ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಪದಕದತ್ತ ನಿಖತ್ ದಾಪುಗಾಲು

ವಿಶ್ವ ಚಾಂಪಿಯನ್‌ಷಿಪ್‌ ಫೈನಲ್‌ಗೆ ಭಾರತದ ಬಾಕ್ಸರ್‌: ಮನೀಷಾ. ಪರ್ವೀನ್‌ಗೆ ಕಂಚು
Last Updated 18 ಮೇ 2022, 13:20 IST
ಅಕ್ಷರ ಗಾತ್ರ

ನವದೆಹಲಿ: ಎದುರಾಳಿಯನ್ನು ಸುಲಭವಾಗಿ ಮಣಿಸಿದ ಭಾರತದ ನಿಖತ್ ಜರೀನ್‌ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ ಫೈನಲ್ ತಲುಪಿದ್ದಾರೆ. ಮನೀಷಾ ಮೌನ್‌ ಮತ್ತು ಪರ್ವೀನ್ ಹೂಡಾ ಸೆಮಿಫೈನಲ್‌ನಲ್ಲಿ ಸೋತು ಕಂಚಿನ ಪದಕ ಗಳಿಸಿದರು.

ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ 52 ಕೆಜಿ ವಿಭಾಗದ ಸೆಮಿಫೈನಲ್ ಬೌಟ್‌ನಲ್ಲಿ ಬುಧವಾರ ನಿಖತ್‌ 5–0ಯಿಂದ ಬ್ರೆಜಿಲ್‌ನ ಕ್ಯಾರೋಲಿನ್‌ ಡಿ ಅಲ್ಮೇಡಾ ಅವರಿಗೆ ಸೋಲಿನ ಪಂಚ್‌ ನೀಡಿದರು.

ವಿಶ್ವಜೂನಿಯರ್ ವಿಭಾಗದ ಮಾಜಿ ಚಾಂಪಿಯನ್ ಆಗಿರುವ ನಿಖತ್‌, ಇದೇ ಮೊದಲ ಬಾರಿ ಸೀನಿಯರ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಿದ್ದು, ಈ ಬೌಟ್‌ನಲ್ಲಿ ಅತ್ಯಂತ ತಾಳ್ಮೆಯಿಂದ ಸೆಣಸಿದರು. ಕ್ಯಾರೋಲಿನ್ ಎದುರು ಸಂಪೂರ್ಣ ಪಾರಮ್ಯ ಮೆರೆದರು.

ಹೈದರಾಬಾದ್‌ನ ನಿಖತ್‌ಇಲ್ಲಿ ಪದಕ ಜಯಸಿದರೆ ಎಲೀಟ್‌ ಬಾಕ್ಸರ್‌ಗಳ ಸಾಲಿಗೆ ಸೇರಲಿದ್ದಾರೆ. ಇದುವರೆಗೆ ಆರು ಬಾರಿಯ ಚಾಂಪಿಯನ್‌ ಮೇರಿ ಕೋಮ್‌, ಸರಿತಾ ದೇವಿ, ಜೆನ್ನಿ ಆರ್‌.ಎಲ್. ಮತ್ತು ಲೇಖಾ ಸಿ. ಮಾತ್ರ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

57 ಕೆಜಿ ವಿಭಾಗದ ನಾಲ್ಕರ ಘಟ್ಟದ ಬೌಟ್‌ನಲ್ಲಿ ಮನೀಷಾ 0–5ರಿಂದ ಇಟಲಿಯ ಇರ್ಮಾ ಟೆಸ್ಟಾ ಎದುರು ಎಡವಿದರು. ಟೆಸ್ಟಾ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.

ಪರ್ವೀನ್ ಹೂಡಾ 63 ಕೆಜಿ ವಿಭಾಗದ ಸೆಮಿಫೈನಲ್ ಬೌಟ್‌ನಲ್ಲಿ 1–4ರಿಂದ ಯೂರೋಪಿಯನ್ ಚಾಂಪಿಯನ್‌ಷಿಪ್ ಕಂಚು ವಿಜೇತೆ, ಐರ್ಲೆಂಡ್‌ನ ಆ್ಯಮಿ ಬ್ರಾಡ್‌ಹಸ್ಟ್‌ ಎದುರು ಸೋತರು.

2006ರ ಆವೃತ್ತಿಯಲ್ಲಿ ಭಾರತ ನಾಲ್ಕು ಚಿನ್ನ, ಒಂದು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು (ಒಟ್ಟು ಎಂಟು) ಜಯಿಸಿದ್ದು, ಇದುವರೆಗಿನ ಶ್ರೇಷ್ಠ ಸಾಧನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT