ಸೋಮವಾರ, ಜೂನ್ 21, 2021
21 °C

ಒಲಿಂಪಿಕ್ಸ್‌: ಕೆನಡಾ ಈಜು ತಂಡದ ಅಭ್ಯಾಸ ರದ್ದು

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಕೆನಡಾದ ಈಜು ತಂಡ ಟೋಕಿಯೊ ಒಲಿಂಪಿಕ್ಸ್‌ಗೂ ಮೊದಲು ಜಪಾನ್‌ನಲ್ಲಿ ನಡೆಸಲು ಉದ್ದೇಶಿಸಿದ್ದ ತರಬೇತಿಯನ್ನು ಕೋವಿಡ್‌ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರದ್ದುಗೊಳಿಸಿದೆ ಎಂದು ವರದಿಯಾಗಿದೆ. ಒಲಿಂಪಿಕ್ಸ್‌ಗೆ ಸಂಬಂಧಿಸಿ ಅನೇಕ ದೇಶಗಳ ತಂಡಗಳು ಈಗಾಗಲೇ ತರಬೇತಿಯನ್ನು ರದ್ದುಗೊಳಿಸಿವೆ.

ಈಜುಪಟುಗಳು ಮತ್ತು ಕೋಚ್‌ಗಳು ಒಳಗೊಂಡ ಸುಮಾರು 60 ಮಂದಿಯ ತಂಡ ಟೋಕಿಯೊದಿಂದ ಸುಮಾರು 250 ಕಿಲೋಮೀಟರ್ ದೂರ ಇರುವ ಟೊಯೊಟಾ ನಗರದಲ್ಲಿ ನೆಲೆಯೂರಿ ಅಭ್ಯಾಸ ನಡೆಸಬೇಕಾಗಿತ್ತು. ಜುಲೈ ಒಂಬತ್ತರಂದು ಈ ಶಿಬಿರ ಆರಂಭವಾಗಬೇಕಾಗಿತ್ತು.

ಮುಂದೂಡಲಾಗಿರುವ ಒಲಿಂಪಿಕ್ಸ್ ಆರಂಭವಾಗಲು ಒಂಬತ್ತು ವಾರಗಳು ಬಾಕಿ ಇರುವಾಗ ಜಪಾನ್‌ನಲ್ಲಿ ಕೋವಿಡ್ ಆತಂಕ ಹೆಚ್ಚುತ್ತಲೇ ಇದೆ. ವೈದ್ಯಕೀಯ ಸೇವೆಗೆ ಒಲಿಂಪಿಕ್ಸ್ ಕೂಡ ದೊಡ್ಡ ಸವಾಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಮತ್ತು ಸ್ಥಳೀಯ ಸಂಘಟಕರು ಸತತ ಮೂರು ದಿನಗಳ ಸಭೆಯಲ್ಲಿ ತೊಡಗಿದ್ದಾರೆ.

ಈ ವರೆಗೆ ಅನೇಕ ಸಂಸ್ಥೆಗಳು ಸಮೀಕ್ಷೆ ನಡೆಸಿದ್ದು ಬಹುತೇಕ ಮಂದಿ ಒಲಿಂಪಿಕ್ಸ್ ನಡೆಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಶುಕ್ರವಾರವೂ ಕೆಲವು ಸಮೀಕ್ಷಾ ವರದಿಗಳನ್ನು ಬಿಡುಗಡೆ ಮಾಡಲಾಗಿದ್ದು ಅದರಲ್ಲೂ ಇದೇ ಅಭಿಪ್ರಾಯ ಮೂಡಿದೆ.

ಬೇಸ್‌ಬಾಲ್ ಅರ್ಹತಾ ಟೂರ್ನಿ ಸ್ಥಳಾಂತರ

ಥೈಪೆ (ಎಎಫ್‌ಪಿ): ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒಲಿಂಪಿಕ್ಸ್ ಬೇಸ್‌ಬಾಲ್ ಅರ್ಹತಾ ಟೂರ್ನಿಯನ್ನು ಥೈವಾನ್‌ನಿಂದ ಮೆಕ್ಸಿಕೊಗೆ ಸ್ಥಳಾಂತರಿಸಲಾಗಿದೆ.

ಥೈವಾನ್‌ನಲ್ಲಿ ಕೋವಿಡ್‌ ಈಗ ಹೆಚ್ಚುತ್ತಿದೆ. ಹಿಗಾಗಿ ಅಂತರ ಕಾಯ್ದುಕೊಳ್ಳಲು ಮತ್ತು ಸ್ಥಳೀಯರಲ್ಲದವರು ಇಲ್ಲಿಗೆ ಬರುವುದರ ಮೇಲೆ ನಿಷೇಧ ಸೇರಿದಂತೆ ಹೊಸ ನಿಯಮಾವಳಿಗಳನ್ನು ಜಾರಿಗೆ ತರಲಾಗಿದೆ. ಅರ್ಹತಾ ಟೂರ್ನಿಯನ್ನು ಮುಂದಿನ ತಿಂಗಳಲ್ಲಿ ತಾಯ್ಚುಂಗ್ ನಗರದಲ್ಲಿ ನಡೆಯಬೇಕಾಗಿತ್ತು. ಆದರೆ ಇದನ್ನು ಮೆಕ್ಸಿಕೊಗೆ ಸ್ಥಳಾಂತರಿಸಲಾಗಿದೆ ಎಂದು ವಿಶ್ವ ಬೇಸ್‌ಬಾಲ್ ಸಾಫ್ಟ್‌ಬಾಲ್ ಕಾನ್ಫೆಡರೇಷನ್ ಶುಕ್ರವಾರ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು