ಗುರುವಾರ , ಡಿಸೆಂಬರ್ 12, 2019
26 °C
ಇಂದಿನಿಂದ ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಫೈನಲ್ಸ್‌ ಬ್ಯಾಡ್ಮಿಂಟನ್‌

ಬ್ಯಾಡ್ಮಿಂಟನ್‌ ಟೂರ್ನಿ: ಸಿಂಧು, ಸಮೀರ್‌ಗೆ ಚಿನ್ನದ ಆಸೆ

Published:
Updated:
Deccan Herald

ಗುವಾಂಗ್‌ಜೌ: ಭಾರತದ ಪಿ.ವಿ.ಸಿಂಧು ಮತ್ತು ಸಮೀರ್‌ ವರ್ಮಾ ಅವರು ಬುಧವಾರದಿಂದ ನಡೆಯುವ ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಫೈನಲ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಚಿನ್ನದ ಪದಕ ಜಯಿಸುವತ್ತ ಚಿತ್ತ ನೆಟ್ಟಿದ್ದಾರೆ.

ತಿಯಾನೆ ಜಿಮ್ನಾಷಿಯಮ್‌ನಲ್ಲಿ ನಡೆಯುವ ಮೊದಲ ಹೋರಾಟದಲ್ಲಿ ಸಿಂಧು, ಜಪಾನ್‌ನ ಅಕಾನೆ ಯಮಗುಚಿ ಎದುರು ಆಡಲಿದ್ದಾರೆ.

ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಪದಕ ಗೆದ್ದ ಸಾಧನೆ ಮಾಡಿದ್ದ ಸಿಂಧು, ಈ ವರ್ಷ ನಡೆದಿದ್ದ ವಿಶ್ವ ಚಾಂ‍ಪಿಯನ್‌ಷಿಪ್‌, ಕಾಮನ್‌ವೆಲ್ತ್‌ ಮತ್ತು ಏಷ್ಯನ್‌ ಕ್ರೀಡಾಕೂಟಗಳಲ್ಲಿ ಬೆಳ್ಳಿಯ ಪದಕಗಳಿಗೆ ಕೊರಳೊಡ್ಡಿದ್ದರು. ಜೊತೆಗೆ ಇಂಡಿಯಾ ಓಪನ್‌ ಮತ್ತು ಥಾಯ್ಲೆಂಡ್‌ ಓಪನ್‌ ಟೂರ್ನಿಗಳಲ್ಲಿ ರನ್ನರ್‌ ಅಪ್‌ ಆಗಿದ್ದರು.

23 ವರ್ಷ ವಯಸ್ಸಿನ ಸಿಂಧು, ಯಮಗುಚಿ ಎದುರು ಒಟ್ಟಾರೆ 9–4ರ ಗೆಲುವಿನ ದಾಖಲೆ ಹೊಂದಿದ್ದಾರೆ. ಆದರೆ ಈ ವರ್ಷ ನಾಲ್ಕು ಬಾರಿ ಸೋತಿದ್ದಾರೆ. ಹೀಗಾಗಿ ಬುಧವಾರದ ಹಣಾಹಣಿಯಲ್ಲೂ ಭಾರತದ ಆಟಗಾರ್ತಿಗೆ ಕಠಿಣ ಸವಾಲು ಎದುರಾಗುವ ನಿರೀಕ್ಷೆ ಇದೆ.

‘ವಿಶ್ವ ಟೂರ್‌ ಫೈನಲ್ಸ್‌ನಲ್ಲಿ ಚಿನ್ನದ ಪದಕ ಜಯಿಸುವುದು ನನ್ನ ಗುರಿ. ಇದಕ್ಕಾಗಿ ಸಾಕಷ್ಟು ಸಿದ್ಧತೆ ಮಾಡಿಕೊಂಡು ಇಲ್ಲಿಗೆ ಬಂದಿದ್ದೇನೆ. ಟೂರ್ನಿಯಲ್ಲಿ ವಿಶ್ವದ ಬಲಿಷ್ಠ ಸ್ಪರ್ಧಿಗಳು ಭಾಗವಹಿಸುತ್ತಾರೆ. ಹೀಗಾಗಿ ಗುಂ‍ಪು ಹಂತದ ಎಲ್ಲಾ ಪಂದ್ಯಗಳಲ್ಲೂ ಕಠಿಣ ಸವಾಲು ಎದುರಾಗಬಹುದು. ಹೀಗಿದ್ದರೂ ಛಲ ಬಿಡದೆ ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಿಸುತ್ತೇನೆ’ ಎಂದು ಸಿಂಧು ಹೇಳಿದ್ದಾರೆ.

 ಪುರುಷರ ಸಿಂಗಲ್ಸ್‌ನಲ್ಲಿ ಕಣದಲ್ಲಿರುವ ಸಮೀರ್‌ ವರ್ಮಾಗೆ ಮೊದಲ ಸುತ್ತಿನಲ್ಲಿ ಜಪಾನ್‌ನ ಕೆಂಟೊ ಮೊಮೊಟಾ ಸವಾಲು ಎದುರಾಗಲಿದೆ.

ಮೊದಲ ಸಲ ಟೂರ್ನಿಗೆ ಅರ್ಹತೆ ಗಳಿಸಿರುವ ಸಮೀರ್‌, ಈ ವರ್ಷ ನಡೆದಿದ್ದ ಸ್ವಿಸ್‌ ಓಪನ್‌ ಟೂರ್ನಿಯ ಪಂದ್ಯದಲ್ಲಿ ಮೊಮೊಟಾ ಅವರನ್ನು ಸೋಲಿಸಿದ್ದರು. ಹಿಂದಿನ ಈ ಗೆಲುವು ಭಾರತದ ಆಟಗಾರನ ಮನೋಬಲ ಹೆಚ್ಚುವಂತೆ ಮಾಡಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು