ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು ಮಾದರಿ ಬರಲಿ: ಎಂ.ಎಸ್‌. ತೇಜಕುಮಾರ್

ಚೆಸ್: ರಾಜ್ಯದ ಮೊದಲ ಗ್ರ್ಯಾಂಡ್ ಮಾಸ್ಟರ್
Last Updated 4 ನವೆಂಬರ್ 2018, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿಯಲ್ಲಿ ಕಳೆದ ವಾರ ನಡೆದ ಅಖಿಲ ಭಾರತ ಮುಕ್ತ ಫಿಡೆ ರೇಟೆಡ್‌ ಚೆಸ್‌ ಟೂರ್ನಿಯಲ್ಲಿ ಐದು ವರ್ಷದಿಂದ 70 ವರ್ಷದವರೆಗಿನ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಒಟ್ಟು 250ಕ್ಕೂ ಹೆಚ್ಚು ಸ್ಪರ್ಧಿಗಳು ‘ಚದುರಂಗದ ಹಬ್ಬ’ದಲ್ಲಿ ಪೈಪೋಟಿ ನಡೆಸಿದರು. ಕರ್ನಾಟಕದ ಮೊದಲ ಗ್ರ್ಯಾಂಡ್ ಮಾಸ್ಟರ್ ಎಂ.ಎಸ್‌. ತೇಜಕುಮಾರ್ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು.

ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಟೂರ್ನಿ ಆಯೋಜನೆಯಾಗಿತ್ತು. ಟೂರ್ನಿಯ ಕೊನೆಯ ದಿನದ ತನಕವೂ ಪ್ರತಿ ಕ್ರೀಡಾಪಟುವಿಗೆ ತೇಜಕುಮಾರ್‌ ಸ್ಫೂರ್ತಿ ಯಾಗಿದ್ದರು. ಕೆಲ ಸ್ಪರ್ಧಿಗಳು ತಮ್ಮ ಆಟಕ್ಕಿಂತ ಹೆಚ್ಚಾಗಿ ತೇಜಕುಮಾರ್ ಆಟ ನೋಡುವ ಸಲುವಾಗಿ ಟೂರ್ನಿಯಲ್ಲಿ ಭಾಗವಹಿಸಿದ್ದರು. ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಖುಷಿ ಪಟ್ಟರು. ಆಟದ ಕೌಶಲ ತಿಳಿದುಕೊಂಡರು. ತೇಜಕುಮಾರ್‌ ಕೂಡ ಎಲ್ಲರ ಜೊತೆ ಒಂದಾಗಿ ‘ಭಾವಿ ಚದುರಂಗ ಚತುರರಿಗೆ’ ಪಾಠ ಹೇಳಿಕೊಟ್ಟರು.

ತೇಜಕುಮಾರ್‌ ಭಾಗವಹಿಸಿದ್ದು, ಟೂರ್ನಿಯ ಕಳೆ ಹೆಚ್ಚಿಸಿತ್ತು. ಇಲ್ಲಿ ಅವರು ಒಟ್ಟಾರೆಯಾಗಿ ಮೂರನೇ ಸ್ಥಾನ ಪಡೆದರಾದರೂ, ಆಟದ ಶೈಲಿ, ಚತುರ ನಡೆಗಳ ಕೌಶಲ ಗಮನ ಸೆಳೆಯಿತು. ಉತ್ತರ ಕರ್ನಾಟಕದಲ್ಲಿ ಚೆಸ್‌ ಅಭಿವೃದ್ಧಿಯ ವೇಗ ಹೆಚ್ಚಲು ಟೂರ್ನಿ ನೆರವಾಯಿತು. ರಾಜ್ಯದ ಚೆಸ್‌ ಚಟುವಟಿಕೆ ಬಗ್ಗೆ ತೇಜಕುಮಾರ್‌ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನ ಇಲ್ಲಿದೆ.

ಈ ಚೆಸ್ ಟೂರ್ನಿಯಿಂದ ಉತ್ತರ ಕರ್ನಾಟಕ ಭಾಗದ ಆಟಗಾರರಿಗೆ ಏನು ಅನುಕೂಲ?

ಈ ಭಾಗದಲ್ಲಿ ಫಿಡೆ ರೇಟೆಡ್‌ ಟೂರ್ನಿಗಳು ನಡೆಯುವುದೇ ಕಡಿಮೆ. ಇಲ್ಲಿನ ಆಟಗಾರರಿಗೆ ಬೇರೆಡೆ ಹೋಗಿ ಆಡಬೇಕಾದ ಅನಿವಾರ್ಯತೆ. ಕೆಲವರಿಗೆ ಪ್ರಯಾಣದ ಸಮಸ್ಯೆ ಇರುತ್ತದೆ. ಉತ್ತರ ಕರ್ನಾಟಕದಲ್ಲಿ ಮೇಲಿಂದ ಮೇಲೆ ಟೂರ್ನಿಗಳು ನಡೆದರೆ ಹೆಚ್ಚು ರೇಟಿಂಗ್ ಹೊಂದಿರುವ ಆಟಗಾರರ ಜೊತೆ ಆಡಲು ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಸಿಕ್ಕಂತಾಗುತ್ತದೆ. ಪಾಲ್ಗೊಳ್ಳುವವರ ಸಂಖ್ಯೆಯೂ ಹೆಚ್ಚುತ್ತದೆ.

* ಕರ್ನಾಟಕದಲ್ಲಿ ಚೆಸ್‌ ಬೆಳವಣಿಗೆ ಬಗ್ಗೆ ಹೇಳಿ
ಸಣ್ಣ ಊರುಗಳಲ್ಲಿ ಹೆಚ್ಚು ಟೂರ್ನಿಗಳು ನಡೆಯುತ್ತಿವೆ. ಹುಬ್ಬಳ್ಳಿ, ಬೆಳ್ತಂಗಡಿ ಹೀಗೆ ಬೇರೆ ಊರುಗಳಲ್ಲಿ ಟೂರ್ನಿ ಆಯೋಜಿಸಿದರೆ ಆಟಗಾರರ ಗುಣಮಟ್ಟ ಸುಧಾರಣೆಯಾಗುತ್ತದೆ. ಕನಿಷ್ಠ 200ರಿಂದ 300 ಸ್ಪರ್ಧಿಗಳು ಭಾಗವಹಿಸುತ್ತಾರೆ. ಫಲಿತಾಂಶ ಏನೇ ಬರಲಿ, ಗ್ರಾಮೀಣ ಭಾಗದ ಮಕ್ಕಳಿಗೆ ಹೆಚ್ಚು ಪಂದ್ಯಗಳಲ್ಲಿ ಆಡಲು ಅವಕಾಶ ಸಿಗಬೇಕು.

* ತಮಿಳುನಾಡಿನಲ್ಲಿ ಚೆಸ್‌ಗೆ ಸಂಬಂಧಿಸಿದ ಚಟುವಟಿಕೆಗಳು ಏಕೆ ಹೆಚ್ಚು?
ವಿಶ್ವನಾಥನ್‌ ಆನಂದ್ ಅಲ್ಲಿಯವರೇ ಆಗಿರುವುದರಿಂದ ಬಹಳಷ್ಟು ಜನರಿಗೆ ಚೆಸ್‌ ಬಗ್ಗೆ ಆಸಕ್ತಿಯಿದೆ. ಆದ್ದರಿಂದ ಪೋಷಕರು ಕೂಡ ತಮ್ಮ ಮಕ್ಕಳು ಆನಂದ್ ಅವರ ರೀತಿ ಆಗಬೇಕು ಎಂದು ಬಯಸುತ್ತಾರೆ. ಇದರ ಜೊತೆಗೆ ಕಂಪನಿಗಳು ಮತ್ತು ಸರ್ಕಾರ ಬೆಂಬಲ ನೀಡುತ್ತವೆ.

* ಈಗಿನ ಬಹಳಷ್ಟು ಪೋಷಕರ ಮೊದಲ ಆಯ್ಕೆ ಕ್ರಿಕೆಟ್‌ ಆಗಿರುತ್ತದೆ. ಈ ಪೈಪೋಟಿಯ ನಡುವೆಯೂ ಚೆಸ್‌ನತ್ತ ಸೆಳೆಯಲು ಏನು ಮಾಡಬೇಕು?
ಚೆಸ್‌ ಕ್ರೀಡೆ ಮಾತ್ರವಲ್ಲ, ವ್ಯಕ್ತಿತ್ವ ವಿಕಸನಕ್ಕೂ ಅನುಕೂಲಕಾರಿ. ಇತ್ತೀಚಿನ ವರ್ಷಗಳಲ್ಲಿ ಚೆಸ್‌ನತ್ತ ಸಾಕಷ್ಟು ಜನ ಒಲವು ತೋರುತ್ತಿದ್ದಾರೆ. ಗುಜರಾತ್‌ ಮತ್ತು ತಮಿಳುನಾಡಿನಲ್ಲಿ ಈ ಕ್ರೀಡೆ ಶಾಲಾ ತರಗತಿಗಳಲ್ಲಿ ಪಠ್ಯದ ವಿಷಯವಾಗಿದೆ. ಅದೇ ರೀತಿ ನಮ್ಮ ರಾಜ್ಯದಲ್ಲಿಯೂ ಆಗಬೇಕು. ರಾಜ್ಯ ಸರ್ಕಾರ ಅಲ್ಲಲ್ಲಿ ಚೆಸ್‌ ಅಕಾಡೆಮಿಗಳನ್ನು ಆರಂಭಿಸಬೇಕು. ಬೆಂಗಳೂರು, ಮೈಸೂರಿನಲ್ಲಿ ನಿರಂತರವಾಗಿ ಟೂರ್ನಿಗಳು ನಡೆಯುವ ರೀತಿ ಎಲ್ಲ ಕಡೆಯೂ ಸ್ಪರ್ಧೆಗಳನ್ನು ಆಯೋಜಿಸಬೇಕು.

* ಕರ್ನಾಟಕದ ಮೊದಲ ಗ್ರ್ಯಾಂಡ್‌ ಮಾಸ್ಟರ್‌ ಎನ್ನುವ ಕೀರ್ತಿ ನಿಮ್ಮ ಹೆಸರಿನಲ್ಲಿದೆ. ಈ ಸಾಧನೆ ಬಗ್ಗೆ ಹೇಳಿ
ಗ್ರ್ಯಾಂಡ್‌ ಮಾಸ್ಟರ್‌ ಆಗಬೇಕು ಎನ್ನುವುದು ಪ್ರತಿ ಚೆಸ್‌ ಆಟಗಾರನ ಕನಸು. ಈ ಸಾಧನೆಯನ್ನು 2014ರ ಒಳಗೆ ಮಾಡಬೇಕು ಎಂದು ಆಸೆ ಇಟ್ಟುಕೊಂಡಿದ್ದೆ. ಅದು ಇತ್ತೀಚಿಗೆ ಸಾಧ್ಯವಾಗಿದೆ.

* ಈ ಸಾಧನೆ ಮಾಡಲು ಏನು ಅವಶ್ಯಕ?
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೊದಲು ಪ್ರೋತ್ಸಾಹ ಕೊಡಬೇಕು. ಚೆನ್ನಾಗಿ ಆಡುವ ಆಟಗಾರರನ್ನು ಗುರುತಿಸಿ ಅವರಿಗೆ ನೆರವು ನೀಡಬೇಕು. ಬಾಲ್ಯಾವಸ್ಥೆಯಲ್ಲಿರುವ ಮಕ್ಕಳಿಗೆ ಪ್ರತಿಭಾ ಶೋಧ ನಡೆಸಿದರೆ ಮುಂದೆ ದೊಡ್ಡ ಸಾಧನೆ ಮಾಡಲು ಅನುಕೂಲವಾಗುತ್ತದೆ. ತಮಿಳುನಾಡಿನಲ್ಲಿ ಇರುವ ವಾತಾವರಣ ನಮಗೆ ಮಾದರಿಯಾಗಬೇಕು.

* ನಿಮಗೆ ತುಂಬಾ ಖುಷಿಕೊಟ್ಟ ಪ್ರಶಸ್ತಿ ಯಾವುದು?
2013ರಲ್ಲಿ ಭೋಪಾಲ್‌ನಲ್ಲಿ ನಡೆದ ನ್ಯಾಷನಲ್‌ ಬೀಚ್‌ ಚೆಸ್‌ ಚಾಂಪಿ ಯನ್‌ಷಿಪ್‌ನಲ್ಲಿ ಅನೇಕ ಗ್ರ್ಯಾಂಡ್‌ ಮಾಸ್ಟರ್‌ಗಳು ಭಾಗವಹಿಸಿದ್ದರು. ಆ ಟೂರ್ನಿಯಲ್ಲಿ ನಾನು ಜಯಿಸಿದ ಪ್ರಶಸ್ತಿ ಸದಾ ಸ್ಮರಣೀಯ. ಮುಂದಿನ ತಿಂಗಳು ರಾಷ್ಟ್ರೀಯ ಚಾಂಪಿಯನ್‌ಷಿಪ್‌ ನಡೆಯುತ್ತದೆ. ಅಲ್ಲಿಯೂ ಚಾಂಪಿಯನ್ ಆಗುವ ಗುರಿ ಹೊಂದಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT