ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡಕ್ಕೆ ‘ಬಿ’ ವಿಭಾಗದಲ್ಲಿ ಸ್ಥಾನ

ಏಷ್ಯಾ 18 ವರ್ಷದೊಳಗಿನ ಮಹಿಳೆಯರ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ 18ರಿಂದ
Last Updated 24 ಅಕ್ಟೋಬರ್ 2018, 15:20 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಾನ ನಗರಿ ಮತ್ತೊಮ್ಮೆ ಮಹಿಳೆಯರ ಬ್ಯಾಸ್ಕೆಟ್‌ಬಾಲ್‌ ಕಲರವಕ್ಕೆ ಸಜ್ಜಾಗಿದೆ. 18 ವರ್ಷದೊಳಗಿನವರ ಫಿಬಾ ಏಷ್ಯಾ ಚಾಂಪಿಯನ್‌ಷಿಪ್‌ ಇದೇ 18ರಿಂದ ನವೆಂಬರ್‌ ಮೂರರ ವರೆಗೆ ಇಲ್ಲಿ ನಡೆಯಲಿದೆ. ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡ ‘ಬಿ’ ವಿಭಾಗದ ‘ಎ’ ಗುಂಪಿನಲ್ಲಿ ಸ್ಥಾನ ಗಳಿಸಿದೆ.

ಕಂಠೀರವ ಕ್ರೀಡಾಂಗಣ ಮತ್ತು ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಕೋರಮಂಗಲದಲ್ಲಿ ಪ್ರತಿದಿನ ಬೆಳಿಗ್ಗೆ 11.30ರಿಂದ ಮತ್ತು ಕಂಠೀರವದಲ್ಲಿ ಮಧ್ಯಾಹ್ನ 1.30ರಿಂದ ಪಂದ್ಯಗಳು ನಡೆಯಲಿವೆ. ಭಾರತ ತಂಡದ ಎಲ್ಲ ಪಂದ್ಯಗಳು ಕಂಠೀರವ ಕ್ರೀಡಾಂಗಣದಲ್ಲಿ ರಾತ್ರಿ ಎಂಟು ಗಂಟೆಗೆ ಆರಂಭವಾಗಲಿವೆ.

ಚಾಂಪಿಯನ್‌ಷಿಪ್‌ ಕುರಿತು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಭಾರತ ಬ್ಯಾಸ್ಕೆಟ್‌ಬಾಲ್ ಫೆಡರೇಷನ್‌ನ ಅಧ್ಯಕ್ಷ ಕೆ.ಗೋವಿಂದರಾಜು ‘ಇದು ಬೆಂಗಳೂರಿನಲ್ಲಿ ಒಂದು ವರ್ಷದೊಳಗೆ ನಡೆಯುತ್ತಿರುವ ಮೂರನೇ ಪ್ರಮುಖ ಟೂರ್ನಿಯಾಗಿದೆ. ಕಳೆದ ವರ್ಷ ಫಿಬಾ ಮಹಿಳೆಯರ ಏಷ್ಯಾಕಪ್‌ ಆಯೋಜಿಸಿದ್ದು ಅದರ ಬೆನ್ನಲ್ಲೇ 16 ವರ್ಷದೊಳಗಿನ ಬಾಲಕಿಯರ ಏಷ್ಯನ್ ಚಾಂಪಿಯನ್‌ಷಿಪ್‌ ನಡೆಸಲಾಗಿತ್ತು. ಬೆಂಗಳೂರಿಗೆ ಫಿಬಾ ಮತ್ತೆ ಮತ್ತೆ ಅವಕಾಶಗಳನ್ನು ನೀಡುತ್ತಿರುವುದು ಹೆಮ್ಮೆಯ ವಿಷಯ’ ಎಂದರು.

’ಬಿ’ ವಿಭಾಗದ ’ಎ’ ಗುಂಪಿನಲ್ಲಿ ಭಾರತದೊಂದಿಗೆ ಸಿಂಗಪುರ, ಗುವಾಮ್‌ ಮತ್ತು ಇರಾನ್ ಇದ್ದು ‘ಬಿ’ ಗುಂಪಿನಲ್ಲಿ ಹಾಂಕಾಂಗ್‌, ಕಜಕಸ್ತಾನ್‌, ಸಿರಿಯಾ, ಸಮೋ ತಂಡಗಳು ಇವೆ. ’ಎ’ ವಿಭಾಗದ ‘ಎ’ ಗುಂಪಿನಲ್ಲಿ ಆಸ್ಟ್ರೇಲಿಯಾ, ಕೊರಿಯಾ, ಚೀನಾ ತೈಪೆ, ಇಂಡೊನೇಷ್ಯಾ ಇದ್ದು ‘ಬಿ’ ಗುಂಪಿನಲ್ಲಿ ಚೀನಾ, ಜಪಾನ್‌, ನ್ಯೂಜಿಲ್ಯಾಂಡ್‌, ಮಲೇಷ್ಯಾ ತಂಡಗಳಿವೆ ಎಂದು ಗೋವಿಂದರಾಜು ವಿವರಿಸಿದರು.

27ರಂದು ಉದ್ಘಾಟನೆ: ‘ಇದೇ 27ರಂದು ಸಂಜೆ 6.30‌ಕ್ಕೆ ಚಾಲ್ಸೆರಿ ಹೋಟೆಲ್‌ನಲ್ಲಿ ಚಾಂಪಿಯನ್‌ಷಿಪ್‌ನ ಉದ್ಘಾಟನಾ ಸಮಾರಂಭ ನಡೆಯಲಿದೆ. ರಾಜ್ಯಪಾಲ ವಜುಭಾಯಿ ವಾಲ, ಸಚಿವ ಕೆ.ಜೆ.ಜಾರ್ಜ್‌, ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ, ಫಿಬಾ ಅಧ್ಯಕ್ಷ ಶೇಕ್ ಸಾವುದ್ ಬಿನ್‌ ಅಲಿ ಅಲ್ ಥಾನಿ ಮತ್ತಿತರರು ಪಾಲ್ಗೊಳ್ಳುವರು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT