ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಾದ ಹಾಕಿ ‘ಮಾಂತ್ರಿಕ’ ಬಲ್ಬೀರ್‌ ಸಿಂಗ್

ಸೋಮವಾರ ಕೊನೆಯುಸಿರೆಳೆದ ಬಲ್ಬೀರ್‌ ಸಿಂಗ್‌ ಸೀನಿಯರ್‌
Last Updated 25 ಮೇ 2020, 20:15 IST
ಅಕ್ಷರ ಗಾತ್ರ

ಚಂಡೀಗಡ: ಹಾಕಿ ಲೋಕದ ಮಾಂತ್ರಿಕ, ಬಲ್ಬೀರ್‌ ಸಿಂಗ್‌ ಸೀನಿಯರ್ (96)‌ ಸೋಮವಾರ ಬೆಳಿಗ್ಗೆ ಕೊನೆಯುಸಿರೆಳೆದರು.

ಅವರಿಗೆ ಪುತ್ರಿ ಸುಷ್ಬೀರ್‌‌, ಪುತ್ರರಾದ ಕಣ್ವಲ್‌ಬೀರ್‌, ಕರಣ್‌ಬೀರ್‌ ಹಾಗೂ ಗುರ್ಬೀರ್‌ ಇದ್ದಾರೆ. ಮೂವರೂ ಗಂಡು ಮಕ್ಕಳು ಕೆನಡಾದಲ್ಲಿ ನೆಲೆಸಿದ್ದಾರೆ. ಬಲ್ಬೀರ್‌ ಅವರು ಮಗಳ ಜೊತೆ ಮೊಹಾಲಿಯಲ್ಲಿ ವಾಸವಿದ್ದರು.

‘ಶ್ವಾಸನಾಳದ ನ್ಯುಮೋನಿಯಾದಿಂದ ಬಳಲುತ್ತಿದ್ದ ಬಲ್ಬೀರ್‌ ಅವರು ಚಿಕಿತ್ಸೆಗಾಗಿ ಇದೇ ತಿಂಗಳ ಎಂಟರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಅರೆ ಕೋಮಾವಸ್ಥೆಯಲ್ಲಿದ್ದ ಅವರು ಸೋಮವಾರ ಬೆಳಿಗ್ಗೆ 6:17ಕ್ಕೆ ಅಸು ನೀಗಿದರು’ ಎಂದು ಮೊಹಾಲಿಯ ಫೋರ್ಟಿಸ್‌ ಆಸ್ಪತ್ರೆಯ ನಿರ್ದೇಶಕ ಅಭಿಜಿತ್‌ ಸಿಂಗ್‌ ತಿಳಿಸಿದ್ದಾರೆ.‌

ಸ್ವಾತಂತ್ರ್ಯ ನಂತರದಲ್ಲಿ ಭಾರತ ತಂಡವು ಒಲಿಂಪಿಕ್ಸ್‌ನಲ್ಲಿ ಹ್ಯಾಟ್ರಿಕ್‌ ಚಿನ್ನದ ಪದಕಗಳನ್ನು ಗೆಲ್ಲುವಲ್ಲಿ (1948–ಲಂಡನ್‌, 1952–ಹೆಲ್ಸಿಂಕಿ, 1956–ಮೆಲ್ಬರ್ನ್‌) ಬಲ್ಬೀರ್‌ ಪಾತ್ರ ಮಹತ್ವದ್ದಾಗಿತ್ತು. 1952ರ ಕೂಟದಲ್ಲಿ ತಂಡದ ಉಪ ನಾಯಕರಾಗಿದ್ದ ಅವರು, ಮೆಲ್ಬರ್ನ್‌ ಒಲಿಂಪಿಕ್ಸ್‌ನಲ್ಲಿ ತಂಡದ ಸಾರಥ್ಯ ವಹಿಸಿದ್ದರು. ಹೆಲ್ಸಿಂಕಿ ಕೂಟದ ನೆದರ್ಲೆಂಡ್ಸ್ ಎದುರಿನ ಫೈನಲ್‌ನಲ್ಲಿ‌ ಐದು ಗೋಲುಗಳನ್ನು ಗಳಿಸಿದ್ದರು. ಆ ಮೂಲಕ ಒಲಿಂಪಿಕ್ಸ್‌ ಫೈನಲ್‌ನಲ್ಲಿ ಅತಿ ಹೆಚ್ಚು ಗೋಲು ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದ್ದರು.

‌ಕೋಚ್‌ ಆಗಿಯೂ ಬಲ್ಬೀರ್‌ ಯಶಸ್ವಿಯಾಗಿದ್ದರು. ಅವರ ಮಾರ್ಗದರ್ಶನದಲ್ಲಿ ತರಬೇತುಗೊಂಡಿದ್ದ ಭಾರತ ತಂಡವು 1971ರ ವಿಶ್ವಕಪ್‌ನಲ್ಲಿ ಕಂಚಿನ ಪದಕ ಗೆದ್ದಿತ್ತು. 1975ರ ವಿಶ್ವಕಪ್‌ನಲ್ಲಿ ತಂಡವು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾಗ ಬಲ್ಬೀರ್‌, ಮ್ಯಾನೇಜರ್‌ ಆಗಿದ್ದರು. ಪದ್ಮಶ್ರೀ ಗೌರವಕ್ಕೆ ಪಾತ್ರರಾದ ಭಾರತದ ಮೊದಲ ಕ್ರೀಡಾಪಟು ಎಂಬ ಹಿರಿಮೆಯೂ ಅವರದ್ದಾಗಿದೆ. 1957ರಲ್ಲಿ ಈ ಪುರಸ್ಕಾರ ಒಲಿದಿತ್ತು.

ಮೇಜರ್‌ ಧ್ಯಾನ್‌ಚಂದ್‌‌ ಹಾಗೂ ಬಲ್ಬೀರ್‌ ಅವರು ಭಾರತದ ಹಾಕಿಯ ಎರಡು ಕಣ್ಣುಗಳಂತಿದ್ದರು. ಇಬ್ಬರೂ ಒಟ್ಟಿಗೆ ತಂಡದಲ್ಲಿ ಆಡುವುದನ್ನು ನೋಡುವ ಸೌಭಾಗ್ಯ ಹಾಕಿ ಪ್ರಿಯರಿಗೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT