ಬೆಂಗಳೂರು ಬುಲ್ಸ್‌ ಮುಡಿಗೆ ಚೊಚ್ಚಲ ಕಿರೀಟ

7
ಫೈನಲ್‌ನಲ್ಲಿ ಎಡವಿದ ಗುಜರಾತ್‌

ಬೆಂಗಳೂರು ಬುಲ್ಸ್‌ ಮುಡಿಗೆ ಚೊಚ್ಚಲ ಕಿರೀಟ

Published:
Updated:

ಮುಂಬೈ: ಸತತ ನಾಲ್ಕು ವರ್ಷಗಳ ಕಾಯುವಿಕೆಗೆ ಕೊನೆಗೂ ತೆರೆ ಬಿತ್ತು. ಪ್ರೊ ಕಬಡ್ಡಿ ಲೀಗ್‌ನಲ್ಲಿ ಚೊಚ್ಚಲ ಕಿರೀಟ ಮುಡಿಗೇರಿಸಿಕೊಳ್ಳುವ ಬೆಂಗಳೂರು ಬುಲ್ಸ್‌ ತಂಡದ ಕನಸು ಶನಿವಾರ ‘ಮಾಯಾ ನಗರಿ’ಯ ನ್ಯಾಷನಲ್‌ ಸ್ಪೋರ್ಟ್ಸ್‌ ಕ್ಲಬ್‌ ಆಫ್‌ ಇಂಡಿಯಾ ಕ್ರೀಡಾಂಗಣದಲ್ಲಿ ಸಾಕಾರಗೊಂಡಿತು. ಬೆಂಗಳೂರಿನ ತಂಡದ ಈ ಸಾಧನೆಗೆ ಕಾರಣವಾಗಿದ್ದು ಪವನ್‌ ಕುಮಾರ್‌ ಶೆರಾವತ್‌.

ಮಿಂಚಿನ ವೇಗ ಮತ್ತು ಚುರುಕಿನ ಪಾದ ಚಲನೆಯ ಮೂಲಕ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ತಂಡದ ರಕ್ಷಣಾ ಕೋಟೆಯನ್ನು ಧ್ವಂಸಗೊಳಿಸಿದ ಪವನ್‌, ರೋಹಿತ್‌ ಪಡೆಯ ಆಟಗಾರರು ವಿಜಯ ವೇದಿಕೆಯಲ್ಲಿ ಮಿರುಗುವ ಟ್ರೋಫಿಗೆ ಮುತ್ತಿಕ್ಕುವಂತೆ ಮಾಡಿದರು.

ಆರನೇ ಆವೃತ್ತಿಯ ಫೈನಲ್‌ನಲ್ಲಿ ಬುಲ್ಸ್‌ 38–33 ಪಾಯಿಂಟ್ಸ್‌ನಿಂದ ಗೆದ್ದಿತು. ಪಂದ್ಯದ ರೆಫರಿಗಳು ಅಂತಿಮ ಸೀಟಿ ಊದಿದಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಬುಲ್ಸ್‌ ಧ್ವಜಗಳು ರಾರಾಜಿಸಿದವು. ಆಟಗಾರರು ಮುಖ್ಯ ಕೋಚ್‌ ರಣಧೀರ್‌ ಸಿಂಗ್‌ ಮತ್ತು ಸಹಾಯಕ ಕೋಚ್‌ ಬಿ.ಸಿ.ರಮೇಶ್‌ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಿಸಿದಾಗ ಭಾವುಕ ವಾತಾವರಣ ಮನೆ ಮಾಡಿತು. 

ಟಾಸ್‌ ಗೆದ್ದು ಬಲ ಅಂಕಣವನ್ನು ಆಯ್ಕೆ ಮಾಡಿಕೊಂಡ ರೋಹಿತ್‌ ಬಳಗ ಶುರುವಿನಲ್ಲೇ ಖಾತೆ ತೆರೆಯಿತು. ಲೆಫ್ಟ್‌ ಕವರ್‌ನಲ್ಲಿದ್ದ ಮಹೇಂದರ್‌ ಸಿಂಗ್‌ ಫಾರ್ಚೂನ್‌ಜೈಂಟ್ಸ್‌ ತಂಡದ ಸಚಿನ್‌ ತನ್ವಾರ್‌ ಅವರನ್ನು ಆಕರ್ಷಕ ರೀತಿಯಲ್ಲಿ ಹಿಡಿದರು. ಇದರ ಬೆನ್ನಲ್ಲೇ ಸುನಿಲ್ ಕುಮಾರ್‌ ಸಾರಥ್ಯದ ಗುಜರಾತ್‌ ತಿರುಗೇಟು ನೀಡಿತು. ನಂತರದ ಮೂರು ನಿಮಿಷಗಳ ಆಟ ಸಮಬಲದಿಂದ ಕೂಡಿತ್ತು. ಬಳಿಕ ಫಾರ್ಚೂನ್‌ಜೈಂಟ್ಸ್‌ ಪರಾಕ್ರಮ ಮೆರೆಯಿತು. ಮೊದಲಾರ್ಧದ ಆಟ ಮುಗಿಯಲು ಎರಡು ನಿಮಿಷ ಬಾಕಿ ಇದ್ದಾಗ ಸೂಪರ್‌ ರೇಡ್‌ ಮಾಡಿದ ಪ್ರಪಾಂಜನ್‌, ಬುಲ್ಸ್‌ ತಂಡದ ಆವರಣ ಖಾಲಿ ಮಾಡಿ ಗುಜರಾತ್‌ಗೆ 15–9ರ ಮುನ್ನಡೆ ತಂದುಕೊಟ್ಟರು.

ಪವನ ಶಕ್ತಿ: ದ್ವಿತೀಯಾರ್ಧದಲ್ಲಿ ಪವನ್‌ ಶೆರಾವತ್‌ ಅಬ್ಬರಿಸಿದರು.

ದ್ವಿತೀಯಾರ್ಧದ ಆರಂಭದಲ್ಲಿ ಬುಲ್ಸ್‌ ಮಿಂಚಿತು. ಸತತ ಎರಡು ಟ್ಯಾಕಲ್‌ ಪಾಯಿಂಟ್ಸ್‌ ಕಲೆಹಾಕಿದ ಈ ತಂಡ ಹಿನ್ನಡೆಯನ್ನು 12–17ಕ್ಕೆ ತಗ್ಗಿಸಿಕೊಂಡಿತು. ನಂತರ ಪವನ್‌ ಶೆರಾವತ್‌ ಮೋಡಿ ಮಾಡಿದರು. ಸತತ ಮೂರು ಯಶಸ್ವಿ ರೇಡ್‌ಗಳನ್ನು ಮಾಡಿದ ಅವರು ತಂಡದ ಖಾತೆಗೆ ಮೂರು ಪಾಯಿಂಟ್ಸ್ ಸೇರ್ಪಡೆ ಮಾಡಿದರು. 30ನೇ ನಿಮಿಷದಲ್ಲಿ ಅವರು ಸೂಪರ್‌ ರೇಡ್‌ ಮಾಡಿದಾಗ ಕ್ರೀಡಾಂಗಣದಲ್ಲಿ ಮೆಕ್ಸಿಕನ್‌ ಅಲೆ ಎದ್ದಿತು. ಅಭಿಮಾನಿಗಳು ‘ಪವನ್‌.. ಪವನ್‌...’ ಎಂದು ಕೂಗಿ ಹುರಿದುಂಬಿಸಿದರು. ಪವನ್‌ ಮಿಂಚಿನಿಂದಾಗಿ ಬುಲ್ಸ್‌ ಹಿನ್ನಡೆ 19–21ಕ್ಕೆ ತಗ್ಗಿತು. ಫಾರ್ಚೂನ್‌ ಜೈಂಟ್ಸ್‌ ಅಂಗಳದಲ್ಲಿದ್ದ ಆಟಗಾರರ ಸಂಖ್ಯೆ ಏಳರಿಂದ ಎರಡಕ್ಕೆ ಇಳಿಯಿತು.

31ನೇ ನಿಮಿಷದಲ್ಲಿ ಪವನ್‌ ಮತ್ತೊಮ್ಮೆ ಅಬ್ಬರಿಸಿದರು. ಎದುರಾಳಿಗಳನ್ನು ಆಲೌಟ್‌ ಮಾಡಿದ ಅವರು ಬೋನಸ್‌ ಸೇರಿದಂತೆ ಒಟ್ಟು ಮೂರು ಪಾಯಿಂಟ್ಸ್‌ ಕಲೆಹಾಕಿ ಬೆಂಗಳೂರಿನ ತಂಡಕ್ಕೆ 23–22ರ ಮುನ್ನಡೆ ತಂದುಕೊಟ್ಟರು. ಮೊದಲಾರ್ಧದಲ್ಲಿ ಮುನ್ನಡೆ ಗಳಿಸಿ ಬೀಗುತ್ತಿದ್ದ ಫಾರ್ಚೂನ್‌ಜೈಂಟ್ಸ್‌ ಆಟಗಾರರ ಮೊಗದಲ್ಲಿ ಆತಂಕದ ಛಾಯೆ ಆವರಿಸಿತು.

ಪಂದ್ಯ ಮುಗಿಯಲು ಐದು ನಿಮಿಷ ಬಕಿ ಇದ್ದಾಗ ಸೂಪರ್‌ ರೇಡ್‌ ಮಾಡಿದ ರೋಹಿತ್‌ ಗುಲಿಯಾ ಮೂರು ಪಾಯಿಂಟ್ಸ್‌ ಗಳಿಸಿ ಗುಜರಾತ್‌ಗೆ  27–25ರ ಮುನ್ನಡೆ ತಂದುಕೊಟ್ಟರು. ಆಗ ಬುಲ್ಸ್‌ ಪಾಳಯದಲ್ಲಿ ಮತ್ತೆ ಆತಂಕ ಮನೆಮಾಡಿತ್ತು. ರೋಹಿತ್‌ ಮತ್ತು ಪವನ್‌ ಸತತ ಎರಡು ಯಶಸ್ವಿ ರೇಡ್‌ ಮಾಡಿ ಹಿನ್ನಡೆಯನ್ನು 29–27ಕ್ಕೆ ತಗ್ಗಿಸಿದರು. ಕೊನೆಯ ಮೂರು ನಿಮಿಷಗಳ ಆಟ ಬಾಕಿ ಇದ್ದಾಗ ಉಭಯ ತಂಡಗಳು 29–29ರಿಂದ ಸಮಬಲ ಸಾಧಿಸಿದ್ದವು. ಹೀಗಾಗಿ ಅಭಿಮಾನಿಗಳ ಎದೆಬಡಿತವೂ ಜೋರಾಗಿತ್ತು. ‘ತೂಫಾನಿ’ ರೇಡ್‌ಗಳನ್ನು ಮಾಡಿದ ಪವನ್‌ ಕ್ರೀಡಾಂಗಣದಲ್ಲಿ ಮೆಕ್ಸಿಕನ್‌ ಅಲೆ ಏಳುವಂತೆ ಮಾಡಿದರು. ಪ್ರೇಕ್ಷಕರ ಗ್ಯಾಲಿಯಲ್ಲಿ ‘ಜೀತೆಗಾ ಭಾಯ್‌ ಜೀತೆಗಾ... ಬೆಂಗಳೂರು ಜೀತೆಗಾ.. ಎಂಬ ಕೂಗು ಮಾರ್ಧನಿಸಿತು.

ಕೊನೆಯ ಎರಡು ನಿಮಿಷಗಳ ಆಟ ಬಾಕಿ ಇದ್ದಾಗ ಫಾರ್ಚೂನ್‌ಜೈಂಟ್ಸ್‌ ತಂಡ ಆಲೌಟ್‌ ಆಯಿತು. ಪವನ್‌ ಸೂಪರ್‌ರ ರೇಡ್‌ ಮೂಲಕ ಮೂರು ಪಾಯಿಂಟ್ಸ್‌ ಬುಟ್ಟಿಗೆ ಹಾಕಿ 36–29ರ ಮುನ್ನಡೆ ತಂದುಕೊಟ್ಟರು. ನಂತರ ಬುಲ್ಸ್‌ ಸತತ ಮೂರು ಪಾಯಿಂಟ್ಸ್‌ ಕಳೆದುಕೊಂಡಿತು. ಆಗ ಮತ್ತೆ ತಂಡಕ್ಕೆ ಆಸರೆಯಾಗಿದ್ದು ಪವನ್‌.

ಬರಹ ಇಷ್ಟವಾಯಿತೆ?

 • 65

  Happy
 • 0

  Amused
 • 0

  Sad
 • 2

  Frustrated
 • 3

  Angry

Comments:

0 comments

Write the first review for this !