ಬುಧವಾರ, ಮಾರ್ಚ್ 3, 2021
30 °C
ಬಿಎಫ್‌ಐ ಅಧ್ಯಕ್ಷ ಕೆ.ಗೋವಿಂದರಾಜ್‌ ಘೋಷಣೆ

ಒಂದು ಪಂದ್ಯ ಗೆದ್ದರೆ ₹ 10 ಲಕ್ಷ ಬಹುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮುಂಬರುವ ಚೊಚ್ಚಲ ಫಿಬಾ ಏಷ್ಯಾಕಪ್‌ ಕ್ವಾಲಿಫೈಯರ್ಸ್‌ (ವಿಂಡೊ–1) ಟೂರ್ನಿಯಲ್ಲಿ ಭಾರತ ತಂಡದವರು ಗೆದ್ದ ಪ್ರತಿ ಪಂದ್ಯಕ್ಕೂ ಭಾರತ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ (ಬಿಎಫ್‌ಐ) ವತಿಯಿಂದ ₹ 10 ಲಕ್ಷ ಬಹುಮಾನ ನೀಡಲಾಗುವುದು’ ಎಂದು ಬಿಎಫ್‌ಐ ಅಧ್ಯಕ್ಷ ಕೆ.ಗೋವಿಂದರಾಜ್‌ ತಿಳಿಸಿದರು.

ಕಂಠೀರವ ಕ್ರೀಡಾಂಗಣದ ಒಲಿಂಪಿಕ್‌ ಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಭಾರತ ತಂಡದ ಆಟಗಾರರಿಗೆ ಕಿಟ್‌ ವಿತರಿಸಿ ಮಾತನಾಡಿದ ಅವರು ‘ಕ್ವಾಲಿಫೈಯರ್‌ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ತಂಡಕ್ಕೆ ಹಿರಿಯ ಆಟಗಾರರಿಂದ ಮಾರ್ಗದರ್ಶನ ಕೊಡಿಸಲು ತೀರ್ಮಾನಿಸಿದ್ದೇವೆ. ಇದು ಹೊಸ ಪ್ರಯತ್ನ. ತಂಡದ ಶಕ್ತಿ ಹೆಚ್ಚಿಸುವುದು ಇದರ ಉದ್ದೇಶ. ಸತ್ನಮ್‌ ಸಿಂಗ್‌ ಭಮಾರ ಅವರು ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ ಸಿಲುಕಿದ್ದಾರೆ. ಹೀಗಾಗಿ ಅವರನ್ನು ತಂಡದಿಂದ ಕೈಬಿಡಲಾಗಿದೆ’ ಎಂದರು.

ಏಷ್ಯಾ ರ‍್ಯಾಂಕಿಂಗ್‌ನಲ್ಲಿ 13ನೇ ಸ್ಥಾನದಲ್ಲಿರುವ ಭಾರತ ತಂಡ ಮೂರು ಲೆಗ್‌ಗಳ (ವಿಂಡೊ– 1,2,3) ಟೂರ್ನಿಯಲ್ಲಿ ತವರಿನಲ್ಲಿ ಮತ್ತು ತವರಿನ ಹೊರಗೆ ಪಂದ್ಯಗಳನ್ನು ಆಡಲಿದೆ.

‘ಡಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ವಿಶೇಷ್‌ ಭೃಗುವಂಶಿ ನೇತೃತ್ವದ ಭಾರತ ತಂಡ ಇದೇ ತಿಂಗಳ 21ರಂದು ಖಲೀಫಾ ಸ್ಪೋರ್ಟ್ಸ್‌ ಸಿಟಿಯಲ್ಲಿ ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಬಹ್ರೇನ್‌ ವಿರುದ್ಧ ಸೆಣಸಲಿದೆ.

24 ರಂದು ಸಾಹೇಬ ಹಾಲ್‌ನಲ್ಲಿ ನಡೆಯುವ ಪೈಪೋಟಿಯಲ್ಲಿ ಭಾರತ ಮತ್ತು ಆತಿಥೇಯ ಇರಾಕ್‌ ಮುಖಾಮುಖಿಯಾಗಲಿವೆ. ಅರವಿಂದ ಆರ್ಮುಗಂ ಅವರು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಕರ್ನಾಟಕದ ಏಕೈಕ ಆಟಗಾರ ಎನಿಸಿದ್ದಾರೆ.

ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಭಾರತ ತಂಡ: ವಿಶೇಷ್‌ ಭೃಗುವಂಶಿ (ನಾಯಕ), ಮುಯೀನ್ ಬೆಕ್‌ ಹಫೀಜ್‌, ಜೋಗಿಂದರ್‌ ಸಿಂಗ್‌, ಪ್ರಸನ್ನ ವೆಂಕಟೇಶ್‌ ಶಿವಕುಮಾರ್‌, ಸಾಹೀಲ್‌, ಜಗದೀಪ್‌ ಸಿಂಗ್‌, ಪ್ರಶಾಂತ್‌ ಸಿಂಗ್‌ ರಾವತ್‌, ಅರವಿಂದ ಅಣ್ಣಾದೊರೈ, ಪ್ರಿನ್ಸಿಪಾಲ್‌ ಸಿಂಗ್‌, ಅಮೃತ್‌ಪಾಲ್‌ ಸಿಂಗ್‌, ಅಮಾನ್‌ ಸಂಧು ಮತ್ತು ಅರವಿಂದ ಆರ್ಮುಗಂ.

ಮುಖ್ಯ ಕೋಚ್‌: ವೆಸೆಲಿನ್‌ ಮಟಿಕ್‌, ಕೋಚ್‌ಗಳು: ಮೋಹಿತ್‌ ಭಂಡಾರಿ ಮತ್ತು ಪ್ರದೀಪ್‌ ತೋಮರ್‌.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು