ಬುಧವಾರ, ಆಗಸ್ಟ್ 10, 2022
23 °C

ಚೆಸ್‌: ವಿಶ್ವನಾಥನ್‌ ಆನಂದ್‌ಗೆ ಕಠಿಣ ಸ್ಪರ್ಧೆ ನೀಡಿದ ಕಿಚ್ಚ ಸುದೀಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಐದು ಬಾರಿ ವಿಶ್ವ ಚೆಸ್‌ ಚಾಂಪಿಯನ್‌ ಆಗಿರುವ ವಿಶ್ವನಾಥನ್‌ ಆನಂದ್‌ ಅವರಿಗೆ ನಟ ಕಿಚ್ಚ ಸುದೀಪ್‌ ಚೆಸ್‌ ಸ್ಪರ್ಧೆಯಲ್ಲಿ ಕಠಿಣ ಸ್ಪರ್ಧೆಯನ್ನೇ ನೀಡಿದ್ದಾರೆ.

ಕೋವಿಡ್‌ ಪರಿಹಾರ ನಿಧಿ ಸಂಗ್ರಹಕ್ಕಾಗಿ ಅಕ್ಷಯಪಾತ್ರ ಪ್ರತಿಷ್ಠಾನದ ಸಹಯೋಗದಲ್ಲಿ ಚೆಸ್‌.ಕಾಮ್‌ ಭಾನುವಾರ ಆಯೋಜಿಸಿದ್ದ ‘ಚೆಕ್‌ಮೇಟ್‌ ಕೋವಿಡ್‌’ ಸೆಲೆಬ್ರಿಟಿ ಆವೃತ್ತಿಯಲ್ಲಿ, ನಟರಾದ ಸುದೀಪ್‌, ರಿತೇಷ್‌ ದೇಶ್‌ಮುಖ್‌, ಕ್ರಿಕೆಟಿಗ ಯಜುವೇಂದ್ರ ಚಾಹಲ್‌ ಸೇರಿದಂತೆ ಕೆಲ ಗಣ್ಯರೊಂದಿಗೆ 30 ನಿಮಿಷಗಳ ಟೈಂಔಟ್‌ನಲ್ಲಿ ಏಕಕಾಲದಲ್ಲಿ ವಿಶ್ವನಾಥನ್‌ ಆನಂದ್‌ ಆಡಿದರು. ಟೈಂಔಟ್‌ನಲ್ಲಿ ಸುದೀಪ್‌ ಅವರು ವಿಶ್ವನಾಥನ್‌ ಆನಂದ್‌ ಅವರೆದುರು ಸೋತರು. ವಿಶ್ವನಾಥನ್‌ ಆನಂದ್‌ ಅವರ ಟೈಮರ್‌ನಲ್ಲಿ 46 ಸೆಕೆಂಡ್‌ಗಳಷ್ಟೇ ಉಳಿದಿತ್ತು.

ಆಟದ ಬಳಿಕ ಸ್ಪರ್ಧಿಗಳ ಜೊತೆ ವಿಶ್ವನಾಥನ್‌ ಆನಂದ್‌ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಸುದೀಪ್‌, ‘ನನ್ನ ಹಂತದ ಸ್ಪರ್ಧಿಗಳೊಂದಿಗೆ ಚೆನ್ನಾಗಿ ಆಡುತ್ತೇನೆ. ಇಂತಹ ದಿಗ್ಗಜರ ಜೊತೆ ಆಡುವುದೇ ನಮಗೆ ಸಿಕ್ಕ ದೊಡ್ಡ ಅವಕಾಶ. ಇಲ್ಲಿ ಯಾರು ಗೆಲ್ಲುತ್ತಾರೆ ಸೋಲುತ್ತಾರೆ ಎನ್ನುವುದು ಮುಖ್ಯವಲ್ಲ. ಯಾರು ಹೆಚ್ಚು ಹೊತ್ತು ವಿಶ್ವನಾಥನ್‌ ಅವರ ವಿರುದ್ಧ ಕಣದಲ್ಲಿ ಇರುತ್ತಾರೆ ಎನ್ನುವುದು ಮುಖ್ಯ. ಆನ್‌ಲೈನ್‌ ಚೆಸ್‌ ಬಗ್ಗೆ ನನಗೇ ಯಾವುದೇ ಮಾಹಿತಿ ಇರಲಿಲ್ಲ. ನಮಗೆ ಸೋಲುವ ಭಯವಿರಲಿಲ್ಲ, ಏಕೆಂದರೆ ನಾವು ಆಡುತ್ತಿರುವುದು ವಿಶ್ವನಾಥನ್‌ ಆನಂದ್‌ ಅವರ ವಿರುದ್ಧ. ಈ ಅನುಭವ ಜೀವನಪೂರ್ತಿ ಇರಲಿದೆ. ಈ ಆಟ ಕೇವಲ ಮನರಂಜನೆಗಾಗಿ ಆಗಿರಲಿಲ್ಲ. ಒಂದು ಉದ್ದೇಶ ಇದರ ಹಿಂದೆ ಇತ್ತು’ ಎಂದರು.

ಇನ್ನು ಎರಡನೇ ಹಂತದಲ್ಲಿ ವಿಶ್ವನಾಥನ್‌ ಆನಂದ್‌ ಬಾಲಿವುಡ್‌ ನಟ ಅಮೀರ್‌ ಖಾನ್‌ ವಿರುದ್ಧವೂ ಆಡಿದರು. ‘ವಿಶ್ವನಾಥನ್‌ ಆನಂದ್‌ ಅವರ ಜೀವನದ ಬಗ್ಗೆ ಸಿನಿಮಾ ಆದರೆ ಅದರಲ್ಲಿ ನಟಿಸುತ್ತೀರಾ?’ ಎನ್ನುವ ಜನರ ಪ್ರಶ್ನೆಗೆ ಉತ್ತರಿಸಿದ ಅಮೀರ್‌ ಖಾನ್‌, ‘ಖಂಡಿತವಾಗಿಯೂ..ಇದಕ್ಕಾಗಿ ಎದುರು ನೋಡುತ್ತಿದ್ದೇನೆ’ ಎಂದರು.

ಆನ್‌ಲೈನ್‌ನಲ್ಲಿ ನಡೆದ ಈ ಸ್ಪರ್ಧೆಯನ್ನು 20 ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದು, 6.65 ಲಕ್ಷ ದೇಣಿಗೆ ಸಂಗ್ರಹವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು