ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್‌ ಕೋಚ್‌ ಆಗಿ ಮೊಹಮ್ಮದ್‌ ನೇಮಕ

Last Updated 15 ಜನವರಿ 2019, 15:32 IST
ಅಕ್ಷರ ಗಾತ್ರ

ನವದೆಹಲಿ: ಮೊಹಮ್ಮದ್‌ ಅಲಿ ಕ್ವಾಮರ್‌ ಅವರು ಭಾರತ ಮಹಿಳಾ ಬಾಕ್ಸಿಂಗ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದಾರೆ. ಈ ಹುದ್ದೆ ಅಲಂಕರಿಸಿದ ಅತಿ ಕಿರಿಯ ಎಂಬ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ.

ಭಾರತ ಬಾಕ್ಸಿಂಗ್‌ ಫೆಡರೇಷನ್‌ (ಬಿಎಫ್‌ಐ) ಈ ಹಿಂದೆ ಕೋಚ್‌ ಆಗಿದ್ದ ಶಿವ ಸಿಂಗ್‌ ಅವರ ಬದಲು 38 ವರ್ಷ ವಯಸ್ಸಿನ ಕ್ವಾಮರ್‌ಗೆ ಈ ಜವಾಬ್ದಾರಿ ವಹಿಸಿದೆ.

ಅರ್ಜುನ ಪ್ರಶಸ್ತಿ ‍ಪುರಸ್ಕೃತರಾಗಿರುವ ಮೊಹಮ್ಮದ್‌ ಅವರು ಮೂರು ವರ್ಷಗಳ ಕಾಲ ರೈಲ್ವೇಸ್‌ ಸ್ಪೋರ್ಟ್ಸ್‌ ಪ್ರೊಮೋಷನ್‌ ಬೋರ್ಡ್‌ನ (ಆರ್‌ಎಸ್‌ಪಿಬಿ) ಮಹಿಳಾ ತಂಡದ ಕೋಚ್‌ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಷ್ಟ್ರೀಯ ಶಿಬಿರದಲ್ಲಿ ಸಹಾಯಕ ಕೋಚ್‌ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾಕೂಟದ ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಬಾಕ್ಸರ್‌ ಎಂಬ ದಾಖಲೆಯೂ ಅವರ ಹೆಸರಿನಲ್ಲಿದೆ. 2002ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ನಡೆದಿದ್ದ ಕೂಟದ ಲೈಟ್‌ ಫ್ಲೈವೇಟ್‌ ವಿಭಾಗದಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿತ್ತು.

‘ಮಹಿಳಾ ತಂಡದ ಮುಖ್ಯ ಕೋಚ್‌ ಆಗಿ ನೇಮಕವಾದ ವಿಷಯ ಸೋಮವಾರ ರಾತ್ರಿ ತಿಳಿಯಿತು. ವಿಷಯ ಗೊತ್ತಾದ ಕೂಡಲೇ ಖುಷಿಯ ಜೊತೆ ಅಚ್ಚರಿಯೂ ಆಯಿತು. ನನ್ನ ಮೇಲೆ ನಂಬಿಕೆ ಇಟ್ಟು ಈ ಹುದ್ದೆಗೆ ನೇಮಕ ಮಾಡಿದ್ದಕ್ಕಾಗಿ ಭಾರತ ಬಾಕ್ಸಿಂಗ್‌ ಫೆಡರೇಷನ್‌ಗೆ ಆಭಾರಿಯಾಗಿದ್ದೇನೆ. ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತೇನೆ’ ಎಂದು ಕೋಲ್ಕತ್ತದ ಮೊಹಮ್ಮದ್ ಸಂತಸ ವ್ಯಕ್ತಪಡಿಸಿದ್ದಾರೆ.

ಬಿಎಫ್‌ಐ ಇತ್ತೀಚೆಗೆ ಕರ್ನಾಟಕದ ಸಿ.ಎ.ಕುಟ್ಟಪ್ಪ ಅವರನ್ನು ಪುರುಷರ ತಂಡದ ಮುಖ್ಯ ಕೋಚ್‌ ಆಗಿ ನೇಮಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT