ಶುಕ್ರವಾರ, ಏಪ್ರಿಲ್ 16, 2021
22 °C

ವಿಶ್ವ ಚಾಂಪಿಯನ್‌ಷಿಪ್‌ಗೆ ಅನಾಸ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಜೆಕ್‌ ರಿಪಬ್ಲಿಕ್‌ನಲ್ಲಿ ನಡೆಯುತ್ತಿರುವ ಕ್ಲಾಡ್ನೊ ಅಥ್ಲೆಟಿಕ್‌ ಕೂಟದಲ್ಲಿ ಶನಿವಾರ 400 ಮೀ. ಓಟದಲ್ಲಿ ಚಿನ್ನ ಗೆಲ್ಲುವ ಹಾದಿಯಲ್ಲಿ ತಮ್ಮದೇ ರಾಷ್ಟ್ರೀಯ ದಾಖಲೆ ಉತ್ತಮ ಪಡಿಸಿಕೊಂಡಿದ್ದ ಮೊಹಮದ್‌ ಅನಾಸ್‌ ವಿಶ್ವ ಚಾಂಪಿಯನ್‌ಷಿಪ್‌ಗೂ ಅರ್ಹತೆ ಪಡೆದಿದ್ದಾರೆ. ಹಿಮಾ ದಾಸ್‌ 200 ಮೀ. ಓಟದಲ್ಲಿ ಯಶಸ್ಸನ್ನು ಮುಂದುವರಿಸಿಕೊಂಡು  ಚಿನ್ನ ಗೆದ್ದುಕೊಂಡರು.

ವಿಶ್ವ ಚಾಂಪಿಯನ್‌ಷಿಪ್‌ ಕತಾರ್‌ನ ದೋಹಾದಲ್ಲಿ ಸೆಪ್ಟೆಂಬರ್‌ 27 ರಿಂದ ಅಕ್ಟೋಬರ್ 6ವರೆಗೆ ನಡೆಯಲಿದೆ. 24 ವರ್ಷದ ಅನಾಸ್‌ 45.21 ಸೆ.ಗಳಲ್ಲಿ ಗುರಿ ತಲುಪಿಸಿದ್ದರು. ಪೋಲೆಂಡ್‌ನ ಒಮೆಲ್ಕೊ ರಫಾಲ್‌ (46.19 ಸೆ.)ಎರಡನೇ ಸ್ಥಾನಕ್ಕೆ ಸರಿದರು. ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತಾ ಅವಧಿ 45.30 ಸೆ. ಎಂದು ನಿಗದಿಪಡಿಸಲಾಗಿತ್ತು.

ಅಸ್ಸಾಮ್‌ನ 19 ವರ್ಷದ ಓಟಗಾರ್ತಿ ಹಿಮಾ 200 ಮೀ. ಓಟವನ್ನು 23.43 ಸೆ.ಗಳಲ್ಲಿ ಪೂರೈಸಿ 11 ದಿನಗಳ ಅಂತರದಲ್ಲಿ ಈ ಓಟದಲ್ಲಿ ಮೂರನೇ ಚಿನ್ನ ಗೆದ್ದರು. ಅವರು ವೈಯಕ್ತಿಕ ಶ್ರೇಷ್ಠ ಸಾಧನೆ 23.10 ಸೆ.ಗಳಾಗಿದೆ. ಇದಕ್ಕೆ ಮೊದಲು ಜುಲೈ 2ರಂದು ಪೋಲೆಂಡ್‌ನ ಪೊಝ್ನಾನ್‌ನಲ್ಲಿ ನಡೆದ ಕೂಟದಲ್ಲಿ 23.65 ಸೆ.ಗಳಲ್ಲಿ ದೂರ ಕ್ರಮಿಸಿದ್ದರು. ಜುಲೈ 7ರಂದು ಪೋಲೆಂಡ್‌ನ ಕುಟ್ನೊ ಅಥ್ಲೆಟಿಕ್‌ ಕೂಟದಲ್ಲಿ 23.97 ಸೆ.ಗಳಲ್ಲಿ ಓಡಿ ಅಗ್ರಸ್ಥಾನ ಗಳಿಸಿದ್ದರು.

ಪುರುಷರ ಜಾವೆಲಿನ್‌ ಥ್ರೊ ಸ್ಪರ್ಧೆಯಲ್ಲಿ ಭಾರತದ ವಿಪಿನ್‌ ಕ‌ಸನಾ 82.51 ಮೀ. ದೂರ ಎಸೆದು ಚಿನ್ನ ಗೆದ್ದರು. ಅಭಿಷೇಕ್‌ ಸಿಂಗ್‌ (77.32 ಮೀ.) ಮತ್ತು ದೇವಿಂದರ್‌ ಸಿಂಗ್‌ ಕಾಂಗ್‌ (76.58 ಮೀ.) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ಷಾಟ್‌ಪಟ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ತೇಜಿಂದರ್‌ ಪಾಲ್‌ ಸಿಂಗ್‌ 20.36 ಮೀ. ದೂರ ಸಾಧನೆಯಡೊನೆ ಕಂಚಿನ ಪದಕ ಪಡೆದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು