ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಬಿಎಲ್‌: ರ‍್ಯಾಪ್ಟರ್ಸ್‌–ಡ್ಯಾಷರ್ಸ್‌ ಸಮಬಲದ ಹೋರಾಟ

Last Updated 2 ಜನವರಿ 2019, 18:23 IST
ಅಕ್ಷರ ಗಾತ್ರ

ಅಹಮದಾಬಾದ್‌ (ಪಿಟಿಐ): ಆರಂಭದಿಂದಲೇ ರೋಮಾಂಚಕ ಪಂದ್ಯಗಳಿಗೆ ಸಾಕ್ಷಿಯಾದ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನಲ್ಲಿ ಬೆಂಗಳೂರು ರ‍್ಯಾಪ್ಟರ್ಸ್‌ ತಂಡ ರೋಚಕ ಜಯ ಸಾಧಿಸಿತು.

ಇಲ್ಲಿನ ಟ್ರಾನ್ಸ್‌ ಸ್ಟೇಡಿಯಾದಲ್ಲಿ ಬುಧವಾರ ನಡೆದ ಹಣಾಹಣಿಯಲ್ಲಿ ರ‍್ಯಾಪ್ಟರ್ಸ್‌ 2–1ರಿಂದ ಡೆಲ್ಲಿ ಡ್ಯಾಷರ್ಸ್‌ ತಂಡವನ್ನು ಮಣಿಸಿತು.

ಮೊದಲ ಪಂದ್ಯದಲ್ಲಿ ರ‍್ಯಾಪ್ಟರ್ಸ್‌ನ ಸಾಯಿ ಪ್ರಣೀತ್ ಮತ್ತು ಡ್ಯಾಷರ್ಸ್‌ನ ಎಚ್‌.ಎಸ್.ಪ್ರಣಯ್‌ ಪ್ರೇಕ್ಷಕರನ್ನು ರಂಜಿಸಿದರು. ಪಂದ್ಯದಲ್ಲಿ ಸಾಯಿ ಪ್ರಣೀತ್‌ ಗೆಲುವಿನ ಸೌಧ ಕಟ್ಟಿದರು. ಟ್ರಂಪ್ ಪಂದ್ಯದಲ್ಲಿ ಸೋತ ಪ್ರಣಯ್‌ ನಿರಾಸೆಗೆ ಒಳಗಾದರು.

ಮೊದಲ ಗೇಮ್‌ನಲ್ಲಿ ಪ್ರಣಯ್‌ 12–15ರಿಂದ ಸೋತರು. ಆದರೆ ಮುಂದಿನ ಗೇಮ್‌ನಲ್ಲಿ ಪ್ರಬಲ ಪೈಪೋಟಿ ನೀಡಿದರು. ಪ್ರಣೀತ್ ಕೂಡ ಪಟ್ಟು ಬಿಡಲಿಲ್ಲ. ಜಿದ್ದಾಜಿದ್ದಿಯ ಆಟದ ಕೊನೆಯಲ್ಲಿ ಪ್ರಣಯ್‌ 15–14ರಲ್ಲಿ ಗೆದ್ದರು. ಮೂರನೇ ಗೇಮ್‌ ತೀವ್ರ ಕುತೂಹಲ ಕೆರಳಿಸಿತು. 15–13ರಿಂದ ಗೆದ್ದ ಪ್ರಣೀತ್‌ ತಂಡಕ್ಕೆ ಎರಡು ಪಾಯಿಂಟ್‌ಗಳ ಕಾಣಿಕೆ ನೀಡಿದರು.

ತಿರುಗೇಟು ನೀಡಿದ ಜೋಡಿ: ಮುಂದಿನ ಪಂದ್ಯದಲ್ಲಿ ಡೆಲ್ಲಿ ಡ್ಯಾಷರ್ಸ್ ತಿರುಗೇಟು ನೀಡಿತು. ರ‍್ಯಾಪ್ಟರ್ಸ್‌ನ ಟ್ರಂಪ್ ಪಂದ್ಯವಾಗಿದ್ದ ಮಿಶ್ರ ಡಬಲ್ಸ್‌ನಲ್ಲಿ ಜಾಂಗಿತ್ ಮತ್ತು ಕೊಸೆಸ್ಕಯ ಜೋಡಿ ಮಾರ್ಕಸ್ ಎಲಿಸ್‌ ಮತ್ತು ಲಾರೆನ್ ಸ್ಮಿತ್‌ ಜೋಡಿಯನ್ನು 15–13, 15–9ರಿಂದ ಮಣಿಸಿತು. ಉಭಯ ತಂಡಗಳು ಟ್ರಂಪ್ ಪಂದ್ಯಗಳನ್ನು ಸೋತ ಕಾರಣ ಸ್ಕೋರು 0–0 ಆಯಿತು.

ಮೂರನೇ ಪಂದ್ಯದಲ್ಲಿ ಟಾಮಿ ಸುಗಿಯಾರ್ತೊ ಎದುರು 15–6, 12–15, 15–10ರಿಂದ ಗೆದ್ದ ಕಿದಂಬಿ ಶ್ರೀಕಾಂತ್ ಅವರು ಬೆಂಗಳೂರು ರ‍್ಯಾಪ್ಟರ್ಸ್‌ಗೆ ಮಹತ್ವದ ಮುನ್ನಡೆ ಗಳಿಸಿಕೊಟ್ಟರು. ನಿರ್ಣಾಯಕ ಪಂದ್ಯದಲ್ಲಿ ವು ತಿ ಟ್ರಾಂಗ್‌, 12–15, 15–3, 15–8ರಿಂದ ಲೀ ಚಾ ಸಿನ್‌ ಎದುರು ಗೆದ್ದು ರ‍್ಯಾಪ್ಟರ್ಸ್‌ ತಂಡದ ಗೆಲುವನ್ನು ಖಚಿತಪಡಿಸಿಕೊಂಡರು.

ಕೊನೆಯ, ‍ಪುರುಷರ ಡಬಲ್ಸ್ ಪಂದ್ಯದಲ್ಲಿ ಡ್ಯಾಷರ್ಸ್‌ನ ಚಾಯ್ ಬಿಯಾವೊ ಮತ್ತು ಮನಿಪಾಂಗ್ ಜೊಂಗ್ಜಿತ್‌ ಜೋಡಿ ರ‍್ಯಾಪ್ಟರ್ಸ್‌ನ ಮೊಹಮ್ಮದ್ ಅಹ್ಸಾನ್ ಮತ್ತು ಹೇಂದ್ರ ಸತ್ಯವಾನ್‌ ಜೋಡಿಯನ್ನು 15–7, 11–15, 15–14ರಿಂದ ಮಣಿಸಿ ಸೋಲಿನ ಅಂತರವನ್ನು ತಗ್ಗಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT