ಸೈನಾ, ಪ್ರಣೀತ್‌ ಸವಾಲು ಅಂತ್ಯ

7
ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಮರಿನ್‌ಗೆ ಜಯ

ಸೈನಾ, ಪ್ರಣೀತ್‌ ಸವಾಲು ಅಂತ್ಯ

Published:
Updated:
Deccan Herald

ನಾನ್‌ಜಿಂಗ್‌, ಚೀನಾ: ಈ ಬಾರಿಯ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆಲ್ಲುವ ಸೈನಾ ನೆಹ್ವಾಲ್‌ ಕನಸು ಭಗ್ನಗೊಂಡಿದೆ.

ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಸೈನಾ 6–21, 11–21ರಲ್ಲಿ ಸ್ಪೇನ್‌ನ ಕ್ಯಾರೋಲಿನ್‌ ಮರಿನ್‌ ಎದುರು ಪರಾಭವಗೊಂಡರು.

10ನೇ ಶ್ರೇಯಾಂಕಿತ ಆಟಗಾರ್ತಿ ಸೈನಾ 31 ನಿಮಿಷಗಳಲ್ಲಿ ಸೋಲೊಪ್ಪಿಕೊಂಡರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎಂಟನೆ ಸ್ಥಾನ ಹೊಂದಿದ್ದ ಮರಿನ್‌, ಮೊದಲ ಗೇಮ್‌ನಲ್ಲಿ ಮೋಡಿ ಮಾಡಿದರು. ಆರಂಭದಿಂದಲೇ ಅಬ್ಬರಿಸಿದ ಸ್ಪೇನ್‌ನ ಆಟಗಾರ್ತಿ ಚುರುಕಾಗಿ ಪಾಯಿಂಟ್ಸ್‌ ಗಳಿಸಿದರು. ಇದರೊಂದಿಗೆ 11–2ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದರು.

ದ್ವಿತೀಯಾರ್ಧದಲ್ಲೂ ಮರಿನ್‌ ಮಿಂಚಿದರು. ಎದುರಾಳಿ ಆಟಗಾರ್ತಿಯ ರ‍್ಯಾಕೆಟ್‌ನಿಂದ ಸಿಡಿಯುತ್ತಿದ್ದ ಬಲಿಷ್ಠ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳಿಗೆ ನಿರುತ್ತರರಾದ ಸೈನಾ  ಸುಲಭವಾಗಿ ಗೇಮ್‌ ಬಿಟ್ಟುಕೊಟ್ಟರು.

ಎರಡನೆ ಗೇಮ್‌ನ ಮೊದಲಾರ್ಧದಲ್ಲಿ ಸೈನಾ, ಸ್ಪೇನ್‌ನ ಆಟಗಾರ್ತಿಗೆ ಪ್ರಬಲ ಪೈಪೋಟಿ ನೀಡಿದರು.ಈ ಮೂಲಕ ಹಿನ್ನಡೆಯನ್ನು 8–10ಕ್ಕೆ ತಗ್ಗಿಸಿಕೊಂಡ ಅವರು ಬಳಿಕ ಮತ್ತೆ ಮಂಕಾದರು. ಗುಣಮಟ್ಟದ ಆಟ ಆಡಿ ಗಮನ ಸೆಳೆದ ಮರಿನ್‌ ಲೀಲಾಜಾಲವಾಗಿ ಪಾಯಿಂಟ್ಸ್‌ ಕಲೆಹಾಕಿ ಗೆಲುವಿನ ತೋರಣ ಕಟ್ಟಿದರು.

ಪ್ರಣೀತ್‌ಗೆ ನಿರಾಸೆ: ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಭರವಸೆಯಾಗಿದ್ದ ಬಿ.ಸಾಯಿ ಪ್ರಣೀತ್‌ ಕೂಡಾ ಎಂಟರ ಘಟ್ಟದಲ್ಲಿ ಮುಗ್ಗರಿಸಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 26ನೇ ಸ್ಥಾನದಲ್ಲಿರುವ ಭಾರತದ ಆಟಗಾರ 12–21, 12–21ರಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಏಳನೆ ಸ್ಥಾನ ಹೊಂದಿರುವ ಕೆಂಟೊ ಮೊಮೊಟಾ ವಿರುದ್ಧ ಸೋತರು.

39 ನಿಮಿಷಗಳ ಹಣಾಹಣಿಯಲ್ಲಿ ಜಪಾನ್‌ನ ಆಟಗಾರ ಕೆಂಟೊ ಪ್ರಾಬಲ್ಯ ಮೆರೆದರು.

ಮಿಶ್ರ ಡಬಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಆಂಧ್ರಪ್ರದೇಶದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ 17–21, 10–21ರಲ್ಲಿ ಚೀನಾದ ಸಿವಿ ಜೆಂಗ್‌ ಮತ್ತು ಯಾಕಿಯಾಂಗ್‌ ಹುವಾಂಗ್‌ ವಿರುದ್ಧ ಮಣಿದರು. ಈ ಹೋರಾಟ 37 ನಿಮಿಷ ನಡೆಯಿತು.

ಯಿಂಗ್‌ಗೆ ಆಘಾತ: ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತೈ ಜು ಯಿಂಗ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಆಘಾತ ಅನುಭವಿಸಿದರು.

ಚೀನಾದ ಏಳನೆ ಶ್ರೇಯಾಂಕದ ಆಟಗಾರ್ತಿ ಹಿ ಬಿಂಗ್‌ಜಿಯಾವೊ 21–18, 7–21, 21–13ರಲ್ಲಿ ತೈವಾನ್‌ನ ಯಿಂಗ್‌ ಅವರನ್ನು ಸೋಲಿಸಿದರು.

ಪುರುಷರ ಸಿಂಗಲ್ಸ್‌ ವಿಭಾಗದ ಎಂಟರ ಘಟ್ಟದ ಹಣಾಹಣಿಯಲ್ಲಿ ಚೀನಾದ ಚೆನ್‌ ಲಾಂಗ್‌ 21–19, 21–11ರಲ್ಲಿ ಡೆನ್ಮಾರ್ಕ್‌ನ ವಿಕ್ಟರ್‌ ಆ್ಯಕ್ಸೆಲ್‌ಸನ್‌ ಅವರನ್ನು ಪರಾಭವಗೊಳಿಸಿದರು.

ವಿಕ್ಟರ್‌ ಅವರು ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದ್ದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !