ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಕ ಬುದ್ಧಿಮತ್ತೆಯ ಕಾಲದಲ್ಲಿ ಚದುರಂಗ ಚತುರರು

Last Updated 6 ಆಗಸ್ಟ್ 2022, 19:31 IST
ಅಕ್ಷರ ಗಾತ್ರ

ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆಯುತ್ತಿರುವ ಫಿಡೆ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ಪದಕ ಸಾಧನೆಯ ಕನಸು ಹೊತ್ತು ಸಾಗುತ್ತಿರುವ ಪಡೆಯಲ್ಲಿ ಈ ಉದಯೋನ್ಮುಖರ ಸಂಖ್ಯೆಯೇ ಸಿಂಹಪಾಲು. ಆದರೆ ಇದೆಲ್ಲ ಆಗಿದ್ದು ಹೇಗೆ? ಇಲ್ಲಿ ಆಧುನಿಕ ತಂತ್ರಜ್ಞಾನದ ಪಾತ್ರವಿದೆ. ತರಬೇತಿ ಹಂತದಲ್ಲಿ ಆಧುನಿಕ ತಂತ್ರಾಂಶಗಳು ಮತ್ತು ಕೃತಕ ಬುದ್ಧಿಮತ್ತೆಯ ಬಳಕೆ.

ಅದೊಂದು ಕಾಲವಿತ್ತು. ಚೆಸ್ ಕ್ರೀಡೆಯೆಂದರೆ ವಯಸ್ಕ, ಅನುಭವಿ ಮತ್ತು ಬುದ್ಧಿವಂತ ಆಟಗಾರರ ಹೆಸರುಗಳಷ್ಟೇ ಪ್ರಚಲಿತವಾಗಿರುತ್ತಿದ್ದವು.ಆದರೆ, ಈಗ ಕಾಲ ಬದಲಾಗಿದೆ. ಎಂಟರಿಂದ ಹದಿನಾರು ವರ್ಷದೊಳಗಿನ ಚಿನಕುರುಳಿಗಳೇ ದಿಗ್ಗಜ ಆಟಗಾರರಿಗೆ ಸೋಲಿನ ರುಚಿ ತೋರಿಸುತ್ತಿದ್ದಾರೆ. ಗ್ರ್ಯಾಂಡ್‌ಮಾಸ್ಟರ್‌ ಪಟ್ಟವೇರುತ್ತಿದ್ದಾರೆ. ನಾರ್ವೆಯ ಗ್ರ್ಯಾಂಡ್‌ಮಾಸ್ಟರ್ ಮ್ಯಾಗ್ನಸ್‌ ಕಾರ್ಲಸನ್ ಅವರಂತಹ ಆಟಗಾರನಿಗೆ ತಮಿಳುನಾಡಿನ 15ರ ಪೋರ ಆರ್. ಪ್ರಜ್ಞಾನಂದ ಸೋಲಿನ ಕಹಿಯುಣಿಸಿದ್ದು ಐತಿಹಾಸಿಕ ಸಾಧನೆ. ಪ್ರಜ್ಞಾನಂದನ ಅಕ್ಕ ವೈಶಾಲಿ ರಮೇಶಬಾಬು ಗ್ರ್ಯಾಂಡ್‌ಮಾಸ್ಟರ್ ಆಗಿದ್ದು ಕೂಡ ಹದಿನಾರು ತುಂಬುವ ಮುನ್ನವೇ. ಕೇರಳದ ನಿಹಾಲ್ ಸರಿನ್, ತೆಲಂಗಾಣದ ಅರ್ಜುನ್ ಎರೈಗಸಿ, ಮಹಾರಾಷ್ಟ್ರದ ರೇಣುಕಾ ಸಾಧ್ವಾನಿ, ತಮಿಳುನಾಡಿನ ಡಿ. ಗುಕೇಶ್, ಗೋವಾದ ಲಿಯೊ ಲೂಕ್ ಮೆಂಡೋನ್ಸಾ... ಹೀಗೆ ಪಟ್ಟಿ ಬೆಳೆಯುತ್ತದೆ.

ಸದ್ಯ ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆಯುತ್ತಿರುವ ಫಿಡೆ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ಪದಕ ಸಾಧನೆಯ ಕನಸು ಹೊತ್ತು ಸಾಗುತ್ತಿರುವ ಪಡೆಯಲ್ಲಿ ಈ ಉದಯೋನ್ಮುಖರ ಸಂಖ್ಯೆಯೇ ಸಿಂಹಪಾಲು. ಆದರೆ ಇದೆಲ್ಲ ಆಗಿದ್ದು ಹೇಗೆ? ಇಲ್ಲಿ ಆಧುನಿಕ ತಂತ್ರಜ್ಞಾನದ ಪಾತ್ರವಿದೆ. ತರಬೇತಿ ಹಂತದಲ್ಲಿ ಆಧುನಿಕ ತಂತ್ರಾಂಶಗಳು ಮತ್ತು ಕೃತಕ ಬುದ್ಧಿಮತ್ತೆಯ ಬಳಕೆ. ಚೆಸ್ ಕ್ರೀಡೆಯ ಬೆಳವಣಿಗೆಗೆ ಸೂಪರ್ ಸಾನಿಕ್ ವೇಗವನ್ನು ಕೊಡುತ್ತಿರುವ ಅಂಶಗಳು ಇವು.

ಹಳೆ ಪದ್ಧತಿ; ಹೊಸ ತಂತ್ರಜ್ಞಾನ

ಎರಡೂವರೆ ದಶಕಗಳ ಹಿಂದೆ ದಿಗ್ಗಜ ಗ್ಯಾರಿ ಕಾಸ್ಪರೋವ್ ಮತ್ತು ಸೂಪರ್ ಕಂಪ್ಯೂಟರ್‌ ನಡುವಣ ಪಂದ್ಯವು ಚೆಸ್ ಆಟವು ಮಗ್ಗಲು ಬದಲಿಸಿದ ಐತಿಹಾಸಿಕ ಘಟ್ಟ. ಆರು ಗೇಮ್‌ಗಳ ಆ ಪಂದ್ಯವು ಡೀಪ್‌ ಬ್ಲ್ಯೂ ವರ್ಸಸ್ ಕಾಸ್ಪರೋವ್ ಹಣಾಹಣಿಯೆಂದೇ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಆ ಕಾಲಘಟ್ಟದ ಅಪ್ರತಿಮ ಆಟಗಾರ ಕಾಸ್ಪರೋವ್ ಅವರಿಗೇ ಸೆಡ್ಡು ಹೊಡೆಯಲು ಕೃತಕ ಬುದ್ಧಿಮತ್ತೆಯ ಬಳಕೆ ಮಾಡಲಾಗಿತ್ತು.

ಅಲ್ಲಿಂದ ಶುರುವಾದ ತಂತ್ರಜ್ಞಾನ ಮತ್ತು ಮಾನವನ ನಡುವಣ ಪೈಪೋಟಿಯಲ್ಲಿ ಲಾಭವಾಗಿದ್ದು ಚೆಸ್ ಕ್ಷೇತ್ರಕ್ಕೆ. ಬಾಲ್ಯದಲ್ಲಿಯೇ ಬುದ್ಧಿವಂತರು ಮತ್ತು ಚುರುಕಾಗಿರುವ ಮಕ್ಕಳನ್ನು ಗುರುತಿಸಿ ಆಧುನಿಕ ತಂತ್ರಜ್ಞಾನದೊಂದಿಗೆ ತರಬೇತಿ ಕೊಡುವ ಪದ್ಧತಿ ಬೆಳೆಯಿತು.

ಕೋವಿಡ್ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ಎಲ್ಲ ಕ್ರೀಡಾಂಗಣಗಳ ಬಾಗಿಲು ಮುಚ್ಚಿದಾಗ ಮನೆಯಂಗಳದಲ್ಲಿ ಅರಳಿದ್ದು ಚೆಸ್ ಬೋರ್ಡ್‌ಗಳೇ. ಕೋವಿಡ್ ಸಂಕಷ್ಟವು ಈ ಕ್ರೀಡೆಗೆ ವರದಾನವಾಗಿದ್ದಂತೂ ನಿಜ. ಆನ್‌ಲೈನ್‌ ಮೂಲಕ, ಯೂಟ್ಯೂಬ್‌ನಲ್ಲಿ ಚೆಸ್ ತರಬೇತಿ, ಸ್ಪರ್ಧೆಗಳು ಬಹಳಷ್ಟು ಸಂಖ್ಯೆಯಲ್ಲಿ ನಡೆದವು. ಮತ್ತಷ್ಟು ಹೊಸ ಪ್ರತಿಭೆಗಳು ಈ ಮೂಲಕ ಹೊರಹೊಮ್ಮಲು ತಂತ್ರಜ್ಞಾನ ನೆರವಾಯಿತು.

‘ಈಗ ಹತ್ತಾರು ಸಾಫ್ಟ್‌ವೇರ್‌ಗಳು ಲಭ್ಯ ಇವೆ. ಆವುಗಳಲ್ಲಿ ಯಾವುದನ್ನು ಯಾರಿಗಾಗಿ ಬಳಸಬೇಕು ಎಂದು ನಿರ್ಧರಿಸುವುದು ಕೋಚ್ ಮುಂದಿರುವ ಪ್ರಮುಖ ಸವಾಲು. ಪ್ರಸ್ತುತ ಚೆಸ್ ಆಡಲು ಬರುವ ಮಕ್ಕಳಲ್ಲಿ ಹಲವರಿಗೆ ತಂತ್ರಜ್ಞಾನ ಬಳಕೆ ಗೊತ್ತು. ನೆನಪಿನ ಶಕ್ತಿ ಕೂಡ ಚುರುಕಾಗಿರುತ್ತದೆ. ಇದನ್ನು ಆಧುನಿಕ ಕಾಲದ ಕೋಚ್‌ಗಳು ಮನಗಂಡಿದ್ದಾರೆ. ಅದಕ್ಕಾಗಿ ತಾವು ಕೂಡ ಅಪ್ಡೇಟ್‌ ಆಗಿದ್ದಾರೆ. ವಿಶ್ವದ ಹಲವೆಡೆ ನಡೆಯುವ ಬೇರೆ ಬೇರೆ ಶೈಲಿಯ ಚೆಸ್‌ ನಡೆಗಳನ್ನು ಹತ್ತಿರದಿಂದ ಅಧ್ಯಯನ್ ಮಾಡಲು ಸಾಧ್ಯವಾಗುತ್ತಿದೆ. ಬೇರೆ ಬೇರೆ ದೇಶಗಳಲ್ಲಿ ಆಟಗಾರರು ವಿವಿಧ ಸವಾಲುಗಳನ್ನು ಎದುರಿಸಿ ಯಶಸ್ವಿಯಾಗಲು ಬಯಸುವ ನಡೆಗಳನ್ನೂ ಇಲ್ಲಿ ಕುಳಿತಲ್ಲಿಯೇ ತಿಳಿದುಕೊಳ್ಳಬಹುದು. ಅದರ ಸಹಾಯದಿಂದ ತಮ್ಮ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಾರೆ.

ಮಕ್ಕಳೂ ಬೇಗ ಗ್ರಹಿಸಿಕೊಳ್ಳುತ್ತಾರೆ. ಅನುಭವ ಮಾಗಿದಂತೆ ಬೆಳವಣಿಗೆ ಅಗಾಧವಾಗುತ್ತದೆ’ ಎಂದು ಅಂತರರಾಷ್ಟ್ರೀಯ ಆರ್ಬಿಟರ್ ವಸಂತ್ ವಿಶ್ಲೇಷಿಸುತ್ತಾರೆ.

ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದಿಂದಲೇ ಹೆಚ್ಚು ಆಟಗಾರರು ಪ್ರವರ್ಧಮಾನಕ್ಕೆ ಬರಲು ಇದೂ ಒಂದು ಕಾರಣ. ಈ ಭಾಗದ ಕೌಟುಂಬಿಕ ವ್ಯವಸ್ಥೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವುದೇ ಪ್ರಥಮ ಆದ್ಯತೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳೇನಿದ್ದರೂ ಎರಡನೇ ಆದ್ಯತೆ. ಅದೂ ಚೆನ್ನೈನಂತಹ ನಗರದಲ್ಲಿ ಕ್ರಿಕೆಟ್‌ಗೇ ಪ್ರಥಮ ಮಣೆ. ಆದರೆ ಚೆಸ್‌ ಬುದ್ಧಿಮತ್ತೆ ಹೆಚ್ಚಿಸಿ ಓದಿಗೂ ನೆರವಾಗುತ್ತದೆ. ಅಲ್ಲದೇ ದೈಹಿಕವಾಗಿ ಗಾಯಗೊಳ್ಳುವ ಸಾಧ್ಯತೆಗಳಿಲ್ಲ ಎಂಬ ಕಾರಣಗಳಿವೆ.

ಸಾಂಪ್ರದಾಯಿಕ ಕಲಿಕೆಯೂ ಮುಖ್ಯ

ತಂತ್ರಜ್ಞಾನ ಎಷ್ಟೇ ಬೆಳೆದರೂ ತರಬೇತುದಾರರು ಬೇಕೆ ಬೇಕು ಎಂದು ಪ್ರಜ್ಞಾನಂದನ ತರಬೇತುದಾರ ಆರ್‌.ಬಿ. ರಮೇಶ್ ಪ್ರತಿಪಾದನೆ. ‘ಚೆಸ್ ಆಡುವುದು ಕಣ್ಣುಗಳಿಂದಲ್ಲ. ಒಳಗಣ್ಣುಗಳಿಂದ. ಒಬ್ಬ ಆಟಗಾರ ಕಣ್ಣು ಮುಚ್ಚಿಕೊಂಡರೂ ತನ್ನ ಮುಂದಿರುವ ಬೋರ್ಡ್‌ ಮೇಲಿನ ಪಾನ್‌ಗಳನ್ನು ನಡೆಸುವುದು ಮನೋಗತವಾಗಿರಬೇಕು’ ಎಂದು ಹೇಳುತ್ತಾರೆ. ಅದಕ್ಕಾಗಿಯೇ ಅವರು ತಮ್ಮ ವಿದ್ಯಾರ್ಥಿಗಳ ಕಣ್ಣುಗಳಿಗೆ ಕಪ್ಪುಬಟ್ಟೆ ಕಟ್ಟಿ ಅಭ್ಯಾಸಕ್ಕಿಳಿಸುತ್ತಾರೆ.

‘ಮಹಡಿಗಳನ್ನು ಹತ್ತುವಾಗ ಲಿಫ್ಟ್‌ ಬಳಸುವುದರಿಂದ ಸಮಯ ಉಳಿಸಬಹುದು ಮತ್ತು ಸುಸ್ತಾಗುವುದನ್ನೂ ತಪ್ಪಿಸಬಹುದು. ಆದರೆ ದೀರ್ಘಕಾಲದ ಲಾಭ ಬೇಕಾದರೆ ಮೆಟ್ಟಿಲುಗಳ ಬಳಕೆ ಸೂಕ್ತ. ಆರೋಗ್ಯಕ್ಕೂ ಒಳ್ಳೆಯದು. ಹಾಗೆಯೇ ತಂತ್ರಜ್ಞಾನ ಲಿಫ್ಟ್ ಇದ್ದಂತೆ, ಕೋಚ್‌ ಮಾರ್ಗದರ್ಶನದಲ್ಲಿ ಕಲಿಯುವುದು ಮೆಟ್ಟಿಲು ಬಳಕೆ ಇದ್ದಂತೆ. ಕಾಲಾನುಸಾರ ಎರಡನ್ನೂ ಬಳಸುವ ಜಾಣ್ಮೆ ರೂಢಿಸಿಕೊಳ್ಳುವವರು ಬಹಳಷ್ಟು ಮೇಲಕ್ಕೇರಬಹುದು ಎಂಬುದು ರಮೇಶ್ ತತ್ವ’ ಎಂದು ವಸಂತ ಹೇಳುತ್ತಾರೆ.

ನೂತನ ತಂತ್ರಜ್ಞಾನದಿಂದ ಆನ್‌ಲೈನ್‌ ಚೆಸ್‌ ಮತ್ತು ಟೂರ್ನಿಗಳಲ್ಲಿ ಮೋಸದಾಟಗಳಿಗೆ ಕಡಿವಾಣ ಬಿದ್ದಿದೆ. ಸ್ಕೋರಿಂಗ್ ಮತ್ತು ಫಲಿತಾಂಶ ನಿರ್ಧಾರದಲ್ಲಿ ಬಹಳಷ್ಟು ನಿಖರತೆಯೂ ಬಂದಿದೆ. ಜೊತೆಗೆ ಸಮಯ, ಮಾನವ ಸಂಪನ್ಮೂಲದ ಉಳಿತಾಯವೂ ಆಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಭಾರತವು ಚೆಸ್‌ನಲ್ಲಿ ಸೂಪರ್ ಪವರ್ ಆಗಿ ಬೆಳೆಯುವ ಹಾದಿಯಲ್ಲಿದೆ. ಕಳೆದ ಹನ್ನೆರಡು ವರ್ಷಗಳಲ್ಲಿ ಆಗಿರುವ ಕ್ರಾಂತಿ ಸಣ್ಣದಲ್ಲ. 2010ರಲ್ಲಿ ಭಾರತದಲ್ಲಿ 23 ಗ್ರ್ಯಾಂಡ್‌ಮಾಸ್ಟರ್‌ಗಳಿದ್ದರು. ಈಗ ಅವರ ಸಂಖ್ಯೆ 74ಕ್ಕೇರಿದೆ. 33 ಸಾವಿರಕ್ಕೂ ಹೆಚ್ಚು ರೇಟೆಡ್ ಆಟಗಾರರು ಇದ್ದಾರೆ. ಫಿಡೆ ರೇಟಿಂಗ್‌ನಲ್ಲಿ ಭಾರತವು ನಾಲ್ಕನೇ ಸ್ಥಾನದಲ್ಲಿದೆ.

ಭಾರತದ ಚೆಸ್‌ ರಂಗಕ್ಕೆ ಹೊಸದಿಕ್ಕು ತೋರಿದ ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ಅವರು ಒಂದೊಮ್ಮೆ ನಿವೃತ್ತಿಯಾದರೆ ಆ ಸ್ಥಾನ ತುಂಬಲು ದೊಡ್ಡ ಜೂನಿಯರ್ ಪಡೆಯೇ ಇರುವುದು ಇದಕ್ಕೆ ಕಾರಣ. ನಾರ್ವೆಯ ಮ್ಯಾಗ್ನಸ್ ಕಾರ್ಲಸನ್ ಅವರನ್ನೇ ಸೋಲಿಸಿರುವ ಪ್ರಜ್ಞಾನಂದ ಅವರಂತಹ ಪ್ರತಿಭೆಗಳು ಈಗ ಹಲವರಿರುವುದೇ ವಿಶ್ವಾಸ ಬೆಳೆಯಲು ಕಾರಣ. ಒಟ್ಟಿನಲ್ಲಿ ರಾಜ, ಮಹಾರಾಜರ ಅರಮನೆಯ ಪ್ರತಿಷ್ಠೆಯ ಚದುರಂಗವು ಈಗ ಜನಸಾಮಾನ್ಯರ ಪಡಸಾಲೆಗೂ ಬಂದಿದೆ. ಆ ಚದುರಂಗದಲ್ಲಿ ಯುದ್ಧೋನ್ಮಾದವಿರುತ್ತಿತ್ತು. ಆದರೆ ಇಲ್ಲಿ ಕ್ರೀಡೆಯ ಮನೋಲ್ಲಾಸವಿದೆ.

ಭಾರತಕ್ಕೆ ಒಲಿಂಪಿಯಾಡ್ ಲಾಭ

ಕ್ರಿಕೆಟ್, ಟೆನಿಸ್‌ ಮತ್ತಿತರ ಆಟಗಳನ್ನು ನೇರವಾಗಿ ಮೈದಾನದಲ್ಲಿ ಕುಳಿತು ವೀಕ್ಷಿಸಲು ನೂರಾರು ಜನರು ಸೇರುತ್ತಾರೆ. ಆದರೆ ಚೆಸ್ ವೀಕ್ಷಣೆಗೆ ಇಂತಹ ಅವಕಾಶವಿಲ್ಲ. ಮೂಲವಾಗಿ ಈ ಪಂದ್ಯಗಳನ್ನು ವೀಕ್ಷಿಸಲು ಜನರೇ ಹತ್ತಿರ ಬರುವುದಿಲ್ಲ. ಇದಕ್ಕೆ ಕಾರಣಗಳು ಹಲವಾರಿವೆ. ಕ್ಲಾಸಿಕಲ್ ಚೆಸ್‌ ದೀರ್ಘ ಸಮಯ ತೆಗೆದುಕೊಳ್ಳುತ್ತದೆ.ಆಟದ ಜಾಗದಲ್ಲಿ ಶಾಂತ ವಾತಾವರಣ ಕಾಪಾಡಲು ಜನರನ್ನು ನಿರ್ಬಂಧಿಸಲಾಗಿರುತ್ತದೆ.

ಆದರೆ ಈಗ ಕಾಲ ಬದಲಾಗುತ್ತಿದೆ. ಚೆಸ್ ವೀಕ್ಷಣೆಗೆ ಜನರು ಬರಲಾರಂಭಿಸಿದ್ದಾರೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಚೆಸ್ ಒಲಿಂಪಿಯಾಡ್‌ನಲ್ಲಿಯೂ ಇಂತಹದೊಂದು ಕೌತುಕವಿದೆ.

‘ಮಹಾಬಲಿಪುರಂನಲ್ಲಿ ಚೆಸ್ ಒಲಿಂಪಿಯಾಡ್ ನಡೆಯುತ್ತಿರುವ ಸ್ಥಳವನ್ನು ವೀಕ್ಷಿಸಲು ಮಧ್ಯಾಹ್ನದ ಹೊತ್ತಿನಲ್ಲಿ ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತಿದೆ. ಸ್ಪರ್ಧೆ ನಡೆಯುವ ತಾಣವನ್ನು ವೀಕ್ಷಿಸಲು ತಲಾ ಮೂರು ಸಾವಿರ ರೂಪಾಯಿ ಶುಲ್ಕ ಕೊಟ್ಟು ನೂರಾರು ಜನರು ಬರುತ್ತಿದ್ದಾರೆ. ಈ ಒಲಿಂಪಿಯಾಡ್‌ನಿಂದಾಗಿ ಭಾರತದ ಚೆಸ್ ರಂಗ ಮತ್ತಷ್ಟು ದೊಡ್ಡದಾಗಿ ಬೆಳೆಯುವ ನಿರೀಕ್ಷೆ ಇದೆ. ಟಾರ್ಚ್‌ ರಿಲೆಯು 75 ನಗರಗಳಲ್ಲಿ ಸಂಚರಿಸಿ ಪ್ರಚಾರ ಸಿಕ್ಕಿದೆ. ಪ್ರಧಾನಿಯವರಿಂದ ಉದ್ಘಾಟನೆಯಾಗಿದ್ದು ಕೂಡ ಮಹತ್ವದ್ದು. ಇದು ಮಕ್ಕಳು ಮತ್ತು ಪಾಲಕರಲ್ಲಿ ಹೊಸ ಉತ್ತೇಜನಕ್ಕೆ ಕಾರಣವಾಗಲಿದೆ’ ಎಂದು ಒಲಿಂಪಿಯಾಡ್‌ನಲ್ಲಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕದ ಆರ್ಬಿಟರ್ ವಸಂತ್ ಹೇಳುತ್ತಾರೆ. ಅವರ ತಂಡದಲ್ಲಿರುವ ಮಂಜುನಾಥ್, ಸಲೀಂ ಬೇಗ್ ಮತ್ತು ಪ್ರಮೋದ್ ಮೋರೆ ಕೂಡ ದನಿಗೂಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT