ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಸಿಂಧು ಮೇನಿಯಾ

Last Updated 1 ಸೆಪ್ಟೆಂಬರ್ 2019, 18:55 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಆಟಗಾರ್ತಿ ಪಿ.ವಿ. ಸಿಂಧು ಅವರ ಕೈಕುಲುಕಿ ಸೆಲ್ಪಿ ತೆಗೆಸಿಕೊಂಡ ಆ ಮಕ್ಕಳ ಕಂಗಳಲ್ಲಿ ಸಂಭ್ರಮ ಉಕ್ಕಿ ಹರಿಯುತ್ತಿತ್ತು. ನೆಚ್ಚಿನ ಆಟಗಾರ್ತಿ ತಮ್ಮ ನಡುವೆ ನಗುನಗುತ್ತ ನಿಂತು ಮಾತನಾಡುವಾಗ ಅವರ ಆನಂದಕ್ಕೆ ಪಾರವೇ ಇರಲಿಲ್ಲ.

ಭಾನುವಾರ ಎಚ್‌ಎಸ್‌ಆರ್ ಬಡಾವಣೆಯ ದಿ ಮ್ಯಾಜೆಸ್ಟಿನ್ ಸ್ಪೋರ್ಟ್ಸ್‌ ಅಕಾಡೆಮಿಗೆ ಸನ್ಮಾನ ಸ್ವೀಕರಿಸಲು ಸಿಂಧು ಮತ್ತು ಕಿದಂಬಿ ಶ್ರೀಕಾಂತ್ ಆಗಮಿಸಿದ್ದರು. ವಿಶ್ವ ಚಾಂಪಿಯನ್‌ ಆದ ನಂತರ ಇದೇ ಮೊದಲ ಬಾರಿಗೆ ಸಿಂಧು ಬೆಂಗಳೂರಿಗೆ ಬಂದಿದ್ದರು. ಅವರನ್ನು ನೋಡಲು ಸೇರಿದ್ದ ಅಕಾಡೆಮಿಯ ಕಿರಿಯ ಆಟಗಾರರು ಮತ್ತು ಶಾಲೆಗಳ ವಿದ್ಯಾರ್ಥಿಗಳು, ಪಾಲಕರು ಸಿಂಧು ಮತ್ತು ಶ್ರೀಕಾಂತ್ ಅವರ ಹಸ್ತಾಕ್ಷರ ಪಡೆಯಲು, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ಸಿಂಧು ಜೊತೆಯಲ್ಲಿದ್ದ ಅವರ ತಂದೆ ರಮಣ್ ಅವರೊಂದಿಗೂ ಮಕ್ಕಳು, ಪಾಲಕರು ಫೋಟೊ ತೆಗೆಸಿಕೊಂಡರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಧು, ‘ಚಿನ್ನದ ಪದಕ ಗೆದ್ದಿದ್ದು ತೃಪ್ತಿಕರ ಸಾಧನೆ. ಕಳೆದ ಏಳು ದಿನಗಳಲ್ಲಿ ನಾನು ಹೋದೆ ಎಲ್ಲ ಸ್ಥಳಗಳಲ್ಲಿಯೂ ಜನರು ತೋರಿಸುತ್ತಿರುವ ಪ್ರೀತಿ, ಮಾಡುತ್ತಿರುವ ಸತ್ಕಾರಗಳಿಗೆ ಕೃತಜ್ಞತೆ ಸಲ್ಲಿಸಲು ನನ್ನ ಬಳಿ ಪದಗಳಿಲ್ಲ. ಅವರಿಗೆಲ್ಲ ನಾನು ಆಭಾರಿ. ದೇಶದ ಜನರ ಪ್ರೀತಿ, ಅಪ್ಪ–ಅಮ್ಮನ ಪ್ರೋತ್ಸಾಹ ಮತ್ತು ಕೋಚ್‌ಗಳ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ’ ಎಂದರು.

‘ಮುಂದಿನ ವರ್ಷ ಒಲಿಂಪಿಕ್ಸ್‌ ನಡೆಯಲಿದೆ. ಅದಕ್ಕಿಂತ ಮೊದಲು ನಾವು ಆಡುವ ಎಲ್ಲ ಟೂರ್ನಿಗಳಲ್ಲಿಯೂ ಉತ್ತಮ ಸಾಧನೆ ಮಾಡಬೇಕಿದೆ. ಗೆಲುವುಗಳಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ವಿಶ್ವ ಚಾಂಪಿಯನ್ ಆಗಿರುವುದರಿಂದ ನನ್ನ ಮೇಲೆ ಹೆಚ್ಚು ನಿರೀಕ್ಷೆಗಳಿವೆ. ಅವುಗಳಿಂದ ನನಗೆ ಒತ್ತಡವಿಲ್ಲ. ಆದರೆ, ನಿರೀಕ್ಷೆಗಳಿಗೆ ತಕ್ಕಂತೆ ಆಡುವುದು ನನ್ನ ಜವಾಬ್ದಾರಿ’ ಎಂದು ಸಿಂಧು ಹೇಳಿದರು.

ಈ ಸಂದರ್ಭದಲ್ಲಿ ಅಕಾಡೆಮಿಯ ಸ್ಥಾಪಕರಾದ ನಾರಾಯಣರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT