ನೋಡ್‌ ನೋಡ್ತಾ ಆಟ

7

ನೋಡ್‌ ನೋಡ್ತಾ ಆಟ

Published:
Updated:

ಯುವ ಭಾರತದಲ್ಲಿ ಈಗ ಕ್ರೀಡಾ ಸಾಧಕರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ. ಅವರೆಲ್ಲರೂ ದಿಢೀರ್‌ ಬೆಳೆದು ಬಂದವರಲ್ಲ. ಸಾಧನೆಗೆ ಪರಿಶ್ರಮ, ಕಠಿಣ ಅಭ್ಯಾಸವೇ ಕಾರಣ. ಎಳವೆಯಲ್ಲೇ ತರಬೇತಿ ಲಭಿಸಿದರೆ ಮಕ್ಕಳು ಮುಂದೆ ಸಾಧನೆಯ ಹಾದಿ ತುಳಿಯುತ್ತಾರೆ. ಮಕ್ಕಳು ಯಾವಾಗ ತರಬೇತಿ ಪಡೆಯಬೇಕು, ತರಬೇತಿಗೆ ಎಲ್ಲಿ ಸೇರಬೇಕು, ಅಭ್ಯಾಸದ ಸ್ವರೂಪ ಹೇಗಿರುತ್ತದೆ...?

ಬೆಳಗ್ಗಿನ ಚುಮು ಚುಮು ಚಳಿ ಇರಲಿ. ಬೇಸಿಗೆಯ ಬಿರು ಬಿಸಿಲಿರಲಿ. ಮುಂಜಾನೆ, ಮಧ್ಯಾಹ್ನ, ಮುಸ್ಸಂಜೆ ಎನ್ನದೆ ಬೆನ್ನಿಗೆ ಬ್ಯಾಗ್ ಏರಿಸಿಕೊಂಡು ಸಾಗುವ ಮಕ್ಕಳ ಉತ್ಸಾಹ, ಹುಮ್ಮಸ್ಸು... ಆಹಾ ಎಂಥ ಸೊಗಸು. ಶಾಲೆಯತ್ತ ಹೆಜ್ಜೆ ಹಾಕುವಾಗ ಕಾಣುವ ಉದಾಸೀನ ಈ ಸಂದರ್ಭದಲ್ಲಿ ಅವರಲ್ಲಿ ಕಾಣುವುದಿಲ್ಲ. ಯಾಕೆಂದರೆ ಈ ನಡೆ ಶಾಲೆಯತ್ತ ಅಲ್ಲ; ಕ್ರೀಡಾಂಗಣದ ಕಡೆಗೆ. ಇವರು ಪುಸ್ತಕದ ಬದನೆಕಾಯಿ ಬಾಯಿಪಾಠ ಮಾಡಲು ಹೊರಟವರಲ್ಲ. ಕ್ರೀಡಾ ಸಾಧನೆಯ ಬೆನ್ನತ್ತಿ ಹೋದವರು.

ಮರವಾಗಿ ಬೆಳೆದು ನಿಂತಿರುವ ಇಂದಿನ ಕ್ರೀಡಾಪಟುಗಳೆಲ್ಲ ಗಿಡವಾಗಿದ್ದಾಗಲೇ ಬಗ್ಗಿದವರು, ಬೆಳಗಿದವರು. ತಿಂಗಳುಗಟ್ಟಲೆ, ವರ್ಷಗಟ್ಟಲೆ ನಿರಂತರ ಅಭ್ಯಾಸ ಮಾಡಿ ಬೆವರು ಸುರಿಸಿದವರು. ಸಣ್ಣ ವಯಸ್ಸಿನಲ್ಲಿ ಸರಿಯಾದ ತರಬೇತಿ ಸಿಕ್ಕಿದವರು ಮಾತ್ರ ಉತ್ತಮ ಸಾಧಕರಾಗುತ್ತಾರೆ ಎಂದು ಕೋಚ್‌ಗಳು ಕೂಡ ಹೇಳುತ್ತಾರೆ. ಕ್ರೀಡಾ ಸಂಸ್ಥೆಗಳು ಕೂಡ ಸಣ್ಣ ವಯಸ್ಸಿನಲ್ಲೇ ಪ್ರತಿಭೆಗಳ ಹುಡುಕಾಟ ನಡೆಸುವುದು ಇದೇ ಕಾರಣದಿಂದ.

ಕ್ರೀಡೆಗೆ ಮಕ್ಕಳನ್ನು ಸೇರಿಸಲು ಯಾವ ವಯಸ್ಸು ಸೂಕ್ತ ಎಂಬ ಜಿಜ್ಞಾಸೆ ಸಾಮಾನ್ಯ. ‌ಕೋಚ್‌ಗಳ ಪ್ರಕಾರ ಆರನೇ ವರ್ಷ, ಕ್ರೀಡಾ ಸಾಧನೆಯ ಬೀಜ ಮೊಳಕೆಯೊಡೆಯಲು ಸರಿಯಾದ ಸಮಯ. ಮಕ್ಕಳು ಸ್ವಂತ ಸಾಮರ್ಥ್ಯದಿಂದ ತಂತ್ರಗಳನ್ನು ಅಳವಡಿಸಿಕೊಳ್ಳಲು ಮತ್ತು ಸಾಧನೆ ಮಾಡಲು ಕನಿಷ್ಠ 12 ವರ್ಷವಾದರೂ ಆಗಿರಬೇಕು. ಬ್ಯಾಡ್ಮಿಂಟನ್‌– ಟೇಬಲ್ ಟೆನಿಸ್‌ನಲ್ಲಾದೆ, ರ‍್ಯಾಕೆಟ್‌ ಸರಿಯಾದ ರೀತಿಯಲ್ಲಿ ಹಿಡಿಯಲು; ಚೆಂಡು– ಷಟಲ್‌ನ ಮೇಲೆ ಗಮನ ಕೇಂದ್ರೀಕರಿಸಲು, ಕ್ರಿಕೆಟ್‌ನಲ್ಲಾದರೆ ಬ್ಯಾಟ್‌ನಲ್ಲಿ ಗ್ರಿಪ್‌ ಸಿಗಲು, ಚೆಂಡಿನ ಗತಿ ನಿರ್ಣಯಿಸಲು, ಈಜಿನಲ್ಲಾದರೆ ‘ಚಳಿ’ ಬಿಡಿಸಲು ಕೆಲವು ವರ್ಷಗಳೇ ಬೇಕಾಗುತ್ತವೆ. ಪ್ರತಿ ಕ್ರೀಡೆಯಲ್ಲೂ ಈ ಪ್ರಮುಖ ಹಂತವನ್ನು ಯಶಸ್ವಿಯಾಗಿ ಮುಗಿಸವುದು ಮುಖ್ಯ. ಈ ಸಂದರ್ಭವನ್ನು ಸರಿಯಾಗಿ ನಿಭಾಯಿಸಲು ತಿಳಿದ ಕೋಚ್‌ಗಳು ಕೂಡ ಯಶಸ್ವಿಯಾಗುತ್ತಾರೆ.

‘ಮಕ್ಕಳನ್ನು ಕ್ರೀಡೆಗೆ ಹಚ್ಚಲು ಆರನೇ ವಯಸ್ಸು ಸೂಕ್ತ. ಕ್ರೀಡೆಯ ಬಗ್ಗೆ ಆಸಕ್ತಿ ಹುಟ್ಟಿಸಲು ಇದು ಸರಿಯಾದ ಸಂದರ್ಭ. ಈ ವಯಸ್ಸಿನಲ್ಲಿ ಅವರಲ್ಲಿ ಪ್ರಬುದ್ಧತೆ ಇರುವುದಿಲ್ಲ. ಆದರೂ ಹೇಳಿಕೊಟ್ಟದ್ದನ್ನು ಮನನ ಮಾಡಿಕೊಳ್ಳುವ ಸಾಮರ್ಥ್ಯ ಇರುತ್ತದೆ. ಯಾವುದೇ ಕ್ರೀಡೆ ಆಗಿರಲಿ, ಅದರಲ್ಲಿ ಪ್ರಬುದ್ಧತೆ ಸಾಧಿಸಬೇಕಾದರೆ, ಸ್ವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೆ 12 ವರ್ಷ ವಯಸ್ಸಾಗಿರಬೇಕು. ಅದಕ್ಕೂ ಮೊದಲು ಕೆಲವರು ಸ್ವಂತ ಸಾಮರ್ಥ್ಯದಿಂದ ಸಾಧನೆ ಮಾಡುತ್ತಾರೆ. ಅವರನ್ನು ‘ವಿಶೇಷ’ ಪ್ರತಿಭೆಗಳೆಂದೇ ಪರಿಗಣಿಸಬೇಕಾಗುತ್ತದೆ’ ಎನ್ನುತ್ತಾರೆ ಟೇಬಲ್ ಟೆನಿಸ್ ಕೋಚ್‌ ಉದಯ ನಾರಾಯಣ ಜಾಧವ್‌. "ಸಣ್ಣ ವಯಸ್ಸಿನಲ್ಲಿ ಕ್ರೀಡಾ ತರಬೇತಿಗೆ ಸೇರುವ ಅನೇಕರಿಗೆ ಕೆಲವು ಆಟಗಳ ಬಗ್ಗೆ ಪ್ರಾಥಮಿಕ ಅರಿವೇ ಇರುವುದಿಲ್ಲ. ಅಂಥವರಿಗೆ ಒಂದು ವಾರ ಅಥವಾ 10 ದಿನ ಕುಳಿತು, ತರಬೇತಿ ಮತ್ತು ಆಟವನ್ನು ನೋಡಲು ಹೇಳಲಾಗುತ್ತದೆ. ಅಷ್ಟರಲ್ಲಿ ಅವರ ಮನಸ್ಸಿನಲ್ಲಿ ಆಟದ ‘ಕಲೆ’ ಅಚ್ಚೊತ್ತಿರುತ್ತದೆ. ನಂತರ ಅಂಗಣಕ್ಕೆ ಇಳಿಸಿದರೆ ನೋಡಿದ್ದನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ’ ಎಂಬುದು ಉದಯ ಅವರ ಅನಿಸಿಕೆ.

ಟಿಕ್‌... ಟಿಕ್‌... ಟಿಕ್‌... ಟಕ್‌... ಟಕ್‌...

ಪ್ರತಿ ಕ್ರೀಡೆಯಲ್ಲೂ ‘ಪ್ರವೇಶ’ಕ್ಕೆ ಸಿದ್ಧವಾಗಲು ಕೆಲವು ಅಭ್ಯಾಸಗಳನ್ನು ಮಾಡಿಸಲಾಗುತ್ತದೆ. ಟೇಬಲ್ ಟೆನಿಸ್‌ನ ‘ಎಬಿಸಿಡಿ’ ಆರಂಭಿಸುವ ಮುನ್ನ ರ‍್ಯಾಕೆಟ್ ಬಳಸಿ ಚೆಂಡನ್ನು ನಿರಂತರವಾಗಿ ನೆಲಕ್ಕೆ ಬಡಿಯಲು ಹೇಳಲಾಗುತ್ತದೆ. ಆಗ ನಿರ್ಮಾಣವಾಗುವ ಟಿಕ್‌... ಟಿಕ್‌... ಟಿಕ್‌... ಸದ್ದು ಕೇಳುವುದೇ ಸುಖ. ಕ್ರಿಕೆಟ್‌ನಲ್ಲಿ, ನೇತುಹಾಕಿದ ಚೆಂಡಿಗೆ ಬ್ಯಾಟ್‌ನಲ್ಲಿ ನಿರಂತರವಾಗಿ ಬಡಿಯುವ ಟಕ್‌... ಟಕ್‌... ಟಕ್‌ ಸದ್ದು, ಬ್ಯಾಡ್ಮಿಂಟನ್‌ನಲ್ಲಿ ಷಟಲ್‌ಗೆ ರಪ್‌... ರಪ್‌... ರಪ್‌ ಎಂದು ಹೊಡೆಯುವುದು, ಕರಾಟೆಯಲ್ಲಿ ಪಂಚ್‌, ಕಿಕ್‌ಗಳ ಜೊತೆಯಲ್ಲಿ ಕೇಳುವ ಹೂಂಕಾರ...ಎಲ್ಲವೂ ಬೆಳೆಯ ಸಿರಿ ಮೊಳಕೆಯೊಡೆಯುವ ಸಂದರ್ಭದಲ್ಲಿ ಮುದ ನೀಡುವ ಸದ್ದುಗಳು.

‘ಕ್ರೀಡೆಯಲ್ಲಿ ಮಕ್ಕಳಿಗೆ ಆಸಕ್ತಿ ಇದ್ದರೆ ಅಥವಾ ಮಕ್ಕಳನ್ನು ಈ ಕ್ಷೇತ್ರದಲ್ಲಿ ಬೆಳೆಸಬೇಕು ಎಂದಿದ್ದರೆ ಸಣ್ಣ ವಯಸ್ಸಿನಲ್ಲೇ ಅವರನ್ನು ತರಬೇತಿಗೆ ಕಳುಹಿಸಬೇಕು’ ಎಂಬುದು ಬಹುತೇಕ ಕೋಚ್‌ಗಳ ಅಭಿಪ್ರಾಯ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !