ಕೆನಡಾ ಓಪನ್‌ ಬ್ಯಾಡ್ಮಿಂಟನ್‌: ಕ್ವಾರ್ಟರ್ ಫೈನಲ್‌ಗೆ ಕಶ್ಯಪ್‌, ಸೌರಭ್‌

ಮಂಗಳವಾರ, ಜೂಲೈ 23, 2019
24 °C
ಭಾರತದ ಸ್ಪರ್ಧಿಗಳ ಗೆಲುವಿನ ಓಟ

ಕೆನಡಾ ಓಪನ್‌ ಬ್ಯಾಡ್ಮಿಂಟನ್‌: ಕ್ವಾರ್ಟರ್ ಫೈನಲ್‌ಗೆ ಕಶ್ಯಪ್‌, ಸೌರಭ್‌

Published:
Updated:
Prajavani

ಕ್ಯಾಲ್ಗರಿ: ಭಾರತದ ಪರುಪಳ್ಳಿ ಕಶ್ಯಪ್‌ ಮತ್ತು ಸೌರಭ್‌ ವರ್ಮಾ ಅವರು ಕೆನಡಾ ಓಪನ್‌ ಸೂಪರ್‌–100 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಕಶ್ಯಪ್‌ 23–21, 21–23, 21–19ರಲ್ಲಿ ಚೀನಾದ ರೆನ್‌ ಪೆಂಗ್‌ ಬೊ ಎದುರು ಗೆದ್ದರು. ಈ ಹೋರಾಟ ಒಂದು ಗಂಟೆ 24 ನಿಮಿಷ ನಡೆಯಿತು.

ಟೂರ್ನಿಯಲ್ಲಿ ಆರನೇ ಶ್ರೇಯಾಂಕ ಹೊಂದಿರುವ ಕಶ್ಯಪ್‌, ಮೊದಲ ಗೇಮ್‌ನಲ್ಲಿ ಎದುರಾಳಿಯಿಂದ ತೀವ್ರ ಪೈಪೋಟಿ ಎದುರಿಸಿದರು. ರೋಚಕ ಘಟ್ಟದಲ್ಲಿ ಛಲದಿಂದ ಹೋರಾಡಿದ ಭಾರತದ ಆಟಗಾರ ಚುರುಕಾಗಿ ಎರಡು ಪಾಯಿಂಟ್ಸ್‌ ಕಲೆಹಾಕಿ ಗೆದ್ದರು. 

ಆದರೆ ಎರಡನೇ ಗೇಮ್‌ನಲ್ಲಿ ಚೀನಾದ ಆಟಗಾರ ತಿರುಗೇಟು ನೀಡಿ 1–1 ಸಮಬಲ ಸಾಧಿಸಿದರು.

ನಿರ್ಣಾಯಕ ಎನಿಸಿದ್ದ ಮೂರನೇ ಗೇಮ್‌ನಲ್ಲೂ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತು. ಉಭಯ ಆಟಗಾರರು 19–19ರಿಂದ ಸಮಬಲ ಹೊಂದಿದ್ದರು. ಈ ಹಂತದಲ್ಲಿ ಪರಿಣಾಮಕಾರಿ ಆಟ ಆಡಿದ ಕಶ್ಯಪ್‌ ಸತತ ಎರಡು ಪಾಯಿಂಟ್ಸ್‌ ಕಲೆಹಾಕಿ ಸಂಭ್ರಮಿಸಿದರು.

ಮುಂದಿನ ಸುತ್ತಿನಲ್ಲಿ ಕಶ್ಯಪ್‌, ಫ್ರಾನ್ಸ್‌ನ ಲುಕಾಸ್‌ ಕ್ಲಾಯೆರ್‌ಬೌಟ್‌ ಎದುರು ಸೆಣಸಲಿದ್ದಾರೆ.

16ರ ಘಟ್ಟದ ಹಣಾಹಣಿಯಲ್ಲಿ ಸೌರಭ್‌ 21–13, 15–21, 21–15ರಲ್ಲಿ ಚೀನಾದ ಸನ್‌ ಫೀ ಕ್ಸಿಯಾಂಗ್‌ ಅವರನ್ನು ಪರಾಭವಗೊಳಿಸಿದರು.

ಕ್ವಾರ್ಟರ್‌ ಫೈನಲ್‌ನಲ್ಲಿ ಸೌರಭ್‌, ಚೀನಾದ ಲೀ ಶಿ ಫೆಂಗ್‌ ಎದುರು ಸೆಣಸಲಿದ್ದಾರೆ.

‘ಪ್ರೀ ಕ್ವಾರ್ಟರ್‌ ಪಂದ್ಯ ಸವಾಲಿನದ್ದಾಗಿತ್ತು. ಈ ಹಣಾಹಣಿಯಲ್ಲಿ ಗೆದ್ದು ಎಂಟರ ಘಟ್ಟ ಪ್ರವೇಶಿಸಿದ್ದು ಖುಷಿ ನೀಡಿದೆ’ ಎಂದು ಕಶ್ಯಪ್‌ ಟ್ವೀಟ್‌ ಮಾಡಿದ್ದಾರೆ.

‘ಕ್ಸಿಯಾಂಗ್‌ ಎದುರಿನ ಪಂದ್ಯದಲ್ಲಿ ಯೋಜನೆಗೆ ಅನುಗುಣವಾಗಿ ಆಡಿದ್ದರಿಂದ ಗೆಲುವು ಒಲಿಯಿತು’ ಎಂದು ಸೌರಭ್‌ ನುಡಿದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !