ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದೇ ಆಗಿರುವಾಗಲೂ

Last Updated 3 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಮತ್ತದೇ ಒಳಗಿನ ಅದು ಎಂಥದ್ದೋ ಹಾತೊರೆಯುತ್ತಿದೆ ಕವಿತೆಯಾಗಲು

ಒಣಗಲು ಒದ್ದೆಗೊಳ್ಳಲು ಬಿಚ್ಚಿಕೊಳ್ಳಲು ಕಂಡುಕೊಳ್ಳಲು

ಅದೇ ಎಷ್ಟು ಸಲ ಬರುವುದೋ

ಅದಲ್ಲವೇನೋ ಎಂಬಂತೆ ರೂಪ ತಾಳುವುದೋ

ಅದಿಲ್ಲದೆ ಬಾಳು ಹೇಗೆ ಇರುವುದೋ

ಪ್ರಪಂಚ ಸುತ್ತಿ ಬಂದರೂ ಅದೇ ನಾಕು ಮೂಲೆ

ಎಲ್ಲ ಕನಸು ಗುಟ್ಟು ಕಲರವ ಕಳವಳ ಬಾಯಾರಿಕೆ ಕಣ್ಣೀರು

ಗೊಡ್ಡು ಸಾರು ಚೂರು ಅಡಕೆ ಇನ್ನೂ ಮುಗಿಯದ ಸೀರಿಯಲ್ಲು

ಹೇಳಿಕೊಂಡಷ್ಟೂ ಉಳಿದು ಹೇಳಲಾಗದ್ದೂ ಉಳಿದು

ನಾಕು ಮೂಲೆಯ ಚಾರ್ ಮಿನಾರು

ಆಗೇ ಬಿಡುವುದು ಬಾರಾ ಕಮಾನು

ಮಡಿಚಿದ ಅಂಗೈ ಕಂಡಿಯೊಳಗೆ ಕಂಡ ಸಾವಿರ ನಕ್ಷತ್ರ

ಒಂದೇ ಗರ್ಭಗುಡಿಗಾಗಿ ಸಾವಿರ ಕಂಬದ ದೇಗುಲ

ಒಂದು ಕುರ್ಚಿಗಾಗಿ ಇಡೀ ಜೀವಮಾನ

ಸಾವಿರ ಹೆಜ್ಜೆಯ ಹೊಸಕಿಗೂ ತಲೆಗೆಡದ ಇರುವೆಯ ಅಂತಃಪುರ

ಅವೇ ಕೈ ಅವೇ ಕಾಲು ಅದೇ ಮೂಗು ಅವೇ ಕಣ್ಣು

ಬಗೆದುಕೊಳ್ಳುವ ಲೋಕ ಸದಾ ಸಶೇಷ

ಎಷ್ಟು ನಿಟ್ಟಿಸಿದರೂ ಅದು ನಾನೇ ನನ್ನ ಹಾಗೆ

ಸಿಗುವ ನೀವು ಸಿಗದ ನೀವು ಅದೇ ಆಗಿರುತ್ತ

ರೂಪ ತಾಕಿದ ಎಡೆಯಲ್ಲಿ ತವಕಿಸುವ ತಂಗಳು

ಬಿಸಿಯಾದ ಕಜ್ಜಾಯ

ಹೀಗೆ ಪದೇ ಪದೇ ಹುಟ್ಟಿಕೊಳ್ಳುವ ಭಾಗ್ಯದಲ್ಲಿ

ನನ್ನೊಳಗಿನ ಒರತೆ ಅದಾವ ನದಿಯಾಗಿದೆಯೋ

ಯಾವ ಆಕಾಶ ಕಾಣುತ್ತಿದೆಯೋ

ಒಳಗಲ ದಿವಕ್ಕೆ ಬೆನ್ನು ಹಾಕಿದ ಕಣ್ಣು

ಕಣ್ಣಗಲಕ್ಕೆ ದಕ್ಕಿದ ದಿನ

ಹೀಗೆ ನಾವು ಅದೇ ಆಗಿರುವಾಗಲೂ

ಅದು ಆಗಿರದ ನಾವು ಉಸಿರಾಡುವಲ್ಲಿ

ತಪ್ಪಿಸಿಕೊಂಡ ಎಳೆಯೂ ಜಗತ್ತು ಕಟ್ಟುವ ಸೋಜಿಗದಲ್ಲಿ

ತನ್ನ ವಿವರಿಸುವ ಭಾಷೆಗಾಗಿ ಎಲ್ಲವೂ ಜೀವಿಸುತ್ತಿರಲು

ಅದೇ ತಲೆಕಟ್ಟು ವಟರಸುಳಿ ಕೊಂಬಿನ ದೀರ್ಘ ಒಪ್ಪಿಸದೆಯೂ

ಯಾರೂ ಕೇಳದೆಯೂ ಆಗಿ ಹೋಗುವ ಸಮಾಸ ಸಂತೆಯಲ್ಲಿ

ಅ ಎಂದು ಕರೆದಾಗಲೂ

ಮ ಬಂದಂತೆ ಅನಿಸುವಾಗ

ಬಾಳಿಗೊಂದು ಬ ಕಾಣುವುದಿದೆಯಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT