ಬ್ಯಾಡ್ಮಿಂಟನ್ ಅಂಕಣದಲ್ಲಿ ಈ ವರ್ಷವು ಭಾರತಕ್ಕೆ ಸುಗ್ಗಿಯ ಹಿಗ್ಗು. ಥಾಮಸ್ ಕಪ್ ಗೆದ್ದ ಭಾರತ ಪುರುಷರ ಬ್ಯಾಡ್ಮಿಂಟನ್ ತಂಡವು ಮಹತ್ಸಾಧನೆ ಮಾಡಿದರು.
ಬ್ಯಾಂಕಾಂಕ್‌ನಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ ಇಂಡೊನೇಷ್ಯಾ ತಂಡವನ್ನು ಸೋಲಿಸಿದ ಕಿದಂಬಿ ಶ್ರೀಕಾಂತ್ ನೇತೃತ್ವದ ಬಳಗವು ಟ್ರೋಫಿಗೆ ಮುತ್ತಿಕ್ಕಿತು. ಟೂರ್ನಿ ಆರಂಭವಾಗಿ 73 ವರ್ಷಗಳ ಅವಧಿಯಲ್ಲಿ ಭಾರತ ತಂಡವು ಇದೇ ಮೊದಲ ಸಲ ಫೈನಲ್ ಪ್ರವೇಶಿಸಿತ್ತು. ಬ್ಯಾಡ್ಮಿಂಟನ್ ವಿಶ್ವಕಪ್ ಎಂದೇ ಬಿಂಬಿತವಾಗಿರುವ ಈ ಟೂರ್ನಿಯಲ್ಲಿ ಇದುವರೆಗೆ ಇಂಡೊನೇಷ್ಯಾ 14, ಚೀನಾ 10, ಮಲೇಷ್ಯಾ 5 ಸಲ ಚಾಂಪಿಯನ್ ಆಗಿವೆ. ಡೆನ್ಮಾರ್ಕ್ ಮತ್ತು ಜಪಾನ್ ತಲಾ ಒಂದು ಬಾರಿ ಪ್ರಶಸ್ತಿ ಜಯಿಸಿವೆ. ಕಿದಂಬಿ ಶ್ರೀಕಾಂತ್, ಯುವ ಆಟಗಾರ ಲಕ್ಷ್ಯ ಸೇನ್, ಎಚ್.ಎಸ್. ಪ್ರಣಯ್, ಎಂ.ಆರ್. ಅರ್ಜುನ್, ಧ್ರುವ ಕಪಿಲ್, ಕೃಷ್ಣಪ್ರಸಾದ ಗರಗ, ವಿಷ್ಣುವರ್ಧನ ಗೌಡ ಪಂಜಾಲಾ, ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ–ಚಿರಾಗ್ ಶೆಟ್ಟಿ ಜೋಡಿ, ತರಬೇತುದಾರ ವಿಮಲ್ ಕುಮಾರ್ ತಂಡದಲ್ಲಿದ್ದರು.
ಸಿಂಧು ಚಿನ್ನದ ಹೊಳಪು
ಡಬಲ್ ಒಲಿಂಪಿಯನ್ ಪದಕ ವಿಜೇತ ಪಿ.ವಿ. ಸಿಂಧು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಎರಡು ಪದಕ ಗೆದ್ದರು. ಮಹಿಳೆಯರ ಸಿಂಗಲ್ಸ್ ಚಿನ್ನ ಗೆದ್ದರು. ಅವರಿದ್ದ ಮಿಶ್ರ ತಂಡವು ಕಂಚು ಜಯಿಸಿತು. ಅವರು ಮನಿಲಾದಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಸಿಂಗಲ್ಸ್ ಕಂಚಿನ ಪದಕ ಗೆದ್ದರು. ಆದರೆ ಪಾದದ ಗಾಯದ ಕಾರಣದಿಂದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯಲಿಲ್ಲ.
ಯುವಪ್ರತಿಭೆ ಲಕ್ಷ್ಯ ಸೇನ್
ಬೆಂಗಳೂರಿನ ಪ್ರಕಾಶ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಲಕ್ಷ್ಯ ಸೇನ್ ಭಾರತ ಬ್ಯಾಡ್ಮಿಂಟನ್ ಕ್ಷೇತ್ರದ ನವಪ್ರತಿಭೆ.
21 ವರ್ಷದ ಲಕ್ಷ್ಯ ಥಾಮಸ್ ಕಪ್ ವಿಜೇತ ತಂಡದಲ್ಲಿದ್ದರು. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಸಾಧನೆ ಮಾಡಿದರು. ಅದೇ ಕೂಟದಲ್ಲಿ ಮಿಶ್ರ ತಂಡ ವಿಭಾಗದಲ್ಲಿ ಕಂಚು ಜಯಿಸಿದರು. ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್ ಅಪ್ ಸಾಧನೆ ಮಾಡಿದರು.
ಪ್ರಮೋದ್ ಭಗತ್ ಮಿಂಚು
ಪ್ಯಾರಾ ಬ್ಯಾಡ್ಮಿಂಟನ್ ವಿಭಾಗದಲ್ಲಿಯೂ ಭಾರತಕ್ಕೆ ಹರ್ಷ ತಂದ ವರ್ಷ ಇದು. ಪ್ರಮೋದ್ ಭಗತ್ ಅವರು ವಿಶ್ವ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ನಾಲ್ಕನೇ ಚಿನ್ನದ ಪದಕ ಗೆದ್ದು ದಾಖಲೆ ಬರೆದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಮನೀಷಾ ರಾಮದಾಸ್ ಅವರು ಪ್ರಶಸ್ತಿ ಗಳಿಸಿ ಗಮನ ಸೆಳೆದರು.
ಲಕ್ಷ್ಯ ವಿವಾದ
ಲಕ್ಷ್ಯ ಸೇನ್ ಅವರ ವಿರುದ್ಧ ವಯಸ್ಸಿನ ನಕಲಿ ಪ್ರಮಾಣ ಪತ್ರ ನೀಡಿ ವಂಚಿಸಿರುವ ದೂರನ್ನು ದಾಖಲಿಸಲಾಗಿದೆ. ಜೂನಿಯರ್ ಮತ್ತು ಸಬ್ ಜೂನಿಯರ್ ಹಂತದಲ್ಲಿ ಅವರು ನಕಲಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆಂಬ ಆರೋಪದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.