ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೃಶೂರಿನ ಚೆಸ್‌ ಶೂರ...

Last Updated 13 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಆರ್‌. ಪ್ರಗ್ನಾನಂದ, ನಿಹಾಲ್‌ ಸರಿನ್‌, ಡಿ.ಗುಕೇಶ್‌..... ಕಳೆದ ಕೆಲವು ವರ್ಷಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿರುವ ಭಾರತದ ಹದಿಹರೆಯದ ಗ್ರ್ಯಾಂಡ್‌ಮಾಸ್ಟರ್‌ಗಳು ಇವರು. ಪ್ರಗ್ಯಾನಂದ ಮತ್ತು ಗುಕೇಶ್‌, ಅತಿ ಹೆಚ್ಚಿನ ಸಂಖ್ಯೆಯ ಗ್ರ್ಯಾಂಡ್‌ಮಾಸ್ಟರ್‌ಗಳನ್ನು ರೂಪಿಸಿರುವ ತಮಿಳುನಾಡಿನವರು. ನಿಹಾಲ್‌, ನೆರೆಯ ಕೇರಳದ ತೃಶೂರಿನವನು. ಚೆಸ್‌ನಲ್ಲಿ ಅಂಥ ಬೇರು ಹೊಂದಿರದ ಜಿಲ್ಲೆ ಇದು.

ನಿಹಾಲ್‌, ದೇಶದ ಮೂರನೇ ಅತಿ ಕಿರಿಯ ಗ್ರ್ಯಾಂಡ್‌ಮಾಸ್ಟರ್‌. ಆದರೆ 2,600 ರೇಟಿಂಗ್ ದಾಟಿದ ದೇಶದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಯನ್ನು ಹೊಂದಿದ ಪ್ರತಿಭಾನ್ವಿತ. 14ನೇ ವರ್ಷಕ್ಕೇ ಗ್ರ್ಯಾಂಡ್‌ಮಾಸ್ಟರ್‌ ಪಟ್ಟ ಪಡೆದ ಚಾಣಾಕ್ಷ. ಪ್ರಸ್ತುತ ರೇಟಿಂಗ್‌ 2,610!

ಆಟದಲ್ಲಿ ನಿಹಾಲನದ್ದು ವಯಸ್ಸಿಗೆ ಮೀರಿದ ಪ್ರಬುದ್ಧತೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಗನೇ ರೇಟಿಂಗ್‌ ಪಾಯಿಂಟ್‌ಗಳನ್ನು ಕಲೆಹಾಕಿದ ನಿಹಾಲ್‌, ಚೆಸ್‌ನಲ್ಲಿ ಕಲಿತದ್ದು ಸ್ವಲ್ಪ ಮಾತ್ರ ಎಂಬ ವಿನೀತಭಾವ ಹೊಂದಿದವ. ಕಳೆದ ತಿಂಗಳು ರಷ್ಯದ ಖಾಂಟಿ ಮೊನ್ಸಿಕ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಎರಡನೇ ಸುತ್ತಿಗೇರಿದ್ದ.

ಎರಡು ವರ್ಷ ಹಿಂದೆ ಪ್ರೊ ಚೆಸ್‌ ಲೀಗ್‌ನಲ್ಲಿ ವಿಶ್ವ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರಿಗೆ ಸೋಲುವ ಮೊದಲು ಆಟವನ್ನು ‘ಡ್ರಾ’ದಂಥ ಸ್ಥಿತಿಯ ಹತ್ತಿರ ತಂದು ಬೆರಗು ಮೂಡಿಸಿದ್ದ. ಕಳೆದ ವರ್ಷ ಟಾಟಾ ಸ್ಟೀಲ್‌ ರ್‍ಯಾಪಿಡ್‌ ಟೂರ್ನಿಯಲ್ಲಿ ಚೆಸ್‌ ದಿಗ್ಗಜ ವಿಶ್ವನಾಥನ್‌ ಆನಂದ್‌ ಎದುರು ಡ್ರಾ ಸಾಧಿಸಿದ್ದ!

ಹುಟ್ಟು ಪ್ರತಿಭಾವಂತ

ನಿಹಾಲ್‌ನದ್ದು (ಜನನ: ಜುಲೈ 13, 2004) ವೈದ್ಯ ಕುಟುಂಬ. ಅಪ್ಪ ಅಬ್ದುಲ್‌ಸಲಾಂ ಸರಿನ್‌ ಚರ್ಮರೋಗ ತಜ್ಞ. ಅಮ್ಮ ಶಿಜಿನ್‌ ಮನಃಶಾಸ್ತ್ರಜ್ಞೆ. ನಿಹಾಲ್‌ ಮೂರೂವರೆ ವರ್ಷದವನಿರುವಾಗಲೇ 190 ರಾಷ್ಟ್ರಗಳ ಧ್ವಜಗಳ ಗುರುತು ಹಿಡಿಯುತ್ತಿದ್ದ ಪ್ರತಿಭಾಶಾಲಿ. ಆಗಲೇ ಪೋಷಕರು ಗ್ರಹಿಕೆ, ಸ್ಮರಣ ಶಕ್ತಿ ಗುರುತಿಸಿದ್ದರು. ಬೇಸಿಗೆ ರಜೆಯ ವೇಳೆ ಸಮಯ ಕಳೆಯಲು ಏನಾದರೂ ಮಾಡಬೇಕೆಂದು ತವಕಿಸುತ್ತಿದ್ದ ಮೊಮ್ಮಗ ನಿಹಾಲ್‌ನಿಗೆ ಅಜ್ಜನೇ ಚೆಸ್‌ನ ಆರಂಭದ ಪಾಠಗಳನ್ನು ಕಲಿಸಿಕೊಟ್ಟರು. ‘ಅಜ್ಜ ನನಗೆ ನಿಯಮಗಳನ್ನು ಹೇಳಿಕೊಟ್ಟರು. ನಾನು ಶ್ರದ್ಧೆಯಿಂದ ಅಭ್ಯಾಸ ಮಾಡಿದೆ’ ಎಂದು ಹೇಳುತ್ತಾನೆ ನಿಹಾಲ್‌.

ಚೆಸ್‌ ತರಬೇತುದಾರರಾದ ಮ್ಯಾಥ್ಯೂ ಪೊಟ್ಟೂರೆ, ಇ.ಪಿ.ನಿರ್ಮಲ್‌ ಈತನ ಆಟವನ್ನು ಇನ್ನಷ್ಟು ಹರಿತಗೊಳಿಸಿದರು. ಗ್ರ್ಯಾಂಡ್‌ಮಾಸ್ಟರ್‌ ದಿಮಿತ್ರಿ ಕೊಮರೊವ್‌ ಈತನಲ್ಲಿನ ಸಾಮರ್ಥ್ಯಕ್ಕೆ ಸಾಣೆ ಹಿಡಿದರು. ಈಗ ಎರಡು ವರ್ಷಗಳಿಂದ ಸ್ನೇಹಿತ, ಗ್ರ್ಯಾಂಡ್‌ಮಾಸ್ಟರ್‌ ಶ್ರೀನಾಥ್‌ ನಾರಾಯಣನ್‌ ಕೋಚ್‌. ನಿಹಾಲ್‌, ಈಗ ಐಲ್‌ ಆಫ್‌ ಮ್ಯಾನ್‌ನಲ್ಲಿ ಸ್ವಿಸ್‌ ಲೀಗ್‌ ಟೂರ್ನಿಯಲ್ಲಿ ಆಡುತ್ತಿದ್ದಾನೆ. (ಈ ದ್ವೀಪ ಬ್ರಿಟನ್‌– ಐರ್ಲೆಂಡ್‌ ಮಧ್ಯೆ ಇದೆ).

ಸಾವಯವ ಕ್ಷೀರ ಸಂಸ್ಥೆ ‘ಅಕ್ಷಯಕಲ್ಪ’ ಈತನ ಪ್ರಾಯೋಜಕತ್ವ ವಹಿಸಿಕೊಂಡಿದೆ. ಇತ್ತೀಚೆಗಷ್ಟೇ ಕರ್ನಾಟಕ ರಾಜ್ಯ ಚೆಸ್‌ ಚಾಂಪಿಯನ್‌ಷಿಪ್‌ ಸಂದರ್ಭದಲ್ಲಿ ಬೆಂಗಳೂರಿಗೆ ಬಂದಿದ್ದ ಈ ಚೆಸ್ ಚತುರ, ಆಸಕ್ತ ಆಟಗಾರರ ಜೊತೆ ಕೆಲ ಹೊತ್ತು ಕಳೆದಿದ್ದ.

ಬೆಂಗಳೂರಿಗೆ ಬಂದ ವೇಳೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಈತ ‘ಚೆಸ್‌ನಲ್ಲಿ ನಾನು ಕಲಿತದ್ದು ಕಡಿಮೆ. ಆಟವಾಡುತ್ತ ಕಲಿಯುವುದು ಸಾಕಷ್ಟು ಇದೆ’ ಎಂದು ಹೇಳಿದ.ವಿಶ್ವಕಪ್‌ ಟೂರ್ನಿಯ ಸಾಧನೆ ಬಗ್ಗೆ ನಿಹಾಲ್‌ ಹೆಚ್ಚು ಹೇಳಿಕೊಳ್ಳಲಿಲ್ಲ.ನಿಹಾಲ್‌ ಆ ಟೂರ್ನಿಯಲ್ಲಿ ಪೆರುವಿನ ಜಿಎಂ ಜಾರ್ಜ್ ಕೋರಿ (2,676) ವಿರುದ್ಧ ಜಯಗಳಿಸಿದ್ದು ಎಲ್ಲರ ಗಮನಸೆಳೆದಿತ್ತು.

‘ನಾನು ಫಲಿತಾಂಶಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅಲ್ಲಿ ಆಟದ ಗುಣಮಟ್ಟ ಚೆನ್ನಾಗಿತ್ತು. ವಿಶ್ವಕಪ್‌ನಂಥ ಟೂರ್ನಿಯಲ್ಲಿ ಕಲಿಯುವುದು ತುಂಬಾ ಇರುತ್ತದೆ. ವಿಶೇಷವಾಗಿ ಒತ್ತಡ ತಾಳಿಕೊಳ್ಳುವುದನ್ನೂ ಕಲಿಯುತ್ತೇವೆ.’ಇದುವರೆಗೆ ಅತ್ಯಂತ ತೃಪ್ತಿ ತಂದ ಕ್ಷಣಗಳ ಬಗ್ಗೆ ಕೇಳಿದಾಗ ನಿಹಾಲ್‌ ಹೇಳಿದ್ದು– ‘ಅಂಥ ಸಂದರ್ಭಗಳು ಇದುವರೆಗೆ ಬಂದಿಲ್ಲ. ಈಗಷ್ಟೇ ನಾನು ಆರಂಭ ಮಾಡಿದ್ದೇನೆ.’

ಮುಂದೆ ಆಡುವ ಪ್ರಮುಖ ಟೂರ್ನಿಗಳ ಬಗ್ಗೆ ಕೇಳಿದಾಗ ಪಟ್ಟಿಯನ್ನೇ ಕೊಟ್ಟ– ‘ಐಲ್‌ ಆಫ್‌ ಮ್ಯಾನ್ ಟೂರ್ನಿಯ ನಂತರ ಆಕ್ಟೋಬರ್‌ ಕೊನೆಯಲ್ಲಿ ಕ್ಯಾಪ್‌ ಡಿಗೇಡ್‌ ರ‍್ಯಾಪಿಡ್‌ ಟೂರ್ನಿಯಲ್ಲಿ ಆಡುತ್ತೇನೆ. ಇದು ಡಬಲ್ ರೌಂಡ್‌ ರಾಬಿನ್‌ ಲೀಗ್‌ ಮಾದರಿಯಲ್ಲಿ ನಡೆಯುತ್ತದೆ. ನಂತರ ನವೆಂಬರ್‌ ಆರಂಭದಲ್ಲಿ, 1980ರ ದಶಕದಲ್ಲಿ ವಿಶ್ವ ಚಾಂಪಿಯನ್‌ ಆಗಿದ್ದ ಅನತೋಲಿ ಕಾರ್ಪೋವ್‌ ವಿರುದ್ಧ ಪಂದ್ಯ ಆಡಬೇಕಿದೆ. ಡಿಸೆಂಬರ್‌ ಕೊನೆಯಲ್ಲಿ ವಿಶ್ವ ರ‍್ಯಾಪಿಡ್‌ ಮತ್ತು ಬ್ಲಿಟ್ಜ್‌ ಟೂರ್ನಿಗಳಲ್ಲಿ ಆಡಲು ಇದೆ. ಜನವರಿಯಲ್ಲಿ ಟಾಟಾ ಸ್ಟೀಲ್‌ ಟೂರ್ನಿಯಿದೆ.’

‘ನಿಹಾಲ್‌ ಆಟದಲ್ಲಿ ಕಾಣುತ್ತಿರುವ ಸುಧಾರಣೆ ನೋಡಿದರೆ ಅಚ್ಚರಿ ಮೂಡುತ್ತದೆ’ ಎಂದು ನಿಯಮಿತವಾಗಿ ಅವನ ಆಟ ಗಮನಿಸುವ ಕೋಚ್‌ ಶ್ರೀನಾಥ್‌ ನಾರಾಯಣನ್‌ ಹೇಳುತ್ತಾರೆ. 25 ವರ್ಷದ ಗ್ರ್ಯಾಂಡ್‌ಮಾಸ್ಟರ್‌ ಶ್ರೀನಾಥ್‌ ಅನಿಸಿಕೆಯಲ್ಲಿ ಹೆಚ್ಚು ಉತ್ಪ್ರೇಕ್ಷೆಯಿದ್ದಂತೆ ಕಾಣುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT