ಮಂಗಳವಾರ, ಆಗಸ್ಟ್ 20, 2019
27 °C
ಬೆಂಗಳೂರು ಕಪ್ ಅಖಿಲ ಭಾರತ ಹಾಕಿ ಟೂರ್ನಿ: ಆರ್ಮಿ ಇಲೆವನ್ ವಿರುದ್ಧ ಡ್ರಾ ಸಾಧಿಸಿದ ಹಾಕಿ ಕರ್ನಾಟಕ

ತಲ್ವಿಂದರ್ ಮಿಂಚಿನಾಟ: ಐಒಸಿಎಲ್ ಜಯಭೇರಿ

Published:
Updated:
Prajavani

ಬೆಂಗಳೂರು: ಅಮೋಘ ಆಟ ಮುಂದುವರಿಸಿದ ತಲ್ವಿಂದರ್ ಸಿಂಗ್ ಇಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅರೆನಾದಲ್ಲಿ ಮತ್ತೊಮ್ಮೆ ಮಿಂಚಿದರು. ಅವರು ಗಳಿಸಿದ ಹ್ಯಾಟ್ರಿಕ್ ಗೋಲುಗಳ ಬಲದಿಂದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಭರ್ಜರಿ ಜಯ ಸಾಧಿಸಿತು.

ಬೆಂಗಳೂರು ಕಪ್ ಅಖಿಲ ಭಾರತ ಹಾಕಿ ಟೂರ್ನಿಯ ಬುಧವಾರದ ಪಂದ್ಯದಲ್ಲಿ ಐಒಸಿಎಲ್ 7–2ರಲ್ಲಿ ಆಲ್‌ ಇಂಡಿಯಾ ಕಸ್ಟಮ್ಸ್‌ ತಂಡವನ್ನು ಮಣಿಸಿತು. ‘ಎ’ ಗುಂಪಿನ ಪಂದ್ಯದ ಆರನೇ ನಿಮಿಷದಲ್ಲೇ ತಲ್ವಿಂದರ್ ಸಿಂಗ್ ಐಒಸಿಎಲ್‌ಗೆ ಮುನ್ನಡೆ ಗಳಿಸಿಕೊಟ್ಟರು.

10ನೇ ನಿಮಿಷದಲ್ಲಿ ಪುಲಿಯಂಡ ತಿಮ್ಮಣ್ಣ ಗೋಲು ಗಳಿಸಿ ತಿರುಗೇಟು ನೀಡಿದರು. ಗುರ್ಜಿಂದರ್ ಸಿಂಗ್ (11ನೇ ನಿಮಿಷ) ಮತ್ತು ಯುವರಾಜ್ ವಾಲ್ಮೀಕಿ (16ನೇ ನಿ) ಅವರ ಗೋಲಿನ ಮೂಲಕ ಐಒಸಿಎಲ್ ಮತ್ತೆ ಮುನ್ನಡೆ ಸಾಧಿಸಿತು. 29 ಮತ್ತು 54ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ತಲ್ವಿಂದರ್ ಹ್ಯಾಟ್ರಿಕ್‌ ಪೂರ್ಣಗೊಳಿಸಿದರು. 56ನೇ ನಿಮಿಷದಲ್ಲಿ ಇಕ್ತಿದಾರ್ ಇಶ್ರತ್‌ ಗೋಲು ಗಳಿಸಿದಾಗ ಕಸ್ಟಮ್ಸ್ ತಂಡದಲ್ಲಿ ಭರವಸೆ ಮೂಡಿತು. ಆದರೆ ತಲ್ವಿಂದರ್ (58ನೇ ನಿ) ಹಾಗೂ ಯುವರಾಜ್ ವಾಲ್ಮೀಕಿ (60ನೇ ನಿ) ಆ ತಂಡದ ನಿರೀಕ್ಷೆಗಳನ್ನು ಬುಡಮೇಲು ಮಾಡಿದರು. 

ಹಾಕಿ ಕರ್ನಾಟಕಕ್ಕೆ ಮತ್ತೆ ಡ್ರಾ: ‘ಬಿ’ ಗುಂಪಿನ ಪಂದ್ಯದಲ್ಲಿ ಆತಿಥೇಯ ಹಾಕಿ ಕರ್ನಾಟಕ ತಂಡ ಆರ್ಮಿ ಎಲೆವನ್ ಎದುರು 1–1ರಲ್ಲಿ ಡ್ರಾ ಮಾಡಿಕೊಂಡಿತು. ಈ ಮೂಲಕ ಒಂದು ಜಯ ಮತ್ತು ಎರಡು ಡ್ರಾದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲೇ ಉಳಿಯಿತು.

ಪೃಥ್ವಿರಾಜ್ (28ನೇ ನಿ) ಗಳಿಸಿದ ಗೋಲಿನ ಮೂಲಕ ಪ್ರಥಮಾರ್ಧದಲ್ಲಿ ಮುನ್ನಡೆ ಸಾಧಿಸಿದ್ದ ಹಾಕಿ ಕರ್ನಾಟಕ 52ನೇ ನಿಮಿಷದಲ್ಲಿ ಗೋಲು ಬಿಟ್ಟುಕೊಟ್ಟು ಕೈಸುಟ್ಟುಕೊಂಡಿತು. ಸಿರಾಜ್ ಅಲಿರಾ ಆರ್ಮಿ ಇಲೆವನ್‌ಗಾಗಿ ಗೋಲು ಗಳಿಸಿದರು.

ಇಂದಿನ ಪಂದ್ಯಗಳು

ಏರ್ ಇಂಡಿಯಾ, ಮುಂಬಯಿ – ಇಂಡಿಯನ್‌ ಏರ್‌ ಫೋರ್ಸ್‌, ದೆಹಲಿ

ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್ – ಇಂಡಿಯನ್ ನೇವಿ

Post Comments (+)