ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಯಲ್ಲಿ ಎಡವಿದ ಸಾತ್ವಿಕ್‌–ಚಿರಾಗ್‌

ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಭಾರತದ ಸವಾಲು ಅಂತ್ಯ
Last Updated 9 ನವೆಂಬರ್ 2019, 19:32 IST
ಅಕ್ಷರ ಗಾತ್ರ

ಫುಜೌ, ಚೀನಾ: ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ–ಚಿರಾಗ್‌ ಶೆಟ್ಟಿ ಜೋಡಿಯು ಸೆಮಿಫೈನಲ್‌ನಲ್ಲಿ ಮುಗ್ಗರಿಸಿತು. ಇದರೊಂದಿಗೆ ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಸವಾಲಿಗೆ ತೆರೆಬಿತ್ತು. ಶನಿವಾರ ನಡೆದ ಹಣಾಹಣಿಯಲ್ಲಿ ಪುರುಷರ ಡಬಲ್ಸ್‌ ಹಾಲಿ ಚಾಂಪಿಯನ್ಸ್‌ ಇಂಡೊನೇಷ್ಯಾದ ಮಾರ್ಕಸ್‌ ಫರ್ನಾಲ್ಡಿ ಹಾಗೂ ಸಂಜಯ ಸುಕಮಲ್ಜೊ ಅವರು ಭಾರತದ ಜೋಡಿಗೆ 21–16, 22–20ರಿಂದ ಸೋಲುಣಿಸಿದರು.

ವಿಶ್ವದ ನಂ.1 ಜೋಡಿಯ ಎದುರು ಚಿರಾಗ್‌–ಸಾತ್ವಿಕ್‌ ಅವರಿಗೆ ಇದು ಸತತ ಎಂಟನೇ ಸೋಲು. ಈ ವರ್ಷದಲ್ಲಿ ಮೂರನೇ ಬಾರಿಯ ಪರಾಭವ.

ವಿಶ್ವದ ಒಂಬತ್ತನೇ ರ‍್ಯಾಂಕಿನ ಭಾರತದ ಜೋಡಿಯು ಮೊದಲ ಗೇಮ್‌ನ ಆರಂಭದಲ್ಲೇ 7–4 ಮುನ್ನಡೆಯಲ್ಲಿತ್ತು. ಆದರೆ ತಿರುಗೇಟು ನೀಡಿದ ಎದುರಾಳಿ ಶಟ್ಲರ್‌ಗಳು ವೇಗದ ಆಟದ ಮೂಲಕ 14–9 ಮುನ್ನಡೆ ಗಳಿಸಿದರು. ಒಂದು ಹಂತದಲ್ಲಿಚಿರಾಗ್‌–ಸಾತ್ವಿಕ್‌ 15–17ಕ್ಕೆ ಹಿನ್ನಡೆ ತಗ್ಗಿಸಿಕೊಂಡರೂ ಗೇಮ್‌ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಎರಡನೇ ಗೇಮ್‌ನಲ್ಲೂ ಭಾರತದ ಜೋಡಿಗೆ ಆರಂಭದಲ್ಲೇ 3–1 ಮುನ್ನಡೆ ಸಿಕ್ಕಿತು. ಆ ಬಳಿಕ 6–6, 10–10, 12–12 ಸಮಬಲದಲ್ಲಿ ಸಾಗಿದ ಗೇಮ್‌ ಜಿದ್ದಾಜಿದ್ದಿಗೆ ಸಾಕ್ಷಿಯಾಯಿತು. ಬಳಿಕ 18–16 ಅಲ್ಪ ಮುನ್ನಡೆಯೂ ಚಿರಾಗ್‌–ಸಾತ್ವಿಕ್ ಅವರಿಗೆ ಸಿಕ್ಕಿತು. ಆದರೆ ಮಾರ್ಕಸ್‌ ಹಾಗೂ ಸಂಜಯ ಸತತ ಮೂರು ಪಾಯಿಂಟ್‌ ಗಳಿಸಿದರಲ್ಲದೆ, ಸಾತ್ವಿಕ್‌ ಎಸಗಿದ ಪ್ರಮಾದದಿಂದ ಮತ್ತೊಂದು ಪಾಯಿಂಟ್‌ ಗಳಿಸಿ 20–19ಕ್ಕೆ ತಲುಪಿದರು. ಅದೇ ಲಯ ಕಾಯ್ದುಕೊಂಡು ಗೇಮ್‌ ಹಾಗೂ ಪಂದ್ಯ ಗೆದ್ದು ಬೀಗಿದರು.

ಮಾರ್ಕಸ್‌ ಹಾಗೂ ಸಂಜಯ ಅವರಿಗೆ ಚೀನಾ ಓಪನ್‌ ಟೂರ್ನಿಯಲ್ಲಿ ಇದು ಸತತ ನಾಲ್ಕನೇ ಫೈನಲ್‌ ಪ್ರವೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT