ಸೋಮವಾರ, ಡಿಸೆಂಬರ್ 9, 2019
17 °C

ಬ್ಯಾಸ್ಕೆಟ್‌ಬಾಲ್: ಕುಡ್ಲದ ಹುಡುಗನ ಕಮಾಲ್‌

Published:
Updated:

ಕಡಲ ನಗರಿ ಮಂಗಳೂರಿನ ಯುವ ತಾರೆ ಸೌಕಿನ್‌ ಶೆಟ್ಟಿ. 23ರ ಹರೆಯದ ಈ ಆಟಗಾರ ಭಾರತದ ಬ್ಯಾಸ್ಕೆಟ್‌ಬಾಲ್‌ನಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ. 6.6 ಅಡಿ ಎತ್ತರದ ಈ ಆಜಾನುಬಾಹು, 3X3 (ತ್ರಿ ಆನ್‌ ತ್ರಿ) ರಾಷ್ಟ್ರೀಯ ರ‍್ಯಾಂಕಿಂಗ್‌ನಲ್ಲಿ ಅಗ್ರಪಟ್ಟ ಅಲಂಕರಿಸಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಈ ಸಾಧನೆ ಮಾಡಿದ ಮೊದಲ ಕನ್ನಡಿಗ ಎಂಬ ಹಿರಿಮೆಗೂ ಭಾಜನರಾಗಿದ್ದಾರೆ. ಶಿಸ್ತು, ಸಂಯಮ ಹಾಗೂ ಕಠಿಣ ಪರಿಶ್ರಮದಿಂದ ಸಾಧನೆಯ ಹಾದಿಯ ಒಂದೊಂದೆ ಮೆಟ್ಟಿಲು ಏರುತ್ತಿರುವ ಅವರು ‘ಪ್ರಜಾವಾಣಿ’ ಜೊತೆ ತಮ್ಮ ಕನಸುಗಳನ್ನು ಬಿಚ್ಚಿಟ್ಟಿದ್ದಾರೆ.  

* ರ‍್ಯಾಂಕಿಂಗ್‌ನಲ್ಲಿ ಅಗ್ರಪಟ್ಟಕ್ಕೇರಿದ ರಾಜ್ಯದ ಮೊದಲ ಆಟಗಾರ ನೀವು. ಈ ಸಾಧನೆಯ ಕುರಿತು ಹೇಳಿ?
ತುಂಬಾ ಖುಷಿಯಾಗುತ್ತಿದೆ. ಈ ಸಾಧನೆ ಹೆಮ್ಮೆಯಿಂದ ಬೀಗುವಂತೆ ಮಾಡಿದೆ. ಜೊತೆಗೆ ಜವಾಬ್ದಾರಿಯನ್ನೂ ಹೆಚ್ಚಿಸಿದೆ.

* ರ‍್ಯಾಂಕಿಂಗ್‌ ನಿರ್ಧರಿಸುವ ಬಗೆ ಹೇಗೆ?
ವರ್ಷಪೂರ್ತಿ ಟೂರ್ನಿಗಳು ನಡೆಯುತ್ತಿರುತ್ತವೆ. ಇವುಗಳಲ್ಲಿ ಆಟಗಾರರಿಂದ ಮೂಡಿಬರುವ ಸಾಮರ್ಥ್ಯದ ಆಧಾರದಲ್ಲಿ ಪಾಯಿಂಟ್ಸ್‌ ನೀಡಲಾಗುತ್ತದೆ. ಕ್ವಾರ್ಟರ್‌ ಫೈನಲ್‌, ಸೆಮಿಫೈನಲ್‌, ಫೈನಲ್‌ ಹೀಗೆ ಒಂದೊಂದು ಹಂತಕ್ಕೂ ಪಾಯಿಂಟ್ಸ್‌ ಹೆಚ್ಚಿಸಲಾಗುತ್ತದೆ.

ಚೆಂಡನ್ನು ಎಷ್ಟು ಸಲ ‘ಬ್ಯಾಸ್ಕೆಟ್‌’ ಮಾಡುತ್ತೀರಿ ಎಂಬುದೂ ಗಣನೆಗೆ ಬರುತ್ತದೆ. ಫೈನಲ್‌ನಲ್ಲಿ ಆಟಗಾರ ಪ್ರತಿನಿಧಿಸುವ ತಂಡ ಗೆದ್ದರೆ ಆತನ ಖಾತೆಗೆ ವಿಶೇಷ ಪಾಯಿಂಟ್ಸ್ ಸೇರ್ಪಡೆಯಾಗುತ್ತವೆ. ಈ ಅಂಕಗಳು 12 ತಿಂಗಳು ಮಾತ್ರ ಚಾಲ್ತಿಯಲ್ಲಿರುತ್ತವೆ. 

*ಬ್ಯಾಸ್ಕೆಟ್‌ಬಾಲ್‌ನಲ್ಲಿ ಆಸಕ್ತಿ ಚಿಗುರೊಡೆದಿದ್ದು ಹೇಗೆ?
ಎಳವೆಯಲ್ಲೇ ತುಂಬಾ ಎತ್ತರವಾಗಿದ್ದೆ. ಬ್ಯಾಸ್ಕೆಟ್‌ಬಾಲ್‌ ಆಟಕ್ಕೆ ಹೇಳಿ ಮಾಡಿಸಿದ ಕಾಯ ನನ್ನದಾಗಿತ್ತು. ಹೀಗಾಗಿ ಈ ಕ್ರೀಡೆಯಲ್ಲಿ ತೊಡಗಿ ಕೊಂಡೆ. ಶಾಲಾ ಹಂತದಲ್ಲಿ ನಡೆಯುತ್ತಿದ್ದ ವಿವಿಧ ಟೂರ್ನಿ ಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಟೂರ್ನಿಯೊಂದರ ವೇಳೆ ನನ್ನ ಆಟ ಕಂಡ ಆದಿತ್ಯ ಮಹಾಲೆ ಮತ್ತು ನವೀನ್‌ ಶೆಟ್ಟಿ ಅವರು ಮಂಗಳೂರು ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ಗೆ (ಎಂ.ಬಿ.ಸಿ) ಸೇರಿಸಿಕೊಂಡರು. ಕೋಚ್‌ ಆದಿತ್ಯ ಅವರು ಪ್ರತಿ ಹಂತದಲ್ಲೂ ತಪ್ಪುಗಳನ್ನು ತಿದ್ದಿದರು. ವಿಶೇಷ ಕೌಶಲಗಳನ್ನು ಹೇಳಿಕೊಟ್ಟರು. 

* ಸಾಧನೆಯ ಹಾದಿಯ ಕುರಿತು...
2013ರಲ್ಲಿ 16 ವರ್ಷದೊಳಗಿನವರ ರಾಷ್ಟ್ರೀಯ ಟೂರ್ನಿಯಲ್ಲಿ ಸ್ಪರ್ಧಿಸುವ ಅವಕಾಶ ಲಭಿಸಿತು. ನಾನಾಡಿದ ಚೊಚ್ಚಲ ರಾಷ್ಟ್ರೀಯ ಟೂರ್ನಿ ಅದಾಗಿತ್ತು. ನಂತರ ಸತತ ಎರಡು ವರ್ಷ 18 ವರ್ಷದೊಳಗಿನವರ ರಾಷ್ಟ್ರೀಯ ಟೂರ್ನಿಯಲ್ಲಿ ಭಾಗವಹಿಸಿದ್ದೆ. 2013ರಲ್ಲಿ ರಾಷ್ಟ್ರೀಯ ತರಬೇತಿ ಶಿಬಿರಕ್ಕೂ ಆಯ್ಕೆಯಾಗಿದ್ದೆ. 2014ರಲ್ಲಿ ಬೆಂಗಳೂರಿನ ಎಂ.ಎಸ್‌.ರಾಮಯ್ಯ ಕಾಲೇಜು ಸೇರಿದೆ. ಅದೇ ವರ್ಷ ಕೇರಳದಲ್ಲಿ ನಡೆದಿದ್ದ ರಾಷ್ಟ್ರೀಯ ಸೀನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡೆ. ಮರು ವರ್ಷವೂ ಸೀನಿಯರ್‌ ವಿಭಾಗದಲ್ಲಿ ರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿದ್ದೆ. ಅಂತರ ವಾರ್ಸಿಟಿ ಟೂರ್ನಿಗಳಲ್ಲಿ ರಾಮಯ್ಯ ತಂಡವನ್ನು ಮುನ್ನಡೆಸಿದೆ. 

*ಫಿಬಾ 3X3 ವರ್ಲ್ಡ್‌ ಟೂರ್‌ ಮಾಸ್ಟರ್‌ ಟೂರ್ನಿಯಲ್ಲಿ ಆಡಿದ್ದೀರಿ. ಅವಕಾಶ ಸಿಕ್ಕಿದ್ದು ಹೇಗೆ?
ಹೋದ ವರ್ಷ ನಡೆದ ಟೂರ್ನಿಯಲ್ಲಿ ಭಾರತದ ಎರಡು ಫ್ರಾಂಚೈಸ್‌ಗಳು ಪಾಲ್ಗೊಂಡಿದ್ದವು. ಕರ್ನಾಟಕದಿಂದ ನನ್ನೊಬ್ಬನಿಗೆ ಬೆಂಗಳೂರು ಮಚಾಸ್‌ ತಂಡವನ್ನು ಪ್ರತಿನಿಧಿಸುವ ಅವಕಾಶ ಲಭ್ಯವಾಗಿತ್ತು. ತ್ರಿ–ಬಿಎಲ್ ಲೀಗ್‌ನಲ್ಲಿ ಚೆನ್ನಾಗಿ ಆಡಿದ 15 ಮಂದಿಯನ್ನು ಬೆಂಗಳೂರು ಮಚಾಸ್‌ ಫ್ರಾಂಚೈಸ್‌ನ ತರಬೇತಿ ಶಿಬಿರಕ್ಕೆ ಆಯ್ಕೆ ಮಾಡಲಾಗಿತ್ತು. ಶಿಬಿರದಲ್ಲಿ ತೋರಿದ ಸಾಮರ್ಥ್ಯದ ಆಧಾರದಲ್ಲಿ ಅಂತಿಮ ನಾಲ್ಕು ಮಂದಿಗೆ ತಂಡದಲ್ಲಿ ಅವಕಾಶ ನೀಡಲಾಗಿತ್ತು. ಅದರಲ್ಲಿ ನಾನೂ ಇದ್ದೆ.

*ಪಿರಾನ್‌, ನೋವಿಸೈಡ್‌ ಅಂತಹ ವಿಶ್ವಶ್ರೇಷ್ಠ ತಂಡಗಳೂ 3X3 ವರ್ಲ್ಡ್‌ ಟೂರ್‌ ಮಾಸ್ಟರ್‌ ಟೂರ್ನಿಯಲ್ಲಿ ಭಾಗವಹಿಸಿದ್ದವು. ಆ ತಂಡಗಳ ವಿರುದ್ಧ ಆಡಿದ ಅನುಭವ ಹೇಗಿತ್ತು?
ಸ್ಪರ್ಧೆ ತುಂಬಾ ಕಠಿಣವಾಗಿತ್ತು. ಒಂದೊಂದು ಪಾಯಿಂಟ್‌ ಗಳಿಸಲೂ ಹರಸಾಹಸ ಪಡಬೇಕಾಗಿತ್ತು. ಡೆಲ್ಲಿ ತಂಡವೊಂದು ಹಿಂದೆ ಈ ಲೀಗ್‌ನಲ್ಲಿ ಆಡಿತ್ತು. ಆ ತಂಡದಲ್ಲಿದ್ದ ವಿದೇಶಿ ಆಟಗಾರರು ನಮಗೆ ಮಾರ್ಗದರ್ಶನ ನೀಡಿದ್ದರು. ಅವರೊಂದಿಗೆ ಹಲವು ಅಭ್ಯಾಸ ಪಂದ್ಯಗಳನ್ನೂ ಆಡಿದ್ದರಿಂದ ವಿಶ್ವಾಸ ಇಮ್ಮಡಿಸಿತ್ತು.

*5X5 (ಫೈವ್‌ ಆನ್‌ ಫೈ) ಮತ್ತು 3X3ಗೆ ಇರುವ ಭಿನ್ನತೆ ಏನು?
ಫೈವ್‌ ಆನ್‌ ಫೈ ಅನ್ನು ಪೂರ್ಣ ಅಂಕಣದಲ್ಲಿ ಆಡಲಾಗುತ್ತದೆ. ತ್ರಿ ಆನ್‌ ತ್ರಿ ಪಂದ್ಯವು ಸಾಮಾನ್ಯ ಅಂಗಳದ ಅರ್ಧ ಭಾಗದಲ್ಲಿ (ಹಾಫ್‌ ಕೋರ್ಟ್‌) ನಡೆಯುತ್ತದೆ. ತ್ರಿ ಆನ್‌ ತ್ರಿಯಲ್ಲಿ ಎದುರಾಳಿ ಆಟಗಾರನನ್ನು ತಳ್ಳುವ ಮತ್ತು ದೂಡುವ ಅವಕಾಶ ಇರುತ್ತದೆ. ಪಂದ್ಯ ತುಂಬಾ ವೇಗವಾಗಿ ಸಾಗುತ್ತದೆ. ವಿರಾಮವಿಲ್ಲದೆ ಸತತ ಹತ್ತು ನಿಮಿಷಗಳು ಆಡಬೇಕಾಗುತ್ತದೆ. ಇದು ಹೆಚ್ಚು ದೈಹಿಕ ಶ್ರಮ ಬೇಡುವ ಆಟ. 

*ಕುಟುಂಬದ ಬೆಂಬಲದ ಬಗ್ಗೆ ಹೇಳಿ
ಅಪ್ಪ, ಅಮ್ಮ ಮತ್ತು ಕುಟುಂಬದವರು ಮೊದಲಿನಿಂದಲೂ ಬೆನ್ನೆಲುಬಾಗಿ ನಿಂತಿದ್ದಾರೆ. ಯಾವ ತರಹದ ಒತ್ತಡವನ್ನೂ ಹೇರದೆ ಪ್ರೋತ್ಸಾಹಿಸುತ್ತಿದ್ದಾರೆ.

*ಮುಂದಿನ ಟೂರ್ನಿಗಳ ಬಗ್ಗೆ...
ಮುಂದಿನ ತಿಂಗಳು 3ಬಿಎಲ್‌ ಎರಡನೇ ಆವೃತ್ತಿ ಶುರುವಾಗುತ್ತದೆ. ಪಂಜಾಬ್‌ನಲ್ಲಿ ಟೂರ್ನಿ ನಡೆಯಲಿದೆ. ಇನ್ನೂ ಆಟಗಾರರ ಡ್ರಾಫ್ಟ್‌ ಮತ್ತು ತಂಡಗಳ ಹೆಸರು ಅಂತಿಮವಾಗಿಲ್ಲ. ಅದಕ್ಕೆ ಮಂಗಳೂರಿನಲ್ಲೇ ಸಿದ್ಧತೆ ಕೈಗೊಳ್ಳುತ್ತಿದ್ದೇನೆ.

*ಜೀವನದ ಕನಸು?
ಭಾರತ ತಂಡವನ್ನು ಪ್ರತಿನಿಧಿಸಬೇಕೆಂಬ ಕನಸಿದೆ. ಏಷ್ಯನ್‌, ಕಾಮನ್‌ವೆಲ್ತ್‌ ಮತ್ತು ಒಲಿಂಪಿಕ್ಸ್‌ನಲ್ಲಿ ಆಡಬೇಕೆಂಬ ಮಹದಾಸೆಯೂ ಇದೆ.

* ಭಾರತದಲ್ಲಿ ಬ್ಯಾಸ್ಕೆಟ್‌ಬಾಲ್‌ ಬೆಳವಣಿಗೆ ಹೇಗಿದೆ?
ಈಗ ಸಾಕಷ್ಟು ಅಭಿವೃದ್ಧಿಯಾಗಿದೆ. ನಾನು ಆಡಲು ಪ್ರಾರಂಭಿಸಿದಾಗ ಅಷ್ಟು ಪ್ರೋತ್ಸಾಹ ಸಿಗುತ್ತಿರಲಿಲ್ಲ. ಈಗ ವಿಪುಲ ಅವಕಾಶ ಇದೆ. ಅಮೆರಿಕದ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಸಂಸ್ಥೆ (ಎನ್‌ಬಿಎ) ನವದೆಹಲಿಯಲ್ಲಿ ಅಕಾಡೆಮಿ ಆರಂಭಿಸಿದೆ. ಇದರಲ್ಲಿ ಸಾಕಷ್ಟು ಮಂದಿಗೆ ತರಬೇತಿ ನೀಡಲಾಗುತ್ತಿದೆ. ಐಪಿಎಲ್‌ನಂತೆ ಬ್ಯಾಸ್ಕೆಟ್‌ಬಾಲ್‌ನಲ್ಲೂ ಲೀಗ್‌ಗಳು ಶುರುವಾಗಿವೆ. 

ಅಮೆರಿಕ, ಸರ್ಬಿಯಾದ ಆಟಗಾರರೂ ಈ ಲೀಗ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ. ಕರ್ನಾಟಕದ ಕೆ.ಗೋವಿಂದರಾಜ್‌ ಅವರು ಭಾರತ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ನ (ಬಿಎಫ್‌ಐ) ಅಧ್ಯಕ್ಷರಾದ ನಂತರ ಅಭಿವೃದ್ಧಿ ಇನ್ನಷ್ಟು ವೇಗ ಪಡೆದುಕೊಂಡಿದೆ. ಅವರು ಹಿರಿಯರು, ಕಿರಿಯರೆನ್ನದೆ ಎಲ್ಲರ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದಾರೆ. ಕರ್ನಾಟಕದಲ್ಲಿ ಹೆಚ್ಚೆಚ್ಚು ಅಂತರರಾಷ್ಟ್ರೀಯ ಟೂರ್ನಿಗಳು ಆಯೋಜನೆಯಾ ಗುತ್ತಿರುವುದರಲ್ಲಿ ಅವರ ಪಾತ್ರ ಮಹತ್ವದ್ದು. 


ಸೌಕಿನ್‌ ಶೆಟ್ಟಿ ಆಟದ ವೈಖರಿ –ಪ್ರಜಾವಾಣಿ ಚಿತ್ರ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು