ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಲುಗಳ ಗೋಪುರ ಕಟ್ಟಿದ ಆರ್ಮಿ ಇಲೆವನ್‌

ಬೆಂಗಳೂರು ಕಪ್‌ ಅಖಿಲ ಭಾರತ ಆಹ್ವಾನಿತ ಹಾಕಿ ಟೂರ್ನಿ
Last Updated 13 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಆರ್ಮಿ ಇಲೆವನ್‌ ತಂಡ ಶಾಂತಿನಗರದಲ್ಲಿರುವ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಅರೇನಾದಲ್ಲಿ ಮಂಗಳವಾರ ಗೋಲುಗಳ ಗೋಪುರ ಕಟ್ಟಿತು.

ಈ ತಂಡವು ಬೆಂಗಳೂರು ಕಪ್‌ ಅಖಿಲ ಭಾರತ ಆಹ್ವಾನಿತ ಟೂರ್ನಿಯ ಪಂದ್ಯದಲ್ಲಿ 5–3 ಗೋಲುಗಳಿಂದ ಮುಂಬೈಯ ಏರ್‌ ಇಂಡಿಯಾ ತಂಡವನ್ನು ಪರಾಭವಗೊಳಿಸಿತು.

‘ಬಿ’ ಗುಂಪಿನ ಈ ಹಣಾಹಣಿಯ ಆರಂಭದಿಂದಲೇ ಆರ್ಮಿ ಇಲೆವನ್‌ ಮೇಲುಗೈ ಸಾಧಿಸಿತು. ವೇಗದ ಆಟಕ್ಕೆ ಒತ್ತು ನೀಡಿದ ಈ ತಂಡವು ಎಂಟನೇ ನಿಮಿಷದಲ್ಲಿ ಖಾತೆ ತೆರೆಯಿತು. ಪ್ರತಾಪ್‌ ಸಿಂಧೆ ಕೈಚಳಕ ತೋರಿದರು.

ನಂತರ ಈ ತಂಡ ಇನ್ನಷ್ಟು ಆಕ್ರಮಣಕಾರಿಯಾಗಿ ಆಡಿತು. 14ನೇ ನಿಮಿಷದಲ್ಲಿ ರಾಜಂತ್‌ ರಜಪೂತ್‌ ಗೋಲು ಹೊಡೆದು 2–0 ಮುನ್ನಡೆಗೆ ಕಾರಣರಾದರು. ಇದರ ಬೆನ್ನಲ್ಲೇ ವಿನಯ್‌ ಬೆಂಗ್ರಾ (20ನೇ ನಿ.) ಚೆಂಡನ್ನು ಗುರಿ ಮುಟ್ಟಿಸಿ ಆರ್ಮಿ ಪಾಳಯದಲ್ಲಿ ಸಂಭ್ರಮ ಮೂಡಿಸಿದರು.

26ನೇ ನಿಮಿಷದಲ್ಲಿ ಏರ್‌ ಇಂಡಿಯಾ ತಂಡದ ಅರ್ಜುನ್‌ ಶರ್ಮಾ ಗೋಲು ಗಳಿಸಿ ಹಿನ್ನಡೆಯನ್ನು 1–3ಕ್ಕೆ ತಗ್ಗಿಸಿದರು.

ಬಳಿಕ ಶಿವೇಂದ್ರ ಸಿಂಗ್‌ ಮೋಡಿ ಮಾಡಿದರು. 39 ಮತ್ತು 41ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿದ ಶಿವೇಂದ್ರ ತಂಡವು 3–3ರಿಂದ ಸಮಬಲ ಸಾಧಿಸಲು ನೆರವಾದರು. ಹೀಗಾಗಿ ಆಟದ ರೋಚಕತೆ ಹೆಚ್ಚಿತ್ತು.

‌ಅಂತಿಮ ಕ್ವಾರ್ಟರ್‌ನಲ್ಲಿ ಆರ್ಮಿ ಇಲೆವನ್‌ ಪಾರಮ್ಯ ಮೆರೆಯಿತು. 50ನೇ ನಿಮಿಷದಲ್ಲಿ ರಾಜಂತ್‌ ರಜಪೂತ್‌ ವೈಯಕ್ತಿಕ ಎರಡನೇ ಗೋಲು ಹೊಡೆದರು. 59ನೇ ನಿಮಿಷದಲ್ಲಿ ಸಿರಾಜು ಅಲಿರಾ, ಚೆಂಡನ್ನು ಗುರಿ ತಲುಪಿಸುತ್ತಿದ್ದಂತೆ ಆರ್ಮಿ ಪಾಳಯದಲ್ಲಿ ಹರ್ಷದ ಹೊನಲು ಹರಿಯಿತು.

ಡ್ರಾ ಪಂದ್ಯದಲ್ಲಿ ಐಒಸಿಎಲ್‌: ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗಿದ್ದ ಐಒಸಿಎಲ್‌ ಮತ್ತು ಬಿಪಿಸಿಎಲ್‌ ನಡುವಣ ‘ಎ’ ಗುಂಪಿನ ಹೋರಾಟವು 5–5 ಗೋಲುಗಳಿಂದ ಡ್ರಾ ಆಯಿತು.

ಐಒಸಿಎಲ್‌ ತಂಡದ ಗುರ್ಜಿಂದರ್‌ ಸಿಂಗ್‌ ಎರಡು ಗೋಲು ಹೊಡೆದು (14 ಮತ್ತು 20ನೇ ನಿಮಿಷ) ಗಮನ ಸೆಳೆದರು.

ಅಫಾನ್ ಯೂಸುಫ್‌ (3ನೇ ನಿ.), ತಲ್ವಿಂದರ್‌ ಸಿಂಗ್‌ (8ನೇ ನಿ.) ಮತ್ತು ಸುಮಿತ್‌ ಕುಮಾರ್‌ (42ನೇ ನಿ.) ಅವರೂ ಮಿಂಚಿದರು.

ಬಿಪಿಸಿಎಲ್‌ ತಂಡದ ದೇವಿಂದರ್ ವಾಲ್ಮೀಕಿ (10ನೇ ನಿ.), ಮೊಹಮ್ಮದ್‌ ಅಮೀರ್‌ ಖಾನ್‌ (20ನೇ ನಿ.), ಶಿಲಾನಂದ ಲಾಕ್ರಾ (39ನೇ ನಿ.), ಆಭರಣ ಸುದೇವ್‌ (57ನೇ ನಿ.) ಮತ್ತು ಮೊಹಮ್ಮದ್‌ ಅಮೀರ್‌ ಖಾನ್‌ (59ನೇ ನಿ.) ಗೋಲು ಬಾರಿಸಿದರು.

ಇಂದಿನ ಪಂದ್ಯಗಳು

ಐಒಸಿಎಲ್‌–ಆಲ್‌ ಇಂಡಿಯಾ ಕಸ್ಟಮ್ಸ್‌

ಆರಂಭ: ಮಧ್ಯಾಹ್ನ 2.

ಹಾಕಿ ಕರ್ನಾಟಕ–ಆರ್ಮಿ ಇಲೆವನ್‌

ಆರಂಭ:4.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT