ಭಾರತ ಬಾಕ್ಸಿಂಗ್ ತಂಡದ ಕೋಚ್ ಸ್ಥಾನಕ್ಕೆ ಕನ್ನಡಿಗ ಕುಟ್ಟಪ್ಪ ಮರು ನೇಮಕ

ನವದೆಹಲಿ: ಕನ್ನಡಿಗ ಸಿ.ಎ.ಕುಟ್ಟಪ್ಪ ಅವರು ಭಾರತ ಪುರುಷರ ಬಾಕ್ಸಿಂಗ್ ತಂಡದ ಮುಖ್ಯ ಕೋಚ್ ಆಗಿ ಮತ್ತೊಂದು ಅವಧಿಗೆ ನೇಮಕಗೊಂಡಿದ್ದಾರೆ.
ಭಾರತ ತಂಡದ ಹೈ ಪರ್ಫಾಮೆನ್ಸ್ ನಿರ್ದೇಶಕ ಬರ್ನಾರ್ಡ್ ಡಾನ್ ಅವರ ಸಲಹೆಯ ಮೇರೆಗೆ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಕುಟ್ಟಪ್ಪ ಅವರನ್ನು ನೇಮಿಸುವ ನಿರ್ಧಾರವನ್ನು ಭಾರತ ಬಾಕ್ಸಿಂಗ್ ಫೆಡರೇಷನ್ (ಬಿಎಫ್‌ಐ) ತೆಗೆದುಕೊಂಡಿದೆ.
ಮೈಸೂರಿನ ಕುಟ್ಟಪ್ಪ ಅವರು 2018 ರಿಂದ 2021ರ ಅಕ್ಟೋಬರ್‌ವರೆಗೆ ಪುರುಷರ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಆ ಬಳಿಕ ನರೇಂದರ್ ರಾಣಾ ಅವರನ್ನು ಕೋಚ್ ಆಗಿ ನೇಮಕ ಮಾಡಲಾಗಿತ್ತು.
‘ಫೆಡರೇಷನ್‌ನ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕುಟ್ಟಪ್ಪ ಅವರು ಕೋಚಿಂಗ್ ತಂಡದಲ್ಲಿರಬೇಕು ಎಂಬುದು ಬರ್ನಾರ್ಡ್ ಬಯಸಿದ್ದರು’ ಎಂದು ಬಿಎಫ್‌ಐ ಕಾರ್ಯದರ್ಶಿ ಹೇಮಂತ್ ಕಲಿತಾ ಹೇಳಿದ್ದಾರೆ.
ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿದ್ದ ಬೆನ್ನಲ್ಲೇ ರಾಣಾ ಅವರು ಕೋಚಿಂಗ್ ತಂಡದಲ್ಲಿದ್ದ ಎಲ್ಲರನ್ನೂ ಬದಲಾಯಿಸಿ ಹೊಸ ತಂಡವನ್ನು ಕಟ್ಟಿದ್ದರು. ಮುಖ್ಯ ಕೋಚ್ ಹುದ್ದೆ ಕಳೆದುಕೊಂಡಿದ್ದರೂ, ಕುಟ್ಟಪ್ಪ ಅವರು ಕೋಚಿಂಗ್ ತಂಡಲ್ಲಿದ್ದರು.
ಮುಂದಿನ ದಿನಗಳಲ್ಲಿ ಪುರುಷರ ವಿಶ್ವ ಚಾಂಪಿಯನ್‌ಷಿಪ್, ಏಷ್ಯನ್ ಕ್ರೀಡಾಕೂಟ ಮತ್ತು ಒಲಿಂಪಿಕ್ಸ್ ಒಳಗೊಂಡಂತೆ ಪ್ರಮುಖ ಕೂಟಗಳು ಇರುವುದರಿಂದ ಕುಟ್ಟಪ್ಪ ಅವರು 2024ರ ಪ್ಯಾರಿಸ್ ಒಲಿಂಪಿಕ್ಸ್‌ವರೆಗೆ ಮುಖ್ಯ ಕೋಚ್ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆಯಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.