ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತುಲಿತ ಕಲಿಕೆಯ ಇಂದಿನ ಅಗತ್ಯ

Last Updated 1 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಇದೀಗ ಪರೀಕ್ಷೆಯ ಆತಂಕ ಮುಗಿದು, ಫಲಿತಾಂಶದ ಆತಂಕ ಪ್ರಾರಂಭವಾಗುವ ಗಳಿಗೆ! ನಮ್ಮ ಶಿಕ್ಷಣದ ಗುರಿ ಇಂತಹ ಸಾಲು ಆತಂಕಗಳನ್ನು ಸೃಷ್ಟಿಸುವುದರ ಬದಲಾಗಿ ಮೇಲಿನ ಹಂತಗಳಿಗೆ ಮಕ್ಕಳು ಹಾಗೂ ಪೋಷಕರನ್ನು ತೆಗೆದುಕೊಂಡು ಹೋಗುವ ಮಧುರಮಾರ್ಗವಾಗಬೇಕು. ಎಂದು ಇದಾಗುತ್ತದೆಯೋ ಅಂದು ನಮ್ಮ ಶಿಕ್ಷಣ ಸರಿದಾರಿಯಲ್ಲಿ ಸಾಗುತ್ತಿದೆ ಎಂದು ತಿಳಿಯಬಹುದು. ಆದರೆ, ಸರಿದಾರಿಯಲ್ಲಿ ಸಾಗುತ್ತಿದೆ ಎಂದು ಅಷ್ಟೆ, ಗುರಿ ಮುಟ್ಟಿದೆ ಎಂದಲ್ಲ.

ಹಾಗೆ ನೋಡಿದರೆ, ಶಿಕ್ಷಣದ ಕುರಿತಾಗಿ ಈಗ ನಡೆಯುತ್ತಿರುವ ಚರ್ಚೆಗಳು ಅಸಂಗತ! ಏಕೆಂದರೆ ನಾವು ಸಂತುಲಿತ ಕಲಿಕೆಯನ್ನು ನಡೆಸುತ್ತಿಲ್ಲ! ಸಂತುಲಿತ ಕಲಿಕೆ (euqitable education) ಇಲ್ಲದಾಗ ವಿವಿಧ ಶಿಕ್ಷಣಪದ್ಧತಿಗಳನ್ನು ಕುರಿತ ಚರ್ಚೆ ಅರ್ಥಹೀನವಾಗುತ್ತದೆ. ಹಾಗಾಗಿ, ಸಂತುಲಿತ ಕಲಿಕೆ ಬಹಳ ಮುಖ್ಯ. ಜಾಗತಿಕ ಸಂಸ್ಥೆಗಳು 2030ರ ಹೊತ್ತಿಗೆ ಎಲ್ಲರಿಗೂ ಸಂತುಲಿತ ಶಿಕ್ಷಣ ದೊರೆಯಬೇಕೆಂಬ ಗುರಿಯನ್ನು ಹೊಂದಿವೆ. ಇದು ಸಾಧ್ಯವಾದಾಗ ಮಾತ್ರ ಶಿಕ್ಷಣ ಸಾರ್ಥಕವಾಗುತ್ತದೆ. ಸನ್ನೆಯಂತೆ ಕಡಿಮೆ ಶಕ್ತಿಯಿಂದ ಹೆಚ್ಚು ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಆದ್ದರಿಂದ, ನಮ್ಮ ದೇಶದ ಮಾನವ ಸಂಪನ್ಮೂಲ ಇಲಾಖೆಯಿಂದ ಮೊದಲುಗೊಂಡು ಎಲ್ಲ ಶಿಕ್ಷಣ ಸಂಬಂಧಿತ ಇಲಾಖೆ ಮತ್ತು ಜನರು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಜನಸಾಮಾನ್ಯರಲ್ಲಿ ಈ ಕುರಿತಾದ ಜಾಗೃತಿಯನ್ನು ಉಂಟುಮಾಡಬೇಕಿದೆ.

ಇದೇ ಪುರವಣಿಯಲ್ಲಿ ಸಂತುಲಿತ ಶಿಕ್ಷಣದ ಕುರಿತಾಗಿ ಓದಿದ್ದೆವು (ಮಾರ್ಚ್ 12ರ ಸಂಚಿಕೆ). ಮುಖ್ಯವಾಗಿ ವಿದ್ಯಾರ್ಥಿಯೊಬ್ಬ ಒಂದು ತರಗತಿಯಲ್ಲಿ ಕಲಿಯಬೇಕಾಗಿರುವ ಎಲ್ಲವನ್ನು ಕಲಿತು ಹೊರಬರುವುದು ಸಂತುಲಿತ ಶಿಕ್ಷಣದ ಪ್ರಧಾನ ಅಂಶ. ಇದನ್ನು ಸಾಧಿಸಲು ಅಡೆತಡೆಗಳು ವಿದ್ಯಾರ್ಥಿಯ ಮನೆಯ ಪರಿಸರ, ಆರ್ಥಿಕ ಸ್ಥಿತಿ, ಸಾಮಾಜಿಕ ಸ್ಥಿತಿ, ಶಾಲೆಯ ಹಾಗೂ ಉಪಾಧ್ಯಾಯರ ಮಟ್ಟ ಮತ್ತು ಪ್ರಯತ್ನ ಕೊನೆಗೆ ಜನರಲ್ಲಿನ ಜಾಗೃತಿಯ ಮಟ್ಟ ಸಹ ನಿರ್ಣಾಯಕವಾಗುತ್ತದೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಒಂದು ಕ್ರಿಯಾ ಯೋಜನೆಯನ್ನು ರೂಪಿಸಬೇಕಾಗಿದೆ.

ಇರಲಿ, ಸದ್ಯ ತಜ್ಞರು ಸೂಚಿಸಿರುವ ಮಾರ್ಗದರ್ಶಿ ಸೂತ್ರಗಳನ್ನು ವಿವರವಾಗಿ ಪರಿಶೀಲಿಸೋಣ. ಮೊದಲಿಗೆ ಅವುಗಳ ಪಟ್ಟಿ:

* ಸಮಸ್ಯೆಯನ್ನು ಬಾಲ್ಯದ ಮೊದಲ ವರ್ಷಗಳಲ್ಲಿಯೇ ಗುರುತಿಸುವುದು.

* ನಿಧಾನವಾಗಿ ಕಲಿಯುವವರಿಗೆ ಸೂಕ್ತವಾದ ವೇಗದಲ್ಲಿಯೇ ಕಲಿಸುವಂತೆ ನೋಡಿಕೊಳ್ಳುವುದು.

* ಸಮಸ್ಯೆಯಿರುವ ಮಕ್ಕಳಿಗೆ ಅತ್ಯುತ್ತಮ ಶಿಕ್ಷಕರ ಬೆಂಬಲ ಸಿಗುವಂತೆ ಮಾಡುವುದು.

* ಮಕ್ಕಳಿಗೆ ಸರಿಯಾದ ವೇಗದಲ್ಲಿ ಕಲಿಯಲು ಅಗತ್ಯವಿರುವ ಕಲಿಕಾ ಸಂಪನ್ಮೂಲಗಳನ್ನು ಒದಗಿಸುವುದು.

* ಕಲಿಕೆಯಲ್ಲಿ ಉಂಟಾಗುವ ನ್ಯೂನತೆಗಳಿಗೆ ಶಾಲೆಗಳನ್ನು ಹೊಣೆ ಮಾಡುವಂತೆ ಪೋಷಕರು ಮತ್ತು ಸಮುದಾಯಗಳನ್ನು ಸಬಲೀಕರಣಗೊಳಿಸುವುದು.

ನಿಸ್ಸಂದೇಹವಾಗಿ ಇವು ಕಾಣುವಷ್ಟು ಸುಲಭವಲ್ಲ. ಭಾರತದ ಪರಿಸ್ಥಿತಿಯಲ್ಲಿ ಪ್ರತಿಯೊಂದಕ್ಕೂ ಹೋರಾಟವನ್ನೇ ಮಾಡಬೇಕಿದೆ. ಆದರೆ, ಜಗತ್ತಿನ ಎರಡನೇ ದೊಡ್ಡ ಮಾನವಸಂಪನ್ಮೂಲ ಹೊಂದಿದ ರಾಷ್ಟ್ರವಾದ ಭಾರತ ಇದರ ಮಹತ್ವವನ್ನು ಅರಿತು ತುರ್ತಾಗಿ ಕ್ರಿಯಾಶೀಲವಾಗಬೇಕಿದೆ. ಇದು ರಾಷ್ಟ್ರದ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಪೂರಕ ವಾತಾವರಣವನ್ನು ನಿರ್ಮಿಸುತ್ತದೆ. ಇದಕ್ಕೆ ಬೇಕಾಗುವ ಮಾನವ ಮತ್ತು ಇತರ ಬಗೆಯ ಸಂಪನ್ಮೂಲಗಳಿಗೆ ಎಳ್ಳಷ್ಟೂ ಕೊರತೆಯಾಗದಂತೆ ನೋಡಿಕೊಳ್ಳಬೇಕಾದ ಕಾರ್ಯ ಕೇಂದ್ರ ಸರ್ಕಾರದ್ದು.

ಮೊದಲ ಹಂತದಲ್ಲಿ ಈ ಮಹತ್ತರ ಕಾರ್ಯದ ಕುರಿತಾಗಿ ಶಿಕ್ಷಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಇದರೊಟ್ಟಿಗೆ ನಾವು ಮಕ್ಕಳಲ್ಲಿ ಪರಸ್ಪರ ಪ್ರೀತಿ-ಗೌರವ, ವಿಶ್ವಾಸ, ಮಾನವೀಯತೆ ಮುಂತಾದ ಮೌಲ್ಯಗಳನ್ನು ಮೂಡಿಸಬೇಕಾಗಿದೆ. ಆದರ್ಶಗಳನ್ನೂ ಕಲಿಸಬೇಕಾಗಿದೆ. ಇದೊಂದು ಕ್ಲಿಷ್ಟ, ಸಂಕೀರ್ಣವಾದ ಕಾರ್ಯ ಮಾತ್ರವಲ್ಲ ಒಂದು ಗುರುತರ ಜವಾಬ್ದಾರಿ ಸಹ ಆಗಿದೆ.

ಮೇಲಿನ ಐದು ಸೂತ್ರಗಳಲ್ಲಿ ಒಂದಕ್ಕೊಂದರ ನಡುವಿನ ಪೂರಕತ್ವ ಮತ್ತು ವ್ಯತ್ಯಾಸವನ್ನು ಗುರುತಿಸಬೇಕಾಗಿದೆ. ಇದು ಎರಡನೆಯ ಮುಖ್ಯ ಕಾರ್ಯ.

ಮಾರ್ಗದರ್ಶಿ ಸೂತ್ರದ ಮೊದಲನೆಯದು ಅತಿ ಮುಖ್ಯವಾದದ್ದು: ಸಮಸ್ಯೆಯನ್ನು ಬಾಲ್ಯದ ಮೊದಲ ವರ್ಷಗಳಲ್ಲಿಯೇ ಗುರುತಿಸುವುದು. ಇದು ಶಾಲೆಗೆ ಬರುವ ಮುಂಚೆಯಿಂದಲೇ ಆರಂಭವಾಗಬೇಕು ಸವಾಲು ಆರಂಭವಾಗುವುದು ಇಲ್ಲಿಯೇ. ಈ ಕಾರ್ಯವನ್ನು ಯಾರು ಮಾಡುತ್ತಾರೆ? ಮತ್ತು ಹೇಗೆ ಮಾಡಬೇಕು? – ಈ ಪ್ರಶ್ನೆಗಳು ಎದ್ದುನಿಲ್ಲುತ್ತವೆ. ಶಿಕ್ಷಕರೇ ಎಂಬುದು ಮೊದಲ ಪ್ರಶ್ನೆಗೆ ಉತ್ತರ. ಶಿಕ್ಷಕರಿಗೆ ಇದು ಖಂಡಿತ ಹೊರೆಯೇ. ಆದರೆ, ಒಂದು ಬಹುದೊಡ್ಡ ಕ್ರಾಂತಿಯಂತಹ ಕಾರ್ಯದಲ್ಲಿ ಭಾಗವಹಿಸುವ ಕೀರ್ತಿಯೂ ಅವರಿಗೆ ಲಭ್ಯ! ಆದರೆ, ಕೇವಲ ಆದರ್ಶಗಳಿಗೆ ಇದನ್ನು ಬಿಡಲಾಗುವುದಿಲ್ಲ. ಶಿಕ್ಷಕರ ಸಂಖ್ಯೆಯನ್ನು ಆವಶ್ಯಕತೆಗೆ ತಕ್ಕಂತೆ ಹೆಚ್ಚಿಸಬೇಕು. ಇದರಿಂದ ಮುಂದೆ ಅನೇಕ ಪ್ರಯೋಜನಗಳಾಗುತ್ತವೆ. ಸಮಸ್ಯೆಯ ಮಗುವನ್ನು ಶಾಲೆಗೆ ಬರುವ ಮುನ್ನವೇ ಗುರುತಿಸಿ ಅದರ ಪರಿಹಾರಕ್ಕೆ ಸಿದ್ಧತೆ ಮಾಡಿಕೊಳ್ಳಲು ಅನುವಾಗ ಬೇಕು. ಅಂದರೆ, ಒಂದು ರೀತಿಯ ಪ್ರೀಸ್ಕೂಲ್‍ ಮಾದರಿ. ಇಲ್ಲಿ ಕಲಿಕೆಗಿಂತ ಕಲಿಕೆಯಲ್ಲಿ ಕಂದಕವುಂಟಾಗದಂತೆ ನೋಡಿಕೊಳ್ಳುವುದಕ್ಕೆ ಪ್ರಾಶಸ್ತ್ಯ ನೀಡಲಾಗುವುದು. ಈ ಮಾರ್ಗ ಅನೇಕ ದೇಶಗಳಲ್ಲಿ ಫಲಕಾರಿಯಾಗಿದೆ.

ಎರಡನೆಯದಾಗಿ, ಸಮಸ್ಯೆಯುಳ್ಳ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಯುಕ್ತ ವೇಗದಲ್ಲಿ ಕಲಿಸುವುದಾಗಬೇಕು. ತಜ್ಞರ ಪ್ರಕಾರ ಎರಡನೇ ಹಂತದಲ್ಲಿ ದೊಡ್ಡ ಸಮಸ್ಯೆಯೊಡ್ಡುವುದು ಅನಮ್ಯವಾದ ಮತ್ತು ಅತಿಮಹತ್ವಾಕಾಂಕ್ಷೆಯ ಪಠ್ಯಕ್ರಮ (Inflexible and overly ambitious curricular). ಈ ಪಠ್ಯಕ್ರಮ ಬುದ್ಧಿವಂತ ವಿದ್ಯಾರ್ಥಿಗಳ ಮೇಲೆಯೇ ಕೇಂದ್ರೀಕರಿಸುತ್ತದೆಯಾಗಿ ಸಮಸ್ಯೆಯಿರುವ ಮಕ್ಕಳಿಗೆ ದೊಡ್ಡ ತಡೆಗೋಡೆಯಂತಾಗಿಬಿಡುತ್ತದೆ. ಆದ್ದರಿಂದ ಪಠ್ಯಕ್ರಮ ಪರಿಷ್ಕರಣೆ ಮೊತ್ತಮೊದಲು ಆಗಬೇಕು. ಪರಿಷ್ಕೃತ ಪಠ್ಯ ಒಂದು ವಯಸ್ಸಿನ ಎಲ್ಲ ಮಟ್ಟದ ಮಕ್ಕಳನ್ನು ಒಳಗೂಡಿಸಿಕೊಳ್ಳುವ (Inclusive) ಪಠ್ಯವಾಗಬೇಕು. ಸಮಾನ ಶಿಕ್ಷಣ ನೀತಿ ಎಂಬ ಮಾತು ಏನು ಕೇಳಿಬರುತ್ತಿದೆ, ಅದು ಇದಕ್ಕೆ ಪೂರಕವಾಗಬೇಕು. ಇದೂ ಸಹ ಕ್ಲಿಷ್ಟವಾದ ಕಾರ್ಯವೇ.

ಮೂರನೆಯದು ಸಮಸ್ಯೆಯಿರುವ ಮಕ್ಕಳಿಗೆ ಸೂಕ್ತವಾದ ತರಬೇತಿ ಹೊಂದಿದ ಅತ್ಯುತ್ತಮ ಶಿಕ್ಷಕರ ಬೆಂಬಲ ದೊರೆಯಬೇಕು. ಇದೊಂದು ಮಹತ್ವದ ಅಂಶ. ಸದ್ಯದ ಪರಿಸ್ಥಿತಿಯಲ್ಲಿ ಕಲಿಕಾ ನ್ಯೂನತೆಯಿರುವ ಮಕ್ಕಳಿಗೆ ಬೇಕಾದ ಶಿಕ್ಷಣ ಕೊಡುವ ಸಂಖ್ಯೆ ನಗಣ್ಯವೆಂಬುವಷ್ಟು ಕಡಿಮೆಯಿದೆ. ಇವರ ಸಂಖ್ಯೆಯನ್ನು ಹಾಗೂ ಮಕ್ಕಳ ಮನಃಶಾಸ್ತ್ರಜ್ಞರ ಸಂಖ್ಯೆ ಅವಶ್ಯವಿರುವ ಮಟ್ಟಕ್ಕೆ ಏರಿಸಲು ಕ್ರಮಗಳನ್ನು ಕೈಗೊಳ್ಳಬೇಕು. ಶಿಕ್ಷಕ ತರಬೇತಿ ಕಾರ್ಯಕ್ರಮಗಳಲ್ಲಿಯೂ ಇಂತಹ ವಿಷಯಗಳು ಸೇರಿ ಅದು ಸಮೃದ್ಧವಾಗಬೇಕು.

ನಾಲ್ಕನೆಯದಾಗಿ, ಕಲಿಕೆಗೆ ಸೂಕ್ತವಾದಂತಹ ಕಲಿಕಾ ಸಂಪನ್ಮೂಲಗಳು ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ಭಾರತದಲ್ಲಿಯೂ ಕೆಲವು ಕಾರ್ಯಗಳು ನಡೆದಿವೆ. ಸರ್ಕಾರಿ ಶಾಲೆಗಳಲ್ಲಿ ಕಲಿ-ನಲಿಯಂತಹ ಕಾರ್ಯಕ್ರಮಗಳು ಆರಂಭವಾಗಿವೆ. ಇಂತಹ ಕಲಿಕೆಗೆ ಹೇಳಿ ಮಾಡಿಸಿದಂತಹ ಮಾಂಟೆಸ್ಸರಿ ಶಿಕ್ಷಣ ಪದ್ಧತಿ ನಿಧಾನವಾಗಿ ಬೇರೂರುತ್ತಿದೆ. ಆದರೆ, ಅದು ಶ್ರೀಮಂತರಿಗೆ ಮಾತ್ರ ಎಂಬಂತಾಗಿದೆ. ಇದು ಸರ್ಕಾರಿ ಶಾಲೆಗಳಲ್ಲಿಯೂ ಲಭ್ಯವಾಗಬೇಕು. ಇನ್ನೂ ಉತ್ತಮವೆಂದರೆ ನಮ್ಮ ಅವಶ್ಯಕತೆಗೆ ತಕ್ಕಂತೆ ವಿನ್ಯಾಸಗೊಳಿಸಿದ ಪದ್ಧತಿಯನ್ನು ಜಾರಿಗೆ ತರಬೇಕು. ಇದು ಸಾಕಷ್ಟು ಸಮಯ ಮತ್ತು ಸಂಪನ್ಮೂಲಗಳನ್ನು ಬೇಡಬಹುದಾದರೂ ನಿಶ್ಚಿತ ಫಲಿತಾಂಶಗಳು ದೊರೆಯುವುದರಿಂದ ಪೂರ್ಣಪ್ರಮಾಣದ ಯತ್ನಗಳು ನಡೆಯಬೇಕಿವೆ.

ಕೊನೆಯದು, ಕಲಿಕಾ ಕಂದಕಗಳಿಗೆ ಶಾಲೆಯನ್ನು ಹೊಣೆ ಮಾಡುವ ಮಟ್ಟಕ್ಕೆ ಜನಸಾಮಾನ್ಯರನ್ನು ಜಾಗೃತಗೊಳಿಸುವುದು. ಇದಕ್ಕೆ ಭಗೀರಥ ಪ್ರಯತ್ನವೇ ನಡೆಯಬೇಕಿದೆ. ಭಾರತದಂತಹ ವ್ಯವಸ್ಥೆಯಲ್ಲಿ ಇದು ಆಗುತ್ತದೆಯೇ? ಆಗಲಿ – ಎಂದು ಆಶಿಸುವುದೇ ಅವಾಸ್ತವಿಕವಲ್ಲವೇ? ಎಂಬ ಪ್ರಶ‍್ನೆಗಳು ಏಳುವ ಮಟ್ಟದಲ್ಲಿದ್ದೇವೆ! ಆದರೆ ಇದನ್ನು ನಾವು ಮಾಡಲೇ ಬೇಕು.

ಒಟ್ಟಾರೆ, ಒಂದು ಬಹುದೊಡ್ಡ ಸವಾಲು ಜಗತ್ತಿನಲ್ಲಿ ಎರಡನೇ ದೊಡ್ಡ ಜನಸಂಖ್ಯೆಯನ್ನು ಹೊಂದಿದ ದೇಶವಾದ ನಮ್ಮ ಮುಂದಿದೆ. ಆದರೆ, ಅಸಾಧ್ಯವಾದದ್ದು ಖಂಡಿತವಾಗಿ ಅಲ್ಲ. ಸದ್ಯದ ಪರಿಸ್ಥಿತಿಯಲ್ಲಿಯೇ ದೇಶ ಸಾಧಿಸಿರುವ ಪ್ರಗತಿಯ ಪಥವನ್ನು ಗಮನಿಸಿ ಶಿಕ್ಷಣ ಕ್ಷೇತ್ರಕ್ಕೆ ಸಮಾನಾಂತರವನ್ನು ಎಳೆದರೆ ಇದು ಬುದ್ಧಿಗೆ ಗೋಚರವಾಗುತ್ತಿರುವಷ್ಟು ಕಷ್ಟವಲ್ಲ ಎಂಬುದು ಅರ್ಥವಾಗುತ್ತದೆ. ಒಂದು ವಿಸ್ತೃತ ಯೋಜನೆ, ಅಗತ್ಯ ಸಂಪನ್ಮೂಲಗಳು ಹಾಗೂ ಅಧಿಕಾರ ವಿಕೇಂದ್ರಿಕೃತಗೊಂಡ ವ್ಯವಸ್ಥೆ ಮತ್ತು ಒಂದೇ ಗುಂಪಿನಂತೆ ಕಾರ್ಯವೆಸಗುವ ಪಡೆಯಿದ್ದಲ್ಲಿ ಎಲ್ಲದಕ್ಕಿಂತ ಮುಖ್ಯವಾದ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿಹೊಂದಿದ ರಾಷ್ಟ್ರಗಳ ಸಾಧನೆಯನ್ನು ಸರಿಗಟ್ಟಬಹುದು, ಮಾತ್ರವಲ್ಲ ಹಿಂದಿಕ್ಕಲೂಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT