ಶುಕ್ರವಾರ, ಡಿಸೆಂಬರ್ 6, 2019
21 °C

ಫೈನಲ್‌ ಪ್ರವೇಶಿಸಿದ ಮೇರಿಕೋಮ್‌: ಆರನೇ ಚಿನ್ನಕ್ಕೆ ಇನ್ನೊಂದೇ ‘ಪಂಚ್‌’

Published:
Updated:
Deccan Herald

ನವದೆಹಲಿ: ಮಹಿಳೆಯರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಆರನೇ ಚಿನ್ನದ ಪದಕಕ್ಕೆ ಕೊರಳೊಡ್ಡುವ ಕನಸು ಕಾಣುತ್ತಿರುವ ಭಾರತದ ಎಂ.ಸಿ.ಮೇರಿ ಕೋಮ್‌ ಈ ಹಾದಿಯಲ್ಲಿ ಇನ್ನೊಂದೇ ಹೆಜ್ಜೆ ಇಡಬೇಕಿದೆ.

48 ಕೆ.ಜಿ. ವಿಭಾಗದಲ್ಲಿ ಮಣಿಪುರದ ಅನುಭವಿ ಬಾಕ್ಸರ್‌ ಮೇರಿ ಫೈನಲ್‌ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಸೆಮಿಫೈನಲ್‌ ಹಣಾಹಣಿಯಲ್ಲಿ 35 ವರ್ಷ ವಯಸ್ಸಿನ ಮೇರಿ 5–0 ಪಾಯಿಂಟ್ಸ್‌ನಿಂದ ಉತ್ತರ ಕೊರಿಯಾದ ಮಿ ಹ್ಯಾಂಗ್‌ ಕಿಮ್‌ ಅವರನ್ನು ಪರಾಭವಗೊಳಿಸಿದರು.

ಶನಿವಾರ ನಡೆಯುವ ಚಿನ್ನದ ಪದಕದ ಹೋರಾಟದಲ್ಲಿ ಮೇರಿ, ಉಕ್ರೇನ್‌ನ ಹನ್ನಾ ಒಖೋಟಾ ವಿರುದ್ಧ ಸೆಣಸಲಿದ್ದಾರೆ.

ಈ ಹಿಂದೆ ಪೋಲೆಂಡ್‌ನಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ವೊಂದರಲ್ಲಿ ಮೇರಿ ಮತ್ತು ಒಖೋಟಾ ಮುಖಾಮುಖಿಯಾಗಿದ್ದರು. ಆಗ ಭಾರತದ ಬಾಕ್ಸರ್‌ ವಿಜಯಿಯಾಗಿದ್ದರು.

ವಿಶ್ವ ಚಾಂಪಿಯನ್‌ಷಿ‍ಪ್‌ನಲ್ಲಿ ಅತಿ ಹೆಚ್ಚು ಪದಕಗಳನ್ನು ಗೆದ್ದ ಕ್ಯೂಬಾದ ಫೆಲಿಕ್ಸ್‌ ಸೇವನ್‌ ಅವರ ದಾಖಲೆ ಸರಿಗಟ್ಟಲು ಮೇರಿ ಅವರಿಗೆ ಉತ್ತಮ ಅವಕಾಶ ಸಿಕ್ಕಿದೆ. ಅದಕ್ಕಾಗಿ ಅವರು ಶನಿವಾರ ಚಿನ್ನದ ಪದಕ ಗೆಲ್ಲಬೇಕಿದೆ.

ಫೆಲಿಕ್ಸ್‌ ಅವರು 1986 ರಿಂದ 1989ರ ಅವಧಿಯಲ್ಲಿ ಪುರುಷರ ಹೆವಿವೇಟ್‌ ವಿಭಾಗದಲ್ಲಿ ಒಟ್ಟು ಆರು ಚಿನ್ನ ಮತ್ತು ಒಂದು ಬೆಳ್ಳಿಯ ಪದಕ ಜಯಿಸಿದ್ದರು. ಮೇರಿ ಖಾತೆಯಲ್ಲಿ ಐದು ಚಿನ್ನ ಮತ್ತು ಒಂದು ಬೆಳ್ಳಿಯ ಪದಕ ಇದೆ.

‘ಹೋದ ವರ್ಷ ನಡೆದಿದ್ದ ಏಷ್ಯನ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಹ್ಯಾಂಗ್‌ ಕಿಮ್‌ ವಿರುದ್ಧ ಸುಲಭವಾಗಿ ಜಯಿಸಿದ್ದೆ. ಹೀಗಾಗಿ ಸೆಮಿಫೈನಲ್‌ನಲ್ಲಿ ವಿಶ್ವಾಸದಿಂದಲೇ ಹೋರಾಡಿದೆ. ಫೈನಲ್‌ ಪ್ರವೇಶಿಸಿರುವುದು ಖುಷಿ ನೀಡಿದೆ’ ಎಂದು ಮೇರಿ ಸಂತಸ ವ್ಯಕ್ತಪಡಿಸಿದ್ದಾರೆ.

ಲವ್ಲಿನಾಗೆ ಕಂಚು: 69 ಕೆ.ಜಿ. ವಿಭಾಗದಲ್ಲಿ ಭಾರತದ ಭರವಸೆಯಾಗಿದ್ದ ಲವ್ಲಿನಾ ಬೊರ್ಗೊಹೇನ್‌ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಸೆಮಿಫೈನಲ್‌ ಪೈಪೋಟಿಯಲ್ಲಿ ಲವ್ಲಿನಾ 0–4ರಲ್ಲಿ ಚೀನಾ ತೈಪೆಯ ನಿಯೆನ್‌ ಚಿನ್‌ ವಿರುದ್ಧ ಸೋತರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು