ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌: ರ‍್ಯಾಪ್ಟರ್ಸ್‌–ರಾಕೆಟ್ಸ್ ಸಮಬಲದ ಪೈಪೋಟಿ

ಟ್ರಂಪ್ ಪಂದ್ಯಗಳನ್ನು ಗೆದ್ದ ಉಭಯ ತಂಡಗಳು
Last Updated 13 ಜನವರಿ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು: ತವರಿನ ಪ್ರೇಕ್ಷಕರಿಗೆ ಭರಪೂರ ರಂಜನೆ ನೀಡಿದ ಬೆಂಗಳೂರು ರ‍್ಯಾಪ್ಟರ್ಸ್‌ ಮತ್ತು ಮುಂಬೈ ರಾಕೆಟ್ಸ್ ತಂಡದವರು ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ನ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಹಾದಿಯಲ್ಲಿ ಸಮಬಲದ ಹೋರಾಟ ನಡೆಸಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಫೈನಲ್ ಹಣಾಹಣಿಯ ನಾಲ್ಕು ಪಂದ್ಯಗಳ ಮುಕ್ತಾಯಕ್ಕೆ ಸ್ಕೋರು 3–3ರಲ್ಲಿ ಸಮ ಆಯಿತು.

ಶನಿವಾರ ರಾತ್ರಿ ಕಳೆದ ಬಾರಿಯ ಚಾಂಪಿಯನ್‌ ಹೈದರಾಬಾದ್ ಹಂಟರ್ಸ್ ವಿರುದ್ಧ ಗೆದ್ದು ಫೈನಲ್‌ ಪ್ರವೇಶಿಸಿದ್ದ ರಾಕೆಟ್ಸ್ ಅದೇ ಲಯದಲ್ಲಿ ಭಾನುವಾರವೂ ಆಟ ಆರಂಭಿಸಿತು. ತಂಡಕ್ಕೆ ಮೊದಲನೆಯದು ಟ್ರಂಪ್ ಪಂದ್ಯ
ಆಗಿತ್ತು. ಮಿಶ್ರ ಡಬಲ್ಸ್‌ನಲ್ಲಿ ದಕ್ಷಿಣ ಕೊರಿಯಾದ ಕಿಮ್ ಜಿ ಜಂಗ್ ಮತ್ತು ಇಂಡೊನೇಷ್ಯಾದ ಜೆಬಾದಿಯಾ ಬೆರ್ನಾಡೆಟ್‌ ತಂಡದ ಪರವಾಗಿ ಕಣಕ್ಕೆ ಇಳಿದಿದ್ದರು. ಅವರ ಸವಾಲು ಸ್ವೀಕರಿಸಲು ಸಜ್ಜಾಗಿದ್ದವರು ಇಂಗ್ಲೆಂಡ್ ಜೋಡಿ ಮಾರ್ಕಸ್ ಎಲಿಸ್ ಮತ್ತು ಲಾರೆನ್ ಸ್ಮಿತ್‌. ಜಿದ್ದಾಜಿದ್ದಿಯ ಕೊನೆಯಲ್ಲಿ ರ್‍ಯಾಪ್ಟರ್ಸ್‌ ಜೋಡಿಯನ್ನು 15–8, 15–14ರಲ್ಲಿ ರಾಕೆಟ್ಸ್‌ ಜೋಡಿ ಮಣಿಸಿತು.

ಕಿಮ್ ಜಂಗ್ ಅವರ ಬಲಶಾಲಿ ಸ್ಮ್ಯಾಷ್ ಮತ್ತು ಬೆರ್ನಾಡೆಟ್ ಅವರ ಮೋಹಕ ಸರ್ವ್‌ಗಳಿಗೆ ಮಾರು ಹೋದ ಪ್ರೇಕ್ಷಕರು ಎಲಿಸ್‌–ಲಾರೆನ್ ಜೋಡಿಯ ಹೊಂದಾಣಿಕೆಯ ಆಟಕ್ಕೆ ಚಪ್ಪಾಳೆಯ ಮಳೆ ಸುರಿಸಿದರು. ಮೊದಲ ಗೇಮ್‌ನಲ್ಲಿ ಸುಲಭವಾಗಿ ಮಣಿದ ರ‍್ಯಾಪ್ಟರ್ಸ್ ಜೋಡಿ ಎರಡನೇ ಗೇಮ್‌ನಲ್ಲಿ ಪ್ರಬಲ ಪೈಪೋಟಿ ನೀಡಿತು. ಅದರೆ ರಾಕೆಟ್ಸ್ ಜೋಡಿ ಪಟ್ಟು ಬಿಡಲಿಲ್ಲ. 8–6ರ ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿದ ಮಾರ್ಕಸ್‌ ಎಲಿಸ್‌ ಮತ್ತು ಲಾರೆನ್, ಗೇಮ್‌ನ ದ್ವಿತೀಯಾರ್ಧದಲ್ಲಿ ಅಮೂಲ್ಯ ಮುನ್ನಡೆ ಸಾಧಿಸಿದರು. ಆದರೆ ಆ ಲಯವನ್ನು ಮುಂದುವರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಸ್ಕೋರು 12–12, 13–13, 14–14 ಆದಾಗ ಪ್ರೇಕ್ಷಕರ ಎದೆಬಡಿತ ಹೆಚ್ಚಾಯಿತು. ಸುಂದರ ಸರ್ವ್ ಮೂಲಕ ಗೆಲುವಿನ ಪಾಯಿಂಟ್ ಗಳಿಸಿದ ಬೆರ್ನಾಡೆಟ್‌, ರಾಕೆಟ್ಸ್ ಡಗ್ ಔಟ್‌ನಲ್ಲಿ ಸಂಭ್ರಮದ ಹೊಳೆ ಹರಿಸಿದರು.

ಕಿದಂಬಿ ಶ್ರೀಕಾಂತ್‌ಗೆ ಸುಲಭ ಗೆಲುವು: ವಿಶ್ವ ರ್‍ಯಾಂಕಿಂಗ್‌ನಲ್ಲಿ ಎಂಟನೇ ಸ್ಥಾನದಲ್ಲಿರುವ ನಾಯಕ ಕಿದಂಬಿ ಶ್ರೀಕಾಂತ್, 18ನೇ ಸ್ಥಾನದಲ್ಲಿರುವ ಡೆನ್ಮಾರ್ಕ್‌ನ ಆ್ಯಂಡರ್ಸ್ ಆ್ಯಂಟನ್ಸನ್‌ ವಿರುದ್ಧ 15–7,15–14ರಲ್ಲಿ ಗೆದ್ದು ಆತಿಥೇಯರಿಗೆ ಮೊದಲ ಪಾಯಿಂಟ್ ಗಳಿಸಿಕೊಟ್ಟರು. ಕ್ರಾಸ್ ಕೋರ್ಟ್ ಸ್ಮ್ಯಾಷ್ ಮೂಲಕ ಮೊದಲ ಪಾಯಿಂಟ್ ಗಳಿಸಿದ ಶ್ರೀಕಾಂತ್‌ ಸುಲಭವಾಗಿ ಪಾಯಿಂಟ್‌ಗಳನ್ನು ಗಳಿಸಿದರು. ಎರಡನೇ ಗೇಮ್‌ನ ಆರಂಭದಲ್ಲಿ ಸ್ಕೋರು 5–5ರಲ್ಲಿ ಸಮ ಆದಾಗ ಪಂದ್ಯ ರೋಚಕ ಆಗುವ ಸಾಧ್ಯತೆ ಕಂಡು ಬಂತು. ಆದರೆ ಶ್ರೀಕಾಂತ್ ಎದೆಗುಂದಲಿಲ್ಲ. ಆಕ್ರಮಣಕಾರಿ ಆಟವಾಡಿ ಗೆದ್ದು ಸಂಭ್ರಮಿಸಿದರು.

ರ‍್ಯಾಪ್ಟರ್ಸ್‌ನ ಟ್ರಂಪ್‌ ಪಂದ್ಯ ಆಡಿದ ವಿಯೆಟ್ನಾಂನ ವು ಥಿ ತ್ರಾಂಗ್‌ 202ನೇ ರ‍್ಯಾಂಕಿಂಗ್‌ನ ಶ್ರೇಯಾಂಸಿ ಪರ್ದೇಶಿ ವಿರುದ್ಧ 15–8, 15–9ರಲ್ಲಿ ಗೆದ್ದು ರ‍್ಯಾಪ್ಟರ್ಸ್‌ಗೆ 3–2ರ ಮುನ್ನಡೆ ಗಳಿಸಿಕೊಟ್ಟರು.

ಸಾಯಿ ಪ್ರಣೀತ್‌–ಸಮೀರ್ ವರ್ಮಾ ಆಟದ ವೈಭವ: 3–2ರ ಮುನ್ನಡೆ ಗಳಿಸಿದ ರ‍್ಯಾಪ್ಟರ್ಸ್‌ಗೆ ನಾಲ್ಕನೇ ಪಂದ್ಯ ನಿರ್ಣಾಯಕವಾಗಿತ್ತು. ರ‍್ಯಾಪ್ಟರ್ಸ್‌ನ ಸಾಯಿ ಪ್ರಣೀತ್ ಮತ್ತು ರಾಕೆಟ್ಸ್‌ನ ಸಮೀರ್ ವರ್ಮಾ ನಡುವಿನ ಪಂದ್ಯ ಪ್ರೇಕ್ಷಕರಿಗೆ ಭರಪೂರ ರಂಜನೆ ನೀಡಿತು. ಭರ್ಜರಿ ಜಂಪಿಂಗ್‌ ಸ್ಮ್ಯಾಷ್‌ಗಳ ಮೂಲಕ ಆರಂಭದಿಂದಲೇ ಪಾಯಿಂಟ್‌ಗಳನ್ನು ಕಸಿದ ಸಾಯಿ ಪ್ರಣೀತ್‌ ಮೊದಲ ಗೇಮ್ ಗೆದ್ದರೂ ನಂತರ ಸಮೀರ್ ತಿರುಗೇಟು ನೀಡಿ 7–15, 15–12, 15–3ರಿಂದ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT