ಏಷ್ಯನ್ ಕೂಟಕ್ಕೆ ಮತ್ತೆ ಕೂಡಿಬಂತು ಕಾಲ

ಬುಧವಾರ, ಏಪ್ರಿಲ್ 24, 2019
33 °C
ಚೆಸ್‌

ಏಷ್ಯನ್ ಕೂಟಕ್ಕೆ ಮತ್ತೆ ಕೂಡಿಬಂತು ಕಾಲ

Published:
Updated:

‘ಏಷ್ಯನ್‌ ಕ್ರೀಡಾಕೂಟದಲ್ಲಿ ಎರಡು ಅವಧಿಗಳ ಬಳಿಕ ಮತ್ತೆ ಚೆಸ್‌ ಕ್ರೀಡೆಗೆ ಅವಕಾಶ ಲಭಿಸಿದ್ದಕ್ಕೆ ಹೆಮ್ಮೆಯೆನಿಸುತ್ತಿದೆ. ಭಾರತೀಯರ ಕೈಯಲ್ಲಿ ಮತ್ತಷ್ಟು ಪದಕಗಳನ್ನು ನೋಡುವ ಕಾಲ ಕೂಡಿಬಂದಿದೆ. ಚತುರರ ಈ ಕ್ರೀಡೆ ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಯಾಗುವುದಕ್ಕೆ ಇನ್ನು ಹೆಚ್ಚು ಸಮಯ ಕಾಯಬೇಕಾಗಿಲ್ಲ...’

ಭಾರತದ ಚೆಸ್‌ ಆಟಗಾರ ಕೃಷ್ಣನ್‌ ಶಶಿಕಿರಣ್‌ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ವ್ಯಕ್ತಪಡಿಸಿದ ಭರವಸೆಯ ಮಾತಿದು. 

2022ರ ಏಷ್ಯನ್‌ ಕ್ರೀಡಾಕೂಟದಲ್ಲಿ ಚೆಸ್‌ ಕ್ರೀಡೆಯನ್ನು ಮತ್ತೆ ಸೇರ್ಪಡೆ ಮಾಡಲಾಗಿದ್ದು, ಇದು ಭಾರತದ ‘ಚದುರಂಗದ ಚತುರ’ರಲ್ಲಿ ಭಾರಿ ಹರ್ಷ ಉಂಟು ಮಾಡಿದೆ.

ಏಷ್ಯಾದ ಪ್ರಬಲ ಕ್ರೀಡಾ ರಾಷ್ಟ್ರಗಳ ನಡುವಿನ ಸ್ಪರ್ಧೆಯಾದ ಏಷ್ಯನ್‌ ಕ್ರೀಡಾಕೂಟದಲ್ಲಿ 2006ರಲ್ಲಿ ಮೊದಲ ಬಾರಿಗೆ ಚೆಸ್‌ ಕ್ರೀಡೆಯನ್ನು ಸೇರ್ಪಡೆ ಮಾಡಲಾಯಿತು. ಆಗ ಭಾರತ ಎರಡು ಪದಕಗಳನ್ನು ಗೆದ್ದುಕೊಂಡಿತು. ಮಹಿಳೆಯರ ವೈಯಕ್ತಿಕ ರ‍್ಯಾಪಿಡ್‌ ಸ್ಪರ್ಧೆಯಲ್ಲಿ ಕೊನೇರು ಹಂಪಿ ಚಿನ್ನ ಜಯಿಸಿದ್ದರು. ಇನ್ನೊಂದು ಪದಕವನ್ನು ಭಾರತದ ಮಿಶ್ರ ತಂಡ ತಂದುಕೊಟ್ಟಿತ್ತು. ಗ್ರ್ಯಾಂಡ್‌ಮಾಸ್ಟರ್‌ ಚೆನ್ನೈನ ಕೃಷ್ಣನ್‌ ಶಶಿಕಿರಣ್‌, ಪಿ. ಹರಿಕೃಷ್ಣ ಮತ್ತು ಕೊನೇರು ಹಂಪಿ ಇದ್ದ ತಂಡವು ಚಿನ್ನದ ಸಾಧನೆ ಮಾಡಿತ್ತು.

2010ರಲ್ಲಿ ಚೀನಾದ ಗುವಾಂಗ್‌ ಜೌನಲ್ಲಿ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದಲ್ಲಿಯೂ ಚೆಸ್‌ ಕ್ರೀಡೆಯಿತ್ತು. ಆಗ ಪುರುಷರ ತಂಡ ವಿಭಾಗದಲ್ಲಿ ಪಿ. ಹರಿಕೃಷ್ಣನ್‌, ಕೃಷ್ಣನ್‌ ಶಶಿಕಿರಣ್‌, ಸೂರ್ಯಶೇಖರ ಗಂಗೋಲಿ, ಗೀತಾ ನಾರಾಯಣ ಗೋಪಾಲ ಮತ್ತು ಭಾಸ್ಕರನ್‌ ಅಧಿಬನ್‌ ಅವರನ್ನು ಒಳಗೊಂಡ ತಂಡ ಕಂಚು ಜಯಿಸಿತ್ತು. ಮಹಿಳೆಯರ ವೈಯಕ್ತಿಕ ರ‍್ಯಾಪಿಡ್‌ನಲ್ಲಿ ಹರಿಕಾ ದ್ರೋಣವಳ್ಳಿ ಕೂಡ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು.

ಏಷ್ಯನ್‌ ಕ್ರೀಡಾಕೂಟದಲ್ಲಿ ಪ್ರಬಲ ಪೈಪೋಟಿ ಒಡ್ಡುವ ಚೀನಾ, ಕತಾರ್‌ ಸ್ಪರ್ಧಿಗಳ ಸವಾಲನ್ನು ಸಮರ್ಥವಾಗಿ ಎದುರಿಸಿ ಭಾರತದ ಸ್ಪರ್ಧಿಗಳು ಪದಕ ಜಯಿಸಿದ್ದರು. 2006ರ ಕೂಟದ ಚೆಸ್‌ ಸ್ಪರ್ಧೆಯಲ್ಲಿ 21 ರಾಷ್ಟ್ರಗಳ 63 ಸ್ಪರ್ಧಿಗಳು ಭಾಗವಹಿಸಿದ್ದರು. ನಂತರದ ಕೂಟದಲ್ಲಿ 25 ರಾಷ್ಟ್ರಗಳ 156 ‘ಚತುರರು’ ಪಾಲ್ಗೊಂಡಿದ್ದರು. ಹೀಗೆ ಪ್ರತಿ ಕ್ರೀಡಾಕೂಟದಲ್ಲಿ ಭಾಗವಹಿಸುವ ಚೆಸ್‌ ಸ್ಪರ್ಧಿಗಳು ಹಾಗೂ ದೇಶಗಳ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು. ಆದರೆ, 2014ರ ಏಷ್ಯನ್‌ ಕೂಟದಿಂದ ಚೆಸ್‌ ಕ್ರೀಡೆಯನ್ನು ಕೈಬಿಡಲಾಗಿತ್ತು. ಇದು ಭಾರತದ ನೂರಾರು ಚೆಸ್‌ ಆಟಗಾರರು ಹಾಗೂ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿತ್ತು. ಇದೆಲ್ಲದರ ಬಗ್ಗೆ ಕೃಷ್ಣನ್‌ ಶಶಿಕಿರಣ್‌ ಮಾತನಾಡಿದ್ದಾರೆ.

ಏಷ್ಯನ್‌ ಕ್ರೀಡಾಕೂಟದಲ್ಲಿ ಚೆಸ್‌ಗೆ ಮತ್ತೆ ಸ್ಥಾನ ಸಿಕ್ಕಿದೆಯಲ್ಲ, ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

ಸಾಕಷ್ಟು ಚೆಸ್‌ ಆಟಗಾರರು ಕಾಯುತ್ತಿದ್ದ ಕಾಲ ಈಗ ಕೂಡಿಬಂದಿದೆ. 14 ವರ್ಷಗಳ ಹಿಂದೆ ಏಷ್ಯನ್‌ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಚೆಸ್‌ ಸೇರ್ಪಡೆಯಾದಾಗ ಸಾಕಷ್ಟು ಖುಷಿ ಪಟ್ಟಿದ್ದೆ. ಏಷ್ಯಾದ ಪ್ರಬಲ ರಾಷ್ಟ್ರಗಳ ಎದುರು ನಮ್ಮ ಶಕ್ತಿ ತೋರಿಸಲು ಉತ್ತಮ ವೇದಿಕೆಯೊಂದು ಲಭಿಸಿತ್ತು. ಎರಡೇ ಅವಧಿಯಲ್ಲಿ ಚೆಸ್‌ ಕ್ರೀಡೆಯನ್ನು ಕೈಬಿಡಲಾಗಿತ್ತು. 2022ರ ಏಷ್ಯನ್‌  ಕೂಟಕ್ಕೆ ಮತ್ತೆ ಈ ಕ್ರೀಡೆಯನ್ನು ಸೇರ್ಪಡೆ ಮಾಡಿದ್ದು ಭಾರತದ ಆಟಗಾರರಲ್ಲಿ ಹೊಸ ಆಶಾಭಾವ ಹುಟ್ಟುಹಾಕಿದೆ.

ಭಾರತದ ಚೆಸ್‌ ಆಟಗಾರರಿಗೆ ಇದರಿಂದ ಹೇಗೆ ಅನುಕೂಲವಾಗುತ್ತದೆ?

ದೇಶಿಯವಾಗಿ ನಾವೇ ಎಷ್ಟೇ ದೊಡ್ಡ ಟೂರ್ನಿಗಳಲ್ಲಿ ಆಡಿದರೂ ಏಷ್ಯಾಮಟ್ಟದಲ್ಲಿ ನಮ್ಮ ಪ್ರತಿಭೆ ತೋರಿಸಲು ಏಷ್ಯನ್‌ ಕ್ರೀಡಾಕೂಟಕ್ಕಿಂತ ಇನ್ನೊಂದು ಉತ್ತಮ ಅವಕಾಶ ಸಿಗುವುದಿಲ್ಲ. ಎರಡೂ ಏಷ್ಯನ್‌ ಕ್ರೀಡಾಕೂಟಗಳಲ್ಲಿ ಇದನ್ನು ಸಾಬೀತು ಮಾಡಿ ತೋರಿಸಿದ್ದೇವೆ. ಈಗ ಭಾರತದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಗ್ರ್ಯಾಂಡ್‌ಮಾಸ್ಟರ್‌ಗಳು ಬರುತ್ತಿದ್ದಾರೆ.  ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಲು, ವಿಶ್ವಮಟ್ಟದಲ್ಲಿ ನಮ್ಮವರ ಸಾಮರ್ಥ್ಯ ಗೊತ್ತಾಗಲು ಈ ಕ್ರೀಡಾಕೂಟ ಅಗತ್ಯವಾಗಿತ್ತು.

ಗ್ರ್ಯಾಂಡ್‌ಮಾಸ್ಟರ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಎಲ್ಲ ರಾಜ್ಯಗಳಲ್ಲಿ ಅವರ ಸಾಧನೆಗೆ ತಕ್ಕ ಪುರಸ್ಕಾರ ಸಿಗುತ್ತಿಲ್ಲವಲ್ಲ?

ಬೇರೆ ರಾಜ್ಯಗಳ ಬಗ್ಗೆ ನನಗೆ ಗೊತ್ತಿಲ್ಲ. ತಮಿಳುನಾಡು ಮಟ್ಟಿಗೆ ಹೇಳುವುದಾದರೆ ನಮ್ಮಲ್ಲಿ ಗ್ರ್ಯಾಂಡ್‌ ಮಾಸ್ಟರ್‌ ಸಾಧನೆ ಮಾಡಿದವರಿಗೆ ಸರ್ಕಾರ ₹ 5 ಲಕ್ಷ ಹಣ ಕೊಟ್ಟು ಪ್ರೋತ್ಸಾಹ ನೀಡುತ್ತದೆ. ವಿಶ್ವಮಟ್ಟದ ಟೂರ್ನಿಗಳಿಗೆ ತೆರಳಿದಾಗ ಹಣಕಾಸಿನ ನೆರವು ಕೊಡುತ್ತದೆ. ಇದರಿಂದ ಚೆಸ್‌ ಆಡುವವರ ಸಂಖ್ಯೆ ನಮ್ಮ ರಾಜ್ಯದಲ್ಲಿ ಹೆಚ್ಚಾಗುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಚೆಸ್‌ ಬೆಳವಣಿಗೆಯ ವೇಗ ಹೇಗಿದೆ?

ದೆಹಲಿ ಮತ್ತು ದಕ್ಷಿಣ ಭಾರತದ ರಾಜ್ಯಗಳಲ್ಲಿ ಚೆಸ್‌ ವೇಗವಾಗಿ ಬೆಳೆಯುತ್ತಿದೆ. ಅದರಲ್ಲೂ ತಮಿಳುನಾಡು ಮುಂಚೂಣಿಯಲ್ಲಿದೆ. ಚೆನ್ನೈನಲ್ಲಿ ವಾರಕ್ಕೆ ಕನಿಷ್ಠ ಒಂದಾದರೂ ಟೂರ್ನಿ ಇದ್ದೇ ಇರುತ್ತದೆ. ಅಂತರ ಶಾಲೆ, ಅಂತರ ಕ್ಲಬ್‌ಗಳ ನಡುವೆ ಪಂದ್ಯಗಳನ್ನು ನಡೆಸಲಾಗುತ್ತದೆ. ಗೆದ್ದವರಿಗೆ ಆಕರ್ಷಕ ಬಹುಮಾನ ಇರುತ್ತದೆ. ತರಬೇತಿ ನೀಡುವ ಕ್ಲಬ್‌ಗಳ ಸಂಖ್ಯೆಯೂ ಹೆಚ್ಚಿವೆ. ಇದರಿಂದ ಸ್ಪರ್ಧಿಗಳೂ ಹೆಚ್ಚಾಗಿದ್ದಾರೆ.

ಭಾರತದಲ್ಲಿ ಚೆಸ್‌ ಕೆಲ ರಾಜ್ಯಗಳಿಗಷ್ಟೇ ಸೀಮಿತವಾಗಿದೆಯಲ್ಲ?

ಅಖಿಲ ಭಾರತ ಚೆಸ್‌ ಫೆಡರೇಷನ್‌ ಎಲ್ಲ ರಾಜ್ಯಗಳಲ್ಲಿ ಚೆಸ್‌ ಕ್ರೀಡೆಯನ್ನು ಜನಪ್ರಿಯಗೊಳಿಸಲು ಹಲವು ಯೋಜನೆ ರೂಪಿಸುತ್ತಿದೆ. ಶಾಲಾ ಹಂತದಿಂದಲೇ ಚೆಸ್‌ ಕಲಿಕೆ ಕಡ್ಡಾಯ ಮಾಡಲು ಆಯಾ ರಾಜ್ಯ ಸರ್ಕಾರಗಳ ಮೂಲಕ ಪ್ರಯತ್ನಿಸುತ್ತಿದೆ. ಫೆಡರೇಷನ್‌ ಪ್ರಯತ್ನದ ಜೊತೆಗೆ ಪೋಷಕರು ಕೂಡ ತಮ್ಮ ಮಕ್ಕಳಿಗೆ ಚೆಸ್‌ ಕಲಿಕೆಗೆ ಪ್ರೋತ್ಸಾಹ ಕೊಡಬೇಕು.

ಚೆಸ್‌ ಏಷ್ಯನ್‌ ಕ್ರೀಡಾಕೂಟದಲ್ಲಿ ಸೇರ್ಪಡೆಯಾಗಿದ್ದು, ಒಲಿಂಪಿಕ್ಸ್‌ನಲ್ಲೂ ಸ್ಥಾನ ಪಡೆಯಲು ಅನುಕೂಲವಾಗುತ್ತದೆಯೇ?

ಹೌದು. ಈ ಕ್ರೀಡೆಯನ್ನು ಒಲಿಂಪಿಕ್ಸ್‌ನಲ್ಲಿ ಸೇರ್ಪಡೆ ಮಾಡಲು ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಅನೇಕ ರಾಷ್ಟ್ರಗಳು ಒಲಿಂಪಿಕ್ಸ್‌ ಸಮಿತಿ ಮೇಲೆ ಒತ್ತಡ ತರುತ್ತಿವೆ. 2022ರ ಏಷ್ಯನ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ದೇಶಗಳ ಸಂಖ್ಯೆ ಮತ್ತು ಸ್ಪರ್ಧಿಗಳು ಎಷ್ಟೆಂಬುದು ಮುಖ್ಯವಾಗುತ್ತದೆ. ಮುಂದೆ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆದುಕೊಳ್ಳಲು ಏಷ್ಯನ್‌ ಕ್ರೀಡಾಕೂಟದ ಸಾಧನೆ ಅನುಕೂಲವಾಗುತ್ತದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !