ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ವಿಶ್ವಕಪ್‌: ಜರ್ಮನಿಗೆ ಆಘಾತ ನೀಡಿದ ಬೆಲ್ಜಿಯಂ

ಮೊದಲ ಬಾರಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ‘ರೆಡ್‌ ಲಯನ್ಸ್‌’
Last Updated 13 ಡಿಸೆಂಬರ್ 2018, 14:25 IST
ಅಕ್ಷರ ಗಾತ್ರ

ಭುವನೇಶ್ವರ: ಬೆಲ್ಜಿಯಂ ತಂಡ ಗುರುವಾರ ಕಳಿಂಗ ಕ್ರೀಡಾಂಗಣದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿತು. ಥಾಮಸ್‌ ಬ್ರೀಲ್ಸ್‌ ಬಳಗ ಹಾಕಿ ವಿಶ್ವಕಪ್‌ನಲ್ಲಿ ಮೊದಲ ಸಲ ಸೆಮಿಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿತು.

ಕ್ವಾರ್ಟರ್‌ ಫೈನಲ್‌ನಲ್ಲಿ ಈ ತಂಡ 2–1 ಗೋಲುಗಳಿಂದ ಎರಡು ಬಾರಿಯ ಚಾಂಪಿಯನ್‌ ಜರ್ಮನಿಗೆ ಆಘಾತ ನೀಡಿತು.

ಆರನೇ ಬಾರಿ ವಿಶ್ವಕಪ್‌ನಲ್ಲಿ ಆಡುತ್ತಿರುವ ಬೆಲ್ಜಿಯಂ, 2014ರ ಟೂರ್ನಿಯಲ್ಲಿ ಐದನೇ ಸ್ಥಾನ ಗಳಿಸಿತ್ತು. ಇದು ತಂಡದ ಉತ್ತಮ ಸಾಧನೆ ಎನಿಸಿತ್ತು. ಜರ್ಮನಿ ತಂಡ 2002 ಮತ್ತು 2006ರಲ್ಲಿ ಪ್ರಶಸ್ತಿ ಜಯಿಸಿತ್ತು.

ಶನಿವಾರ ನಡೆಯುವ ನಾಲ್ಕರ ಘಟ್ಟದ ಪೈಪೋಟಿಯಲ್ಲಿ ಬೆಲ್ಹಿಯಂ ತಂಡ ಇಂಗ್ಲೆಂಡ್‌ ಸವಾಲು ಎದುರಿಸಲಿದೆ.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಬೆಲ್ಜಿಯಂ, ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಏಳನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಈ ತಂಡ ವಿಫಲವಾಯಿತು. 14ನೇ ನಿಮಿಷದಲ್ಲಿ ಜರ್ಮನಿ ಖಾತೆ ತೆರೆಯಿತು. ಡಿಯೇಟರ್‌ ಲಿನ್ನೆಕೊಗೆಲ್‌ ಫೀಲ್ಡ್‌ ಗೋಲು ಗಳಿಸಿ ಮಿಂಚಿದರು. ಇದರ ಬೆನ್ನಲ್ಲೇ ಬ್ರೀಲ್ಸ್‌ ಬಳಗಕ್ಕೆ ಸತತ ಮೂರು ಪೆನಾಲ್ಟಿ ಕಾರ್ನರ್‌ ಅವಕಾಶಗಳು ಲಭ್ಯವಾಗಿದ್ದವು. ಇವುಗಳನ್ನು ಗೋಲುಗಳನ್ನಾಗಿ ಪರಿವರ್ತಿಸಲು ‘ರೆಡ್‌ ಲಯನ್ಸ್‌’ ವಿಫಲವಾಯಿತು.

ಎರಡನೇ ಕ್ವಾರ್ಟರ್‌ನಲ್ಲಿ ಬೆಲ್ಜಿಯಂ ಇನ್ನಷ್ಟು ಚುರುಕಾಗಿ ಆಡಿತು. 18ನೇ ನಿಮಿಷದಲ್ಲಿ ಈ ತಂಡಕ್ಕೆ ಮತ್ತೊಂದು ಪೆನಾಲ್ಟಿ ಕಾರ್ನರ್‌ ಲಭಿಸಿತು. ಈ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸಿದ ಅಲೆಕ್ಸಾಂಡರ್‌ ಹೆನ್ರಿಕ್ಸ್‌ 1–1 ಸಮಬಲಕ್ಕೆ ಕಾರಣರಾದರು. ಅವರು ‘ಗ್ರೌಂಡ್‌ ಫ್ಲಿಕ್‌’ ಮೂಲಕ ಚೆಂಡನ್ನು ಗುರಿ ಮುಟ್ಟಿಸಿದ ರೀತಿ ಮನ ಸೆಳೆಯುವಂತಿತ್ತು.

ನಂತರ ಬೆಲ್ಜಿಯಂ ತಂಡಕ್ಕೆ ಮತ್ತೆರಡು ‍‍‍ಪೆನಾಲ್ಟಿ ಕಾರ್ನರ್‌ ಸಿಕ್ಕಿದ್ದವು. ಈ ಅವಕಾಶಗಳನ್ನು ತಂಡ ಕೈಚೆಲ್ಲಿತು.

ದ್ವಿತೀಯಾರ್ಧದ ಶುರುವಿನಲ್ಲಿ ಜರ್ಮನಿಗೆ ಮುನ್ನಡೆ ಗೋಲು ಗಳಿಸುವ ಅವಕಾಶ ಸಿಕ್ಕಿತ್ತು. ಟಿಮ್‌ ಹರ್ಜ್‌ಬುಷ್‌ ಅವರ ಪ್ರಯತ್ನವನ್ನು ಬೆಲ್ಜಿಯಂ ಗೋಲ್‌ಕೀಪರ್‌ ವಿನ್ಸೆಂಟ್‌ ವ್ಯಾನಷ್‌ ವಿಫಲಗೊಳಿಸಿದರು. ಇದರ ಬೆನ್ನಲ್ಲೇ ಬೆಲ್ಜಿಯಂ ತಂಡಕ್ಕೆ ಸತತ ಎರಡು ಪೆನಾಲ್ಟಿ ಕಾರ್ನರ್‌ ಲಭಿಸಿದ್ದವು. ಅಲೆಕ್ಸಾಂಡರ್‌ ಹೆನ್ರಿಕ್ಸ್‌ ಈ ಅವಕಾಶಗಳನ್ನು ಕೈಚೆಲ್ಲಿದರು.

ಅಂತಿಮ ‘ಹೂಟರ್‌’ನಲ್ಲಿ ಬೆಲ್ಜಿಯಂ ತಂಡಕ್ಕೆ ಯಶಸ್ಸು ಸಿಕ್ಕಿತು. 50ನೇ ನಿಮಿಷದಲ್ಲಿ ಟಾಮ್‌ ಬೂನ್‌ ಗೋಲು ಹೊಡೆದು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT