ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫೇಲ್: ಅವ್ಯವಹಾರದ ಬಗ್ಗೆ ಮೌನ ಏಕೆ– ರಾಹುಲ್

Last Updated 7 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆಯಲ್ಲಿ ಮೋದಿ ಅವರ ಮಾತನ್ನು ‘ಚುನಾವಣಾ ಪ್ರಚಾರ ಭಾಷಣ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಬಣ್ಣಿಸಿದ್ದಾರೆ. ದೇಶವನ್ನು ಕಾಡುತ್ತಿರುವ ಕೃಷಿ ಬಿಕ್ಕಟ್ಟು ಮತ್ತು ನಿರುದ್ಯೋಗ ಸಮಸ್ಯೆ ಬಗ್ಗೆ ಪ್ರಧಾನಿ ಏನನ್ನೂ ಯಾಕೆ ಮಾತನಾಡಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ರಫೇಲ್‌ ಯುದ್ಧ ವಿಮಾನ ಒಪ್ಪಂದವನ್ನು ಮರುರೂಪಿಸುವಾಗ ಭ್ರಷ್ಟಾಚಾರ ನಡೆದಿದೆ ಎಂಬ ಬಗ್ಗೆ ಪ್ರಧಾನಿ ಮೌನ ತಾಳಿದ್ದಾರೆ. ಅವ್ಯವಹಾರ ನಡೆಸಿದವರನ್ನು ರಕ್ಷಿಸುತ್ತಿದ್ದಾರೆ ಎಂದು ರಾಹುಲ್‌ ಆರೋಪಿಸಿದ್ದಾರೆ.

‘ಪ್ರಧಾನಿ ಹಳೆಯ ವಿಚಾರಗಳನ್ನು ಪುನರುಚ್ಚರಿಸಿದ್ದಾರೆ. ಅವರ ಬಳಿ ಹೊಸದೇನೂ ಇಲ್ಲ. ಜನರು ತಮ್ಮ ಕೆಲಸದ ಬಗ್ಗೆ ಆಸಕ್ತರಾಗಿದ್ದಾರೆ. ಅವರು ತಮ್ಮ ಭವಿಷ್ಯದ ಬಗ್ಗೆ ತಿಳಿಯಲು ಬಯಸುತ್ತಾರೆ’ ಎಂದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.

ಮೂರು–ನಾಲ್ಕು ವಿಚಾರಗಳು ದೇಶದ ಮುಂದೆ ಇವೆ– ರೈತರ ಭವಿಷ್ಯ ಏನು, ಯುವಜನರಿಗೆ ಉದ್ಯೋಗ ನೀಡುವುದು ಹೇಗೆ ಮತ್ತು ರಫೇಲ್‌ ಖರೀದಿ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆಯೇ ಎಂಬುದು ಈ ಪ್ರಶ್ನೆಗಳು ಎಂದು ರಾಹುಲ್‌ ಹೇಳಿದ್ದಾರೆ.

‘ನಮ್ಮ ಪ್ರಶ್ನೆ ಬಹಳ ಸ್ಪಷ್ಟವಾಗಿದೆ. ಪ್ಯಾರಿಸ್‌ಗೆ ಹೋಗಿ ನೀವು ಒಪ್ಪಂದವನ್ನು ಬದಲಾಯಿಸಿದ್ದೀರಿ. ಅದಕ್ಕೆ ಸಂಪುಟದ ಭದ್ರತಾ ಸಮಿತಿಯ ಅನುಮೋದನೆ ಪಡೆದುಕೊಳ್ಳಲಾಗಿದೆಯೇ ಮತ್ತು ಯುದ್ಧ ವಿಮಾನಕ್ಕೆ ಕೊಟ್ಟ ಹಣ ಎಷ್ಟು’ ಎಂದು ರಾಹುಲ್‌ ಕೇಳಿದ್ದಾರೆ.

ಬೆಲೆ ಏರಿಳಿತ:

* ಸೆಪ್ಟೆಂಬರ್‌ 2016: ಅಂದಾಜು ₹59,000 ಕೋಟಿ ವೆಚ್ಚದಲ್ಲಿ 36 ರಫೇಲ್‌ ಯುದ್ಧ ವಿಮಾನ ಖರೀದಿಗೆ ಫ್ರಾನ್ಸ್‌–ಭಾರತ ಒಪ್ಪಂದ

* ನವೆಂಬರ್‌ 2016: ಪ್ರತಿ ಯುದ್ಧ ವಿಮಾನದ ಅಂದಾಜು ಬೆಲೆ ₹670 ಕೋಟಿ ಎಂದು ಲೋಕಸಭೆಗೆ ರಕ್ಷಣಾ ಸಚಿವಾಲಯ ಮಾಹಿತಿ

* ತರಬೇತಿ, ನಿರ್ವಹಣೆ ಸೇರಿ ಪ್ರತಿ ವಿಮಾನದ ಬೆಲೆ ₹1,640 ಕೋಟಿಗೆ ಏರಿಕೆ

* ಪ್ರತಿ ವಿಮಾನಕ್ಕೆ ₹526 ಕೋಟಿಗೆ ವ್ಯವಹಾರ ಕುದುರಿಸಿದ್ದ ಯುಪಿಎ ಸರ್ಕಾರ

* ಅದೇ ವಿಮಾನಕ್ಕೆ ₹1,570 ಕೋಟಿ ನೀಡಿದ ಎನ್‌ಡಿಎ ಸರ್ಕಾರ. ವಿಮಾನದ ಬೆಲೆ ಮೂರು ಪಟ್ಟು ಹೆಚ್ಚಳಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ ಕಾಂಗ್ರೆಸ್‌. ಅವ್ಯವಹಾರದ ಶಂಕೆ

* ಇದೇ ರಫೇಲ್‌ ಯುದ್ಧ ವಿಮಾನವನ್ನು ₹694 ಕೋಟಿಗೆ ಖರೀದಿಸಿದ ಕತಾರ್‌

* ಸಾಮಾನ್ಯವಾಗಿ ರಕ್ಷಣಾ ಸಾಮಗ್ರಿ, ಯುದ್ಧ ಸಲಕರಣೆ ಖರೀದಿ ಬೆಲೆ ಬಹಿರಂಗಗೊಳಿಸುವ ಸಂಪ್ರದಾಯ ಇಲ್ಲ

* ಯುಪಿಎ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಪ್ರಣವ್‌ ಮುಖರ್ಜಿ ಮತ್ತು ಎ.ಕೆ. ಆ್ಯಂಟನಿ ಕೂಡ ಈ ಸಂಪ್ರದಾಯ ಪಾಲಿಸಿದ್ದರು

* 2008ರ ಭಾರತ ಮತ್ತು ಫ್ರಾನ್ಸ್‌ ನಡುವಣ ರಕ್ಷಣಾ ಒಪ್ಪಂದ ಮತ್ತು ದೇಶದ ರಕ್ಷಣೆಯ ಹಿತದೃಷ್ಟಿಯಿಂದ ಸೇನೆಗೆ ಸಂಬಂಧಿಸಿದ ರಹಸ್ಯ ಮಾಹಿತಿ ಬಹಿರಂಗಗೊಳಿಸಲು ಸಾಧ್ಯವಿಲ್ಲ
– ರಕ್ಷಣಾ ಸಚಿವಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT