ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರನೇ ಸುತ್ತಿಗೆ ಸೆರೆನಾ, ಮೆಡ್ವೆಡೆವ್

ಅಮೆರಿಕ ಓಪನ್‌ ಟೆನಿಸ್‌: ಮರಿಯಾ ಸಕರಿಗೆ ಸೋಲು
Last Updated 1 ಸೆಪ್ಟೆಂಬರ್ 2022, 15:32 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ವಿಶ್ವದ ಅಗ್ರ ರ‍್ಯಾಂಕ್‌ನ ಆಟಗಾರ ಡೇನಿಯಲ್ ಮೆಡ್ವೆಡೆವ್‌ ಮತ್ತು ಕೊನೆಯ ಗ್ರ್ಯಾನ್‌ಸ್ಲಾಮ್‌ ಆಡುತ್ತಿರುವ ಸೆರೆನಾ ವಿಲಿಯಮ್ಸ್‌ ಅವರು ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಮೂರನೇ ಸುತ್ತು ಪ್ರವೇಶಿಸಿದರು.

ಬುಧವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಮೆಡ್ವೆಡೆವ್‌ 6-2, 7-5, 6-3 ರಲ್ಲಿ ಫ್ರಾನ್ಸ್‌ನ ಆರ್ಥರ್‌ ರಿಂಡೆರ್‌ನೆಕ್‌ ಅವರನ್ನು ಮಣಿಸಿದರು.

ಮೆಡ್ವೆಡೆವ್ ಮುಂದಿನ ಸುತ್ತಿನಲ್ಲಿ ಚೀನಾದ ವು ಯಿಬಿಂಗ್‌ ಅವರನ್ನು ಎದುರಿಸುವರು. ಯಿಬಿಂಗ್‌ 6-7(3), 7-6(4), 4-6, 6-4, 6-4 ರಲ್ಲಿ ಪೋರ್ಚುಗಲ್‌ನ ನುನೊ ಬೊರ್ಗೆಸ್‌ ವಿರುದ್ಧ ಗೆದ್ದರು. ಅಮೆರಿಕ ಓಪನ್‌ನಲ್ಲಿ ಮೂರನೇ ಸುತ್ತು ಪ್ರವೇಶಿಸಿದ ಚೀನಾದ ಮೊದಲ ಆಟಗಾರ ಎಂಬ ಗೌರವ ಯಿಬಿಂಗ್‌ ತಮ್ಮದಾಗಿಸಿಕೊಂಡರು.

ಬ್ರಿಟನ್‌ನ ಆ್ಯಂಡಿ ಮರೆ ಅವರೂ ಮೂರನೇ ಸುತ್ತಿಗೆ ಮುನ್ನಡೆದರು. 35 ವರ್ಷದ ಮರೆ 5-7, 6-3, 6-1, 6-0 ರಲ್ಲಿ ಅಮೆರಿಕದ ಎಮಿಲಿಯೊ ನವಾ ಎದುರು ಗೆದ್ದರು. ಮುಂದಿನ ಪಂದ್ಯದಲ್ಲಿ ಅವರು ವಿಶ್ವದ 14ನೇ ರ‍್ಯಾಂಕ್‌ನ ಆಟಗಾರ ಮಟೆಯೊ ಬೆರೆಟಿನಿ ಜತೆ ಸೆಣಸುವರು. ಇಟಲಿಯ ಬೆರೆಟಿನಿ 2-6, 6-1, 7-6 (7/4), 7-6 (9/7) ರಲ್ಲಿ ಫ್ರಾನ್ಸ್‌ನ ಹ್ಯೂಗೊ ಗ್ರೇನಿಯೆರ್‌ ಅವರನ್ನು ಪರಾಭವಗೊಳಿಸಿದರು.

ಆಸ್ಟ್ರೇಲಿಯಾದ ನಿಕ್‌ ಕಿರ್ಗಿಯೊಸ್‌ 7-6 (7/3), 6-4, 4-6, 6-4 ರಲ್ಲಿ ಫ್ರಾನ್ಸ್‌ನ ಬೆಂಜಮಿನ್‌ ಬೊನ್ಝಿ ಎದುರು ಗೆದ್ದರು.

ನಡಾಲ್‌ ಶುಭಾರಂಭ: ಸ್ಪೇನ್‌ನ ರಫೆಲ್‌ ನಡಾಲ್‌ ಅವರು ಮೊದಲ ಸುತ್ತಿನಲ್ಲಿ 4-6, 6-2, 6-3, 6-3 ರಲ್ಲಿ ಜಪಾನ್‌ನ ರಿಂಕಿ ಹಿಜಿಕಟ ವಿರುದ್ಧ ಗೆದ್ದು ಶುಭಾರಂಭ ಮಾಡಿದರು.

ಸೆರೆನಾ ಜಯದ ಓಟ: 40 ವರ್ಷದ ಸೆರೆನಾ ವಿಲಿಯಮ್ಸ್‌ ಅವರು ಮಹಿಳೆಯರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ 7-6 (7/4), 2-6, 6-2 ರಲ್ಲಿ ಎರಡನೇ ಶ್ರೇಯಾಂಕದ ಆಟಗಾರ್ತಿ ಅನೆಟ್‌ ಕೊಂತಾವೆತ್‌ ಎದುರು ಅಚ್ಚರಿಯ ಗೆಲುವು ಪಡೆದರು. ಈ ಮೂಲಕ ಗ್ರ್ಯಾನ್‌ಸ್ಲಾಮ್‌ ಟೂರ್ನಿಯಲ್ಲಿ ತಮ್ಮ ಇನ್ನೊಂದು ಪಂದ್ಯವನ್ನು ನೋಡುವ ಅವಕಾಶವನ್ನು ಅಭಿಮಾನಿಗಳಿಗೆ ನೀಡಿದರು.

ಮೊದಲ ಸೆಟ್‌ ಅನ್ನು ಟೈಬ್ರೇಕರ್‌ನಲ್ಲಿ ಪ್ರಯಾಸದಿಂದ ಗೆದ್ದ ಸೆರೆನಾ, ಎರಡನೇ ಸೆಟ್‌ಅನ್ನು ಸುಲಭವಾಗಿ ಎದುರಾಳಿಗೆ ಒಪ್ಪಿಸಿದರು. ಆದರೆ ಮೂರನೇ ಸೆಟ್‌ನಲ್ಲಿ ಅತ್ಯುತ್ತಮ ಆಟವಾಡಿ ತಮ್ಮ ಸಾಮರ್ಥ್ಯ ಇನ್ನೂ ಕುಗ್ಗಿಲ್ಲ ಎಂಬುದನ್ನು ತೋರಿಸಿಕೊಟ್ಟರು.

ಚೀನಾದ ವಾಂಗ್‌ ಕ್ಸಿಯು ಅವರು 3-6, 7-5, 7-5 ರಲ್ಲಿ ಗ್ರೀಸ್‌ನ ಮರಿಯಾ ಸಕರಿ ವಿರುದ್ಧ ಗೆದ್ದು ಅಚ್ಚರಿ ಮೂಡಿಸಿದರು. ಟ್ಯುನೀಷಿಯಾದ ಆನ್ಸ್‌ ಜಬೇರ್‌ 7–5, 6–2 ರಲ್ಲಿ ಅಮೆರಿಕದ ಎಲಿಜಬೆತ್‌ ಮ್ಯಾಂಡ್ಲಿಕ್‌ ಅವರನ್ನು ಮಣಿಸಿ ಮೂರನೇ ಸುತ್ತು ಪ್ರವೇಶಿಸಿದರು.

ಎರಡನೇ ಸುತ್ತಿನ ಇತರ ಪಂದ್ಯಗಳಲ್ಲಿ 12ನೇ ಶ್ರೇಯಾಂಕದ ಆಟಗಾರ್ತಿ ಅಮೆರಿಕದ ಕೊಕೊ ಗಾಫ್‌ 6-2, 7-6 (7/4) ರಲ್ಲಿ ರೊಮೇನಿಯದ ಎಲೆನಾ ಗ್ಯಾಬ್ರುಯೆಲಾ ರೂಸ್‌ ವಿರುದ್ಧ, ಮ್ಯಾಡಿಸನ್‌ ಕೀಸ್‌ 6-4, 5-7, 7-6 (10/6) ರಲ್ಲಿ ಇಟಲಿಯ ಕ್ಯಾಮಿಲಾ ಜಾರ್ಜಿ ಎದುರು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT