ಬುಧವಾರ, ನವೆಂಬರ್ 13, 2019
24 °C
ಬೆಂಗಾಲ್‌ ವಾರಿಯರ್ಸ್‌ ತಂಡದ ಯಶಸ್ಸಿನ ರೂವಾರಿ ನೋವಿನ ನುಡಿ

ಬುಲ್ಸ್‌ ಫ್ರಾಂಚೈಸ್‌ನವರು ದ್ರೋಹ ಮಾಡಿದರು: ಬಿ.ಸಿ.ರಮೇಶ್‌

Published:
Updated:
Prajavani

ಬೆಂಗಳೂರು: ಕಬಡ್ಡಿಯಲ್ಲಿ ಆಟಗಾರನಾಗಿ ಅಪಾರ ಯಶಸ್ಸು ಗಳಿಸಿದ್ದ ಕರ್ನಾಟಕದ ಬಿ.ಸಿ.ರಮೇಶ್‌, ತಾವು ಯಶಸ್ವಿ ಕೋಚ್‌ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಪ್ರೊ ಕಬಡ್ಡಿ ಲೀಗ್‌ ಆರನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್‌ ತಂಡವು ಚೊಚ್ಚಲ ಪ್ರಶಸ್ತಿ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ರಮೇಶ್‌, ಈ ಬಾರಿ ಬೆಂಗಾಲ್‌ ವಾರಿಯರ್ಸ್‌ ತಂಡದ ಪ್ರಶಸ್ತಿಯ ಕೊರಗನ್ನು ದೂರ ಮಾಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ತರಬೇತುಗೊಂಡಿದ್ದ ಈ ತಂಡವು ಏಳನೇ ಆವೃತ್ತಿಯಲ್ಲಿ ಚಾಂಪಿಯನ್‌ ಆಗಿದೆ.

ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿರುವ ರಮೇಶ್‌ ಈ ಯಶಸ್ಸಿನ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

* ಸತತ ಎರಡು ಆವೃತ್ತಿಗಳಲ್ಲಿ ಎರಡು ತಂಡಗಳು ಪ್ರಶಸ್ತಿ ಜಯಿಸುವಲ್ಲಿ ನಿಮ್ಮ ಪಾತ್ರ ಮಹತ್ವದ್ದು. ಈ ಯಶಸ್ಸಿನ ಕುರಿತು ಹೇಳಿ?

ಇದು ವಿಶಿಷ್ಠ ಸಾಧನೆ. ಬೆಂಗಾಲ್‌ ವಾರಿಯರ್ಸ್‌ ತಂಡದವರು ಆರು ವರ್ಷಗಳಿಂದ ಟ್ರೋಫಿ ಗೆಲ್ಲಲು ಪ್ರಯತ್ನಿಸುತ್ತಿದ್ದರು. ತಂಡದ ಕನಸನ್ನು ಈ ಬಾರಿ ನನಸು ಮಾಡಲೇಬೇಕೆಂದು ಪಣ ತೊಟ್ಟಿದ್ದೆ. ಅಂದುಕೊಂಡಿದ್ದನ್ನು ಸಾಧಿಸಿದ್ದೇನೆ. ಹೀಗಾಗಿ ಅತೀವ ಖುಷಿಯಾಗಿದೆ. ಜೊತೆಗೆ ಹೆಮ್ಮೆಯ ಭಾವ ಮೂಡಿದೆ. 

* ಈ ಸಲ ಬೆಂಗಾಲ್‌ ತಂಡ ಪ್ರಶಸ್ತಿ ಗೆಲ್ಲುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಆ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದು ಹೇಗೆ?

ಲೀಗ್‌ ಆರಂಭಕ್ಕೆ ಎರಡು ತಿಂಗಳು ಮುಂಚೆಯೇ ರೂಪುರೇಷೆಗಳನ್ನು ಸಿದ್ಧಪಡಿಸಿದ್ದೆ. ತಂಡದಲ್ಲಿ ಎಷ್ಟು ಮಂದಿ ರೇಡರ್‌ಗಳು ಮತ್ತು ಡಿಫೆಂಡರ್‌ಗಳು ಇರಬೇಕೆಂಬುದನ್ನು ಮೊದಲೇ ತೀರ್ಮಾನಿಸಿದ್ದೆ. ಅದರಂತೆಯೇ ಹರಾಜಿನಲ್ಲಿ ಆಟಗಾರರನ್ನು ಸೆಳೆದುಕೊಂಡೆ. ಬಳಿಕ ಎರಡು ತಿಂಗಳ ವಿಶೇಷ ಶಿಬಿರ ಏರ್ಪಡಿಸಿ ಆಟಗಾರರಿಗೆ ವಿನೂತನ ಕೌಶಲಗಳನ್ನು ಹೇಳಿಕೊಟ್ಟಿದ್ದೆ. ಫಿಟ್‌ನೆಸ್‌ ಬಗ್ಗೆಯೂ ಅರಿವು ಮೂಡಿಸಿದ್ದೆ.

* ಪ್ರಮುಖ ರೇಡರ್‌ ಮಣಿಂದರ್‌ ಸಿಂಗ್‌ ಗಾಯದ ಕಾರಣ ಫೈನಲ್‌ನಲ್ಲಿ ಕಣಕ್ಕಿಳಿದಿರಲಿಲ್ಲ. ಅವರ ಅನುಪಸ್ಥಿತಿಯಲ್ಲಿ ದಬಂಗ್ ಡೆಲ್ಲಿ ತಂಡವನ್ನು ಮಣಿಸುವ ವಿಶ್ವಾಸ ಇತ್ತೇ?

ಖಂಡಿತವಾಗಿಯೂ ಇತ್ತು. ತಂಡವು ಕೇವಲ ಒಬ್ಬ ಆಟಗಾರನ ಮೇಲೆ ಅವಲಂಬಿತವಾಗದಂತೆ ನೋಡಿಕೊಂಡಿದ್ದೆ. ಡೆಲ್ಲಿ ಎದುರಿನ ಮೊದಲ ಲೀಗ್‌ ಪಂದ್ಯದಲ್ಲಿ ನಾವು ಡ್ರಾ ಮಾಡಿಕೊಂಡಿದ್ದೆವು. ಆ ಹಣಾಹಣಿಯಲ್ಲಿ ಮಣಿಂದರ್‌ ವೈಫಲ್ಯ ಕಂಡಿದ್ದರು. ಅವರ ಅನುಪಸ್ಥಿತಿಯಲ್ಲೂ ಕೆಚ್ಚೆದೆಯಿಂದ ಹೋರಾಡಿ ತಂಡಕ್ಕೆ ಗೆಲುವು ತಂದುಕೊಡಬಲ್ಲ ಸಮರ್ಥರು ತಂಡದಲ್ಲಿದ್ದರು. ಸುಕೇಶ್‌ ಹೆಗ್ಡೆ, ಕೆ.ಪ್ರಪಂಜನ್‌ ಮತ್ತು ಮೊಹಮ್ಮದ್‌ ನಬಿಬಕ್ಷ್‌ ರೇಡಿಂಗ್‌ ವಿಭಾಗಕ್ಕೆ ಬಲ ತುಂಬಿದರು.

* ಡೆಲ್ಲಿಯನ್ನು ಮಣಿಸಲು ಏನಾದರೂ ವಿಶೇಷ ಯೋಜನೆ ಹೆಣೆದಿದ್ದಿರೇ?

ಹಾಗೇನು ಇಲ್ಲ. ಪಂದ್ಯಕ್ಕೂ ಮುನ್ನ ಆಟಗಾರರ ಜೊತೆ ಮಾತನಾಡಿದ್ದೆ. ಆಟದಲ್ಲಿ ಸೋಲು ಗೆಲುವು ಇದ್ದಿದ್ದೆ. ಎಂತಹುದೇ ಪರಿಸ್ಥಿತಿಯಲ್ಲೂ ಎದೆಗುಂದದೆ ಛಲದಿಂದ ಹೋರಾಡಿ ಎಂದು ಕಿವಿಮಾತು ಹೇಳಿದ್ದೆ.

* ಬೆಂಗಾಲ್‌ ಪ್ರಶಸ್ತಿ ಗೆಲ್ಲುವಲ್ಲಿ ಕನ್ನಡಿಗರಾದ ಸುಕೇಶ್‌, ಕೆ.ಪ್ರಪಂಜನ್‌ ಮತ್ತು ಜೀವಕುಮಾರ್‌ ಅವರ ಪಾತ್ರ ನಿರ್ಣಾಯಕವಾಗಿತ್ತು. ಅವರ ಬಗ್ಗೆ ಏನು ಹೇಳುತ್ತೀರಿ?

ಮೂವರೂ ಪ್ರತಿಭಾನ್ವಿತರು. ಎಲ್ಲಾ ಪಂದ್ಯಗಳಲ್ಲೂ ಯೋಜನೆಗೆ ಅನುಗುಣವಾಗಿ ಆಡಿದರು. ನಾನು ಇಟ್ಟಿದ್ದ ಭರವಸೆಯನ್ನು ಉಳಿಸಿಕೊಂಡರು.

* ಬೆಂಗಳೂರು ಬುಲ್ಸ್‌ ತಂಡದಿಂದ ಹೊರ ಹೋಗಿದ್ದೇಕೆ?

ಬುಲ್ಸ್‌ ಫ್ರಾಂಚೈಸ್‌ನ ಮಾಲೀಕರು ನಂಬಿಕೆ ದ್ರೋಹ ಮಾಡಿದರು.

ಹಿಂದಿನ ಆವೃತ್ತಿಯಲ್ಲಿ ನನ್ನನ್ನು ಮುಖ್ಯ ಕೋಚ್‌ ಆಗಿ ನೇಮಿಸಿದಾಗ, ತಂಡ ಚಾಂಪಿಯನ್‌ ಆದರೆ ಬೋನಸ್‌ ನೀಡುವುದಾಗಿ ಭರವಸೆ ನೀಡಿದ್ದರು. ತಂಡ ಪ್ರಶಸ್ತಿ ಗೆದ್ದ ಬಳಿಕ ಕೊಟ್ಟ ಮಾತನ್ನು ಮರೆತರು.

ಒಪ್ಪಂದದಂತೆ ಒಟ್ಟು ₹27 ಲಕ್ಷ ಕೊಡಬೇಕಿತ್ತು. ಈ ಪೈಕಿ ₹14 ಲಕ್ಷ ಕೈಸೇರಿದೆ. ಉಳಿದ ಮೊತ್ತ ಕೊಡದೆ ಮೋಸ ಮಾಡಿದರು. ಇದರಿಂದ ಬೇಸರವಾಗಿ ತಂಡದಿಂದ ಹೊರಬಂದೆ.

* ಮುಂದಿನ ಗುರಿ?

ಕುಟುಂಬದವರೊಂದಿಗೆ ಹೆಚ್ಚು ಕಾಲ ಕಳೆಯಬೇಕೆಂದುಕೊಂಡಿದ್ದೇನೆ. ಅಪ್ಪ ಅಮ್ಮನಿಗೆ ವಯಸ್ಸಾಗಿದೆ. ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಹೀಗಾಗಿ ಎರಡು ವರ್ಷ ಕೋಚಿಂಗ್‌ನಿಂದ ದೂರ ಉಳಿಯಲು ತೀರ್ಮಾನಿಸಿದ್ದೇನೆ.

ಪ್ರತಿಕ್ರಿಯಿಸಿ (+)