುದು ಜೋಡಿ ಗಿಳಿಗಳ ‘ಆ್ಯಕ್ಷನ್’ ಮೇಲೆಯೇ ನೋಡುಗನ ದೃಷ್ಟಿ ನಾಟಲು ಸಹಕಾರಿಯಾಗಿದೆ. ಮಂದವಾದ ಹಿನ್ನೆಲೆಯು ಚಿತ್ರಣದ ಮೂಲ ಆಶಯಕ್ಕೆ ಭಿನ್ನತೆಯನ್ನುಂಟು ಮಾಡದೇ, ಚಿತ್ರಕತೆಯ ಮೌಲ್ಯವನ್ನು ಹೆಚ್ಚಿಸಿದೆ.

* ಕಲಾತ್ಮಕವಾಗಿ, ಯಾರು ನೋಡಿದರೂ, ‘ಭೇಷ್’ ಎಂದು ಸಂತೋಷ ಪಡಬಹುದಾದ ಚಿತ್ರ ಇದಾಗಿದೆ. ಈ ಗಿಳಿಗಳು ಜೋಡಿಯಾಗಿಯೇ ಇರುವುದು ಸಹಜವಾದ ಜೀವನ ಕ್ರಮ. ಹೆಕ್ಕಿದ ಹಣ್ಣು-ಆಹಾರವನ್ನು ಕೊಕ್ಕಿನಿಂದ ಕೊಕ್ಕಿಗೆ ದಾಟಿಸುತ್ತಾ ಆನಂದ ಪಡುವುದೂ, ಅವುಗಳ ಪ್ರೀತಿಯ ಆಟ. ಮರದ ಕಾಂಡವೊಂದರ ತುದಿಯಲ್ಲಿ, ಇದ್ದಷ್ಟೇ ಚಿಕ್ಕ ಜಾಗದಲ್ಲಿ ಸರ್ಕಸ್ ಮಾಡುತ್ತಲೇ ಬಿಚ್ಚಿದ ರೆಕ್ಕೆಗಳಿಂದ ಸಮತೋಲನ ಕಾಯ್ದುಕೊಂಡು, ಒಂದನ್ನೊಂದು ಮುತ್ತಿಡುವಂತಿರುವುದು, ಮೋಹಕವಾಗಿದೆ. ಕಲಾತ್ಮಕವಾಗಿ ಇದೊಂದು ಮನಸೂರೆಗೊಳ್ಳುವ ಕಲಾಕೃತಿಯೇ ಆಗಿದೆಯಲ್ಲವೇ!..

* ಇಡೀ ದೃಶ್ಯದಲ್ಲಿ ಕಣ್ ಸೆಳೆಯುವ ಮುಖ್ಯವಸ್ತುವಾದ (ಎಂಟ್ರಿ ಪಾಯಿಂಟ್) ಗಿಳಿಗಳ ಕೆಂಪು ಕೊಕ್ಕಿನ ಭಾಗ, ಅದರೆಡೆಗೆ ನೋಡುಗನ ದೃಷ್ಟಿಯನ್ನು ಸೆಳೆಯುವ (ಲೀಡಿಂಗ್ ಲೈನ್ಸ್) ಎರಡೂ ಗಿಳಿಗಳ ಬಿಚ್ಚಿದ ರೆಕ್ಕೆಯುಳಗಿನ ರೇಖಾ ವಿನ್ಯಾಸ (ಟೆಕ್ಸ್‌ಚರ್), ಚಿತ್ರಣದ ರಚನಾತ್ಮಕ ಮೌಲ್ಯವನ್ನು ಹೆಚ್ಚಿಸಿವೆ. ಅದಕ್ಕೆ ಪೂರಕವಾಗಿ ತಿಳಿಹಸಿರು ಮಿಶ್ರಿತ ಕಂದು ಬಣ್ಣದ ಹಿನ್ನೆಲೆಯು ಭಾವಪೂರ್ಣತೆಗೆ ಧಕ್ಕೆ ತಾರದೇ, ಒಟ್ಟಾರೆ ಚೌಕಟ್ಟಿನ ಸೌಂದರ್ಯವನ್ನು ಇಮ್ಮಡಿಸಿದೆ. ಅಂತೆಯೇ, ಉತ್ತಮವಾದ ಚಿತ್ರ ಸಂಯೋಜನೆಯನ್ನೂ ಮಾಡಿರುವ ವರದನಾಯಕರು ಅವರ ಪರಿಣಿತಿಗಾಗಿ ಅಭಿನಂದನಾರ್ಹರು.

ಬೆಂಗಳೂರಿನ ಬದುಕನ್ನು ಬಿಂಬಿಸುವ ಛಾಯಾಚಿತ್ರಗಳನ್ನು ‘ಚೌಕಟ್ಟು’ ಅಂಕಣಕ್ಕೆ ನೀವೂ ಕಳುಹಿಸಬಹುದು. ಗುಣಮಟ್ಟದ ಚಿತ್ರಗಳನ್ನು ಆಯ್ಕೆಮಾಡಿ, ಅನುಭವಿಗಳ ವಿಶ್ಲೇಷಣೆಯೊಂದಿಗೆ ಪ್ರಕಟಿಸಲಾಗುವುದು. ಇಮೇಲ್: metropv@prajavani.co.in. ದೂರವಾಣಿ- 080–2588 0636

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT