ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೂಕರ್‌ಗೆ ಊರುಗೋಲು ಬೆಂಗಳೂರು

Last Updated 28 ಏಪ್ರಿಲ್ 2019, 19:47 IST
ಅಕ್ಷರ ಗಾತ್ರ

ಏಷ್ಯನ್ ಟೆನ್ ರೆಡ್ಸ್ ಸ್ನೂಕರ್ ಟೂರ್‌ನ ಮೂರನೇ ಲೆಗ್ ಆಯೋಜಿಸಲು ಭಾರತಕ್ಕೆ ಅವಕಾಶ ಲಭಿಸಿದಾಗ ಭಾರತ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಫೆಡರೇಷನ್ ಒಂದು ಕ್ಷಣವೂ ಯೋಚಿಸದೆ ಇದನ್ನು ಸಂಘಟಿಸುವ ಜವಾಬ್ದಾರಿಯನ್ನು ಕರ್ನಾಟಕ ಬಿಲಿಯರ್ಡ್ಸ್ ಸಂಸ್ಥೆಗೆ ವಹಿಸಿತು.

ಬಿಲಿಯರ್ಡ್ಸ್ ಮತ್ತು ಸ್ನೂಕರ್‌ಗೆ ಸಂಬಂಧಿಸಿ ಮಹತ್ವದ ಟೂರ್ನಿಗಳನ್ನು ಆಯೋಜಿಸಲು ಭಾರತಕ್ಕೆ ಅವಕಾಶ ಲಭಿಸಿದರೆ ಅದು ಬೆಂಗಳೂರಿಗೆ ಲಭಿಸಿದ ಅವಕಾಶವೆಂದೇ ಅರ್ಥ. ಇಲ್ಲಿನಷ್ಟು ಉತ್ತಮ ಸೌಲಭ್ಯಗಳು ಭಾರತದ ಬೇರೆಲ್ಲೂ ಇಲ್ಲದಿರುವುದೇ ಇದಕ್ಕೆ ಕಾರಣ.

21 ಬಾರಿ ವಿಶ್ವ ಚಾಂಪಿಯನ್ ಆಗಿರುವ ಪಂಕಜ್ ಅಡ್ವಾಣಿ ಎಂಬ ಮಹಾ ಪ್ರತಿಭೆಯನ್ನು ಬೆಳೆಸಿದ ಬೆಂಗಳೂರು 1949ರಿಂದಲೇ ಬಿಲಿಯರ್ಡ್ಸ್ ಮತ್ತು ಸ್ನೂಕರ್ ತರಬೇತಿ, ಸ್ಪರ್ಧೆ, ಚಾಂಪಿಯನ್‌ಷಿಪ್‌ಗಳನ್ನು ಆಯೋಜಿಸುತ್ತಿದೆ. ಇದರ ಫಲವಾಗಿ ಅಂತರರಾಷ್ಟ್ರೀಯ ಮತ್ತು ರಾಷ್ಟ್ರ ಮಟ್ಟದಲ್ಲಿ ಇಲ್ಲಿನ ಅನೇಕ ಪ್ರತಿಭೆಗಳು ಬೆಳಗಿವೆ.

ಸಂಸ್ಥೆ ಆರಂಭಗೊಳ್ಳುವ ಮೂರು ವರ್ಷಗಳ ಮೊದಲೇ ಎ.ಸೆಲ್ವರಾಜ್ ಅವರು ರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಹೆಸರಿನ ಛಾಪು ಒತ್ತಿದ್ದರು. ಆಗ ನಡೆದಿದ್ದ ರಾಷ್ಟ್ರೀಯ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಅವರು ಪ್ರಶಸ್ತಿ ಗೆದ್ದಿದ್ದರು. ಬೆಂಗಳೂರಿನಲ್ಲಿ ರಾಜ್ಯ ಸಂಸ್ಥೆ ಆರಂಭಗೊಂಡ ವರ್ಷದಲ್ಲಿ ರಾಷ್ಟ್ರೀಯ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಚಾಂಪಿಯನ್ ಆಗಿಯೂ ಅವರು ಹೆಸರು ಮಾಡಿದ್ದರು. ಆ ನಂತರ ಅರವಿಂದ ಸವೂರ್, ಒಮರ್ ರಹಮಾನ್, ಎಂ.ಜಿ. ಜಯರಾಮ್ ಮುಂತಾದವರು ಸತತವಾಗಿ ಸಾಧನೆ ಮಾಡಿದರು.

ಮಹಿಳಾ ವಿಭಾಗದಲ್ಲೂ ಬೆಂಗಳೂರಿಗರ ಸಾಧನೆ ಕಮ್ಮಿ ಇಲ್ಲ. ಎಂ.ಚಿತ್ರಾ ಮತ್ತು ಉಮಾದೇವಿ ಮಹತ್ವದ ಚಾಂಪಿಯನ್‌ಷಿಪ್‌ಗಳಲ್ಲಿ ಸಾಧನೆ ಮಾಡುತ್ತಿದ್ದಂತೆ ಜೂನಿಯರ್ ವಿಭಾಗದಲ್ಲಿ ವರ್ಷಾ ಸಂಜೀವ್ ಅವರಂಥ ಆಟಗಾರ್ತಿಯರು ಭರವಸೆಯ ಅಲೆ ಎಬ್ಬಿಸಿದರು.

ಪುರುಷರ ವಿಭಾಗದಲ್ಲಿ ಪಂಕಜ್ ಅಡ್ವಾಣಿ ಅವರ ‘ನವೋದಯ’ ಕಾಲದಲ್ಲಿ ಬಿ.ಭಾಸ್ಕರ್ ಅವರಂಥ ಆಟಗಾರರು ರಾಷ್ಟ್ರೀಯ-ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಲೇ ಸಾಗುತ್ತಿದ್ದಾರೆ. ಅದೃಷ್ಟದಾಟದಲ್ಲಿ ಕೆಲವು ಟೂರ್ನಿಗಳಲ್ಲಿ ಸ್ವಲ್ಪದರಲ್ಲೇ ಅವರಿಗೆ ಪ್ರಶಸ್ತಿಗಳು ಕೈತಪ್ಪಿವೆ.

ಅರವಿಂದ ಸವೂರ್ ಅವರಿಂದ ಅಡ್ವಾಣಿ ವರೆಗೆ…

ಪಂಕಜ್ ಅಡ್ವಾಣಿ ಎಂಬ ಅಪ್ಪಟ ’ಚಿನ್ನ’ದ ಮೂಲಕ ಬೆಂಗಳೂರು ಶೋಭಿಸಲು ಮೂಲ ಕಾರಣ ಅರವಿಂದ ಸವೂರ್. 1972 ಮತ್ತು 1980ರಲ್ಲಿ ವಿಶ್ವ ಸ್ನೂಕರ್ ಚಾಂಪಿಯನ್‌ಷಿಪ್‌ನ ಸೆಮಿಫೈನಲ್ ವರೆಗೆ ತಲುಪಿದ್ದ ಅವರು ಎರಡು ಬಾರಿ ರಾಷ್ಟ್ರೀಯ ಬಿಲಿಯರ್ಡ್ಸ್ ಚಾಂಪಿಯನ್ ಆಗಿಯೂ ಮೆರೆದಿದ್ದಾರೆ. ಅಡ್ವಾಣಿ ಅವರ ಪ್ರತಿಭೆಯನ್ನು ಶೋಧಿಸಿದ ಖ್ಯಾತಿ ಅವರದು. ರಾಜ್ಯ ಸಂಸ್ಥೆಯ ಚುಕ್ಕಾಣಿ ಹಿಡಿದ ಅವರು ಆಡಳಿತಗಾರನಾಗಿಯೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.

‘ಜಗತ್ತಿನಲ್ಲೇ ಪಂಕಜ್ ಅಡ್ವಾಣಿ ಅವರಂಥ ಇನ್ನೊಬ್ಬ ಆಟಗಾರ ಬರಬೇಕಾದರೆ 300 ವರ್ಷ ಕಾಯಬೇಕು. 21 ವಿಶ್ವ ಚಾಂಪಿಯನ್‌ಷಿಪ್‌ಗಳು, ಒಂಬತ್ತು ಏಷ್ಯನ್ ಪ್ರಶಸ್ತಿಗಳು, ಎರಡು ಏಷ್ಯನ್ ಚಿನ್ನದ ಪದಕಗಳು, 34 ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳನ್ನು ಗೆಲ್ಲಲು ಬೇರೆ ಯಾರಿಗಾದರೂ ಸಾಧ್ಯವಿದೆಯೇ’ ಎಂದು ಕೇಳುವ ಅರವಿಂದ ಅವರ ಮಾತಿನಲ್ಲೂ ಮರ್ಮವಿದೆ. ಇಂಥ ಸಾಧನೆ ಮಾಡಲು ಸದ್ಯೋಭವಿಷ್ಯದಲ್ಲಿ ಯಾರಿಗಾದರೂ ಸಾಧ್ಯವಿದೆಯೇ…?

ಹೆಸರು ಗಳಿಸುವವರನ್ನು ಸಜ್ಜುಗೊಳಿಸಬೇಕಿದೆ

ರಾಜ್ಯದಲ್ಲಿ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಸಾಕಷ್ಟು ಪ್ರಗತಿ ಸಾಧಿಸಿದೆ. ಆದರೂ ಕೆಲವು ವಿಷಯಗಳಲ್ಲಿ ಇನ್ನೂ ಅಭಿವೃದ್ಧಿ ಸಾಧಿಸಬೇಕಾಗಿದೆ. ರಾಜ್ಯ ಬಿಲಿಯರ್ಡ್ಸ್ ಸಂಸ್ಥೆಯಲ್ಲಿ ಕ್ಲಬ್ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗುತ್ತಿದೆ. ಆಟದ ಬಗ್ಗೆಯೂ ಗಮನ ನೀಡಲು ಮುಂದಾಗಬೇಕಿದೆ. ರಾಜ್ಯದಾದ್ಯಂತ 190ರಷ್ಟು ಕ್ಲಬ್‌ಗಳು ಸಂಸ್ಥೆಯ ಆಧೀನದಲ್ಲಿದ್ದು ಅಲ್ಲಿ ಅಭ್ಯಾಸ ನಡೆಸಲು ಮತ್ತು ಕ್ರೀಡೆಯನ್ನು ಬೆಳೆಸಲು ನೆರವು ನೀಡಲಾಗುತ್ತಿದೆ. ಸೌಲಭ್ಯಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಅಭ್ಯಾಸ ಮಾಡಲು ಬಯಸುವವರಿಗೂ ನೆರವು ಕೂಡ ಒದಗಿಸಲಾಗುತ್ತಿದೆ.

ಸಂಸ್ಥೆಯಲ್ಲಿ ಒಟ್ಟು 12 ಟೇಬಲ್‌ಗಳಿದ್ದು ಇನ್ನೂ ಒಂದು ಟೇಬಲ್ ಹಾಕಲು ಜಾಗ ಇದೆ. ವಿಶ್ವ ಚಾಂಪಿಯನ್‌ಷಿಪ್‌ನಂಥ ಮಹತ್ವದ ಟೂರ್ನಿ ನಡೆಸುವುದಕ್ಕೂ ಸೌಲಭ್ಯಗಳಿವೆ. ಪಂಕಜ್ ಅಡ್ವಾಣಿ ಅವರಂತೆ ದೊಡ್ಡ ಹೆಸರು ಗಳಿಸುವ ಆಟಗಾರರನ್ನು ಬೆಳೆಸುವುದು ನಮ್ಮ ಉದ್ದೇಶ.

–ಅರವಿಂದ ಸವೂರ, ರಾಜ್ಯ ಬಿಲಿಯರ್ಡ್ಸ್ ಸಂಸ್ಥೆಯ ಅಧ್ಯಕ್ಷ

* ಬೆಂಗಳೂರಿನಲ್ಲಿ ಅನೇಕ ಬಾರಿ ಮಹತ್ವದ ಟೂರ್ನಿಗಳನ್ನು ಆಡಿದ್ದೇನೆ. ಈ ನಗರದಲ್ಲಿ, ವಿಶೇಷವಾಗಿ ಕರ್ನಾಟಕ ಬಿಲಿಯಯರ್ಡ್ಸ್ ಸಂಸ್ಥೆಯ ಆವರಣದಲ್ಲಿ ಆಡುವುದೆಂದರೆ ನನಗೆ ಪುಳಕ. ಇಷ್ಟು ಉತ್ತಮ ಸೌಲಭ್ಯ, ಸುಸಜ್ಜಿತ ಅಂಗಣ ಬೇರೆಲ್ಲೂ ಕಂಡಿಲ್ಲ. ಮತ್ತೆ ಮತ್ತೆ ಇಲ್ಲಿಗೆ ಬರಲು ಆಶಿಸುತ್ತೇನೆ

– ಎಹ್ಸಾನ್ ಹೈದರಿ ನೆಶದ್, ಏಷ್ಯನ್ ಟೂರ್ ನಲ್ಲಿ ಬೆಳ್ಳಿ ಗೆದ್ದ ಇರಾನ್ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT