ಸೋಮವಾರ, ಸೆಪ್ಟೆಂಬರ್ 23, 2019
22 °C

ಒಲಿಂಪಿಕ್ಸ್‌ ಅರ್ಹತೆ ಮುಂದಿನ ಸವಾಲು: ದ್ಯುತಿ

Published:
Updated:
Prajavani

ಮುಂಬೈ: ಕ್ರೀಡಾ ಜೀವನದಲ್ಲಿ ಹೋರಾಟದ ಹಾದಿಯಲ್ಲೇ ಸಾಗುತ್ತಿರುವ ಅಥ್ಲೀಟ್ ದ್ಯುತಿ ಚಾಂದ್, ಮುಂದಿನ ಒಂದು ವರ್ಷ ಒಲಿಂಪಿಕ್ಸ್‌ನತ್ತ ಪೂರ್ಣ ಗಮನ ಹರಿಸುವುದಾಗಿ ತಿಳಿಸಿದ್ದಾರೆ.   

ಅಂತರರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್‌ನ ಲಿಂಗ ಪರೀಕ್ಷೆ ನೀತಿಯ ವಿರುದ್ಧ ಹೋರಾಟ ನಡೆಸುತ್ತಿರುವ ದ್ಯುತಿ ಚಾಂದ್ 100 ಮೀಟರ್ಸ್ ಓಟದಲ್ಲಿ ರಾಷ್ಟ್ರೀಯ ದಾಖಲೆ (11.24 ಸೆಕೆಂಡು) ಹೊಂದಿದ್ದಾರೆ. ಏಷ್ಯನ್ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿರುವ ಅವರು ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕವನ್ನೂ ಗಳಿಸಿದ್ದರು. ಆದರೆ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅವರ ಸ್ಥಾನ 78ನೆಯದಾಗಿದೆ. ಒಲಿಂಪಿಕ್ಸ್ ಆರಂಭವಾಗಲು ಒಂದು ವರ್ಷ ಬಾಕಿ ಇದ್ದು ಅರ್ಹತೆಗಾಗಿ ನಿಗದಿಪಡಿಸಿರುವ 11.15 ಸೆಕೆಂಡುಗಳ ಸಾಧನೆಯನ್ನು ಮಾಡುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು. 

‘ಕಠಿಣ ಪ್ರಯತ್ನಕ್ಕೆ ಫಲ ಸಿಕ್ಕಿಯೇ ಸಿಗುತ್ತದೆ ಎಂದು ನಾನು ಬಲ್ಲೆ. ದೇಶಕ್ಕಾಗಿ ಇನ್ನಷ್ಟು ಪದಕಗಳನ್ನು ಗೆದ್ದು ತರಲು ನನಗೆ ಸಾಧ್ಯವಿದೆ ಎಂಬ ಭರವಸೆ ಇದ್ದು ಇದಕ್ಕಾಗಿ ಭಾರಿ ತಯಾರಿ ನಡೆಸುತ್ತಿದ್ದೇನೆ’ ಎಂದು ಅವರು ವಿವರಿಸಿದರು.

ಪುರುಷ ಹಾರ್ಮೋನುಗಳ ಪ್ರಮಾಣ ಹೆಚ್ಚು ಇರುವುದು ಪತ್ತೆಯಾದ ಕಾರಣ 2014ರಲ್ಲಿ ಅವರ ಮೇಲೆ ನಿಷೇಧ ಹೇರಲಾಗಿತ್ತು. ಹೀಗಾಗಿ ಕ್ರೀಡಾ ನ್ಯಾಯಾಲಯದ ಮೊರೆ ಹೋಗಿದ್ದರು. ಅವರ ಪರವಾಗಿ ತೀರ್ಪು ಬಂದಿತ್ತು. 2016ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅವಕಾಶವನ್ನೂ ಪಡೆದಿದ್ದರು. ನಂತರ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಷನ್ ತನ್ನ ನಿಯಮಗಳನ್ನು ಬದಲಿಸಿತ್ತು.

Post Comments (+)