ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೇಲೊ ಇಂಡಿಯಾ: ಹಾಕಿಯಲ್ಲಿ ಮತ್ತೆ ಬೆಂಗಳೂರು ಪಾರಮ್ಯ

ಎರಡು ಗೋಲುಗಳೊಂದಿಗೆ ಮಿಂಚಿದ ಹರೀಶ್ ಮುತಗಾರ; ಸಾವಿತ್ರಿಬಾಯಿ ಫುಲೆ ವಿವಿಗೆ 3ನೇ ಸ್ಥಾನ
Last Updated 1 ಮೇ 2022, 19:48 IST
ಅಕ್ಷರ ಗಾತ್ರ

ಬೆಂಗಳೂರು: ಲೀಗ್ ಹಂತದಿಂದಲೇ ಅಮೋಘ ಆಟವಾಡುತ್ತ ಬಂದಿದ್ದ ಬೆಂಗಳೂರು ನಗರ ವಿಶ್ವವಿದ್ಯಾಲಯ ತಂಡ ಖೇಲೊ ಇಂಡಿಯಾ ಅಂತರ ವಿಶ್ವವಿದ್ಯಾಲಯಗಳ ಕ್ರೀಡಾಕೂಟದ ಹಾಕಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಕಿ ಕ್ರೀಡಾಂಗಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಪಂದ್ಯದಲ್ಲಿ ಬೆಂಗಳೂರು ವಿವಿ 3-0ಯಿಂದ ಪಂಜಾಬ್‍ನ ಗುರುನಾನಕ್ ದೇವ್ ವಿವಿಯನ್ನು ಮಣಿಸಿತು. ಈ ಮೂಲಕ ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು. ಹರೀಶ ಮುತಗಾರ ಮತ್ತು ವಸಂತ ಗೋಕಾವಿ ಜೋಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಜಿದ್ದಾಜಿದ್ದಿಯ ಹಣಾಹಣಿಯ ಮೊದಲ ಕ್ವಾರ್ಟರ್‌ನಿಂದಲೇ ಬೆಂಗಳೂರು ಆಧಿಪತ್ಯ ಸ್ಥಾಪಿಸಿತು. ಆರಂಭದಲ್ಲಿ ಗುರುನಾನಕ್ ವಿವಿ ಕೂಡ ಆಕ್ರಮಣಕಾರಿ ಅಟದ ಮೂಲಕ ತೀವ್ರ ಪೈಪೋಟಿ ಒಡ್ಡಿತು. ಆದರೆ ಪಂದ್ಯ ಮುಂದುವರಿದಂತೆ ಬೆಂಗಳೂರು ವಿವಿ ಹಿಡಿತ ಸಾಧಿಸಿತು. ಗೋಲುಗಳಿಲ್ಲದೇ ಮೊದಲ ಕ್ವಾರ್ಟರ್‌ ಮುಕ್ತಾಯಗೊಂಡಿತು.

ಎರಡನೇ ಕ್ವಾರ್ಟರ್‌ನಿಂದ ಬೆಂಗಳೂರು ವಿವಿಯ ಅಕ್ರಮಣ ಬಿಗಿಯಾಯಿತು. ಎದುರಾಳಿಗಳು ಪಟ್ಟುಬಿಡಲಿಲ್ಲ. ಬೆಂಗಳೂರು ತಂಡದ ಆವರಣಕ್ಕೆ ಪದೇ ಪದೇ ನುಗ್ಗಿದ ತಂಡಕ್ಕೆ ಸತತ ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳು ಲಭಿಸಿದವು. ಆದರೆ ಗೋಲ್‌ಕೀಪರ್ ಸಂಜಯ್ ಅವರನ್ನು ದಾಟಿ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಲು ತಂಡಕ್ಕೆ ಸಾಧ್ಯವಾಗಲಿಲ್ಲ. ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಒಟ್ಟು ಮೂರು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಗುರುನಾನಕ್ ವಿವಿ ಕೈಚೆಲ್ಲಿತು.

ಮುತಗಾರ–ವಸಂತ ಮ್ಯಾಜಿಕ್

ಟೂರ್ನಿಯುದ್ದಕ್ಕೂ ಅಮೋಘ ಆಟವಾಡಿ ಅತಿ ಹೆಚ್ಚು, 9 ಗೋಲುಗಳ ಸಾಧನೆ ಮಾಡಿರುವ ಹರೀಶ್ ಮುತಗಾರ 28ನೇ ನಿಮಿಷದಲ್ಲಿ ಮ್ಯಾಜಿಕ್ ಮಾಡಿದರು. ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಪ್ರಣಾಮ್‌ ಗೌಡ ಪುಷ್‌ ಮಾಡಿದ ಚೆಂಡನ್ನು ಹರೀಶ್ ಮಿಂಚಿನ ವೇಗದಲ್ಲಿ ಪ್ಲಿಕ್ ಮಾಡಿ ಗುರಿ ಮುಟ್ಟಿಸಿದರು. 51ನೇ ನಿಮಿಷದಲ್ಲಿ ಎದುರಾಳಿ ಡಿಫೆಂಡರ್‌ಗಳಿಗೆ ಚಳ್ಳೆಹಣ್ಣು ತಿನ್ನಿಸಿದ ವಸಂತ ಕುಮಾರ್ ಕೋಕಾವಿ ಮುನ್ನಡೆ ಹೆಚ್ಚಿಸಿದರು. ಎರಡು ಗೋಲುಗಳ ಬಲದಿಂದ ತಂಡ ಕೊನೆಯ ಹಂತದಲ್ಲಿ ಆಕ್ರಮಣವನ್ನು ಇನ್ನಷ್ಟು ಹೆಚ್ಚಿಸಿತು. ಅಂತಿಮ ನಿಮಿಷದಲ್ಲಿ ಮತ್ತೆ ಮಿಂಚಿದ ಹರೀಶ ಗೆಲುವಿನ ಅಂತರವನ್ನು 3–0ಗೆ ಏರಿಸುವಲ್ಲಿ ಯಶಸ್ವಿಯಾದರು.

ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಪುಣೆಯ ಸಾವಿತ್ರಿಬಾಯಿ ಫುಲೆ ವಿವಿ ಪಂಜಾಬಿ ವಿವಿಯನ್ನು ಶೂಟೌಟ್‍ನಲ್ಲಿ 4-2ರಲ್ಲಿ ಮಣಿಸಿತು.

ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಐಟಿಎಂ ವಿವಿ 2–0ಯಿಂದ ಮೈಸೂರು ವಿವಿಯನ್ನು ಮಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT