ಶನಿವಾರ, ಆಗಸ್ಟ್ 24, 2019
21 °C
ಬೆಂಗಳೂರು ಕಪ್‌ ಅಖಿಲ ಭಾರತ ಆಹ್ವಾನಿತ ಹಾಕಿ: ಲಾಕ್ರಾ ಕೈಚಳಕ

ಸೆಮಿಫೈನಲ್‌ ಪ್ರವೇಶಿಸಿದ ಬಿ‍ಪಿಸಿಎಲ್‌

Published:
Updated:
Prajavani

ಬೆಂಗಳೂರು: ರೋಚಕ ಘಟ್ಟದಲ್ಲಿ ಕೈಚಳಕ ತೋರಿದ ಶಿಲಾನಂದ ಲಾಕ್ರಾ, ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (ಬಿಪಿಸಿಎಲ್‌) ಪಾಳಯದಲ್ಲಿ ಸಂತಸ ಉಕ್ಕಿ ಹರಿಯುವಂತೆ ಮಾಡಿದರು.

58ನೇ ನಿಮಿಷದಲ್ಲಿ ಲಾಕ್ರಾ ಗಳಿಸಿದ ಗೋಲಿನಿಂದಾಗಿ ಬಿಪಿಸಿಎಲ್‌ ತಂಡವು ಬೆಂಗಳೂರು ಕಪ್‌ ಅಖಿಲ ಭಾರತ ಆಹ್ವಾನಿತ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ರಹದಾರಿ ಪಡೆಯಿತು.

ಶಾಂತಿನಗರದಲ್ಲಿರುವ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಅರೇನಾದಲ್ಲಿ ಗುರುವಾರ ನಡೆದ ‘ಎ’ ಗುಂಪಿನ ನಿರ್ಣಾಯಕ ಹಣಾಹಣಿಯಲ್ಲಿ ಬಿಪಿಸಿಎಲ್‌ 3–2 ಗೋಲುಗಳಿಂದ ಇಂಡಿಯನ್‌ ನೇವಿ ತಂಡವನ್ನು ಪರಾಭವಗೊಳಿಸಿತು.

ನಾಲ್ಕರ ಘಟ್ಟ ಪ್ರವೇಶಿಸುವ ನಿಟ್ಟಿನಲ್ಲಿ ಉಭಯ ತಂಡಗಳಿಗೂ ಈ ಹೋರಾಟ ಮಹತ್ವದ್ದೆನಿಸಿತ್ತು. ಈ ಪಂದ್ಯದಲ್ಲಿ ಬಿಪಿಸಿಎಲ್‌ ಗೆಲ್ಲಲೇಬೇಕಿತ್ತು. ಇಂಡಿಯನ್‌ ನೇವಿ  ಡ್ರಾ ಮಾಡಿಕೊಳ್ಳಬೇಕಿತ್ತು.

ಮೊದಲ ಕ್ವಾರ್ಟರ್‌ನ ಶುರುವಿನಿಂದಲೇ ವೇಗದ ಆಟಕ್ಕೆ ಒತ್ತು ನೀಡಿದ ನೇವಿ ತಂಡ ಮೂರು ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಪಡೆದಿತ್ತು. ಇವುಗಳನ್ನು ಗೋಲಾಗಿ ಪರಿವರ್ತಿಸಲು ತಂಡ ವಿಫಲವಾಯಿತು.

ಎರಡನೇ ಕ್ವಾರ್ಟರ್‌ನ ಆರಂಭದಲ್ಲೂ ನೇವಿ ತಂಡ ಪ್ರಾಬಲ್ಯ ಮೆರೆಯಿತು. ತಾಳ್ಮೆಯ ಆಟಕ್ಕೆ ಅಣಿಯಾಗಿದ್ದ ಬಿಪಿಸಿಎಲ್‌ಗೆ 27ನೇ ನಿಮಿಷದಲ್ಲಿ ಖಾತೆ ತೆರೆಯುವ ಅವಕಾಶ ಲಭ್ಯವಾಗಿತ್ತು. ಈ ತಂಡದ ಆಟಗಾರನ ಪ್ರಯತ್ನವನ್ನು ನೇವಿ ತಂಡದ ರಕ್ಷಣಾ ವಿಭಾಗದ ಆಟಗಾರ ವಿಫಲಗೊಳಿಸಿದರು. ಹೀಗಾಗಿ ಮೊದಲಾರ್ಧ ಗೋಲುರಹಿತವಾಗಿ ಅಂತ್ಯವಾಯಿತು.

ದ್ವಿತೀಯಾರ್ಧದಲ್ಲಿ ಎರಡೂ ತಂಡಗಳು ಮಿಂಚಿನ ಆಟ ಆಡಿದವು.  ಮೂರನೇ ಕ್ವಾರ್ಟರ್‌ನ ಶುರುವಿನಲ್ಲೇ ಬೆಂಗಳೂರಿನ ಆಟಗಾರ ಆಭರಣ್‌ ಸುದೇವ್‌, ಬಿಪಿಸಿಎಲ್‌ ಖಾತೆಗೆ ಮೊದಲ ಗೋಲು ಸೇರ್ಪಡೆ ಮಾಡಿದರು. ಅವರು 33ನೇ ನಿಮಿಷದಲ್ಲಿ ಕೈಚಳಕ ತೋರಿದರು.

ನಾಲ್ಕನೇ ಕ್ವಾರ್ಟರ್‌ನ ಆಟ ಇನ್ನಷ್ಟು ರೋಚಕತೆ ಪಡೆದುಕೊಂಡಿತು. 50ನೇ ನಿಮಿಷದಲ್ಲಿ ಬಿಪಿಸಿಎಲ್‌ ತಂಡದ ಮೊಹಮ್ಮದ್‌ ಅಮೀರ್‌ ಖಾನ್‌ ಗೋಲು ಹೊಡೆದು 2–0 ಮುನ್ನಡೆಗೆ ಕಾರಣರಾದರು.

ಬಿಪಿಸಿಎಲ್‌ ತಂಡದ ರಕ್ಷಣಾ ವಿಭಾಗದ ಆಟಗಾರ ದೇವಿಂದರ್‌ ವಾಲ್ಮಿಕಿ ಮಾಡಿದ ಎಡವಟ್ಟಿನಿಂದಾಗಿ 52ನೇ ನಿಮಿಷದಲ್ಲಿ ಇಂಡಿಯನ್‌ ನೇವಿಗೆ ಪೆನಾಲ್ಟಿ ಕಾರ್ನರ್ ಲಭಿಸಿತು. ಈ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಆಕೀಬ್‌ ರಹೀಮ್‌ ಹಿನ್ನಡೆಯನ್ನು 1–2ಕ್ಕೆ ತಗ್ಗಿಸಿದರು. 58ನೇ ನಿಮಿಷದಲ್ಲಿ ಲಾಕ್ರಾ ಮೋಡಿ ಮಾಡಿದರು. ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಗೋಲು ಬಾರಿಸಿದ ಅವರು ಬಿಪಿಸಿಎಲ್‌ ತಂಡದ ಗೆಲುವಿನ ಹಾದಿ ಸುಗಮ ಮಾಡಿದರು.

60ನೇ ನಿಮಿಷದಲ್ಲಿ ಇಂಡಿಯನ್‌ ನೇವಿ ತಂಡದ ಜುಗ್‌ರಾಜ್‌ ಸಿಂಗ್‌ ಚೆಂಡನ್ನು ಗುರಿ ಮುಟ್ಟಿಸಿದರೂ ಪ್ರಯೋಜನ ವಾಗಲಿಲ್ಲ.

‘ಬಿ’ ಗುಂಪಿನ ಕೊನೆಯ ರೌಂಡ್‌ ರಾಬಿನ್‌ ಲೀಗ್ ಪಂದ್ಯದಲ್ಲಿ ಏರ್‌ ಇಂಡಿಯಾ ತಂಡವು 1–0 ಗೋಲಿನಿಂದ ನವದೆಹಲಿಯ ಇಂಡಿಯನ್‌ ಏರ್‌ ಫೋರ್ಸ್‌ ತಂಡವನ್ನು ಮಣಿಸಿತು.

ಜೋಗಿಂದರ್‌ ಸಿಂಗ್‌ 35ನೇ ನಿಮಿಷದಲ್ಲಿ ಚೆಂಡನ್ನು ಗುರಿ ತಲು‍‍‍‍ಪಿಸಿ ಏರ್‌ ಇಂಡಿಯಾ ತಂಡದ ಗೆಲುವಿನ ರೂವಾರಿಯಾದರು.

ಸೆಮಿಫೈನಲ್‌ ಹಣಾಹಣಿ (ಶನಿವಾರ)

ಹಾಕಿ ಕರ್ನಾಟಕ–ಐಒಸಿಎಲ್‌

ಆರಂಭ: ಮಧ್ಯಾಹ್ನ 2.

ಬಿಪಿಸಿಎಲ್‌–ಆರ್ಮಿ ಇಲೆವನ್‌

ಆರಂಭ: ಸಂಜೆ 4.

Post Comments (+)