ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂತಾನ್‌ನಲ್ಲೂ ಭಾರತವೇ ‘ಚಿನ್ನ’

Last Updated 7 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

‘ಜಗತ್ತಿನ ಯಾವುದೇ ದೇಶದಲ್ಲಿ ಅಟ್ಯಾಪಟ್ಯಾ ಚಾಂಪಿಯನ್‌ಷಿಪ್‌ ನಡೆದರೂ ಭಾರತವೇ ಪ್ರಶಸ್ತಿ ಗೆಲ್ಲುತ್ತದೆ. ನಮ್ಮ ಸಾಮರ್ಥ್ಯದ ಬಗ್ಗೆ ಇರುವ ನಂಬಿಕೆಯೇ ಇದಕ್ಕೆ ಕಾರಣ. ನಮ್ಮ ಆಟದ ಸಮೀಪ ಬರಲು ಬೇರೆ ದೇಶಗಳಿಗೆ ಕನಿಷ್ಠ ಐದಾರು ವರ್ಷಗಳಾದರೂ ಬೇಕು...’

ಭಾರತ ಮಹಿಳಾ ಅಟ್ಯಾಪಟ್ಯಾ ತಂಡದ ನಾಯಕಿ ಅನಿತಾ ಬಿಚಗಟ್ಟಿ ಅವರ ವಿಶ್ವಾಸದ ಮಾತುಗಳು ಇವು. ಅವರ ಮಾತುಗಳು ಕೇವಲ ಹೇಳಿಕೆಗಷ್ಟೇ ಸೀಮಿತವಾಗಿಲ್ಲ. ಅಂಗಳದಲ್ಲಿ ಬೆವರು ಹರಿಸಿ ಸಾಧಿಸಿ ತೋರಿಸಿದ್ದಾರೆ ಕೂಡ.

ಗೋಕಾಕ ತಾಲ್ಲೂಕಿನ ಬೂದಿಹಾಳ ಗ್ರಾಮದ ಅನಿತಾ ಹತ್ತು ಬಾರಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಂಡಿದ್ದಾರೆ. ಸೌತ್‌ ಏಷ್ಯನ್‌ ಟೂರ್ನಿಯಲ್ಲಿ ಎರಡು ಬಾರಿ ದೇಶ ಪ್ರತಿನಿಧಿಸಿದ್ದಾರೆ. ಸದ್ಯಕ್ಕೆ ಹುಬ್ಬಳ್ಳಿಯ ಮಹಿಳಾ ವಿದ್ಯಾಪೀಠ ಕಾಲೇಜಿನಲ್ಲಿ ಬಿ.ಇಡಿ ಓದುತ್ತಿದ್ದಾರೆ.

ಅಟ್ಯಾಪಟ್ಯಾದಲ್ಲಿ ಭಾರತ ತಂಡ ವಿದೇಶಗಳಲ್ಲಿಯೂ ಕೀರ್ತಿ ಪಸರಿಸುತ್ತಿದೆ. ಶ್ರೀಲಂಕಾ, ಬಾಂಗ್ಲಾದೇಶ, ಮಯನ್ಮಾರ್‌, ಭೂತಾನ್‌, ನೇಪಾಳ ರಾಷ್ಟ್ರಗಳು ಇತ್ತೀಚಿಗೆ ಪ್ರಗತಿ ಹೊಂದುತ್ತಿವೆ. ಆದರೆ, ಭಾರತದಲ್ಲಿ ಅಟ್ಯಾಪಟ್ಯಾಕ್ಕೆ ಸಂಬಂಧಿಸಿದ ಚಟುವಟಿಕೆಗಳು ಹೆಚ್ಚು ನಡೆಯುತ್ತವೆ.

ಇತ್ತೀಚಿಗೆ ಭೂತಾನ್‌ನ ಮಸ್ಸೆಯಲ್ಲಿ ನಡೆದ ಐದನೇಸೌತ್‌ ಏಷ್ಯನ್‌ ಅಟ್ಯಾಪಟ್ಯಾ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಮತ್ತೊಮ್ಮೆ ‘ಚಿನ್ನ’ದ ನಗು ಬೀರಿದೆ. ಐದು ವರ್ಷಗಳಿಂದ ಈ ಚಾಂಪಿಯನ್‌ಷಿಪ್‌ ನಡೆಯುತ್ತಿದೆ. 2015ರಲ್ಲಿ ಭೂತಾನ್‌, 2016ರಲ್ಲಿ ನೇಪಾಳ, 2017ರಲ್ಲಿ ಬಾಂಗ್ಲಾದೇಶ, 2018ರಲ್ಲಿ ನೇಪಾಳದಲ್ಲಿ ಟೂರ್ನಿ ನಡೆದಾಗಲೂ ಭಾರತದ ಪುರುಷರ ಮತ್ತು ಮಹಿಳೆಯರ ತಂಡಗಳೇ ಪ್ರಶಸ್ತಿ ಗೆದ್ದುಕೊಂಡಿದ್ದವು. ಈ ಬಾರಿಯೂ ದೇಶದ ಉಭಯ ತಂಡಗಳು ಚಿನ್ನದ ಸಾಧನೆ ಮಾಡಿವೆ.

ಭಾರತ ತಂಡದಲ್ಲಿ ಕರ್ನಾಟಕದ ನಾಲ್ವರು ಸ್ಪರ್ಧಿಗಳು ದೇಶವನ್ನು ಪ್ರತಿನಿಧಿಸಿದ್ದರು. ಅವರೆಲ್ಲರೂ ಉತ್ತರ ಕರ್ನಾಟಕದವರು ಎನ್ನುವುದು ವಿಶೇಷ. ಪುರುಷರ ತಂಡದಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನದಿಂಡೂರು ತಾಂಡಾದಸಂತೋಷ ನಾಯ್ಕ ಮತ್ತು ಬೆಳಗಾವಿ ಜಿಲ್ಲೆಯ ಸಾಲಹಳ್ಳಿಯ ಸಂಪತ್‌ ಯರಗಟ್ಟಿ ಇದ್ದರು. ಮಹಿಳಾ ತಂಡದಲ್ಲಿ ಅನಿತಾ ಮತ್ತು ಗಜೇಂದ್ರಗಡ ತಾಲ್ಲೂಕಿನ ಜಕ್ಕಲಿ ಗ್ರಾಮದ ಭೀಮವ್ವ ಪೂಜಾರ ಇದ್ದರು.

ಕೆಲ ತಿಂಗಳ ಹಿಂದೆ ಬಾಗಲಕೋಟೆ ಬಳಿಯ ಶಿರೂರಿನಲ್ಲಿ ನಡೆದಿದ್ದ 33ನೇ ರಾಷ್ಟ್ರೀಯ ಅಟ್ಯಾ-ಪಟ್ಯಾ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಪುರುಷರ ತಂಡ ಪ್ರಶಸ್ತಿ ಜಯಿಸಿ, 22 ವರ್ಷಗಳಿಂದ ಎದುರಿಸಿದ್ದ ಪ್ರಶಸ್ತಿಯ ಬರ ನೀಗಿಸಿಕೊಂಡಿತ್ತು. ರಾಜ್ಯ ತಂಡ ಕೇರಳ, ಮಹಾರಾಷ್ಟ್ರ, ಪುದುಚೇರಿ, ತಮಿಳುನಾಡು ಮತ್ತು ಗೋವಾ ರಾಜ್ಯಗಳ ತಂಡಗಳಿಗೆ ಕಠಿಣ ಪೈಪೋಟಿ ನೀಡುತ್ತಿದೆ. ಇದರಿಂದ ಉತ್ತರ ಕರ್ನಾಟಕದ ಆಟಗಾರರು ದೇಶದ ತಂಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅವಕಾಶ ಪಡೆಯುತ್ತಿದ್ದಾರೆ.

‘ಭೂತಾನ್‌, ನೇಪಾಳ, ಶ್ರೀಲಂಕಾ ತಂಡಗಳು ಇತ್ತೀಚಿಗೆ ಸುಧಾರಣೆಯಾಗುತ್ತಿವೆ. ಆ ರಾಷ್ಟ್ರಗಳಲ್ಲಿಯೂ ನಿಧಾನವಾಗಿ ಕ್ರೀಡೆ ಬೆಳೆಯುತ್ತಿದೆ. ಈ ಬಾರಿ ಭೂತಾನ್‌ ತಂಡ ಕಠಿಣ ಪೈಪೋಟಿ ಒಡ್ಡಿತು. ಆದರೂ, ನಮ್ಮ ಸಂಘಟಿತ ಹೋರಾಟದಿಂದ ಪ್ರಶಸ್ತಿ ಉಳಿಸಿಕೊಳ್ಳಲು ಸಾಧ್ಯವಾಯಿತು’ ಎಂದು ಅನಿತಾ ಹೇಳಿದರು.

ಕನ್ನಡಿಗರಿಂದಲೇ ಗಟ್ಟಿ ನೆಲೆ

ಅಟ್ಯಾಪಟ್ಯಾ ಕರ್ನಾಟಕದಲ್ಲಿ ಮೂಲ ನೆಲೆ ಕಂಡುಕೊಳ್ಳಲು ದಾವಣೆಗೆರೆಯ ಬಿಜಿಟಿ ಎಂಜಿನಿಯರಿಂಗ್‌ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದ ಎಸ್‌.ಬಿ. ಹಳ್ಳದ ಅವರ ಶ್ರಮ ಕಾರಣ. 1981ರಲ್ಲಿ ನಾಗಪುರದಲ್ಲಿ ಆರಂಭವಾದ ಅಟ್ಯಾ ಪಟ್ಯಾ ಫೆಡರೇಷನ್‌ನ ಅಧ್ಯಕ್ಷರು ಕೂಡ ಆಗಿದ್ದರು.

1982ರಲ್ಲಿ ದೆಹಲಿಯಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಈ ಕ್ರೀಡೆಯ ಪ್ರದರ್ಶನ ಪಂದ್ಯ ಆಯೋಜಿಸಲಾಗಿತ್ತು. ಈಗ ದೇಶದ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಅಟ್ಯಾಪಟ್ಯಾ ಸಂಸ್ಥೆಗಳಿವೆ. ವಿದೇಶಗಳಲ್ಲಿ ಈ ಕ್ರೀಡೆ ಬಗ್ಗೆ ತಿಳಿದುಕೊಳ್ಳಲು ಅನೇಕರು ಆಸಕ್ತಿ ಹೊಂದಿದ್ದಾರೆ. ಭಾರತದ ಆಟಗಾರರೇ ರಷ್ಯಾಕ್ಕೆ ತೆರಳಿ ಅಟ್ಯಾಪಟ್ಯಾ ಕ್ರೀಡೆಯ ಬಗ್ಗೆ ಹೇಳಿಕೊಟ್ಟಿದ್ದರು. ದಕ್ಷಿಣ ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಸತತ ಐದನೇ ಬಾರಿಗೆ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಸ್ಪರ್ಧಿಗಳು ನಾವೆಂದಿಗೂ ‘ಚಿನ್ನ’ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

‘ಭಾರತೀಯರ ಆಟಕ್ಕೆ ಸಾಟಿಯಿಲ್ಲ’

ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ಅಟ್ಯಾಪಟ್ಯಾ ಸಾಕಷ್ಟು ಪ್ರಸಿದ್ಧಿ ಹೊಂದಿದೆ. ಶಾಲಾ ಹಂತದಿಂದಲೇ ತರಬೇತಿ ನೀಡಲಾಗುತ್ತದೆ. ಆದ್ದರಿಂದ ಜೂನಿಯರ್‌ ಹಂತದಿಂದಲೇ ತಂಡ ಬಲಿಷ್ಠವಾಗಿರುತ್ತದೆ ಎಂದುಸೌತ್‌ ಏಷ್ಯನ್‌ ಅಟ್ಯಾಪಟ್ಯಾ ಚಾಂಪಿಯನ್‌ಷಿಪ್‌ಗೆ ಭಾರತದ ಪುರುಷರ ತಂಡದ ಕೋಚ್‌ ಆಗಿ ತೆರಳಿದ್ದ ಡಾ. ವಿ.ಡಿ. ಪಾಟೀಲ ಹೇಳಿದರು. ವಿದೇಶಿಗರಿಗೆ ಈ ಕ್ರೀಡೆಯ ಕೌಶಲಗಳನ್ನು ಕಲಿಯುವ ಆಸಕ್ತಿಯಿದೆ. ಆದ್ದರಿಂದ ನಮ್ಮ ದೇಶದ ಆಟಗಾರರನ್ನು ಆಹ್ವಾನಿಸಿ ತರಬೇತಿ ಪಡೆದುಕೊಳ್ಳುತ್ತಾರೆ. ಇದರಿಂದ ಭೂತಾನ್‌, ನೇಪಾಳದಲ್ಲಿ ಸ್ವಲ್ಪ ಮಟ್ಟಿಗೆ ಅಟ್ಯಾಪಟ್ಯಾ ಸುಧಾರಣೆಯಾಗಿದೆ. ಆದರೆ, ಭಾರತದ ಆಟಗಾರರ ಸಾಮರ್ಥ್ಯಕ್ಕೆ ಸವಾಲೊಡ್ಡಲು ಸದ್ಯಕ್ಕಂತೂ ಸಾಧ್ಯವಿಲ್ಲ. ಅವರು ನಮ್ಮ ಗುಣಮಟ್ಟದಂತೆ ಆಟವಾಡುವ ವೇಳೆಗೆ ಭಾರತ ಇನ್ನೂ ಎತ್ತರದ ಸ್ಥಾನಕ್ಕೆ ಹೋಗಿರುತ್ತದೆ ಎಂದು ಕರ್ನಾಟಕ ಅಟ್ಯಾಪಟ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿಯೂ ಆದ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT