ಶನಿವಾರ, ಸೆಪ್ಟೆಂಬರ್ 21, 2019
21 °C

ಬ್ಯಾಡ್ಮಿಂಟನ್‌ನ ‘ದ್ರೋಣಾಚಾರ್ಯ’

Published:
Updated:
Prajavani

ಭಾರತದ ಬ್ಯಾಡ್ಮಿಂಟನ್‌ನ ಧ್ರುವತಾರೆಗಳಲ್ಲಿ ಕೇರಳದ ಯು.ವಿಮಲ್‌ ಕುಮಾರ್‌ ಕೂಡ ಒಬ್ಬರು. 1992ರ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ವಿಮಲ್‌, ಫ್ರೆಂಚ್‌ ಓಪನ್‌ ಮತ್ತು ವೇಲ್ಸ್‌ ಇಂಟರ್‌ನ್ಯಾಷನಲ್‌ ಓಪನ್‌ ಟೂರ್ನಿಗಳಲ್ಲಿ ತಲಾ ಎರಡು ಬಾರಿ ಪ್ರಶಸ್ತಿ ಗೆದ್ದ ಹಿರಿಮೆ ಹೊಂದಿದ್ದಾರೆ. ಸತತ ಎರಡು ವರ್ಷ (1988 ಮತ್ತು 1989) ರಾಷ್ಟ್ರೀಯ ಚಾಂಪಿಯನ್‌ ಆಗಿದ್ದ ವಿಮಲ್‌, ಭಾರತ ಬ್ಯಾಡ್ಮಿಂಟನ್‌ ತಂಡದ ಮುಖ್ಯ ಕೋಚ್‌ ಆಗಿಯೂ ಕೆಲಸ ಮಾಡಿದ್ದರು. ಸೈನಾ ನೆಹ್ವಾಲ್‌ ಅವರು ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವಲ್ಲಿ ವಿಮಲ್‌ ಅವರ ಪಾತ್ರ ಮಹತ್ವದ್ದೆನಿಸಿತ್ತು.

ಬೆಂಗಳೂರಿನಲ್ಲಿರುವ ಪ್ರಕಾಶ್‌ ಪಡುಕೋಣೆ ಬ್ಯಾಡ್ಮಿಂಟನ್‌ ಅಕಾಡೆಮಿಯ (ಪಿಪಿಬಿಎ) ನಿರ್ದೇಶಕ ರಾಗಿರುವ 56ರ ಹರೆಯದ ವಿಮಲ್‌, ಎರಡು ದಶಕಗಳಿಂದ ಮಕ್ಕಳಿಗೆ ಆಟದ ಪಾಠಗಳನ್ನು ಹೇಳಿಕೊಡುತ್ತಿದ್ದಾರೆ. ಅವರ ಈ ಕಾರ್ಯಕ್ಕೆ ದ್ರೋಣಾಚಾರ್ಯ ಗೌರವ ಒಲಿದಿದೆ. ಈ ಖುಷಿಯನ್ನು ಅವರು ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದ್ದಾರೆ.

ಈ ಸಲದ ದ್ರೋಣಾಚಾರ್ಯ ಪುರಸ್ಕಾರಕ್ಕೆ ಭಾಜನರಾಗಿದ್ದೀರಿ. ಪ್ರಶಸ್ತಿ ಸಿಗುವ ನಿರೀಕ್ಷೆ ಇತ್ತೇ?

ಪ್ರಶಸ್ತಿ ಸಿಗಬಹುದು ಎಂದು ಖಂಡಿತವಾಗಿಯೂ ಊಹಿಸಿರಲಿಲ್ಲ. ಅರ್ಜಿ ಹಾಕಿ ಪ್ರಶಸ್ತಿ ಗಿಟ್ಟಿಸಿಕೊಳ್ಳುವ ಜಾಯಮಾನ ನನ್ನದಲ್ಲ. ಭಾರತ ಬ್ಯಾಡ್ಮಿಂಟನ್‌ ಸಂಸ್ಥೆ (ಬಿಎಐ) ನನ್ನ ಕೆಲಸವನ್ನು ಗುರುತಿಸಿ ಈ ಗೌರವಕ್ಕೆ ಹೆಸರು ಶಿಫಾರಸು ಮಾಡಿತ್ತು. ಅದಕ್ಕಾಗಿ ಬಿಎಐಗೆ ಕೃತಜ್ಞನಾಗಿದ್ದೇನೆ.  14 ವರ್ಷ ದೇಶಕ್ಕಾಗಿ ಆಡಿದ್ದೇನೆ. ಹಿಂದೆ ರಾಷ್ಟ್ರೀಯ ಚಾಂಪಿಯನ್‌ ಕೂಡ ಆಗಿದ್ದೆ. ಹಲವು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಟ್ರೋಫಿ ಜಯಿಸಿ ದೇಶದ ಕೀರ್ತಿ ಹೆಚ್ಚಿಸಿದ್ದೆ. ಜೊತೆಗೆ ವಿಶ್ವ ಕ್ರಮಾಂಕಪಟ್ಟಿಯಲ್ಲಿ ಅಗ್ರ 20ರೊಳಗೆ ಸ್ಥಾನವನ್ನೂ ಪಡೆದಿದ್ದೆ. ಇಷ್ಟೆಲ್ಲಾ ಸಾಧನೆ ಮಾಡಿದರೂ ಅರ್ಜುನ ಪ್ರಶಸ್ತಿ ಬಂದಿರಲಿಲ್ಲ. ಸಾಧನೆಗೆ ಮನ್ನಣೆ ಸಿಗದಿದ್ದರಿಂದ ಆಗ ತುಂಬಾ ನೋವಾಗಿತ್ತು. ಹಾಗಂತ ಯಾರನ್ನೂ ದೂಷಿಸಲು ಹೋಗಿರಲಿಲ್ಲ. ನನ್ನ ಕೆಲಸವನ್ನು ತುಂಬಾ ಶ್ರದ್ಧೆ ಮತ್ತು ನಿಷ್ಠೆಯಿಂದ ಮಾಡಿಕೊಂಡು ಬಂದಿದ್ದೆ. ಈಗಲಾದರೂ ನನ್ನ ಸೇವೆಯನ್ನು ಗುರುತಿಸಿದ್ದಾರೆ. ಅದಕ್ಕಾಗಿ ಸಂತೋಷ ಪಡುತ್ತೇನೆ.

ಭಾರತವು ಬ್ಯಾಡ್ಮಿಂಟನ್‌ನ ‘ಶಕ್ತಿ ಕೇಂದ್ರ’ವಾಗುತ್ತಿದೆ. ಈ ಮಾತನ್ನು ನೀವು ಒಪ್ಪುತ್ತೀರಾ?

ಸಿಂಗಲ್ಸ್‌ನಲ್ಲಿ ನಮ್ಮವರು ಶ್ರೇಷ್ಠ ಸಾಮರ್ಥ್ಯ ತೋರುತ್ತಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಕೂಡ ಭರವಸೆ ಮೂಡಿಸಿದ್ದಾರೆ. ಇವರ ಸಾಧನೆ ಹಲವರಿಗೆ ಪ್ರೇರಣೆಯಾಗಿದೆ. ಹೀಗಾಗಿ ಈಗ ಬ್ಯಾಡ್ಮಿಂಟನ್‌ ಕಲಿಯುವವರ ಸಂಖ್ಯೆ ತುಂಬಾ ಹೆಚ್ಚಿದೆ. ಭಾರತವು ಬ್ಯಾಡ್ಮಿಂಟನ್‌ನ ಶಕ್ತಿ ಕೇಂದ್ರವಾಗುವತ್ತ ಹೆಜ್ಜೆ ಇಟ್ಟಿರುವುದು ಇದರಿಂದ ಮನದಟ್ಟಾಗುತ್ತದೆ. ನಮ್ಮಲ್ಲಿ ಇನ್ನಷ್ಟು ಗುಣಮಟ್ಟದ ತರಬೇತಿ ಸಿಗುವಂತಾಗಬೇಕು. ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ವಿಶೇಷ ತರಬೇತಿ  ನೀಡುವ ಕೆಲಸವನ್ನೂ ಪ್ರಾಮಾಣಿಕವಾಗಿ ಮಾಡಬೇಕು.

ಸಿಂಧು ಆಟದಲ್ಲಿ ಈಗ ಏನಾದರೂ ಬದಲಾವಣೆಗಳನ್ನು ಗುರುತಿಸಿದ್ದೀರಾ?

ಅವರೀಗ ವಿಶ್ವಾಸದ ಬುಗ್ಗೆಯಾಗಿದ್ದಾರೆ. ಯಾವ ಹಂತದಲ್ಲೂ ತಪ್ಪುಗಳು ಆಗದಂತೆ ಎಚ್ಚರವಹಿಸುತ್ತಿದ್ದಾರೆ. ಜೊತೆಗೆ ನೆಟ್‌ನ ಸಮೀಪದಲ್ಲಿ ತುಂಬಾ ಚುರುಕಾಗಿ ಆಡುವುದನ್ನು ಮೈಗೂಡಿಸಿಕೊಂಡಿದ್ದಾರೆ. ಆಟದ ವೇಗವೂ ಹೆಚ್ಚಿದೆ.


ಸ್ಪೇನ್‌ನ ಕ್ಯಾರೊಲಿನಾ ಮರಿನ್‌ ಜೊತೆ ವಿಮಲ್‌

ಸೈನಾಗಿಂತ ಸಿಂಧು ಶ್ರೇಷ್ಠ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆಯಲ್ಲ?

ಭಾರತದ ಬ್ಯಾಡ್ಮಿಂಟನ್‌ಗೆ ಇಬ್ಬರೂ ವಿಶಿಷ್ಠ ಕೊಡುಗೆಗಳನ್ನು ನೀಡಿದ್ದಾರೆ. ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಇಬ್ಬರೂ ಹಲವು ಪ್ರಶಸ್ತಿಗಳನ್ನು ಗೆದ್ದು ದೇಶದ ಹಿರಿಮೆ ಹೆಚ್ಚಿಸಿದ್ದಾರೆ.  ಸಿಂಧು ಈಗ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಹೀಗಾಗಿ ಸಹಜವಾಗಿಯೇ ಅವರ ಮೇಲೆ ಜನರ ಒಲವು ಹೆಚ್ಚಿದೆ. 

ಸೈನಾ ಅವರ ಕ್ರೀಡಾ ಬದುಕು ಕೊನೆಗೊಳ್ಳುವ ಕಾಲ ಸನ್ನಿಹಿತವಾಯಿತು ಎಂದು ಅನಿಸುತ್ತದೆಯೇ?

ಗಾಯದ ಸಮಸ್ಯೆ ಸೈನಾ ಅವರನ್ನು ಪದೇ ಪದೇ ಕಾಡುತ್ತಿದೆ. ಹೀಗಾಗಿ ಪ್ರಮುಖ ಟೂರ್ನಿಗಳಲ್ಲಿ ಪ್ರಶಸ್ತಿ ಗೆಲ್ಲಲು ಆಗುತ್ತಿಲ್ಲ. ಅವರಿಗೆ ಈಗಿನ್ನೂ 29ರ ಹರೆಯ. ದೈಹಿಕ ಕ್ಷಮತೆಯನ್ನು ಕಾಪಾಡಿಕೊಂಡರೆ ಇನ್ನಷ್ಟು ಕಾಲ ಆಡಬಹುದು. ಜೊತೆಗೆ ವಿನೂತನ ಕೌಶಲ ಗಳನ್ನು ಕಲಿತು ಅವುಗಳನ್ನು ಮೈಗೂಡಿಕೊಂಡು ಸಾಗಬೇಕು. ಹಾಗಾದಲ್ಲಿ ಸೈನಾ ಕೂಡ ವಿಶ್ವ ಶ್ರೇಷ್ಠ ಆಟಗಾರ್ತಿಯರನ್ನು ಮಣಿಸಬಲ್ಲರು. ಆ ಕಸುವು ಅವರಲ್ಲಿ ಇನ್ನೂ ಇದೆ.

ಮಹಿಳಾ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ನಲ್ಲಿ ನಮ್ಮವರು ಚೀನಾ, ಇಂಡೊನೇಷ್ಯಾದ ಸ್ಪರ್ಧಿಗಳಿಗೆ ಸವಾಲೊಡ್ಡುವಷ್ಟು ಶಕ್ತರಾಗಿಲ್ಲವಲ್ಲ?

ನಿಜ. ಈ ಬಗ್ಗೆ ನಾವೆಲ್ಲಾ ಗಂಭೀರವಾಗಿ ಯೋಚಿಸಬೇಕು. ಈ ವಿಭಾಗವನ್ನು ಬಲಪಡಿಸುವ ಸಲುವಾಗಿಯೇ ಬಿಎಐ, ಇಂಡೊನೇಷ್ಯಾದ ಪರಿಣತ ಕೋಚ್‌ಗಳನ್ನು ನೇಮಿಸಿದೆ. ಅವರು ರಾಷ್ಟ್ರೀಯ ಶಿಬಿರದಲ್ಲಿ ವಿಶೇಷ ಕೌಶಲಗಳನ್ನು ಹೇಳಿಕೊಡುತ್ತಿದ್ದಾರೆ. ಈಗ ಪರಿಸ್ಥಿತಿ ತುಂಬಾ ಸುಧಾರಿಸಿದೆ. ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ನಮ್ಮ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ ವಿಭಾಗದ ಸ್ಪರ್ಧಿಗಳು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಮಿಂಚುತ್ತಾರೆ.

ಬಹುಮಾನ ಮೊತ್ತದಲ್ಲಿ ಆಗುತ್ತಿರುವ ತಾರತಮ್ಯವು ಡಬಲ್ಸ್‌ ವಿಭಾಗದ ಹಿನ್ನಡೆಗೆ ಕಾರಣವಾಗಿರಬಹುದೇ?

ಸಿಂಗಲ್ಸ್‌ ವಿಭಾಗದಲ್ಲಿ ಆಡಿದರೆ ಜನ ಬೇಗ ಗುರುತಿಸುತ್ತಾರೆ. ಡಬಲ್ಸ್‌ ವಿಭಾಗದವರಿಗೆ ಹೆಚ್ಚು ಮನ್ನಣೆ ಸಿಗುವುದಿಲ್ಲ ಎಂಬ ಭಾವನೆ ಬಹುತೇಕರಲ್ಲಿದೆ. ಸಿಂಗಲ್ಸ್‌ ವಿಭಾಗಕ್ಕೆ ಹೋಲಿಸಿದರೆ ಡಬಲ್ಸ್‌ ವಿಭಾಗದಲ್ಲಿ ಆಡುವವರಿಗೆ ನೀಡುವ ಬಹುಮಾನ ತೀರಾ ಕಡಿಮೆಯೇ. ಈ ವಿಭಾಗದ ಹಿನ್ನಡೆಗೆ ಇದೂ ಒಂದು ಕಾರಣವಿರಬಹುದು.

ಇತ್ತೀಚಿನ ದಿನಗಳಲ್ಲಿ ಭಾರತದ ಆಟಗಾರರು ಕ್ವಾರ್ಟರ್‌ ಫೈನಲ್‌ ಹಾಗೂ ಸೆಮಿಫೈನಲ್‌ ಹಂತಗಳಲ್ಲೇ ಹೊರಬೀಳುತ್ತಿದ್ದಾರಲ್ಲ. ಇದಕ್ಕೆ ಕಾರಣ ಏನಿರಬಹುದು?

ಈ ಹಂತಗಳಲ್ಲಿ ಆಡುವಾಗ ನಮ್ಮವರು ಬೇರೆ ದೇಶಗಳ ಕ್ರೀಡಾಪಟುಗಳಿಗಿಂತಲೂ ಹೆಚ್ಚು ಒತ್ತಡಕ್ಕೆ ಒಳಗಾಗಿಬಿಡುತ್ತಾರೆ. ಬಲಿಷ್ಠ ಎದುರಾಳಿಗಳ ಎದುರು ಗೆಲ್ಲುವುದು ಕಷ್ಟ ಎಂಬ ಭಾವನೆ ಬಂದುಬಿಟ್ಟರೆ ಅರ್ಧ ಪಂದ್ಯ ಸೋತಂತೆ. ಭಾರತದ ಸ್ಪರ್ಧಿಗಳ ವಿಚಾರದಲ್ಲಿ ಆಗುತ್ತಿರುವುದು ಇದೇ. ಎದುರಾಳಿಯನ್ನು ಮಣಿಸಿಯೇ ತೀರುತ್ತೇನೆ ಎಂಬ ಛಲವನ್ನು ಮೈಗೂಡಿಸಿಕೊಂಡರೆ ಈ ಹಂತಗಳನ್ನು ದಾಟಿ ಪ್ರಶಸ್ತಿ ಗೆಲ್ಲುವುದು ಕಷ್ಟವಾಗಲಾರದು. 

ಪಿ.ವಿ.ಸಿಂಧು ಅವರು ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದಾರೆ. ಈ ಸಾಧನೆಯನ್ನು ನೀವು ಹೇಗೆ ಬಣ್ಣಿಸುತ್ತೀರಿ?

ಸಿಂಧು ಅವರಿಂದ ಮೂಡಿಬಂದ ಸಾಧನೆ ಪದಗಳಿಗೆ ನಿಲುಕದ್ದು. ಇದು ತುಂಬಾ ತುಂಬಾ ವಿಶೇಷವಾದಂತಹುದು. ಇತರ ಎಲ್ಲಾ ಸ್ಪರ್ಧಿಗಳಿಗಿಂತಲೂ ಅವರು ತುಂಬಾ ಭಿನ್ನವಾಗಿ, ಪರಿಣಾಮಕಾರಿಯಾಗಿ ಆಡಿದರು. ಕ್ವಾರ್ಟರ್‌ ಫೈನಲ್‌ನಲ್ಲಿ ತೈ ಜು ಯಿಂಗ್‌ ಅವರಿಂದ ತೀವ್ರ ಪ್ರತಿರೋಧ ಎದುರಿಸಿದ್ದು ಬಿಟ್ಟರೆ, ಉಳಿದ ಎಲ್ಲಾ ಪಂದ್ಯಗಳಲ್ಲೂ ಏಕಪಕ್ಷೀಯವಾಗಿ ಗೆದ್ದಿದ್ದು ವಿಶೇಷ. ಸಿಂಧು ಅವರ ಈ ಸಾಧನೆ ಭಾರತದ ಬ್ಯಾಡ್ಮಿಂಟನ್‌ನಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ. ಈ ಋತುವಿನ ಮೊದಲ ಆರು ತಿಂಗಳ ಅವಧಿಯಲ್ಲಿ ಸಿಂಧು ಒಂದೇ ಒಂದು ಪ್ರಶಸ್ತಿಯನ್ನೂ ಗೆದ್ದಿರಲಿಲ್ಲ. ಸೆಮಿಫೈನಲ್‌ ಮತ್ತು ಫೈನಲ್‌ ಹಂತಗಳಲ್ಲೇ ಎಡವುತ್ತಿದ್ದರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅವರು ತಪ್ಪುಗಳನ್ನು ತಿದ್ದಿಕೊಂಡು, ಅತೀವ ವಿಶ್ವಾಸದಿಂದ ಆಡಿದರು.

ಒಲಿಂಪಿಕ್ಸ್‌ನಲ್ಲಿ ಸಿಂಧು ಚಿನ್ನ ಗೆಲ್ಲಬಹುದೇ?

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿರುವುದರಿಂದ ಅವರ ಮನೋಬಲ ಹೆಚ್ಚಿದೆ. ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ ಹಾಗೂ ಒಲಿಂಪಿಕ್ಸ್‌ನಲ್ಲೂ ಚಿನ್ನದ ಪದಕಕ್ಕೆ ಕೊರಳೊಡ್ಡುವ ಸಾಮರ್ಥ್ಯ ಅವರಿಗಿದೆ.

Post Comments (+)