ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಮ್‌ ರ‍್ಯಾಂಕಿಂಗ್‌ ಸಿರೀಸ್‌ ಕುಸ್ತಿ: ಫೈನಲ್‌ಗೆ ಬಜರಂಗ್‌ ಪುನಿಯಾ

ಜೀತೆಂದರ್, ದೀಪಕ್‌ಗೆ ಸೋಲು
Last Updated 18 ಜನವರಿ 2020, 19:45 IST
ಅಕ್ಷರ ಗಾತ್ರ

ರೋಮ್‌: ಭಾರತದ ಬಜರಂಗ್‌ ಪುನಿಯಾ ರೋಮ್‌ ರ‍್ಯಾಂಕಿಂಗ್‌ ಸಿರೀಸ್‌ ಕುಸ್ತಿ ಟೂರ್ನಿಯ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. 65 ಕೆಜಿ ಫ್ರೀಸ್ಟೈಲ್‌ ವಿಭಾಗದ ಸೆಮಿಫೈನಲ್‌ನಲ್ಲಿ ಅವರು ಉಕ್ರೇನ್‌ನ ವಾಸಿಲ್‌ ಶಪ್ಟರ್‌ ಎದುರು 6–4ರಿಂದ ಗೆದ್ದರು.

ಮೊದಲ ಸುತ್ತಿನ ಬೌಟ್‌ನಲ್ಲೇ ಬಜರಂಗ್‌ ಕಠಿಣ ಹೋರಾಟ ಎದುರಿಸಬೇಕಾಯಿತು. ಆದರೂ ಅಮೆರಿಕದ ಜಾಯಿನ್‌ ಅಲೆನ್‌ ರೆದರ್‌ಫೋರ್ಡ್‌ ವಿರುದ್ಧ 5–4ರಿಂದ ಜಯ ಗಳಿಸಿದರು.

ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಭಾರತದ ಪಟು ಅಮೆರಿಕಾದ ಜೋಸೆಫ್‌ ಕ್ರಿಸ್ಟೊಫರ್‌ ಮೆಕ್‌ ಕೆನ್ನಾ ಅವರನ್ನು 4–2ರಿಂದ ಚಿತ್‌ ಮಾಡಿದರು. ಫೈನಲ್‌ ಬೌಟ್‌ನಲ್ಲಿ ಬಜರಂಗ್‌ ಅವರು ಅಮೆರಿಕದ ಜೊರ್ಡಾನ್‌ ಮೈಕೆಲ್‌ ಒಲಿವರ್‌ ಎದುರು ಸೆಣಸಲಿದ್ದಾರೆ.

ಜೀತೆಂದರ್‌ (74 ಕೆಜಿ) ಹಾಗೂ ದೀಪಕ್‌ ಪುನಿಯಾ (86 ಕೆಜಿ)ನಿರಾಸೆ ಮೂಡಿಸಿದರು.

ವಿಶ್ವ ಚಾಂಪಿಯನ್‌ಷಿಪ್‌ ಬೆಳ್ಳಿ ಪದಕ ವಿಜೇತ ದೀಪಕ್‌ ಮೊದಲ ಬೌಟ್‌ನಲ್ಲೇ ಪ್ಯೂರ್ಟೊ ರಿಕೊದ ಎಥನ್‌ ಆ್ಯಡ್ರಿಯನ್‌ ರಾಮೊಸ್‌ ಎದುರು 1–11ರಿಂದ ಸೋತರು.

ಜೀತೆಂದರ್‌ ಅವರು ಮೊದಲ ಬೌಟ್‌ನಲ್ಲಿ ಉಕ್ರೇನ್‌ನ ಡೆನಿಸ್‌ ಪಾವ್ಲೊವ್‌ ಎದುರು 10–1ರಿಂದ ಗೆದ್ದಿದ್ದರು. ಆದರೆ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಟರ್ಕಿಯ ಸೋನರ್‌ ಡೆಮಿರ್ಟಸ್‌ ವಿರುದ್ಧ 0–4ರಿಂದ ಪರಾಭವಗೊಂಡರು.

ಡೆಮಿರ್ಟಸ್‌ ಫೈನಲ್‌ ತಲುಪಿದ ಕಾರಣ ಜೀತೆಂದರ್‌ಗೆ ರಿಪೇಜ್‌ ಸುತ್ತಿನಲ್ಲಿ ಆಡುವ ಅವಕಾಶ ದೊರೆತಿತ್ತು. ಕಜಕಸ್ತಾನದ ದನಿಯಾರ್‌ ಕೈಸನೊವ್‌ ಎದುರು ನಡೆದ ರಿಪೇಜ್‌ ಸೆಣಸಾಟದಲ್ಲೂ ಭಾರತದ ಪಟು 2–9ರಿಂದ ಸೋತರು.

61 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ರವಿಕುಮಾರ್‌ ದಹಿಯಾ ಎರಡು ಸುತ್ತುಗಳಲ್ಲಿ ಜಯ ಸಾಧಿಸಿದ್ದಾರೆ. ಮೊಲ್ಡೊವಾದ ಅಲೆಕ್ಸಾಂಡ್ರು ಚಿರ್ಟೊಕಾ ಹಾಗೂ ಕಜಕಸ್ತಾನ ನೂರ್‌ ಇಸ್ಲಾಂ ಸನಾಯೆವ್‌ ಅವರನ್ನು ದಹಿಯಾ ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT