ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಿದ ಬಿಡಬ್ಲ್ಯುಎಫ್‌

Last Updated 28 ಆಗಸ್ಟ್ 2020, 14:41 IST
ಅಕ್ಷರ ಗಾತ್ರ

ನವದೆಹಲಿ: ಪ್ರತಿ ಟೂರ್ನಿಗೂ ಮೊದಲು ಪ್ರತಿಯೊಬ್ಬ ಆಟಗಾರ ಮತ್ತು ತಂಡದ ಸಿಬ್ಬಂದಿ ಕನಿಷ್ಠ ಒಂದು ಬಾರಿ ಕೋವಿಡ್–19 ಪರೀಕ್ಷೆ ಮಾಡಿಸಿಕೊಳ್ಳುವುದನ್ನು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್‌) ಕಡ್ಡಾಯಗೊಳಿಸಿದೆ.

‘ವೈರಾಣು ಹಾವಳಿಯಿಂದಾಗಿ ಮಾರ್ಚ್ ತಿಂಗಳಿಂದ ಸ್ಪರ್ಧಾತ್ಮಕ ಚಟುವಟಿಕೆ ನಡೆಸದೇ ಇರುವ ಬಿಡಬ್ಲ್ಯುಎಫ್‌ ಇದೀಗ ಟೂರ್ನಿಗಳಿಗೆ ಸಜ್ಜಾಗಿದ್ದು ಈ ಋತುವಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಸುರಕ್ಷಾ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಿದೆ. ಎಚ್‌ಎಸ್‌ಬಿಸಿಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ಕೋವಿಡ್ ಪರೀಕ್ಷೆಗೆ ಸೌಲಭ್ಯಗಳನ್ನು ಕಲ್ಪಿಸಲಾಗುವುದು’ ಎಂದು ಬಿಡಬ್ಲ್ಯುಎಫ್‌ ಶುಕ್ರವಾರ ತಿಳಿಸಿದೆ.

‘ಜೀವಸುರಕ್ಷಾ ವಿಧಾನಗಳನ್ನು ಅಳವಡಿಸಿ ನಡೆಸಲಾಗುವ ಟೂರ್ನಿಗಳಲ್ಲಿ ಪಾಲ್ಗೊಳ್ಳುವವರ ಮಾನ್ಯತೆಯನ್ನು ಹಸಿರು, ಕಿತ್ತಳೆ ಮತ್ತು ಕೆಂಪು ಎಂದು ವರ್ಗೀಕರಿಸಲಾಗುವುದು. ಹಸಿರು ವಿಭಾಗದವರು ತಮ್ಮ ತವರು ನಾಡಿನಿಂದ ಹೊರಡುವ ಮೊದಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ವರದಿ ನೆಗೆಟಿವ್ ಆಗಿದ್ದರೆ ಮಾತ್ರ ಪ್ರಯಾಣ ಬೆಳೆಸಬೇಕು. ಅದು ಇದ್ದರೆ ಮಾತ್ರ ಮಾನ್ಯತಾ ಪತ್ರವನ್ನು ನೀಡಲಾಗುವುದು. ಕಿತ್ತಳೆ ಮತ್ತು ಕೆಂಪು ವಿಭಾಗದವರು ತಾಪಮಾನ ಪರೀಕ್ಷೆಗೆ ಒಳಗಾದರೆ ಸಾಕು’ ಎಂದು ತಿಳಿಸಲಾಗಿದೆ.

ಅಕ್ಟೋಬರ್ ಮೂರರಿಂದ 11ರ ವರೆಗೆ ನಡೆಯಲಿರುವ ಥಾಮಸ್ ಮತ್ತು ಉಬರ್ ಕಪ್ ಮೂಲಕ ಈ ಋತುವನ್ನು ಪುನರಾರಂಭಿಸಲು ನಿರ್ಧರಿಸಿದ್ದು ಇದಕ್ಕೆ ಬರುವವರು ಕ್ವಾರಂಟೈನ್‌ಗೆ ಒಳಗಾಗುವ ಅಗತ್ಯವಿಲ್ಲ. ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿ ಮತ್ತು ಪ್ರಯಾಣದ ವಿವರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿದ್ದರೆ ಸಾಕು. ಎದುರಾಳಿಯ ಕೈಕುಲುಕುವ ಬದಲು ರ‍್ಯಾಕೆಟ್‌ಗೆ ರ‍್ಯಾಕೆಟ್‌ ತಾಗಿಸಬೇಕು. ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸುವಾಗ ಕೈಕುಲುಕುವ ಬದಲು ಎದೆಮೇಲೆ ಕೈ ಇರಿಸಿದರೆ ಸಾಕು. ಅಂಗಣದ ಎರಡೂ ತುದಿಗಳಲ್ಲಿ ಷಟಲ್ ಕಾಕ್ ಡಿಸ್ಪೆನ್ಸರ್ ಇರಿಸಲಾಗುವುದು. ಹೊಸ ಷಟಲ್ ಕಾಕ್ ಅದರಿಂದಲೇ ತೆಗೆಯಬೇಕು. ಹಳೆಯದನ್ನು ಸರ್ವಿಸ್ ಜಡ್ಜ್‌ಗೆ ಕೊಡಬೇಕು. ಆದರೆ ಇದಕ್ಕೆ ರ‍್ಯಾಕೆಟ್‌ ಬಳಸಬೇಕು. ಷಟಲ್ ಕಾಕ್ ಡಿಸ್ಪೆನ್ಸರ್‌ಗೆ ಹಾಕುವುದಕ್ಕೂ ಅವಕಾಶವಿದೆ’ ಎಂದು ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT